Best Place Near Kunigal: ಒಂದು ದಿನದ ಪ್ರಯಾಣಕ್ಕೆ ಕುಣಿಗಲ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳು
ವೀಕೆಂಡ್ ಬಂದ್ರೆ ಸಾಕು ಬೆಂಗಳೂರಿನಲ್ಲಿ ಕೆಲಸ ಮಾಡುವ ಮಂದಿಗೆ ಕುಟುಂಬ, ಸ್ನೇಹಿತರ ಜೊತೆ ಹೊರ ಹೋಗಬೇಕು ಎನಿಸುತ್ತದೆ. ಸದ್ಯ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಇನ್ನು ಒಂದು ದಿನಕ್ಕೆ ದೂರ ಹೋಗಿ ಬರಲು ಆಗಲ್ಲ ಎನ್ನುವವರಿಗೆ ಬೆಂಗಳೂರಿನ ಸಮೀಪವೇ ಹಲವು ಪ್ರವಾಸಿ ತಾಣಗಳು ಕೈ ಬೀಸಿ ಕರೆಯುತ್ತವೆ. ಬೆಂಗಳೂರಿನಿಂದ ಸುಮಾರು 72 ಕಿಮೀ ದೂರದಲ್ಲಿರುವ ಕುಣಿಗಲ್ ತಾಲೂಕಿನಲ್ಲಿ ಕೂಡ ಹಲವು ಉತ್ತಮ ಪ್ರವಾಸಿ ತಾಣಗಳಿದ್ದು ಒಂದು ದಿನದ ಪ್ರವಾಸಕ್ಕೆ ಸೂಕ್ತವಾಗಿವೆ.
ದೇವಸ್ಥಾನ, ಟ್ರಕ್ಕಿಂಗ್, ಜಲಾಶಯ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು ಒಂದು ದಿನದ ಪ್ರಯಾಣಕ್ಕೆ ಉತ್ತಮ ತಾಣಗಳಾಗಿವೆ. ಅಂತಹ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.

ಮಾಕಳಿದುರ್ಗ
ಟ್ರೆಕ್ಕಿಂಗ್ ಮಾಡಬೇಕು ಎನ್ನುವ ಆಸೆ ಇದ್ದವರಿಗೆ ಮಾಕಳಿದುರ್ಗ ಅದ್ಭುತ ಪ್ರವಾಸಿ ತಾಣವಾಗಿದೆ. ಬೆಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದ್ದು ಚಾರಣ ಮಾಡುವವರಿಗೆ ಉತ್ತಮ ತಾಣವಾಗಿದೆ.
ಜಿಟಿ ಜಿಟಿ ಮಳೆಯಾಗುವ ಸಂದರ್ಭದಲ್ಲಿ ಮಾಕಳಿದುರ್ಗ ಅದ್ಭುತ ತಾಣವಾಗಿದೆ. ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ಇಲ್ಲಿ ಚಾರಣ ಮಾಡುವುದು ಕಷ್ಟವಾಗಿರುತ್ತದೆ, ಸೂಕ್ತ ಸಿದ್ಧತೆ ಮಾಡಿಕೊಂಡರೆ ಮಾತ್ರ ಚಾರಣ ಸುಲಭವಾಗುತ್ತದೆ. ಚಾರಣ ಸುಮಾರು 7 ಕಿಮೀ ಹಾದಿಯನ್ನು ಹೊಂದಿದ್ದು, ಸಮುದ್ರಮಟ್ಟದಿಂದ ಸುಮಾರು 1,350 ಮೀಟರ್ ಎತ್ತರದಲ್ಲಿದೆ. ಛಾಯಾಗ್ರಹಣ ಪ್ರಿಯರಿಗೂ ಇದು ಅತ್ಯುತ್ತಮ ತಾಣವಾಗಿದೆ.

ಮಾರ್ಕೊನಹಳ್ಳಿ ಜಲಾಶಯ
ಮಾರ್ಕೋನಹಳ್ಳಿ ಜಲಾಶಯ, ಕುಣಿಗಲ್ ತಾಲೂಕಿನಲ್ಲಿರುವ ಮತ್ತೊಂದು ಸುಂದರ ಪ್ರವಾಸಿ ತಾಣವಾಗಿದೆ. ಬೆಂಗಳೂರಿನಿಂದ ಸುಮಾರು 90 ಕಿಮೀ ದೂರದಲ್ಲಿದೆ. ಕುಣಿಗಲ್ ಪಟ್ಟಣದಿಂದ 25 ಕಿಮೀ ದೂರದಲ್ಲಿದೆ. ಸ್ವಂತ ದ್ವಿಚಕ್ರ ವಾಹನ, ಕಾರು ಹೊಂದಿದ್ದರೆ ಈ ಸ್ಥಳಗಳಿಗೆ ಸುಲಭವಾಗಿ ಭೇಟಿ ಕೊಡಬಹುದು.
ಶಿಂಷಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟೆಯನ್ನು ಕಟ್ಟಲಾಗಿದೆ. 1942ರಲ್ಲಿ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ಕಟ್ಟಿಸಿದರು. 4000 ಹಳ್ಳಿಗಳಿಗೆ ಇದು ನೀರಿನ ಮೂಲವಾಗಿದೆ. ಇದು ಏಷ್ಯಾದ ಮೊಟ್ಟ ಮೊದಲ ಸ್ವಯಂಚಾಲಿತ ಸೈಫನ್ ವ್ಯವಸ್ಥೆಯನ್ನು ಹೊಂದಿದೆ. ನೀರಿನ ಮಟ್ಟ 88 ಅಡಿ ತಲುಪಿದಾಗ ಹೆಚ್ಚುವರಿ ನೀರು, ಸ್ವಯಂಚಾಲಿತ ಬಾಗಿಲುಗಳ ಮೂಲಕ ಅಣೆಕಟ್ಟೆಯ ಹೊರಹೋಗುತ್ತದೆ. ಭೇಟಿ ನೀಡಿದ ಸಂದರ್ಭದಲ್ಲಿ ನೀವು ಇದನ್ನು ವೀಕ್ಷಿಸಬಹುದು.

ಯಡಿಯೂರು
15 ನೇ ಶತಮಾನದ ಅಂತ್ಯದಲ್ಲಿ ಪ್ರವರ್ಧಮಾನಕ್ಕೆ ಬಂದ ಪೂಜ್ಯ ಲಿಂಗಾಯತ ಸಂತ ತೋಂಟದ ಸಿದ್ದಲಿಂಗನ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ಒಳಗೊಂಡಿರುವ ಯಡಿಯೂರು ಪುಣ್ಯಕ್ಷೇತ್ರ ಲಕ್ಷಾಂತರ ಭಕ್ತರನ್ನು ಹೊಂದಿದೆ.
ಕುಣಿಗಲ್ ಪಟ್ಟಣದಿಂದ ಯಡಿಯೂರು ಕೇವಲ 17 ಕಿಮೀ ದೂರದಲ್ಲಿದೆ. ಇಲ್ಲಿಂದ ಮಾರ್ಕೋನಹಳ್ಳಿ ಜಲಾಶಯ ಕೂಡ ಹತ್ತಿರದಲ್ಲಿದ್ದು ಭೇಟಿ ನೀಡಬಹುದಾಗಿದೆ. ಬೆಂಗಳೂರಿನಿಂದ ಯಡಿಯೂರು 92 ಕಿಮೀ ದೂರದಲ್ಲಿದ್ದು, ಕುಣಿಗಲ್‌ನಿಂದ ಬಸ್ ವ್ಯವಸ್ಥೆ ಕೂಡ ಇರುತ್ತದೆ.

ಕುಣಿಗಲ್ ಕೆರೆ
ಈ ಕೆರೆಯು 15 ಮೈಲಿ ಸುತ್ತಳತೆಯುಳ್ಳದ್ದಾಗಿದ್ದು, ಹೇಮಾವತಿ ನೀರಿನಿಂದ ತುಂಬಿಸಲಾಗುತ್ತದೆ. ಕೆರೆಯ ಏರಿಯ ಮೇಲೆ ಹೊಯ್ಸಳರ ಕಾಲದ ಪ್ರಾಚೀನ ಸೋಮೇಶ್ವರ ದೇವಾಲಯವಿದೆ. ಈ ಕೆರೆಯ ನೀರು ಸುತ್ತಮುತ್ತಲ ಹಳ್ಳಿಗಳಿಗೆ ಕೃಷಿಗೆ, ತೋಟಕ್ಕೆ ಬಳಸಲಾಗುತ್ತಿದೆ. ಕುಣಿಗಲ್ ಕೆರೆಯ ಅಂಗಳದಲ್ಲಿ ಸೂರ್ಯಾಸ್ತದ ದೃಶ್ಯ ಅದ್ಭುತವಾಗಿರುತ್ತದೆ.
ಈ ಸ್ಥಳಗಳು ಮಾತ್ರವಲ್ಲದೆ ಕುದುರೆ ಸಾಕಾಣಿಕೆ ಮಾಡುವ ಕುಣಿಗಲ್ ಸ್ಟಡ್ ಫಾರ್ಮ್ ಕೂಡ ನೋಡಿಕೊಂದು ಬರಬಹುದು. ಬಿದನಗೆರೆಯಲ್ಲಿ 161 ಅಡಿ ಎತ್ತರೆ ಪಂಚಮುಖಿ ಆಂಜನೇಯ ಮೂರ್ತಿಯನ್ನು ನಿರ್ಮಿಸಲಾಗಿದ್ದು ಇಲ್ಲಿಗೂ ಕೂಡ ಭೇಟಿ ನೀಡಬಹುದಾಗಿದೆ.












Click it and Unblock the Notifications