ಶಿವಮೊಗ್ಗ-ಬೆಂಗಳೂರು ನಡುವಿನ ರೈಲು ವೇಳಾಪಟ್ಟಿ, ನಿಲ್ದಾಣಗಳು
ಶಿವಮೊಗ್ಗ, ನವೆಂಬರ್ 04: ಉದ್ಯಾನ ನಗರಿ ಬೆಂಗಳೂರು ಮತ್ತು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರವನ್ನು ನಡೆಸುತ್ತಾರೆ. ರಾಜಧಾನಿಯನ್ನು ಸಂಪರ್ಕಿಸಲು ಬಸ್, ವಿಮಾನ ಮತ್ತು ರೈಲಿನ ಸಂಪರ್ಕವಿದೆ. ಉಭಯ ನಗರಗಳ ನಡುವೆ ಪ್ರತಿದಿನ ಹಲವು ರೈಲುಗಳು ಸಂಚಾರ ನಡೆಸುತ್ತವೆ. ಶಿವಮೊಗ್ಗ-ಯಶವಂತಪುರ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂಬ ಸುದ್ದಿಯೂ ಇದ್ದು, ಯಾವಾಗ? ಎಂಬುದು ಅಂತಿಮವಾಗಿಲ್ಲ.
ಬೆಂಗಳೂರು- ಶಿವಮೊಗ್ಗ ನಡುವೆ ಪ್ರತಿದಿನ ಹಲವು ರೈಲುಗಳು ಸಂಚಾರವನ್ನು ನಡೆಸುತ್ತವೆ. ಇದರಲ್ಲಿ ಪ್ಯಾಸೆಂಜರ್ ಮಾತ್ರವಲ್ಲ ಜನಶತಾಬ್ದಿ ರೈಲು ಸಹ ಇದೆ. ಈ ಮಾರ್ಗದಲ್ಲಿ ಬರುವ ಹಲವು ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದ್ದು, ವಿವಿಧ ಪಟ್ಟಣದ ಜನರಿಗೂ ಅನುಕೂಲವಾಗುತ್ತಿದೆ.

ಹಲವು ರೈಲುಗಳು ಶಿವಮೊಗ್ಗ ನಗರದಿಂದ ಮುಂದೆ ಸಾಗಿ ತಾಳಗುಪ್ಪ ತನಕ ಸಂಚಾರವನ್ನು ನಡೆಸುತ್ತದೆ. ಇದರಿಂದಾಗಿ ಶಿವಮೊಗ್ಗ ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಸಹ ಸಹಾಯಕವಾಗುತ್ತಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ರೈಲುಗಳು, ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ಇಲ್ಲಿದೆ.
* ಶಿವಮೊಗ್ಗ-ಬೆಂಗಳೂರು ನಡುವೆ ಜನಶತಾಬ್ದಿ ರೈಲು ಇದೆ. ಈ ರೈಲು ಶಿವಮೊಗ್ಗ ಟೌನ್ ನಿಲ್ದಾಣದಿಂದ ಬೆಳಗ್ಗೆ 5.15ಕ್ಕೆ ಹೊರಡಲಿದೆ, 9.50ಕ್ಕೆ ಬೆಂಗಳೂರು ತಲುಪುತ್ತದೆ. ಈ ರೈಲು ಮಾರ್ಗದಲ್ಲಿ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತುಮಕೂರು ಮತ್ತು ಬೆಂಗಳೂರು ನಗರದ ಯಶವಂತಪುರದಲ್ಲಿ ನಿಲುಗಡೆಯನ್ನು ಹೊಂದಿದೆ.
* ಶಿವಮೊಗ್ಗ-ಕೆಎಸ್ಆರ್ ಬೆಂಗಳೂರು ಇಂಟರ್ ಸಿಟಿ ರೈಲು. ತಾಳಗುಪ್ಪದಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು, ಶಿವಮೊಗ್ಗ ನಗರದಿಂದ ಬೆಳಗ್ಗೆ 7.15ಕ್ಕೆ ಹೊರಡಲಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ಗೆ 11.55ಕ್ಕೆ ತಲುಪಲಿದೆ. ಈ ರೈಲು ಶಿವಮೊಗ್ಗದ ವಿದ್ಯಾನಗರ, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆಯನ್ನು ಹೊಂದಿದೆ.
* ಮಧ್ಯಾಹ್ನದ ಇಂಟರ್ ಸಿಟಿ ರೈಲು. ಶಿವಮೊಗ್ಗ-ಯಶವಂತಪುರ ನಡುವೆ ಇಂಟರ್ ಸಿಟಿ ರೈಲು ಸಂಚಾರವನ್ನು ನಡೆಸುತ್ತದೆ. ಶಿವಮೊಗ್ಗ ನಗರದಿಂದ ಮಧ್ಯಾಹ್ನ 3.45ಕ್ಕೆ ಹೊರಡುವ ರೈಲು ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ. ಭದ್ರಾವತಿ, ತರೀಕೆರೆ, ಕಡೂರು, ಅರಸೀಕೆರೆ, ತಿಪಟೂರು, ತುಮಕೂರಿನಲ್ಲಿ ನಿಲುಗಡೆಯನ್ನು ಹೊಂದಿದೆ.
* ತಾಳಗುಪ್ಪ-ಮೈಸೂರು ರೈಲು. ಶಿವಮೊಗ್ಗ-ಮೈಸೂರು ನಡುವೆ ಬೆಂಗಳೂರು ಮಾರ್ಗವಾಗಿ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ತಾಳಗುಪ್ಪದಿಂದ ರಾತ್ರಿ 10.55ಕ್ಕೆ ಹೊರಡುವ ರೈಲು ಬೆಳಗ್ಗೆ 4.50ಕ್ಕೆ ಬೆಂಗಳೂರು ನಗರ ತಲುಪಲಿದೆ. ವಿದ್ಯಾನಗರ ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು, ಯಶವಂತಪುರ, ಮಲ್ಲೇಶ್ವರದಲ್ಲಿ ರೈಲು ನಿಲುಗಡೆಯನ್ನು ಹೊಂದಿದೆ.
* ಇನ್ನು ಶಿವಮೊಗ್ಗ-ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ (ಭಾನುವಾರ, ಮಂಗಳವಾರ, ಗುರುವಾರ) ಶಿವಮೊಗ್ಗ-ಯಶವಂತಪುರ ರೈಲು ಸೇವೆ ಇದೆ. ರಾತ್ರಿ 11.55ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ಭದ್ರಾವತಿ, ತರೀಕೆರೆ, ಬೀರೂರು,ಕಡೂರು, ಅರಸೀಕೆರೆ, ತಿಪಟೂರು, ತುಮಕೂರಿನಲ್ಲಿ ನಿಲುಗಡೆ ಇದೆ.
* ಶಿವಮೊಗ್ಗ-ಚೆನ್ನೈ ನಡುವೆ ವಯಾ ಬೆಂಗಳೂರು ಮಾರ್ಗವಾಗಿ ಪ್ರತಿ ಶನಿವಾರ ಒಂದು ರೈಲು ಸಂಚಾರ ನಡೆಸುತ್ತದೆ. ಈ ರೈಲು ಶಿವಮೊಗ್ಗದಿಂದ ಸಂಜೆ 5.15ಕ್ಕೆ ಹೊರಟು, ಬೆಂಗಳೂರಿಗೆ ರಾತ್ರಿ 10.20ಕ್ಕೆ ತಲುಪುತ್ತದೆ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಬೆಂಗಳೂರಿನಿಂದ ಚೆನ್ನೈಗೆ ತೆರಳಲಿದೆ.












Click it and Unblock the Notifications