ಈ ವೀಕೆಂಡ್‌ಗೆ ಒನ್ ಡೇ ಟ್ರಿಪ್ ಹೋಗಲು ಸೂಕ್ತ ಜಾಗಗಳಿವು..
ಬೆಂಗಳೂರಿನ ಬಹುತೇಕರಿಗೆ ವೀಕೆಂಡ್ ರಜೆ ಸಿಗುತ್ತದೆ. ಬಹುತೇಕ ಐಟಿಬಿಟಿ ಕಂಪನಿಗಳು ಶನಿವಾರ ಹಾಗೂ ಭಾನುವಾರ ರಜೆ ನೀಡುವುದರಿಂದ ಎಲ್ಲಾದರೂ ಪ್ರವಾಸ ಹೋಗಿ ನೆಮ್ಮದಿಯಾಗಿ ಬರೋಣ ಎಂದು ಪ್ಲ್ಯಾನ್ ಮಾಡುತ್ತಾರೆ. ಕೆಲವರು ದೂರದ ಊರುಗಳತ್ತ ತೆರಳಿ ಆಯಾಸವೂ ಪಡುತ್ತಾರೆ. ಆದರೆ, ಬೆಂಗಳೂರಿನ ಆಸುಪಾಸಿನಲ್ಲೇ ಹಲವು ಪ್ರೇಕ್ಷಣೀಯ ಸ್ಥಳಗಳಿದ್ದು, ಒಂದೇ ದಿನದಲ್ಲಿ ಇವುಗಳನ್ನು ನೋಡಿ ಬರಬಹುದು..
ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ: ಬೆಂಗಳೂರಿನಿಂದ ಸುಮಾರು 52 ಕಿ.ಮೀ ದೂರದಲ್ಲಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವಿದೆ. ದೊಡ್ಡಬಳ್ಳಾಪುರ ಮಾರ್ಗವಾಗಿ ಚಲಿಸಿದರೆ ಇಲ್ಲಿಗೆ ತಲುಪಬಹುದು. ಕುಟುಂಬದೊಂದಿಗೆ ತೆರಳಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಬಹುದು. ಬಳಿಕ ಪಕ್ಕದಲ್ಲೇ ಒಂದು ಡ್ಯಾಂ ಇದ್ದು, ಅಲ್ಲಿಗೂ ಭೇಟಿ ನೀಡಬಹುದು.

ಮಾಕಳಿದುರ್ಗ ಕೋಟೆ: ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಮಾಕಳಿದುರ್ಗ ಟ್ರೆಕ್ಕಿಂಗ್ ಮಾಡಲು ಸೂಕ್ತ ಜಾಗ. ಟ್ರೆಕ್ಕಿಂಗ್ ಉತ್ಸಾಹ ಹೊಂದಿರುವ ಸಾಹಸಿಗಳಿಗೆ ಇದು ಸ್ವರ್ಗ ಎಂದೇ ಹೇಳಲಾಗುತ್ತೆ. ಇಲ್ಲಿ ಮಾರ್ಕಂಡೇಯ ಮಹಾ ಮುನಿಗಳು ಈ ಬೆಟ್ಟದ ಮೇಲೆ ತಪ್ಪಸ್ಸು ಮಾಡಿದರು ಎಂದು ಪುರಾಣಗಳು ಹೇಳುತ್ತವೆ. ಸಮುದ್ರಮಟ್ಟದಿಂದ ಸುಮಾರು 4460 ಅಡಿ ಎತ್ತರದಲ್ಲಿರುವ ಈ ಬೆಟ್ಟ ಐತಿಹಾಸಿಕ ಕೋಟೆಯನ್ನೂ ಹೊಂದಿದೆ. ಜಾಲಿ ರೈಡ್ ಹೋಗಲು ಇದು ಉತ್ತಮ ಸ್ಥಳ.
ಮಂಚನಬೆಲೆ ಡ್ಯಾಂ: ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು ಮೀನು ಸವಿಯಬೇಕು ಎಂಬ ಕನಸಿದ್ದವರು ತಪ್ಪದೇ ಮಂಚನಬೆಲೆಗೆ ಹೋಗಿ. ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿದೆ ಈ ಜಾಗ. ಡ್ಯಾಂನ ನೀರಿನಲ್ಲಿ ಜಲಕ್ರೀಡೆಯಾಡುತ್ತಾ ಅಲ್ಲೇ ತಯಾರಿಸುವ ಮೀನು ಸವಿಯಬಹುದು. ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದೇ ಮಾರ್ಗದಲ್ಲಿ ನಿಮಗೆ ದೊಡ್ಡ ಆಲದ ಮರವೂ ಸಿಗುತ್ತೆ.

ತೊಟ್ಟಿಕಲ್ಲು ಫಾಲ್ಸ್ (ಟಿ.ಕೆ.ಫಾಲ್ಸ್): ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ತೊಟ್ಟಿಕಲ್ಲು ಫಾಲ್ಸ್‌ಗೆ ನೀವು ವಾರಾಂತ್ಯದಲ್ಲಿ ಭೇಟಿ ನೀಡಬಹುದು. ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ವಿವಿಧ ದೇವಾಲಯಗಳಿವೆ. ಜಲಪಾತ ಮೈದುಂಬಿ ಹರಿಯುತ್ತಿದ್ದರೆ ಆದಷ್ಟು ಎಚ್ಚರಿಕೆಯಿಂದಿರಿ. ಇಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಹುಷಾರು! ತೊಟ್ಟಿಕಲ್ಲು ಫಾಲ್ಸ್‌ನಿಂದ ಕೇವಲ 7 ಕಿ.ಮೀ ದೂರದಲ್ಲೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವೂ ಇದೆ.
ನಂದಿಬೆಟ್ಟ: ಪ್ರೇಮಿಗಳ ಸ್ವರ್ಗ ಎಂದು ಕರೆಯಲ್ಪಡುವ ನಂದಿಬೆಟ್ಟವನ್ನು ವಾರಾಂತ್ಯದಲ್ಲಿ ನೋಡುವ ಮಜಾನೇ ಬೇರೆ. ಬೆಂಗಳೂರಿನಿಂದ ಸುಮಾರು 66 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟವು ಬೆಂಗಳೂರಿಗರ ಹಾಟ್ ಫೇವರೆಟ್ ತಾಣ ಕೂಡ ಹೌದು. ಇಲ್ಲಿನ ಐತಿಹಾಸಿಕ ದೇವಾಲಯಗಳು, ಸೂರ್ಯಾಸ್ತದ ಕಣ್ತುಂಬಿಕೊಂಡು ಅಲ್ಲೆ ಇರುವ ಭೋಗನಂದೀಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ.
ದೇವನಹಳ್ಳಿ ಕೋಟೆ: ಕೆಂಪೇಗೌಡ ಏರ್‌ಪೋರ್ಟ್‌ನಿಂದ ಸಮೀಪವೇ ಇರುವ ದೇವನಹಳ್ಳಿ ಐತಿಹಾಸಿಕ ಪಟ್ಟಣ. ಇದು ಮೂಲತಃ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಮಲ್ಲ ಬೈರೇಗೌಡ ಅವರು ನಿರ್ಮಿಸಿದ ಕೋಟೆಯ ಅವಶೇಷ ಈಗಲೂ ಇದೆ. ಟಿಪ್ಪು ಸುಲ್ತಾನನ ಜನ್ಮಸ್ಥಳವೂ ಇಲ್ಲಿದೆ.
ಸ್ಕಂದಗಿರಿ: ನಂದಿ ಗಿರಿಧಾಮದ ಪಕ್ಕದಲ್ಲೇ ಇರುವುದು ಸ್ಕಂದಗಿರಿ. ಬೆಟ್ಟದ ತುದಿಯಿಂದ ಅದ್ಭುತವಾದ ಸೂರ್ಯೋದಯವನ್ನು ನೋಡಬಹುದು. ಈ ಸುಂದರವಾದ ಬೆಟ್ಟದ ಶಿಖರವು ಸಮುದ್ರ ಮಟ್ಟದಿಂದ 1450 ಮೀ ಎತ್ತರದಲ್ಲಿದೆ. ಸ್ಕಂದಗಿರಿಯ ತುದಿಗೆ ಚಾರಣ ಮಾಡುವುದು ಒಂದು ರೋಮಾಂಚನಕಾರಿ ಅನುಭವ.












Click it and Unblock the Notifications