Get Updates
Get notified of breaking news, exclusive insights, and must-see stories!

Madikeri: ಮಡಿಕೇರಿಯಲ್ಲಿ ನೋಡಬಹುದಾದ ಸ್ಥಳಗಳು ಯಾವುದು ಗೊತ್ತಾ?

ಮಡಿಕೇರಿ, ಡಿಸೆಂಬರ್‌ 29: ವರ್ಷಾಂತ್ಯಕ್ಕೆ ಕೊಡಗಿಗೆ ಆಗಮಿಸುವ ಪ್ರವಾಸಿಗರು ಮಂಜಿನ ಮಡಿಕೇರಿಯಲ್ಲಿ ಅಡ್ಡಾಡಿ ಕೋಟೆ, ಕೊತ್ತಲಗಳನ್ನು ವೀಕ್ಷಿಸಿ ರಾಜಾಸೀಟಿನಲ್ಲಿ ವಿಶ್ರಮಿಸಿ, ಓಂಕಾರೇಶ್ವರನಿಗೆ ನಮಿಸಿ ಪ್ರವಾಸದ ಕ್ಷಣಗಳನ್ನು ಅನುಭವಿಸಿ ತಮ್ಮ ಊರಿಗೆ ಹಿಂತಿರುಗಿದರಷ್ಟೆ ಪ್ರವಾಸ ಸಾರ್ಥಕವಾಗಲು ಸಾಧ್ಯ. ಏಕೆಂದರೆ ದೂರದಿಂದ ಬರುವ ಪ್ರವಾಸಿಗರಿಗೆ ಮಡಿಕೇರಿ ಮತ್ತು ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಮಾಹಿತಿಯಿಲ್ಲದೆ, ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡದೆ ಹಿಂತಿರುಗುವ ಸಾಧ್ಯತೆಯೂ ಇಲ್ಲದಿಲ್ಲ.

ಮಡಿಕೇರಿಗೆ ಬರುವ ಪ್ರವಾಸಿಗರು ಇಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿತಾಣಗಳ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಈ ವೇಳೆಯಲ್ಲಿ ಮಡಿಕೇರಿಯಲ್ಲಿ ಸಮಯ ಕಳೆಯುವುದು ಒಂಥರಾ ಮಜಾ ನೀಡುತ್ತದೆ. ಮಂಜಿನ ಮುಸುಕು... ಸಣ್ಣಗೆ ನಡುಕ ಹುಟ್ಟಿಸುವ ಚಳಿ... ಖುಷಿ ಕೊಡುತ್ತದೆ. ಅದೇ ಜೋಶ್ ನಲ್ಲಿ ಮಡಿಕೇರಿ ನಗರದೊಳಗಿರುವ ಕೋಟೆ, ಅರಮನೆ, ಗದ್ದುಗೆ, ಓಂಕಾರೇಶ್ವರ ದೇಗುಲ, ರಾಜಾಸೀಟ್, ನೆಹರು ಮಂಟಪ, ಅಬ್ಬಿ ಜಲಪಾತ. ಮಾಂದಾಲಪಟ್ಟಿ ನಿಶಾನೆಮೊಟ್ಟೆಗೂ ಹೋಗಿ ಬರುವುದು ಒಳ್ಳೆಯದು.

Travel News Discover The Best Tourist Attractions In Madikeri

ಮಡಿಕೇರಿ ನಗರದ ಬಗ್ಗೆ ಹೇಳಬೇಕೆಂದರೆ ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದ್ದು ಹಾಲೇರಿ ವಂಶದ ರಾಜ ಮುದ್ದುರಾಜ. ಹಾಗಾಗಿ ಮುದ್ದುರಾಜ ನಿರ್ಮಿಸಿದ ಊರು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು. ಬ್ರಿಟಿಷರು ಮರ್ಕೆರಾ ಎಂದು ಕರೆದರೂ ಮಡಿಕೇರಿಯಾಗಿಯೇ ಉಳಿದಿದೆ. ಮಡಿಕೇರಿ ನಗರದ ನಡುವೆ ಸ್ವಲ್ಪ ಎತ್ತರ ಪ್ರದೇಶದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಾಣಗೊಂಡಿದೆ.

ರಾಜರ ಕಾಲ ಕೋಟೆ ಅರಮನೆ

ಕೋಟೆ ಒಳಗಿರುವ ಅರಮನೆ ಎರಡು ಅಂತಸ್ತಿನ ಚೌರಸ್ ಸ್ಥಳ ವಿನ್ಯಾಸವನ್ನು ಹೊಂದಿದೆ. ಸುಮಾರು 110 ಅಡಿಯಷ್ಟು ಅಗಲವಿರುವ ಕಟ್ಟಡದಲ್ಲಿ ಕಮಾನು ಹಾಗೂ ಎತ್ತರವಾದ ಚೌಕಾಕಾರದ ಕಿಟಕಿಗಳು ಬಣ್ಣದ ಗಾಜುಗಳಿಂದ ಕೂಡಿದ್ದು ಗಮನಸೆಳೆಯುತ್ತವೆ. ಅರಮನೆಯ ಒಳ ಪ್ರವೇಶಿಸಿದರೆ ಕೆರೆಯೇನೋ ಎಂಬಂತಹ ವಿಶಾಲ ಪ್ರಾಂಗಣವಿದ್ದು, ಅದರ ಮಧ್ಯೆ ಆಮೆಯೊಂದು ಕಾಣಿಸುತ್ತದೆ. ಕಲ್ಲಿನ ಆಮೆಯ ಆಕೃತಿಯು ರಾಜರ ಕಾಲದಲ್ಲಿ ರಹಸ್ಯ ಮಾರ್ಗದ ಪ್ರವೇಶ ದ್ವಾರವಾಗಿತ್ತೆಂದು ಹೇಳಲಾಗಿದೆ.

ಮುಂಭಾಗದ ಪ್ರವೇಶ ದ್ವಾರದಲ್ಲಿ ಎರಡು ಕುದುರೆಗಳು ನೆಗೆಯುತ್ತಿರುವ ಕೆತ್ತನೆಯ ವೀಕ್ಷಕ ಮಂಟಪ ಕಾಣಸಿಗುತ್ತದೆ. ಅರಮನೆಯ ಎಡ ಪಾರ್ಶ್ವದ ಮುಂಭಾಗದಲ್ಲಿ ಕಲ್ಲಿನಿಂದ ಕೆತ್ತಲಾದ ಎರಡು ಆನೆಗಳು ಆಕರ್ಷಕವಾಗಿವೆ. ಅರಮನೆಯ ಒಂದು ಪಾರ್ಶ್ವದಲ್ಲಿ ಗಡಿಯಾರ ಗೋಪುರ ಕಂಡು ಬರುತ್ತದೆ. ಇಲ್ಲಿಯೇ ಎರಡು ಕಲ್ಲಿನ ಆನೆಗಳು ಗಮನಸೆಳೆಯುತ್ತವೆ. ಸಮೀಪದಲ್ಲಿಯೇ ರಸ್ತೆಯ ಕೆಳಭಾಗದಲ್ಲಿ ಓಂಕಾರೇಶ್ವರ ದೇಗುಲವಿದೆ. ಇದನ್ನು ಲಿಂಗರಾಜನ ಕಾಲದಲ್ಲಿ ಬ್ರಹ್ಮದೋಷ ಪರಿಹಾರಕ್ಕಾಗಿ ನಿರ್ಮಿಸಲಾಗಿದೆ.

Travel News Discover The Best Tourist Attractions In Madikeri

ರಾಜಾಸೀಟಿನಲ್ಲಿ ನಿಸರ್ಗದ ನೋಟ

ಇಲ್ಲಿಂದ ಮುನ್ನಡೆದರೆ ರಾಜಾಸೀಟಿಗೆ ತಲುಪಬಹುದಾಗಿದೆ. ಇದು ನಿಸರ್ಗ ಸುಂದರ ಚೆಲುವಿನ ತಾಣವಾಗಿದ್ದು, ಇಲ್ಲಿ ಉದ್ಯಾನವಿದೆ. ಜತೆಗೆ ಇಲ್ಲಿಂದ ಕಾಣುವ ಪ್ರಕೃತಿ ರಮಣೀಯ ದೃಶ್ಯ ಮೈಮನವನ್ನು ಹಗುರವಾಗಿಸುತ್ತದೆ. ಚಿಕ್ಕವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು ಎನ್ನಲಾಗಿದೆ.

ರಾಜಾಸೀಟಿನ ಮೇಲ್ಭಾಗದ ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯವನ್ನು ಆಸ್ವಾದಿಸಲೆಂದು ನಿರ್ಮಿಸಿದ ನೆಹರು ಮಂಟಪವಿದ್ದು, ಈ ಮಂಟಪವನ್ನು 1957ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಂಟಪವೊಂದನ್ನು ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟರು ಎಂದು ಹೇಳಲಾಗುತ್ತಿದೆ.

ಮಡಿಕೇರಿ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಮಡಿಕೇರಿ ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಗದ್ದಿಗೆಯಿದ್ದು, ಈ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಎಡಭಾಗದಲ್ಲಿ 1834ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್‌ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳಿವೆ. ಇಲ್ಲಿಗೆ ಸಮೀಪದಲ್ಲಿ ಅಂದರೆ ಸುಮಾರು ಎಂಟು ಕಿ.ಮೀ. ದೂರದಲ್ಲಿ ಅಬ್ಬಿಜಲಪಾತವಿದೆ. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್ ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಆದರೆ ಅಬ್ಬಿಜಲಪಾತವಾಗಿಯೇ ಉಳಿದಿದೆ. ನಿಸರ್ಗವನ್ನು ಸವಿಯುವವರು ಮಡಿಕೇರಿಯಿಂದ ಹತ್ತು ಕಿ.ಮೀ. ದೂರದಲ್ಲಿರುವ ನಿಶಾನೆಮೊಟ್ಟೆಯತ್ತ ತೆರಳ ಬಹುದಾಗಿದೆ. ಹಾಗೆಯೇ ಮಾಂದಾಲಪಟ್ಟಿಗೂ ಭೇಟಿ ನೀಡಿ ನಿಸರ್ಗದ ಸೌಂದರ್ಯವನ್ನು ಸವಿಯಲು ಅವಕಾಶವಿದೆ. ಮಡಿಕೇರಿಗೆ ತೆರಳಿದವರು ಬಿಡುವು ಮಾಡಿಕೊಂಡು ಮಡಿಕೇರಿ ನಗರ ಮತ್ತು ಸುತ್ತಮುತ್ತವಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+