Dandeli tour package; ಬಸ್ ವೇಳಾಪಟ್ಟಿ, ದರ ತಿಳಿಯಿರಿ
ಧಾರವಾಡ, ಜುಲೈ 28; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ನೈಋತ್ಯ ಮುಂಗಾರು ಮಳೆಯ ಅವಧಿಯಲ್ಲಿ ಪ್ರವಾಸ ಹೋಗುವ ಜನರಿಗಾಗಿ ಹಲವಾರು ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಜನರ ಬೇಡಿಕೆಯಂತೆ ಧಾರವಾಡ-ದಾಂಡೇಲಿ ವಿಶೇಷ ಪ್ಯಾಕೇಜ್ ಆರಂಭಿಸಿದೆ.
ಹುಬ್ಬಳ್ಳಿ-ಜೋಗ, ಬೆಳಗಾವಿ-ಗೋಕಾಕ್ ಫಾಲ್ಸ್, ಬೆಳಗಾವಿ-ಅಂಬೋಲಿ ಫಾಲ್ಸ್ ಬಳಿಕ ಈಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ-ದಾಂಡೇಲಿ ವಿಶೇಷ ಪ್ಯಾಕೇಜ್ ಸಾರಿಗೆಯನ್ನು ಘೋಷಣೆ ಮಾಡಿದೆ. ವೇಳಾಪಟ್ಟಿ, ದರಗಳ ಮಾಹಿತಿಯನ್ನು ಪ್ರಕಟಣೆ ಮೂಲಕ ತಿಳಿಸಿದೆ.

ಧಾರವಾಡ-ದಾಂಡೇಲಿ ವಿಶೇಷ ಪ್ಯಾಕೇಜ್ ಸಾರಿಗೆ ಪ್ರತಿ ಭಾನುವಾರ, ಸಾರ್ವತ್ರಿಕ ರಜಾ ದಿನಗಳು, ಪ್ರತಿ 2 ಮತ್ತು 4ನೇ ಶನಿವಾರ ಲಭ್ಯವಿರುತ್ತದೆ. ಇದು ವಿಶೇಷ ಸಾರಿಗೆಯಾದ ಕಾರಣ ಕರ್ನಾಟಕ ಸರ್ಕಾರದ 'ಶಕ್ತಿ' ಯೋಜನೆಗೆ ಒಳಪಡುವುದಿಲ್ಲ. ಆದ್ದರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.
ಪ್ಯಾಕೇಜ್ ದರ, ವೇಳಾಪಟ್ಟಿ; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ-ದಾಂಡೇಲಿ ವಿಶೇಷ ಪ್ಯಾಕೇಜ್ ಸಾರಿಗೆಗೆ ವಯಸ್ಕರಿಗೆ 340 ರೂ. ಮತ್ತು ಮಕ್ಕಳಿಗೆ 170 ರೂ. ದರವನ್ನು ನಿಗದಿ ಮಾಡಿದೆ.
ಸಾರ್ವಜನಿಕರು ಈ ಟೂರ್ ಪ್ಯಾಕೇಜ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ www.ksrtc.in ಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗಾಗಿ 9148266332, 7760982552 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಈ ವಿಶೇಷ ಪ್ಯಾಕೇಜ್ ಧಾರವಾಡ, ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಫಾಲ್ಸ್, ಕೊಳಗಿ ನೇಚರ್ ಪಾರ್ಕ್, ಉಳವಿ ದೇವಾಲಯಕ್ಕೆ ತೆರಳಿ ಧಾರವಾಡಕ್ಕೆ ವಾಪಸ್ ಆಗಲಿದೆ.
ಧಾರವಾಡದಿಂದ 7.30ಕ್ಕೆ ಹೊರಡುವ ಈ ಪ್ಯಾಕೇಜ್ ಬಸ್ ದಾಂಡೇಲಿ ಮೊಸಳೆ ಪಾರ್ಕ್‌ಗೆ 8.45ಕ್ಕೆ ತಲುಪಲಿದೆ. ದಾಂಡೇಲಿ ಮೊಸಳೆ ಪಾರ್ಕ್‌ನಿಂದ 10 ಗಂಟೆಗೆ ಹೊರಟು, ಮೌಳಂಗಿ ಫಾಲ್ಸ್‌ಗೆ 10.20ಕ್ಕೆ ತಲುಪಲಿದೆ.
ಮೌಳಂಗಿ ಫಾಲ್ಸ್‌ನಿಂದ 11.20ಕ್ಕೆ ಹೊರಟು, ಕೊಳಗಿ ನೇಚರ್ ಪಾರ್ಕ್‌ಗೆ 11.50ಕ್ಕೆ ತಲುಪಲಿದೆ. ಕೊಳಗಿ ನೇಚರ್ ಪಾರ್ಕ್‌ನಿಂದ 12.50ಕ್ಕೆ ಹೊರಟು ಉಳವಿ ದೇವಾಲಯಕ್ಕೆ 14.00ಕ್ಕೆ ತಲುಪಲಿದೆ. ಉಳವಿ ದೇವಸ್ಥಾನದಿಂದ 16.00ಗಂಟೆಗೆ ಹೊರಟು, ಧಾರವಾಡಕ್ಕೆ ಬಸ್ 19.00ಕ್ಕೆ ವಾಪಸ್ ಆಗಲಿದೆ.
ಕಳೆದ ವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ಅಂಬೋಲಿ ಫಾಲ್ಸ್ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಬೆಳಗಾವಿ-ಅಂಬೋಲಿ ರಸ್ತೆಯು ಜಲಾವೃತವಾಗಿದ್ದು, ಬಸ್ ಕಾರ್ಯಾಚರಣೆ ಸಾಧ್ಯವಾಗದಿರುವ ಕಾರಣ, ಬೆಳಗಾವಿ-ಅಂಬೋಲಿ ಫಾಲ್ಸ್ ವಿಶೇಷ ಸಾರಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ, ಜನರು ಸಹಕರಿಸಲು ಕೋರಿದೆ ಎಂದು ಮನವಿ ಮಾಡಿತ್ತು.
ಭಾರೀ ಮಳೆ ಹಿನ್ನಲೆಯಲ್ಲಿ ವಿವಿಧ ಜಿಲ್ಲಾಡಳಿತಗಳು ಪ್ರವಾಸಿ ತಾಣಗಳಿಗೆ ಭೇಟಿಯನ್ನು ನಿಷೇಧಿಸಿವೆ. ಆದ್ದರಿಂದ ಟೂರ್ ಪ್ಯಾಕೇಜ್ ಬುಕ್ ಮಾಡುವ ಮುನ್ನ ಜನರು ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವುದು ಉತ್ತಮವಾಗಿದೆ.












Click it and Unblock the Notifications