ಉಡುಪಿ; ಮಲ್ಪೆ ಬೀಚ್‌ನಲ್ಲಿ ಪ್ರವಾಸಿ ಬೋಟ್ ಚಟುವಟಿಕೆ ಸ್ಥಗಿತ
ಉಡುಪಿ, ಮೇ 18; ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್ ಹಾಗೂ ಸೀವಾಕ್ ಪ್ರದೇಶಗಳಲ್ಲಿ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಉಡುಪಿ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳು ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್ ಹಾಗೂ ಸೀವಾಕ್ ಪ್ರದೇಶಗಳಲ್ಲಿ ಪ್ರವಾಸಿ ಬೋಟ್ ಚಟುವಟಿಕೆ, ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮೇ 16 ರಿಂದ ಸೆಪ್ಟಂಬರ್ 15 ರ ವರೆಗೆ ಈ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಮಳೆಗಾಲ ಆರಂಭವಾಗುತ್ತಿರು ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಜೂನ್ ಮೊದಲ ವಾರದಿಂದ ಸೆಪ್ಟೆಂಬರ್ ವರೆಗಿನ ಅವಧಿಯನ್ನು ನೈಋತ್ಯ ಮುಂಗಾರು ಮಾರುತ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗೆ ಪ್ರತಿ ವರ್ಷ ನಿಷೇಧ ಹೇರಲಾಗುತ್ತದೆ.
ಜೂನ್‌ನಲ್ಲಿ ಮುಂಗಾರು ಆಗಮನ; ಭಾರತಕ್ಕೆ ನೈಋತ್ಯ ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಕೇರಳಕ್ಕೆ ಜೂನ್ 4ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶ ಮಾಡುತ್ತದೆ. ಕೆಲವು ಬಾರಿ ವಿಳಂಬವಾಗುತ್ತದೆ. ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕೇರಳ ರಾಜ್ಯಕ್ಕೆ ಮುಂಗಾರು ಜೂನ್ 4ರಂದು ಆಗಮಿಸಲಿದೆ. ಆದ್ದರಿಂದ ಕರ್ನಾಟಕದಲ್ಲಿ ಮಳೆ ಒಂದು ವಾರ ತಡವಾಗಿ ಆರಂಭವಾಗುವ ನಿರೀಕ್ಷೆ ಇದೆ. ಆದರೆ ಅದಕ್ಕೆ ಮೊದಲೇ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಸಮುದ್ರ ತೀರದಲ್ಲಿ ನಿಷೇಧಿಸಲಾಗಿದೆ.
ಕಳೆದ ವರ್ಷ ಮೇ 29ರಂದೇ ಮುಂಗಾರು ಕೇರಳಕ್ಕೆ ಪ್ರವೇಶ ಮಾಡಿತ್ತು. 2021ರಲ್ಲಿ ಜೂನ್ 3ರಂದು ಮುಂಗಾರು ಆರಂಭವಾಗಿತ್ತು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಆಳ ಸಮುದ್ರದ ಮೀನುಗಾರಿಕೆ ನಿಷೇಧ ಹೇರಲಾಗುತ್ತದೆ. ಬೋಟ್‌ಗಳು ಸಮುದ್ರ ತೀರದಲ್ಲಿ ಲಂಗರು ಹಾಕುತ್ತವೆ.












Click it and Unblock the Notifications