ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಏನೆಲ್ಲಾ ಮಾಡಿದ್ರು ಗೊತ್ತಾ?
ಚಾಮರಾಜನಗರ, ಜನವರಿ, 01: ಇದೀಗ ಚಳಿಗಾಲ ಆರಂಭವಾಗಿದ್ದು, ಈ ವೇಳೆಯೆ ದಟ್ಟ ಮಂಜಿನ ನಡುವೆ ಪ್ರವಾಸ ಮಾಡುವ ಬಹುತೇಕ ಮಂದಿಯ ಕನಸಾಗಿರುತ್ತದೆ. ಇದೀಗ ಹೊಸ ವರ್ಷಾಚರಣೆ ಹಿನ್ನೆಲೆ ಗಡಿಜಿಲ್ಲೆಯ ಪ್ರವಾಸಿಸ್ಥಳಗಳು ಹಾಗೂ ದೇವಾಲಯಗಳಿಗೆ ಜನಸಾಗರವೇ ಹರಿದುಬಂದಿದ್ದು, ತಾವು ಕಂಡ ಪ್ರವಾಸದ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ. ಹಾಗಾದರೆ ಜಿಲ್ಲೆಯ ಯಾವೆಲ್ಲ ಪ್ರವಾಸಿ ತಾಣಗಳಿಗೆ ಎಷ್ಟು ಮಂದಿ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಾನುವಾರ ರಾತ್ರಿಯಿಂದಲೇ ಭಕ್ತಸಾಗರ ಹರಿದು ಬಂದಿದ್ದು, ಹೊಸ ವರ್ಷದಂದು ಸಾವಿರಾರು ಭಕ್ತರು ಚಿನ್ನದ ರಥ, ಬೆಳ್ಳಿ ರಥ ಹಾಗೂ ಬಸವ ವಾಹನ ಸೇವೆಯನ್ನು ಸಲ್ಲಿಸಿದ್ದಾರೆ. ಇನ್ನು ದೇವಾಲಯಕ್ಕೆ ಝಗಮಗಿಸುವ ದೀಪಾಲಂಕಾರ ಮಾಡಿದ್ದು, ದೇವಾಲಯ ಪ್ರಾಂಗಣ, ಗರ್ಭಗುಡಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.

ಹೊಗೆನಕಲ್‌ನಲ್ಲೂ ಪ್ರವಾಸಿಗರ ದಂಡು: ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತದಲ್ಲಿ ಸಹಸ್ರಾರು ಮಂದಿ ಪ್ರವಾಸಿಗರು ಲಗ್ಗೆ ಇಟ್ಟು ಕಾವೇರಿ ಜಲ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ಕರ್ನಾಟಕ, ತಮಿಳುನಾಡು ಭಾಗದ ಪ್ರವಾಸಿಗರು ಹರಿದುಬಂದು ತೆಪ್ಪ ಸವಾರಿಯನ್ನು ನಡೆಸಿದ್ದಾರೆ.
ಬಿಳಿಗಿರಿಬನದಲ್ಲಿ ಜನರ ಚಿಲಿಪಿಲಿ: ಚಾಮರಾಜನಗರ ಜಿಲ್ಲೆಗೆ ಕಳಸಪ್ರಾಯದಂತಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಬಂದಿದ್ದಾರೆ. ಬೆಂಗಳೂರಿನಿಂದ ಲಾಂಗ್ ರೈಡ್‌ನಲ್ಲಿ ಬಂದ ನೂರಾರು ಪ್ರವಾಸಿಗರು ಬಿಳಿಗಿರಿ ಬನದ ಚೆಲುವಲ್ಲಿ ಹೊಸ ವರ್ಷಾಚರಣೆ ನಡೆಸಿದ್ದಾರೆ. ಹಾಗೆಯೇ ಬಿಳಿಗಿರಿರಂಗನಾಥ ದೇಗುಲಕ್ಕೆ ಬಂದವರು ಕೆ.ಗುಡಿ ಭಾಗಕ್ಕೂ ಭೇಟಿಕೊಟ್ಟು ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.
ಗೋಪಾಲನ ಸನ್ನಿದಿಯಲ್ಲಿ ಯಾತ್ರಾರ್ಥಿಗಳು: ಕರ್ನಾಟಕದ ಕಾಶ್ಮೀರ ಎನಿಸಿಕೊಂಡ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಯಾತ್ರಾರ್ಥಿಗಳು ಬಂದು ಹಿಮಾಚ್ಛಾದಿತ ಬೆಟ್ಟದಲ್ಲಿ ಹೊಸ ವರ್ಷಾಚರಣೆ ಮಾಡಿದ್ದಾರೆ. ಚುಮುಚುಮು ಮಂಜಿನ ನಡುವೆಯೂ ಗೋಪಾಲನ ದರ್ಶನ ಪಡೆದು ಭಕ್ತರು ಹೊಸ ವರ್ಷದ ಆರಂಭವನ್ನು ಹಸಿರ ಕಾನನದಲ್ಲಿ ಕಳೆದಿದ್ದಾರೆ.
ಚಾಮರಾಜೇಶ್ವರ ದೇಗುಲ: ಮೈಸೂರಿನ ಮಹಾರಾಜರು ಸ್ಥಾಪನೆ ಮಾಡಿರುವ ಚಾಮರಾಜನಗರದ ಚಾಮರಾಜೇಶ್ವರ ದೇಗುಲಕ್ಕೆ ಇಂದು ಸಾರ್ವಜನಿಕರು ಭೇಟಿ ಕೊಟ್ಟು ನೂತನ ವರ್ಷದ ದಿನದಂದು ಚಾಮರಾಜೇಶ್ವರನ ದರ್ಶನ ಪಡೆದರು. ರಾಜತ್ವ ಮತ್ತು ದೈವತ್ವ ಎರಡು ಇರುವ ಚಾಮರಾಜೇಶ್ವರನ ದರ್ಶನ ಪಡೆದರೇ ಇಷ್ಟಾರ್ಥ ಸಿದ್ಧಿಸುವ ನಂಬಿಕೆ ಇರುವ ಹಿನ್ನೆಲೆ ಇಂದು ಸಾವಿರಾರು ಮಂದಿ ಭಕ್ತರು ದರ್ಶನ ಪಡೆದರು.












Click it and Unblock the Notifications