New Year 2024: ಚಾಮರಾಜನಗರ ಜಿಲ್ಲೆಯಲ್ಲಿವೆ ಹೊಸ ವರ್ಷಾಚರಣೆಗೆ ಸೂಕ್ತ ಪ್ರವಾಸಿ ತಾಣಗಳು-ಮಾಹಿತಿ ತಿಳಿಯಿರಿ

ಚಾಮರಾಜನಗರ, ಡಿಸೆಂಬರ್‌, 18: 2023ರ ವರ್ಷಾಂತ್ಯಕ್ಕೆ ಬಂದು ತಲುಪಿದ್ದು, 2024 ರನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆಯೇ ಹೊಸ ವರ್ಷಾಚರಣೆಯನ್ನು ವರ್ಷಪೂರ್ತಿ ನೆನಪಿನಲ್ಲಿ ಉಳಿಯುವಂತಹ ಹತ್ತಾರು ಸ್ಥಳಗಳು ಗಡಿಜಿಲ್ಲೆ ಚಾಮರಾಜನಗರದಲ್ಲಿದ್ದು, ದೇವರ ದರ್ಶನ, ಪ್ರಕೃತಿ ವಿಸ್ಮಯದ ಮೂಲಕ ನವ ವರ್ಷವನ್ನು ಸ್ವಾಗತಿಸಬಹುದಾಗಿದೆ. ಹಾಗಾದರೆ ಅತ್ಯದ್ಭುತ ಸ್ಥಳಗಳು ಯಾವುವು ಹಾಗೂ ತಲುಪುವ ಮಾರ್ಗಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು, ಮೈಸೂರಿನಿಂದ ಕೆಲವೇ ತಾಸುಗಳ ದೂರ ಇರುವ ಸ್ಥಳಗಳು ಇವಾಗಿದ್ದು ಒಂದು ಇಲ್ಲವೇ, ಎರಡು ದಿನದ ಟ್ರಿಪ್‌ಗೆ ಹೇಳಿ ಮಾಡಿಸಿದ ಅದ್ಭುತ ಪ್ರೇಕ್ಷಣೀಯ ಸ್ಥಳ ಇವಾಗಿವೆ. ನೂತನ ವರ್ಷವನ್ನು ನವೋಲ್ಲಾಸದಿಂದ ಆಚರಣೆ ಮಾಡಲು ಇಲ್ಲಿವೆ ನೋಡಿ ಭೂಸ್ವರ್ಗದಂತಿರುವ ಸ್ಥಳಗಳು.

New Year 2024: Best tourist spots for New Year celebration In Chamarajanagar district

ಬಿಳಿಗಿರಿರಂಗನ ಬೆಟ್ಟ: ಚಾಮರಾಜನಗರ ಜಿಲ್ಲೆಗೆ ಕಳಸಪ್ರಾಯದಂತಿರುವ ಈ ಹಸಿರ ಕಾನನ ಲಾಂಗ್ ಡ್ರೈವ್, ಸೋಲೋ ರೈಡ್ ಹಾಗೂ ಫ್ಯಾಮಿಲಿ ಪಿಕ್ನಿಕ್‌ಗೆ ಹೇಳಿ ಮಾಡಿಸಿದ ಸ್ಥಳ ಆಗಿದೆ. ಇಲ್ಲಿಗೆ ಕಾರು, ಬೈಕ್‌ಗಳಲ್ಲೂ ಬರಬಹುದಾಗಿದ್ದು, ಬಸ್ ಸೌಕರ್ಯವೂ ಯಥೇಚ್ಛವಾಗಿದೆ. ಬೆಂಗಳೂರಿನಿಂದ ಮೈಸೂರು ಇಲ್ಲವೇ ಯಳಂದೂರಿಗೆ ಬಂದರೇ ಸಾಕಷ್ಟು ಬಸ್‌ಗಳು ಬಿಳಿಗಿರಿರಂಗನಾಥ ಬೆಟ್ಟಕ್ಕೆ ಸಿಗಲಿದೆ.

ಸದಾ ಹಸಿರು ಹೊದ್ದಿರುವ ಈ ಬೆಟ್ಟದಲ್ಲಿ ಸೋಲಿಗರ ಆರಾಧ್ಯ ದೈವ ಬಿಳಿಗಿರಿರಂಗನಾಥನಿಗೆ ನಮಿಸಿ ಅದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಬಿಳಿಗಿರಿರಂಗನಾಥ ದೇವಾಲಯದ ರಸ್ತೆ ಕಾಡಿನ ಹಾದಿಯಾಗಿದ್ದು, ವನ್ಯಜೀವಿಗಳು ಆಗಾಗ್ಗೆ ದರ್ಶನ ಕೊಡುವುದರಿಂದ ಅಪರೂಪದ ಪ್ರಾಣಿಗಳ ದರ್ಶನದಿಂದ ಹೊಸ ವರ್ಷ ಆರಂಭಿಸಬಹುದು. ಹಾಗೆಯೇ ಪ್ರಕೃತಿಯ ಹಸಿರು ಮನಸ್ಸಿನಲ್ಲಿ ವರ್ಷಪೂರ್ತಿ ಕಚಗುಳಿ ಇಡುವ ನೆನಪಿರಲಿದೆ.

ಕ್ಯಾತದೇವರ ಗುಡಿ: ಬಿಳಿಗಿರಿರಂಗನಾಥ ಬೆಟ್ಟದಿಂದ ಹತ್ತಿರದಲ್ಲೇ ಇರುವ ಕೆ.ಗುಡಿ ಅರಣ್ಯ ಪ್ರದೇಶ ಹೊಸ ವರ್ಷಾಚರಣೆಯ ಫೇವರೇಟ್ ಪಿಕ್‌ನಿಕ್ ಸ್ಪಾಟ್‌ಗಳಲ್ಲಿ ಒಂದಾಗಿದೆ. ಕಿರಿದಾದ ರಸ್ತೆಯಲ್ಲಿ ರೋಮಾಂಚಕ ಸವಾರಿ ಹೊಸ ವರ್ಷಕ್ಕೊಂದು ಪಾಸಿಟಿವ್ ಎನರ್ಜಿ ಕೊಡಲಿದೆ. ಅಷ್ಟೇ ಅಲ್ಲದೇ, ಇಲ್ಲಿ ಬೆಳಗ್ಗೆ ಮತ್ತು ಸಂಜೆ ವನ್ಯಜೀವಿ ಸಫಾರಿಗೂ ಅವಕಾಶವಿದ್ದು, ಅಪರೂಪದ ಪಕ್ಷಿ, ವನ ಸಂಪತ್ತನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ, ಇಲ್ಲಿ ಜಂಗಲ್ ಲಾಡ್ಜ್ ರೆಸಾರ್ಟ್ ಕೂಡ ಇದ್ದು, ಆನ್‌ಲೈನ್ ಮೂಲಕ ಬುಕ್ ಮಾಡಿಕೊಂಡರೇ ಹೊಸ ವರ್ಷವನ್ನು ಕಾನನದ ವಾಸ್ತವ್ಯ ಹೂಡಿ ಕಳೆಯಬಹುದಾಗಿದೆ.

New Year 2024: Best tourist spots for New Year celebration In Chamarajanagar district

ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಕರ್ನಾಟದ ಕಾಶ್ಮೀರ ಅಂತಲೇ ಕರೆಸಿಕೊಳ್ಳುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ 15 ಕಿಲೋ ಮಿಟರ್‌ ಸಂಚರಿಸಿದರೇ ಸಿಗಲಿದೆ. ಸದಾ ಹಿಮದಿಂದ ಆವೃತವಾಗಿರುವ ಬೆಟ್ಟದಲ್ಲಿ ಹೊಸ ವರ್ಷದಂದು ಭವಿಷ್ಯ ಯೋಜನೆಗಳನ್ನು ಕಟ್ಟಿಕೊಳ್ಳಲು ಹೇಳಿ ಮಾಡಿಸಿದ ತಾಣವಾಗಿದೆ.

ಕುಟುಂಬದೊಂದಿಗೆ ಹೊಸ ವರ್ಷದಂದು ಕಳೆಯುವ ಪ್ರತಿ ಕ್ಷಣವು ಅದ್ಭುತ ಕ್ಷಣವಾಗಿಸುತ್ತವೆ ಇಲ್ಲಿನ ರೋಮಾಂಚಕ ದೃಶ್ಯಗಳು. ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದು ಹಿಮಚ್ಚಾಧಿತ ಬೆಟ್ಟವನ್ನು ಕಣ್ತುಂಬಿಕೊಂಡು ಫೋಟೋಗೆ ಫೋಸ್ ಕೊಟ್ಟರೇ ಹೊಸ ವರ್ಷಾಚರಣೆ ಅರ್ಥಪೂರ್ಣ ಆಗಲಿದೆ.

ಬಂಡೀಪುರ ಸಫಾರಿ:‌ ಭಾರತದ ಜನಪ್ರಿಯ ಸಂರಕ್ಷಿತಾರಣ್ಯಗಳಲ್ಲಿ ಒಂದಾದ ಬಂಡೀಪುರದಲ್ಲಿ ಸಫಾರಿ ನಡೆಸುವ ಮೂಲಕ ಹೊಸ ವರ್ಷಾಚರಣೆ ಮಾಡಬಹುದಾಗಿದೆ. ನೂತನ ವರ್ಷವನ್ನು ಕಾಡು ನೋಡಿ, ವನ್ಯ ಜೀವಿಗಳನ್ನು ದರ್ಶನ ಮಾಡಿ ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಬಹುದಾಗಿದೆ. ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಸಫಾರಿ ಇರಲಿದ್ದು, ಆನ್‌ಲೈನ್ ಮೂಲಕವು ಬುಕ್ಕಿಂಗ್ ಮಾಡಬಹುದಾಗಿರುತ್ತದೆ.

ಹೊಗೆನಕಲ್ ಜಲಪಾತ: ಭಾರತದ ನಯಾಗರ ಅಂತಲೇ ಹೆಸರುವಾಸಿ ಆಗಿರುವ ಹೊಗೆನಕಲ್ ಜಲಪಾತದ ಜಲಕಾವ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಹೊಸ ವರ್ಷಾಚರಣೆಯನ್ನು ಪ್ರಕೃತಿ ಮಡಿಲಲ್ಲಿ ಆಚರಿಸಬಹುದಾಗಿದೆ. ಹನೂರು ತಾಲೂಕಿನಲ್ಲಿರುವ ಈ ಜಲಪಾತದಲ್ಲಿ ಕಾವೇರಿ ರುದ್ರ ರಮಣೀಯವಾಗಿ ಹರಿಯಲಿದ್ದಾಳೆ.

ಪಿ.ಜಿ.ಪಾಳ್ಯ ಸಫಾರಿ: ಕೊಳ್ಳೇಗಾಲದಿಂದ ಸ್ವಲ್ಪ ದೂರದಲ್ಲಿರುವ ಪಿ.ಜಿ.ಪಾಳ್ಯ ಬಳಿ ಹೊಸ ವನ್ಯಜೀವಿ ಸಫಾರಿ ಆರಂಭ ಆಗಿದ್ದು, ಇಲ್ಲಿ ಚಿರತೆ, ಕರಡಿ, ಕಾಡೆಮ್ಮೆ, ಆನೆಗಳ ಹಿಂಡು, ಅಪರೂಪದ ಪಕ್ಷಿಗಳನ್ನು ಸಫಾರಿಯಲ್ಲಿ ಕಾಣುವ ಮೂಲಕ ಹೊಸ ವರ್ಷಾಚರಣೆಯನ್ನು ಪರಿಸರ ಪ್ರೇಮಿಯಾಗಿ ಆಚರಿಸಬಹುದಾಗಿದೆ.

ಹೊಸ ವರ್ಷವನ್ನು ಪ್ರಕೃತಿ ಮಡಿಲಲ್ಲಿ ಆಚರಿಸುವ ಜೊತೆಗೆ ಚಾಮರಾಜನಗರದ ಚಾಮರಾಜೇಶ್ವರ, ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ 2024ರಲ್ಲಿ ತಾವಂದುಕೊಂಡ ಕೆಲಸ ಈಡೇರಿಸುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಒಟ್ಟಿನಲ್ಲಿ ಗಡಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಹತ್ತು ಹಲವು ಪ್ರೇಕ್ಷಣಿಯ ಸ್ಥಳಗಳಿದ್ದು, ವರ್ಷಾರಂಭದಲ್ಲಿ ಭೇಟಿ ಕೊಟ್ಟು ಸ್ಮರಣೀಯ ಕ್ಷಣ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+