ರಾಮನಗರ, ಮಂಡ್ಯ ಭಾಗದ ಜನರಿಗೆ ರೈಲ್ವೆಯಿಂದ ಸಿಹಿಸುದ್ದಿ
ಬೆಂಗಳೂರು, ಮೇ 04; ಭಾರತೀಯ ರೈಲ್ವೆ ಕರ್ನಾಟಕದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಮುಂದಾಗಿದೆ. ಬೆಂಗಳೂರು ನಗರದ ಸಮೀಪ ನಿರ್ಮಾಣ ಮಾಡಲಾಗುವ ಈ 33 ಕಿ. ಮೀ.ಗಳ ಮಾರ್ಗ ನಗರ ಸಂಚಾರ ರೈಲು ಸಂಚಾರ ದಟ್ಟಣೆ ನಿವಾರಣೆ, ಸಬ್ ಅರ್ಬಲ್ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ. ಸಮೀಕ್ಷೆಯ ವರದಿ ಬಂದ ಬಳಿಕ ಮಾರ್ಗ ನಿರ್ಮಾಣ ಮಾಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಬೆಂಗಳೂರು ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಹೀಲಲಿಗೆ ಮತ್ತು ಹೆಜ್ಜಾಲ ನಡುವೆ 33 ಕಿ. ಮೀ. ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆ. ಇದಕ್ಕಾಗಿ ಪ್ರಿಲಿಮಿನರಿ ಎಂಜಿನಿಯರಿಂಗ್ ಕಮ್ ಟ್ರಾಫಿಕ್ (ಪಿಇಟಿ) ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆ ಟೆಂಡರ್ ಕರೆದಿದೆ.

ಒಂದು ಪಥದ ಬ್ರಾಡ್ ಗೇಜ್ ಮಾರ್ಗ ನಿರ್ಮಾಣ ಮಾಡುವ ಕುರಿತು ಮೂರು ತಿಂಗಳಿನಲ್ಲಿ ಪಿಇಟಿ ಸಮೀಕ್ಷೆ ನಡೆಯಲಿದೆ. ಮಾರ್ಗ ನಿರ್ಮಾಣಕ್ಕೆ ಮೂಲ ಸೌಕರ್ಯಗಳು, ಮಾರ್ಗದ ಸಂಚಾರ ದಟ್ಟಣೆ ಮುಂತಾದ ಮಾಹಿತಿಗಳನ್ನು ಸಮೀಕ್ಷೆಯಲ್ಲಿ ಸಂಗ್ರಹ ಮಾಡಲಾಗುತ್ತದೆ.
ಯಾರಿಗೆ ಅನುಕೂಲ?; ಹೀಲಲಿಗೆ ಮತ್ತು ಹೆಜ್ಜಾಲ ನಡುವಿನ 33 ಕಿ. ಮೀ. ಹೊಸ ರೈಲು ಮಾರ್ಗದಿಂದ ರಾಮನಗರ, ಚನ್ನಪಟ್ಟಣ, ಮಂಡ್ಯಕ್ಕೆ ಸಾಗುವ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಮೈಸೂರು-ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರ ನಡುವೆ ಸಂಚಾರ ನಡೆಸುವವರಿಗೆ ಸಹಾಯಕವಾಗಲಿದೆ. ಬಿಡದಿ, ಜಿಗಣಿ, ಹಾರೋಹಳ್ಳಿ ಕಡೆಗೆ ಸಾಗುವವರಿಗೂ ಅನುಕೂಲ.
ಪ್ರಿಲಿಮಿನರಿ ಎಂಜಿನಿಯರಿಂಗ್ ಕಮ್ ಟ್ರಾಫಿಕ್ (ಪಿಇಟಿ) ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆದ ಕಂಪನಿಗೆ ಹಲವು ಸೂಚನೆಗಳನ್ನು ನೀಡಲಾಗುತ್ತದೆ. ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಇರುವ ಅಡೆತಡೆ ಸೇರಿದಂತೆ ವಿವಿಧ ಅಂಶಗಳ ಕುರಿತು ಕಂಪನಿ ವಿವರವಾದ ವರದಿಯನ್ನು ಪಡೆಯಲಾಗುತ್ತದೆ.
ಸಮೀಕ್ಷೆ ತಂಡದಲ್ಲಿರುವ ಇಂಜನಿಯರ್‌ಗಳು ಪ್ರಸ್ತಾವಿತ ಹೊಸ ಮಾರ್ಗದ ಸುತ್ತಲಿನ ಮೂಲ ಸೌಕರ್ಯಗಳು, ಸಂಚಾರ ದಟ್ಟಣೆ, ರಸ್ತೆ, ವಿದ್ಯುತ್ ಮಾರ್ಗಗಳು, ಹತ್ತಿರದ ರೈಲು ನಿಲ್ದಾಣಗಳು, ಬೇರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹ ಮಾಡಲಿದೆ.
ಪಿಇಟಿ ಸಮೀಕ್ಷೆಯ ಪ್ರಮುಖ ಅಂಶ ಹೊಸ ರೈಲು ಮಾರ್ಗ ನಿರ್ಮಾಣ ಅಗತ್ಯವಿದೆಯೇ? ಎಂಬುದು. ಆದ್ದರಿಂದ ಸುತ್ತಮುತ್ತಲಿನ ಚಟುವಟಿಕೆಗಳು, ಹೊಸ ಮಾರ್ಗ ನಿರ್ಮಾಣಕ್ಕೆ ಇರುವ ಬೇಡಿಕೆಗಳ ಕುರಿತು, ಮಾರ್ಗ ನಿರ್ಮಾಣಗೊಂಡ ಬಳಿಕ ಸಿಗುವ ಆದಾಯದ ಮಾಹಿತಿಯನ್ನು ಕಲೆಹಾಕಲಾಗುತ್ತದೆ.
ಪಿಇಟಿ ಸಮೀಕ್ಷೆ ಹೊಸ ರೈಲು ಮಾರ್ಗದ ನಿರ್ಮಾಣ ವೆಚ್ಚ, ಅರಣ್ಯ & ಪರಿಸರದ ಅಡೆತಡೆಗಳ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಲಿದೆ. ಮಾರ್ಗ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದ ಬಳಿಕ ಅದಕ್ಕೆ ತಡೆಗಳು ಬರಬಾರದು, ಯೋಜನೆ ಸುಗಮವಾಗಿ ಸಾಗಬೇಕು ಎಂಬ ಕಾರಣದಿಂದ ಎಲ್ಲಾ ಆಯಾಮಗಳಲ್ಲೂ ಮಾಹಿತಿ ಸಂಗ್ರಹ ನಡೆಯಲಿದೆ.
ಯಾವುದೇ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಮೊದಲು ಪಿಇಟಿ ಸಮೀಕ್ಷೆ ಪ್ರಮುಖವಾಗುತ್ತದೆ. ಈ ಸಮೀಕ್ಷೆಯ ವರದಿ ಆಧರಿಸಿಯೇ ಇಲಾಖೆ ಪ್ರಸ್ತಾವಿತ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕೆ?, ಬೇಡವೇ? ಎಂದು ತೀರ್ಮಾನ ಕೈಗೊಳ್ಳಲಿದೆ.
ಬೆಂಗಳೂರು ದಕ್ಷಿಣ ಭಾಗದ ಜನರಿಗೆ ಸಹಾಯಕವಾಗುವಂತೆ ನೈಋತ್ಯ ರೈಲ್ವೆಯ ಬೆಂಗಳೂರು ವಲಯ ಈ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿದೆ. ಹೀಲಲಿಗೆ ಮತ್ತು ಹೆಜ್ಜಾಲ ನಡುವಿನ ಮಾರ್ಗ ನಿರ್ಮಾಣದ ಪ್ರಾಥಮಿಕ ಸಮೀಕ್ಷೆ ನಡೆಸಲು 2022ರ ಅಕ್ಟೋಬರ್‌ನಲ್ಲಿಯೇ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು.












Click it and Unblock the Notifications