Nandi Hills Ropeway: ವಿಧಾನಸಭಾ ಚುನಾವಣೆಗೂ ಮುನ್ನ ನಂದಿ ಬೆಟ್ಟ ರೋಪ್‌ವೇ ಕಾಮಗಾರಿ ಆರಂಭ
ಹದಿನೈದು ದಿನಗಳಲ್ಲಿ, ರೋಪ್‌ವೇ ಯೋಜನೆ ಆರಂಭವಾಗಲಿದೆ. ಸಾರ್ವಜನಿಕ - ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ 98 ಕೋಟಿ ರೂ ವೆಚ್ಚವಾಗಲಿದೆ.
ಬೆಂಗಳೂರು, ಮಾರ್ಚ್. 01: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ 2.93 ಕಿಮೀ ಪ್ಯಾಸೆಂಜರ್ ರೋಪ್‌ವೇ ಕಾಮಗಾರಿ ಒಂದೆರಡು ವಾರಗಳಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆಗೆ ಚಾಲನೆ ನೀಡುವ ಸಾಧ್ಯತೆಯಿದೆ.
ರಾಜ್ಯ ವಿಧಾನಸಭೆ ಚುನಾವಣೆ ಕುರಿತು ಚುನಾವಣಾ ಆಯೋಗದ (ಇಸಿ) ಅಧಿಸೂಚನೆಗೆ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆಗೆ ಚಾಲನೆ ನೀಡುವ ಸಾಧ್ಯತೆಯಿದೆ. ಚುನಾವಣಾ ಆಯೋಗದ ಅಧಿಸೂಚನೆಯೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬರುವುದರಿಂದ, ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಅವರು ಆದಷ್ಟು ಬೇಗ ಶಂಕುಸ್ಥಾಪನೆ ಮಾಡಲು ಸಿಎಂ ಬೊಮ್ಮಾಯಿ ಅವರಿಗೆ ದಿನಾಂಕಗಳನ್ನು ಕೋರಿದ್ದಾರೆ.

98 ಕೋಟಿ ರೂ ವೆಚ್ಚದಲ್ಲಿ ರೋಪ್‌ವೇ ಯೋಜನೆ
ಸಚಿವರಾಗಿ 18 ತಿಂಗಳ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಾಧನೆಗಳು ಇವು ಎಂದು ವಿವರಿಸಿರುವ ಸಚಿವ ಆನಂದ್ ಸಿಂಗ್, "ಹದಿನೈದು ದಿನಗಳಲ್ಲಿ, ರೋಪ್‌ವೇ ಯೋಜನೆ ಆರಂಭವಾಗಲಿದೆ. ಸಾರ್ವಜನಿಕ - ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ 98 ಕೋಟಿ ರೂ ವೆಚ್ಚವಾಗಲಿದೆ. ಖಾಸಗಿ ಸಂಸ್ಥೆಯು ರೋಪ್ ವೇ ಜವಾಬ್ದಾರಿಯನ್ನು ವಹಿಸಿಕೊಂಡಿದೆ" ಎಂದು ಸಚಿವ ಆನಂದ್ ಸಿಂಗ್ ಸುದ್ದಿಗಾರರಿಗೆ ವಿವರಿಸಿದ್ದಾರೆ.
ನಂದಿ ಬೆಟ್ಟಕ್ಕೆ ಪ್ರಯಾಣಿಕರ ರೋಪ್‌ವೇ ಬೇಡಿಕೆ ಸುಮಾರು ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ನಂದಿ ಬೆಟ್ಟ ಪ್ರವಾಸಿ ತಾಣ ಸೇರುವ ಸಾಧ್ಯತೆಯಿದೆ. ಸುಮಾರು ಒಂದು ವರ್ಷದ ಹಿಂದೆ ರೋಪ್‌ವೇ ಯೋಜನೆ ಕ್ಯಾಬಿನೆಟ್ ಅನುಮೋದನೆ ಪಡೆದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

ಪ್ರಸಕ್ತ ವರ್ಷದಲ್ಲಿ 15 ಕೋಟಿ ಲಾಭ ಗಳಿಸಿದ ಪ್ರವಾಸೋದ್ಯಮ
ಪ್ರವಾಸೋದ್ಯಮ ಇಲಾಖೆ ಕೈಗೊಂಡ ಕ್ರಮಗಳಿಂದಾಗಿ ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕಾರ್ಪೊರೇಷನ್ (ಜೆಎಲ್ಆರ್) ಚೇತರಿಸಿಕೊಂಡಿದೆ. ಪ್ರಸಕ್ತ ವರ್ಷದಲ್ಲಿ 15 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ. ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಕ್ರಮಗಳನ್ನು ಕೈಗೊಂಡಿದೆ. ಇದರ ಪರಿಣಾಮವಾಗಿ, 2022-23ರಲ್ಲಿ ಜೆಎಲ್ಆರ್ ನ ವಹಿವಾಟು 98.20 ಕೋಟಿ ರೂ.ಗಳಾಗಿದ್ದು, 15 ಕೋಟಿ ರೂಪಾಯಿ ಲಾಭ ಬಂದಿದೆ ಎಂದಿದ್ದಾರೆ.
ನಾಲ್ಕು ಜಿಲ್ಲೆಗಳಲ್ಲಿ ಹೊಸ ಜೆಎಲ್ಆರ್ ಯೋಜನೆಗಳನ್ನು ನಿರ್ಮಿಸಲು ಉದ್ದೇಶಿಸಿಸಲಾಗಿದೆ. ಸರ್ಫಿಂಗ್ ಶಾಲೆ, ರೆಸಾರ್ಟ್, ಜಲ ಕ್ರೀಡೆಗಳು ಮತ್ತು ಅಂದಾಜು 7.50 ಕೋಟಿ ರೂಪಾಯಿ ವೆಚ್ಚದಲ್ಲಿ ದಕ್ಷಿಣ ಕನ್ನಡದ ಸಸಿಹಿತ್ಲು ಬೀಚ್‌ನಲ್ಲಿ ರೆಸ್ಟೋರೆಂಟ್, ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ 2.08 ಕೋಟಿ ರೂಪಾಯಿ ವೆಚ್ಚದಲ್ಲಿ ಜಲಕ್ರೀಡೆ ಮತ್ತು ಚಾರಣ ಹೊಂದಿರುವ ರೆಸಾರ್ಟ್ ಮತ್ತು 17.13 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗದ ಸಕ್ರೆಬೈಲು ಜೈವಿಕ ಉದ್ಯಾನವನ ನಿರ್ಮಿಸಲಾಗುವುದು ಎಂದಿದ್ದಾರೆ.

ಹಲಸೂರಿನಲ್ಲಿ 12.36 ಕೋಟಿ ವೆಚ್ಚದಲ್ಲಿ ಪ್ರವಾಸಿ ಸೌಧ
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯದ ಬಳಿ 10 ಎಕರೆ ಜಾಗದಲ್ಲಿ ಕಾಟೇಜ್, ಜಲಕ್ರೀಡೆ, ರೆಸ್ಟೋರೆಂಟ್, ಟ್ರೆಕ್ಕಿಂಗ್, ಪರ್ವತ ಮತ್ತು ರಾಕ್ ಕ್ಲೈಂಬಿಂಗ್ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ 20 ಕೋಟಿ ವೆಚ್ಚದಲ್ಲಿ ಬೋರ್ಡಿಂಗ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ ಮತ್ತು ಜೆಎಲ್‌ಆರ್ ಸಂಸ್ಥೆಗಳು ಪ್ರತಿ ವರ್ಷ 6 ಕೋಟಿ ರೂ.ಬಾಡಿಗೆ ನೀಡುವುದರಿಂದ ಇಲಾಖೆಯು ಪ್ರವಾಸಿ ಸೌಧ ನಿರ್ಮಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಹಲಸೂರಿನಲ್ಲಿ 12.36 ಕೋಟಿ ರೂ.ಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ‘ಪ್ರವಾಸಿ ಸೌಧ' ನಿರ್ಮಿಸಲು ಇಲಾಖೆ ಭೂಮಿ ಖರೀದಿಸಿದೆ.

ನೇಕಾರರಿಗೆ, ಕರಕುಶಲ ಕರ್ಮಿಗಳಿಗೆ ಮಾರಾಟ ಮಳಿಗೆ
ಈ ಪ್ರವಾಸಿ ಸೌಧ ಕಟ್ಟಡವು ಪ್ರವಾಸೋದ್ಯಮ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಜೆಎಲ್‌ಆರ್ ಕಚೇರಿಗಳನ್ನು ಹೊಂದಿರುತ್ತದೆ. ಪ್ರವಾಸಿಗರಿಗೆ ಮೈಸೂರು ರೇಷ್ಮೆ ಉದ್ಯಮಗಳ ನಿಗಮ ಮತ್ತು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಉತ್ಪನ್ನಗಳು, ಕೈಮಗ್ಗ ನೇಕಾರರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮಳಿಗೆಗಳನ್ನು ನಿರ್ಮಿಸಲಾಗುವುದು.
ಜೆಎಲ್‌ಆರ್‌ಗೆ ಭೇಟಿ ನೀಡುವ ಅತಿಥಿಗಳಿಗೆ ಹೆಲಿಕಾಪ್ಟರ್ ಸೇವೆಗಳನ್ನು ಒದಗಿಸಲು ‘ಫ್ಲೈ ಬ್ಲೇಡ್' ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. 15 ರಿಂದ 20 ವರ್ಷಗಳಿಂದ ಜೆಎಲ್‌ಆರ್‌ನಲ್ಲಿರುಬ ನೌಕರರ ಸೇವೆಯನ್ನು ಕಾಯಂಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಆನಂದ್ ಸಿಂಗ್ ಹೇಳಿದರು. ಈ ಬಗ್ಗೆ ಜೆಎಲ್‌ಆರ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್ ಮಾತನಾಡಿ, ಖಾಯಂ ಮತ್ತು ಗುತ್ತಿಗೆ ನೌಕರರು ಮತ್ತು ಅವರ ಕುಟುಂಬದ ಸದಸ್ಯರು 8 ಲಕ್ಷ ರೂಪಾಯಿ ವೈದ್ಯಕೀಯ ವಿಮೆ ಮತ್ತು 5 ಲಕ್ಷ ರೂಪಾಯಿ ಅಪಘಾತ ವಿಮೆ ಹೊಂದಿದ್ದಾರೆ ಎಂದಿದ್ದಾರೆ.












Click it and Unblock the Notifications