ಇನ್ಮುಂದೆ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಸುಂದರ ಜಲಪಾತ
ಮಡಿಕೇರಿ, ಜೂನ್ 14: ಕೊಡಗಿನಲ್ಲಿ ಮಳೆ ಸುರಿಯಲಾರಂಭಿಸಿರುವುದರಿಂದ ಬೇಸಿಗೆಯಲ್ಲಿ ಬಿಸಿಲಿಗೆ ಬೆಂಡಾಗಿ ಹೋಗಿದ್ದ ಬೆಟ್ಟಗುಡ್ಡಗಳೆಲ್ಲವೂ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಅದರ ನಡುವಿನ ಗುಡ್ಡಗಳ ಮೇಲೆ, ರಸ್ತೆ ಬದಿಯಲ್ಲಿದ್ದ ಜಲಪಾತಗಳಿಗೆ ನಿಧಾನವಾಗಿ ಜೀವಕಳೆ ಬರಲಾರಂಭಿಸಿದ್ದು, ಶ್ವೇತಧಾರೆಯಾಗಿ ಧುಮುಕಲಾರಂಭಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಇಂತಹ ಜಲಪಾತಗಳು ಕೊಡಗಿನಾದ್ಯಂತ ಇವೆಯಾದರೂ ಅವು ಬೆಟ್ಟಗುಡ್ಡಗಳ, ಕಾಫಿ ತೋಟಗಳ ನಡುವೆ ಇದೆ. ಹೀಗಾಗಿ ಇವುಗಳನ್ನು ಸುಲಭವಾಗಿ ಎಲ್ಲರೂ ನೋಡಲು ಸಾಧ್ಯವಿಲ್ಲದಾಗಿದೆ. ಆದರೆ ಮುಂಗಾರು ಚೇತರಿಕೆಯಾಗಿ ಕುಂಭದ್ರೋಣ ಮಳೆ ಸುರಿದಾಗ ಎಲ್ಲೆಂದರಲ್ಲಿ ಹರಿಯುವ ನೀರು ಕೆಲವೊಮ್ಮೆ ಗುಡ್ಡದ ಮೇಲೆ ಧುಮುಕಿ ಜಲಪಾತಗಳನ್ನು ಸೃಷ್ಟಿಸಿ ಬಿಡುತ್ತವೆ. ಆದರೆ ಈ ಜಲಪಾತಗಳು ಮಳೆ ಕಡಿಮೆಯಾಗುತ್ತಿದ್ದಂತೆಯೇ ಕಣ್ಮರೆಯಾಗಿ ಬಿಡುತ್ತವೆ.

ಮುಂಗಾರು ಆರಂಭವಾಗುತ್ತಿದ್ದಂತೆಯೇ ಮೈಕೈತುಂಬಿಕೊಂಡ ಬೆಡಗಿಯರಂತೆ ಜಲಪಾತಗಳು ಥಕಥೈ ಎನ್ನುವುದು ಮಾಮೂಲಿಯಾಗಿದೆ. ಈಗಂತೂ ಮಳೆ ಸುರಿಯಲಾರಂಭಿಸಿರುವುದರಿಂದ ಕಾಫಿ ತೋಟಗಳ, ಬೆಟ್ಟಗುಡ್ಡಗಳ, ದಟ್ಟ ಅರಣ್ಯಗಳ ನಡುವೆ ನೆಲೆ ನಿಂತ ಜಲಧಾರೆಗಳೆಲ್ಲಾ ಹಾಲ್ನೊರೆಯುಕ್ಕಿಸುತ್ತಾ ವಯ್ಯಾರಿಗಳಂತೆ ಬಳುಕುತ್ತಾ ತುಂಟ ನಗು ಬೀರಿ ತನ್ನೆಡೆಗೆ ಸೆಳೆಯತೊಡಗಿವೆ. ನಗರ ನಾಗರೀಕತೆಯ ಗಂಧಗಾಳಿಗೆ ಒಳಗಾಗದೆ ದಟ್ಟ ಕಾಡಿನ ನಡುವೆ... ಮತ್ಯಾರದೋ ತೋಟಗಳ ನಡುವೆ ತಮ್ಮ ಪಾಡಿಗೆ ತಾವು ಎಂಬಂತೆ ಧುಮುಕುವ ಜಲಧಾರೆಗಳ ಹತ್ತಿರ ಹೋಗುವುದು ಕಷ್ಟವೇ..
ಜಲಪಾತಗಳ ವೀಕ್ಷಣೆ ಅಷ್ಟು ಸುಲಭವಲ್ಲ
ಬಹಳಷ್ಟು ಜಲಪಾತಗಳನ್ನು ನೋಡಬೇಕಾದರೆ ಹತ್ತಾರು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುವ, ಬೆಟ್ಟಗುಡ್ಡಗಳನ್ನೇರುವ, ಅಷ್ಟೇ ಅಲ್ಲ ರಕ್ತ ಹೀರಲು ಬರುವ ಜಿಗಣೆಗಳೊಂದಿಗೆ ಹೋರಾಡಲು ಸಿದ್ಧರಾಗಿರಬೇಕು. ಆಗ ಮಾತ್ರ ಜಲಪಾತಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿರುವ ಕೆಲವೇ ಕೆಲವು ಜಲಪಾತಗಳನ್ನು ಮಾತ್ರ ಸುಲಭವಾಗಿ ನೋಡಬಹುದಾದರೂ ಹೆಚ್ಚಿನ ಜಲಪಾತಗಳನ್ನು ವೀಕ್ಷಿಸಲು ತೆರಳುವುದು ಸುಲಭವಾಗಿ ಉಳಿದಿಲ್ಲ. ಇಂತಹ ಜಲಪಾತಗಳ ಬಳಿಗೆ ಮಳೆಗಾಲದಲ್ಲಿ ತೆರಳುವುದು ಕೂಡ ಒಳಿತಲ್ಲ. ಒಂದು ವೇಳೆ ಹೋಗುವವರು ಸ್ಥಳೀಯರ ಮಾರ್ಗದರ್ಶನದಲ್ಲಿ ಹೋದರೆ ಉತ್ತಮ.
ಕೊಡಗಿನ ಬೆಟ್ಟಗುಡ್ಡಗಳಲ್ಲಿ ಮಳೆಗಾಲದ ದಿನಗಳಲ್ಲಿ ಅಸಂಖ್ಯಾತ ಜಲಧಾರೆಗಳು ಸೃಷ್ಟಿಯಾಗಿ ಯಾರ ಗಮನವನ್ನೂ ಸೆಳೆಯದೆ ತಮ್ಮ ಪಾಡಿಗೆ ತಾವು ಎಂಬಂತೆ ಅಜ್ಞಾತ ಜಲಧಾರೆಗಳಾಗಿ ಉಳಿದು ಬಿಡುವುದು ಇಲ್ಲದಿಲ್ಲ. ಇವುಗಳ ಜಾಡು ಹುಡುಕಿ ಸನಿಹಕ್ಕೆ ತೆರಳುವವರು ಕೂಡ ಕಡಿಮೆಯೇ.. ಹೀಗಾಗಿ ಅವು ಮಳೆಗಾಲದಲ್ಲಿ ಭೋರ್ಗರೆದು ಧುಮುಕಿ ಮಳೆ ವಿರಾಮ ನೀಡುತ್ತಿದ್ದಂತೆಯೇ ಅವು ಕೂಡ ಅದೃಶ್ಯವಾಗಿ ಬಿಡುತ್ತವೆ. ನದಿಮೂಲಗಳಿಂದ ಸೃಷ್ಟಿಯಾಗುವ ಜಲಪಾತಗಳು ಮಳೆಗಾಲ ಕಳೆದ ಮೇಲೆಯೂ ಭೋರ್ಗರೆದು ಧುಮುಕುತ್ತವೆ.

ಹೆದ್ದಾರಿ ಬದಿಯಲ್ಲಿಯೇ ಧುಮ್ಮಿಕ್ಕುವ ಜಲಪಾತ
ಹಾಗೆನೋಡಿದರೆ ಕೊಡಗಿನಲ್ಲಿರುವ ಜಲಧಾರೆಗಳ ಪೈಕಿ ಹೆಚ್ಚಿನವುಗಳು ಅಲ್ಪಾಯುಷಿಗಳು. ಇವುಗಳು ಮಳೆಗಾಲದಲ್ಲಿ ಮಾತ್ರ ಭೋರ್ಗರೆದು ಧುಮುಕಿ ತಮ್ಮ ಚೆಲುವನ್ನು ಪ್ರದರ್ಶಿಸುತ್ತವೆಯಾದರೂ ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ತನ್ನ ಚೆಲುವು ಕಳೆದುಕೊಂಡು ಅದೃಶ್ಯವಾಗಿ ಬಿಡುತ್ತವೆ. ಹಾಗಾಗಿ ಈ ಜಲಧಾರೆಗಳನ್ನು ಮಳೆಗಾಲದ ಬೆಡಗಿಯರು ಎಂದು ಕರೆಯಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಹಲವು ಜಲಪಾತಗಳಿದ್ದರೂ ಅವು ಕಾಣಿಸುವುದೇ ಇಲ್ಲ. ಒಂದು ವೇಳೆ ಯಾವುದಾದರೂ ಜಲಪಾತಗಳೇನಾದರೂ ಕಾಣಿಸಿದ್ದೇ ಆದರೆ ಅದು ಮಡಿಕೇರಿ ಮತ್ತು ಮಂಗಳೂರು ರಸ್ತೆಯಲ್ಲಿ ಮಾತ್ರ.
ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುವ ಹೆದ್ದಾರಿಯು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಂಚಿನವರೆಗೆ ಬೆಟ್ಟಶ್ರೇಣಿಯನ್ನು ಹೊಂದಿದ್ದು, ಇದರ ನಡುವೆ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿ ಘಾಟಿಯನ್ನು ಹೊಂದಿದ್ದು. ಹೆದ್ದಾರಿಯಲ್ಲಿ ಸಾಗುವವರಿಗೆ ಬೆಟ್ಟ ಶ್ರೇಣಿಗಳ ಸುಂದರ ದೃಶ್ಯ ಮೈಮನ ಸೆಳೆಯುತ್ತದೆ. ಇಲ್ಲಿನ ಬೆಟ್ಟಗಳ ಮೇಲೆ ಪುಟ್ಟ ಜಲಧಾರೆಗಳು ಕಾಣಸಿಗುತ್ತವೆಯಾದರೂ ಅವುಗಳ ನಡುವೆ ಹಲವು ನೋಡತಕ್ಕ ಜಲಧಾರೆಗಳಿವೆ. ಈ ಪೈಕಿ ಒಂದು ಜಲಪಾತ ರಸ್ತೆ ಬದಿಯಲ್ಲಿಯೇ ಧುಮ್ಮಿಕ್ಕುತ್ತದೆ. ಇದನ್ನು ಹಿಂದೆ ಜೋಡುಪಾಲ ಜಲಪಾತವೇಂದೇ ಕರೆಯಲಾಗುತ್ತಿತ್ತು.
ಗುಡ್ಡದಿಂದ ಕಂದಕಕ್ಕೆ ಧುಮುಕುವ ಅಬ್ಬಿಕೊಲ್ಲಿ
ಇತ್ತೀಚೆಗಿನ ವರ್ಷಗಳಲ್ಲಿ ಇದಕ್ಕೆ ಅಬ್ಬಿಕೊಲ್ಲಿ ಫಾಲ್ಸ್ ಎಂದು ಕರೆಯಲಾಗುತ್ತಿದೆ. ಈ ಜಲಪಾತ ಮಡಿಕೇರಿಯಿಂದ ಹದಿನೈದು ಕಿ.ಮೀ, ದೂರದಲ್ಲಿದೆ. ಹೆದ್ದಾರಿಯ ತಿರುವಿನಲ್ಲಿ ಗುಡ್ಡದ ನಡುವಿನ ಕಂದಕದಲ್ಲಿ ಸುಮಾರು ಎಪ್ಪತ್ತೈದು ಅಡಿಯಷ್ಟು ಎತ್ತರದಿಂದ ಭೋರ್ಗರೆದು ಧುಮುಕಿ ಹರಿದು ಹೋಗುತ್ತದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದ ಪರಿಣಾಮ ಹೆದ್ದಾರಿಯ ಬದಿಯಲ್ಲಿನ ಜಲಪಾತದ ಬಳಿ ಅಂಗಡಿ ಮಳಿಗೆಗಳನ್ನು ತೆರೆಯಲಾಗಿದೆ.

ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವವರು ಮತ್ತು ಅತ್ತ ಕಡೆಯಿಂದ ಬರುವವರು ತಮ್ಮ ವಾಹನವನ್ನು ಇಲ್ಲಿ ನಿಲ್ಲಿಸಿ ಜಲಪಾತವನ್ನು ನೋಡಿಕೊಂಡು ಮುಂದೆ ಸಾಗುವುದು ಮಾಮೂಲಿಯಾಗಿದೆ. ಇನ್ನು ಇಲ್ಲಿಗೆ ಸಮೀಪವೇ ಉಂಬುಳ್ ಗುಂಡಿ ಜಲಧಾರೆಯಿದೆ. ಇದು ಸುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬರುವ ನದಿಯಿಂದ ಸೃಷ್ಟಿಯಾದ ಜಲಪಾತವಾಗಿದೆ ಆದರೆ ಇದು ಹೆದ್ದಾರಿಗೆ ಕಾಣಿಸುವುದಿಲ್ಲ. ಇದನ್ನು ನೋಡಲು ತೆರಳಬೇಕಾದರೆ ಶ್ರಮಪಡಬೇಕಾಗುತ್ತದೆ.
ಇಲ್ಲಿಂದ ಮುಂದಕ್ಕೆ ಸಂಪಾಜೆಯತ್ತ ತೆರಳಿದಾಗ ಕೊಯನಾಡು ಸಿಗುತ್ತದೆ. ಇಲ್ಲಿರುವ ಸೇತುವೆಯ ಎಡಭಾಗದ ರಸ್ತೆಯಲ್ಲಿ ಸುಮಾರು ಐದು ಕಿ.ಮೀ. ಸಾಗಿದರೆ ಕಲ್ಯಾಳ ಜಲಪಾತ ಸಿಗುತ್ತದೆ. ಈ ಜಲಪಾತ ವಿವಿಧ ಹಂತಗಳಲ್ಲಿ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತದ ದೃಶ್ಯ ಹೆದ್ದಾರಿಯಿಂದಲೇ ಕಾಣಸಿಗುತ್ತದೆ, ಬೆಟ್ಟ ಶ್ರೇಣಿಯಲ್ಲಿನ ಹಸಿರು ಹಚ್ಚಡದ ನಡುವೆ ಶ್ವೇತ ಸುಂದರಿಯಂತೆ ಕಂಗೊಳಿಸುವ ಜಲಪಾತ ನೋಡುಗರ ಗಮನಸೆಳೆಯುತ್ತದೆ.
ಈ ಜಲಪಾತವನ್ನು ಹತ್ತಿರ ಹೋಗಿ ನೋಡುವ ಬದಲು ದೂರದಿಂದಲೇ ನೋಡಿ ಖುಷಿಪಡಬಹುದಾಗಿದೆ. ಮಳೆಗಾಲದಲ್ಲಂತು ಇದರ ಅಬ್ಬರ ಬಹಳ ಜೋರಾಗಿರುತ್ತದೆ. ಇನ್ನು ರಸ್ತೆಯುದ್ದಕ್ಕೂ ಸಾಗುವಾಗ ಕಣಿವೆಯಲ್ಲಿ ಹರಿಯುವ ಪಯಶ್ವಿನಿ ನದಿ ಅಲ್ಲಲ್ಲಿ ಹೆಬ್ಬಂಡೆಗಳ ಮೇಲೆ ಭೋರ್ಗರೆದು ಧುಮ್ಮಿಕ್ಕುವ ದೃಶ್ಯಗಳು ಚೇತೋಹರಿಯಾಗಿರುತ್ತವೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications