Thottikallu Falls: ಬೆಂಗಳೂರಿಗೆ ತುಂಬಾ ಹತ್ತಿರ ಈ ತೊಟ್ಟಿಕಲ್ಲು ಜಲಪಾತ: ಎಂದಾದರೂ ಭೇಟಿ ನೀಡಿರುವಿರಾ..?
ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ, ಲಾಲ್‌ಬಾಗ್, ಅರಮನೆ, ವಿಧಾನಸೌಧ, ವಂಡರ್ ಲಾ, ಬನ್ನೇರ್‌ಘಟ್ಟ ನ್ಯಾಷನಲ್ ಪಾರ್ಕ್ ಇಂತೆಲ್ಲಾ ಸ್ಥಳಗಳನ್ನು ನೋಡಿ ನೋಡಿ ಬೇಸರ ಆಗಿದಿಯಾ? ಬೇರೆ ಯಾವುದಾದರು ಹತ್ತಿರವಿರುವ ಜಲಪಾತಗಳಿಗೆ ಹೋಗಬೇಕು, ನೀರಲ್ಲಿ ಆಟ ಆಡಬೇಕು ಅನ್ನೋ ಮನಸ್ಸಾಗಿದಿಯಾ? ಹಾಗಾದರೆ ನಿಮಗಾಗಿ ಕೆಲ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ರಜಾ ದಿನಗಳಲ್ಲಿ ಒಂದು ದಿನದ ಪ್ರವಾಸಕ್ಕೆ ಹೋಗಲು ಬಯಸುವವರು ಬೆಂಗಳೂರಿಗೆ ಹತ್ತಿರವಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತವರಿಗೆ ತೊಟ್ಟಿಕಲ್ಲು ಜಲಾಶಯ (ಟಿಕೆ ಫಾಲ್ಸ್) ಉತ್ತಮ ಆಯ್ಕೆ. ತೊಟ್ಟಿ ಕಲ್ಲು ಬೆಂಗಳೂರು ನಗರದಿಂದ ಸುಮಾರು 35 ಕಿಮೀ ಮತ್ತು ಬೆಂಗಳೂರು ಹೃದಯ ಭಾಗದಿಂದ 14 ಕಿಮೀ ದೂರದಲ್ಲಿರದಲ್ಲಿದೆ. ಕನಕಪುರ ಮುಖ್ಯ ರಸ್ತೆಯ (ರಾಷ್ಟ್ರೀಯ ಹೆದ್ದಾರಿ-209) ಕಗ್ಗಲಿಪುರದ ಸಮೀಪವಿರುವ ಸ್ಥಳವಾಗಿದೆ.

ತೊಟ್ಟಿಕಲ್ಲು ಎಂಬ ಜಲಪಾತಕ್ಕೆ ಟಿಕೆ ಫಾಲ್ಸ್ ಎಂದು ಕರೆಯಲಾಗುತ್ತದೆ. ಸ್ಥಳೀಯವಾಗಿ ಈ ಜಲಪಾತವನ್ನು "ಸ್ವರ್ಣ ಮುಖಿ" (ಸುವರ್ಣ ಮುಖದ) ಜಲಪಾತ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಅಥವಾ ಮಳೆಗಾಲದ ನಂತರ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಮಳೆಗಾಲದಲ್ಲಿ ನೀರಿನ ಪೂರ್ಣ ಹರಿವು ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಸ್ಥಳ ಬೆಂಗಳೂರಿಗೆ ತುಂಬಾ ಹತ್ತಿರದಲ್ಲಿದ್ದು, ಪ್ರಯಾಣ ಆಯಾಸದಾಯಕವಾಗಿರುವುದಿಲ್ಲ. ನಿಮ್ಮ ವಾರಾಂತ್ಯದ ಬೇಸರವನ್ನು ನಿವಾರಿಸಲು ಸುಲಭವಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದು.
ಕಗ್ಗಲಿಪುರದ ಸಮೀಪವಿರುವ ಈ ಸ್ಥಳಕ್ಕೆ ಹಲವಾರು ಜನ ಭೇಟಿ ನೀಡುತ್ತಾರೆ. ಆದರೆ ಬಹುತೇಕರಿಗೆ ಈ ಸ್ಥಳದ ಬಗ್ಗೆ ಪರಿಚಯವೇ ಇಲ್ಲ. ಇದೊಂದು ಸಣ್ಣ ಬೆಟ್ಟ. ಈ ಬೆಟ್ಟದ ಮೇಲಿಂದ ನೀರು ಹರಿದು ಜಲಪಾತವಾಗಿ ಧುಮ್ಮಿಕ್ಕುತ್ತದೆ. ಆದರೆ ಇಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಇರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಜರಿಯಂತೆ ನೀರು ಧುಮ್ಮಿಕ್ಕುತ್ತದೆ. ಸುತ್ತಲು ಇರುವ ಗಿಡ ಮರಗಳು ಈ ಸ್ಥಳದ ಅಂದವನ್ನು ಹೆಚ್ಚಿಸಿವೆ. ಟಿಕೆ ಫಾಲ್ಸ್ ಹೋಗುವ ಮೂರು ನಾಲ್ಕು ಕಿಲೋ ಮೀಟರ್ ದಾರಿ ಉದ್ದಕ್ಕೂ ಗಿಡ ಮರಗಳು ಆಕರ್ಷಕವಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.
ಈ ಸ್ಥಳ ಟ್ರೆಕ್ಕಿಂಗ್‌ಗೆ ಉತ್ತಮವಾಗಿದೆ. ಬೆಟ್ಟಗಳ ಮೇಲೆ ಟ್ರೆಕ್ಕಿಂಗ್ ಮಾಡುವಾಗ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ. ಏಕೆಂದರೆ ಒಂದು ತಪ್ಪಾದ ಹೆಜ್ಜಿ ಮಾರಕವಾಗಬಹುದು. ಕಿರಿದಾದ ದಾರಿಯಲ್ಲಿ ಬೆಟ್ಟವನ್ನು ಹತ್ತಿ ಮೇಲೋದರೆ ಬೆಟ್ಟದ ಮೇಲೆ ನೀರು ಹರಿಯುವುದು ಕಾಣಿಸುತ್ತದೆ. ಆ ಸಣ್ಣ ಝರಿಯಲ್ಲಿ ಆಟವಾಡುವುದೇ ಒಂದು ಅದ್ಬುತ ಅನುಭವ. ಕೆಲಸದ ಒತ್ತಡ, ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಈ ಸ್ಥಳ ಉತ್ತಮವಾಗಿದೆ.

ತಲುಪುವುದು ಹೇಗೆ:
ರಾಜ್ಯ ಹೆದ್ದಾರಿ 209 ಆಗಿರುವ ಬೆಂಗಳೂರು ಕನಕಪುರ ಮುಖ್ಯ ರಸ್ತೆಯ ಮಾರ್ಗವನ್ನು ಹಿಡಿದು ಹತ್ತು ಕಿಲೋ ಮೀಟರ್ ಪ್ರಯಾಣ ಮಾಡಬಹುದು. ಕನಕಪುರ ಕಡೆಗೆ ಹೆದ್ದಾರಿಯಲ್ಲಿ ನೇರವಾಗಿ ಹೋಗಿ NICE ರಸ್ತೆ ಜಂಕ್ಷನ್ ದಾಟಿ ಮುಂದೆ ಹೋಗಬೇಕು. ದಾರಿಯಲ್ಲಿ ನೀವು ಆರ್ಟ್ ಆಫ್ ಲಿವಿಂಗ್ ಅನ್ನು ಸಮೀಪಿಸುತ್ತೀರಿ. ಇದರಿಂದ ಇನ್ನೂ ಸುಮಾರು 2-3 ಕಿಲೋಮೀಟರ್ ಮುಂದೆ ಹೋಗಬೇಕು ಮತ್ತು ನಂತರ ಕಗ್ಗಲಿಪುರದ ಸಾಲುಹುಣಸೆ ಬಸ್ ನಿಲ್ದಾಣದಿಂದ ಎಡ ತಿರುವು ತೆಗೆದುಕೊಳ್ಳಬೇಕು. ತಿರುವಿನ ನಂತರ, ನೀವು ಆಸ್ಪತ್ರೆ / ಪುನರ್ವಸತಿ ಕೇಂದ್ರವನ್ನು ಕಂಡುಕೊಳ್ಳುವವರೆಗೆ ನೇರವಾಗಿ ಸುಮಾರು 1.5 ಕಿಮೀ ಪ್ರಯಾಣಿಸಿ. ಅಲ್ಲಿ ನೀವು ಮತ್ತೆ ಎಡ ತಿರುವು ತೆಗೆದುಕೊಳ್ಳಬೇಕು ಮತ್ತು ಹಳ್ಳಿಯ ಮೂಲಕ ಹಾದು ಹೋಗುವ ಕಿರಿದಾದ ರಸ್ತೆ TK ಜಲಪಾತಕ್ಕೆ ಮಾರ್ಗವಾಗಿದೆ. ಕಿದಾದ ರಸ್ತೆಯಿಂದಾಗಿ ಇಲ್ಲಿ ಮಾರ್ಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯರ ಸಹಾಯ ಪಡೆಯಬಹುದು.












Click it and Unblock the Notifications