ಬೇಸಿಗೆ ರಜೆ; ಮೇ 1ರಿಂದ ಈ ರೈಲುಗಳ ಸೇವೆ ವಿಸ್ತರಣೆ
ಹುಬ್ಬಳ್ಳಿ, ಏಪ್ರಿಲ್ 30; ಬಿರು ಬೇಸಿಗೆ ನೆತ್ತಿ ಸುಡುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಆಗಾಗ ಮಳೆ ತಂಪೆಯುತ್ತಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರವೂ ಹೆಚ್ಚಾಗಿದೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ರೈಲ್ವೆ ಇಲಾಖೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ.
ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ಬೇಸಿಗೆ ರಜೆ ಹಿನ್ನಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ಕೆಲವು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಮೇ 1ರಿಂದಲೇ ಜಾರಿಗೆ ಬರುವಂತೆ ಈ ರೈಲುಗಳ ಸೇವೆ ಮುಂದಿನ ಆದೇಶದ ತನಕ ವಿಸ್ತರಣೆಯಾಗಿದೆ.

ಈಗಾಗಲೇ ಸಂಚಾರ ನಡೆಸುತ್ತಿರುವ ರೈಲುಗಳ ಸೇವೆ ಏಪ್ರಿಲ್ ತಿಂಗಳಿನಲ್ಲಿ ಅಂತ್ಯಗೊಳ್ಳಬೇಕಿತ್ತು. ಆದರೆ ಬೇಸಿಗೆ ರಜೆ ಸಮಯದಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಅಲ್ಲದೇ ಈ ಕುರಿತು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ವಿಸ್ತರಣೆಗೊಂಡ ರೈಲುಗಳ ಪಟ್ಟಿ ಇಲ್ಲಿದೆ ನೋಡಿ.
ವಿಸ್ತರಣೆಗೊಂಡ ರೈಲುಗಳು; ರೈಲು ಸಂಖ್ಯೆ 07325 ಎಸ್. ಎಸ್. ಎಸ್. ಹುಬ್ಬಳ್ಳಿ-ತಂಜಾವೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರತಿ ಸೋಮವಾರ ಮೇ 1 ರಿಂದ 29 ರವರೆಗೆ (5 ಟ್ರಿಪ್) ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 24ರ ತನಕ ಈ ರೈಲು ಓಡಿಸಲು ಆದೇಶಿಸಲಾಗಿತ್ತು.

ರೈಲು ಸಂಖ್ಯೆ 07326 ತಂಜಾವೂರು-ಎಸ್. ಎಸ್. ಎಸ್. ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರತಿ ಮಂಗಳವಾರ ಮೇ 2 ರಿಂದ 30 ರವರೆಗೆ (5 ಟ್ರಿಪ್) ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 25ರ ತನಕ ಈ ರೈಲು ಓಡಿಸುವುದಾಗಿ ತಿಳಿಸಲಾಗಿತ್ತು. ಆದರೆ ಈ ರೈಲುಗಳ ವೇಳಾಪಟ್ಟಿ, ಸಂಯೋಜನೆ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರೈಲು ಸಂಖ್ಯೆ 06547 ಕೆ. ಎಸ್. ಆರ್. ಬೆಂಗಳೂರು-ವೇಲಂಕಣಿ ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರತಿ ಶನಿವಾರ ಮೇ 6, 13, 20 & 27 (4 ಟ್ರಿಪ್) ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 29ರವರೆಗೆ ಈ ರೈಲು ಓಡಿಸಲು ಸೂಚಿಸಲಾಗಿತ್ತು.
ರೈಲು ಸಂಖ್ಯೆ 06548 ವೇಲಂಕಣಿ-ಕೆ. ಎಸ್. ಆರ್. ಬೆಂಗಳೂರು ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರತಿ ಶನಿವಾರ ಮೇ 6, 13, 20 & 27 (4 ಟ್ರಿಪ್) ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 29 ರವರೆಗೆ ಈ ರೈಲು ಓಡಿಸಲು ತಿಳಿಸಲಾಗಿತ್ತು.
ನಿಲ್ದಾಣ ರದ್ದು; ನೈಋತ್ಯ ರೈಲ್ವೆ ತನ್ನ ಮತ್ತೊಂದು ಆದೇಶದಲ್ಲಿ ಚಕ್ರಪಲ್ಲಿ ನಿಲ್ದಾಣದಲ್ಲಿ ನಿಲುಗಡೆ ರದ್ದು ಮಾಡಲಾಗಿದೆ ಎಂದು ತಿಳಿಸಿದೆ. ಪ್ಲಾಟ್‌ಫಾರ್ಮ್ ಮತ್ತು ಪಾದಾಚಾರಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುದರಿಂದ ಚಕ್ರಪಲ್ಲಿ ನಿಲ್ದಾಣದಲ್ಲಿ ಕೆಲವು ರೈಲುಗಳ ನಿಲುಗಡೆಯನ್ನು ಮೂರು ತಿಂಗಳ ಕಾಲ ರದ್ದುಗೊಳಿಸಲಾಗಿದೆ.
ರೈಲುಗಳ ಸಂಖ್ಯೆ 06595/ 06596 ಕೆ. ಎಸ್. ಆರ್. ಬೆಂಗಳೂರು-ಧರ್ಮಾವರಂ-ಕೆ. ಎಸ್. ಆರ್ ಬೆಂಗಳೂರು ಮತ್ತು 06515/ 06516 ಕೆ. ಎಸ್. ಆರ್. ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆ. ಎಸ್. ಆರ್. ಬೆಂಗಳೂರು ಹಾಗೂ 07694 ಹಿಂದೂಪುರ-ಗುಂತಕಲ್ ರೈಲುಗಳನ್ನು ಮೊದಲು ಏಪ್ರಿಲ್ 30ರವರೆಗೆ ಚಕ್ರಪಲ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿತ್ತು. ಈ ಆದೇಶವನ್ನು ಜುಲೈ 31ರ ತನಕ ವಿಸ್ತರಣೆ ಮಾಡಲಾಗಿದೆ.
ರೈಲು ಸಂಖ್ಯೆ 07693 ಗುಂತಕಲ್-ಹಿಂದೂಪುರ ರೈಲು ಏಪ್ರಿಲ್ 29ರವರೆಗೆ ಚಕ್ರಪಲ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿತ್ತು. ಇದನ್ನು ಮತ್ತೆ ಜುಲೈ 30ರವರೆಗೆ ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶಿಸಿದೆ.












Click it and Unblock the Notifications