ಅಬ್ಬಬ್ಬಾ.. ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಕೇವಲ ಆರೇ ತಿಂಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ, ಕಾರಣ ಏನು?, ಮಾಹಿತಿ
ಚಿಕ್ಕಮಗಳೂರು, ಜುಲೈ, 17: ವರ್ಷಪೂರ್ತಿ ಅಚ್ಚಹಸಿರಿನಿಂದ ಕೂಡಿದ ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ ಮಾತ್ರ ಪ್ರವಾಸಿಗರ ಸಂಖ್ಯೆ ಬೇರೆ ತಿಂಗಳಿಗಿಂತ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗೆಯೇ ಕಳೆದ ಆರು ತಿಂಗಳಲ್ಲಿ ಇಲ್ಲಿಗೆ 30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಫಿನಾಡು ಚಿಕ್ಕಮಗಳೂರು ಎಂದರೆ ನಿಸರ್ಗ ಮಾತೆಯ ತವರು ಅಂತಲೇ ಹೆಸರುವಾಸಿಯಾಗಿದೆ. ಇಲ್ಲಿನ ವಾತಾವರಣ ವರ್ಷಪೂರ್ತಿ ಹಚ್ಚಹಸಿರಿನಿಂದ ಕಂಗೊಳಿಸುವ ತುಂಬುಮತ್ತೈದೆಯಾಗಿದೆ. ಜಗನ್ಮಾತೆ ಅನ್ನಪೂರ್ಣೇಶ್ವರಿ-ಶಾರದಾಂಭೆಯ ನೆಲಬೀಡು. ಕಾಫಿನಾಡು ಕೇವಲ ಜಿಲ್ಲೆಯಲ್ಲ. ಧಾರ್ಮಿಕತೆ ಜೊತೆ ಪ್ರವಾಸಿಗರಿಗೆ ಕೇಳಿದ್ದೆಲ್ಲವನ್ನೂ ನೀಡುವ ಅಕ್ಷಯಪಾತ್ರೆ. ಪ್ರವಾಸಿಗರಿಗಂತೂ ನಿಂತಲ್ಲೇ ಮೈಮರೆಸೋ ಹಾಟ್‌ಸ್ಪಾಟ್. ಇಲ್ಲಿನ ಸುಂದರ ರಮಣೀಯ ತಾಣಗಳು ವರ್ಷಪೂರ್ತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಲೇ ಇರುತ್ತವೆ.

ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಹಾಗೆಯೇ ಈ ವರ್ಷ ಆರೇ ತಿಂಗಳಿಗೆ ಬಂದ ಟೂರಿಸ್ಟ್ ಸಂಖ್ಯೆ 30ಲಕ್ಷಕ್ಕೂ ಅಧಿಕವಾಗಿದೆ. ಹಾಗಾದರೆ ಸಂಪೂರ್ಣ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ದತ್ತಪೀಠ, ಮಾಣಿಕ್ಯಧಾರ, ಶಿಶಿಲ ಗುಡ್ಡ, ದೇವರಮನೆಗುಡ್ಡ, ಶೃಂಗೇರಿ, ಹೊರನಾಡು ಹೀಗೆ ಹೇಳುತ್ತಾ ಹೋದರೆ ಕಾಫಿನಾಡ ಪ್ರವಾಸಿ ತಾಣಗಳ ಸಂಖ್ಯೆ ಒಂದೋ ಎರಡೋ. ಇನ್ನು ಧಾರ್ಮಿಕವಾಗಿ ಬಂದರೆ ಒಬ್ಬಳು ಅನ್ನ ನೀಡುವ ಅನ್ನದಾತೆ. ಮತ್ತೊಬ್ಬಳು ವಿಧ್ಯೆ ನೀಡುವ ವಿದ್ಯಾದೇವತೆಯನ್ನು ಕಾಣಬಹುದಾಗಿದೆ.
ಕಾಫಿನಾಡನ್ನು ರಾಜ್ಯದ ಅತೀ ದೊಡ್ಡ ಜಿಲ್ಲೆ ಅಂತಾನೂ ಕರೆಯಲಾಗುತ್ತೆ. ಎರಡು ತಾಲೂಕುಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ತಾಲೂಕುಗಳು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳೇ ಆಗಿವೆ. ಕಾಫಿನಾಡ ಭೌಗೋಳಿಕತೆಯಲ್ಲಿ ಅರ್ಧಕರ್ಧ ಕಾಡೇ ಇದ್ದು, ಅಸಂಖ್ಯಾತ ವನ್ಯ ಮೃಗಗಳ ನಾಡು ಕೂಡ ಇದಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದಕ್ಕೇಂದು ವರ್ಷಪೂರ್ತಿ ಪ್ರವಾಸಿಗರ ದಂಡೇ ಹರಿದುಬರುತ್ತದೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜೂನ್ ಒಂದೇ ತಿಂಗಳಿಗೆ ಜಿಲ್ಲೆಗೆ ಏಳು ಲಕ್ಷ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. 2023ರ ಜನವರಿಯಿಂದ ಜೂನ್ 30ರವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಗ್ಯಾರಂಟಿ ಸರ್ಕಾರದ ಶಕ್ತಿಯ ಯೋಜನೆಯ ಪಾಲು ಕೂಡ ಒಂದಷ್ಟು ಇದ್ದೇ ಇದೆ ಎಂದರೆ ತಪ್ಪಾಗಲಾರದು.
ಕಾಫಿನಾಡ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರವಾಸಿಗರು ಬರಲು ಗ್ಯಾರಂಟಿ ಸರ್ಕಾರದ ಶಕ್ತಿ ಯೋಜನೆ ಪಾಲು ಇದೆ. ಯಾಕಂದರೆ ಈ ವರ್ಷ ಜನವರಿಯಿಂದ ಜುಲೈವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ಇಡೀ ವರ್ಷಕ್ಕೆ 50 ಲಕ್ಷವಿತ್ತು, 2021ರಲ್ಲಿ ಇನ್ನೂ ಕಡಿಮೆ ಇತ್ತು. ಈ ಬಾರಿ ಜನವರಿಯಿಂದ ಆರೇ ತಿಂಗಳಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆರು ತಿಂಗಳಲ್ಲಿ 30 ಲಕ್ಷ. ಜೂನ್ ಒಂದೇ ತಿಂಗಳಿಗೆ 7 ಲಕ್ಷ. ಇನ್ನು ಈ ವರ್ಷದ ಕೊನೆಗೆ ಜಿಲ್ಲೆಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಕೋಟಿ ದಾಟುವುದರಲ್ಲಿ ಅನುಮಾನವಿಲ್ಲ.
ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಿಗರನ್ನ ಆಕರ್ಷಿಸುತ್ತಲೇ ಇದೆ. ಇಲ್ಲಿನ ಪ್ರವಾಸಿ ತಾಣಗಳು ಹಾಗೂ ಇಬ್ಬರು ಅಧಿದೇವತೆಯರನ್ನು ನಂಬಿಕೊಂಡೇ ಬದುಕುತ್ತಿರುವ ಜನಸಾಮಾನ್ಯರ ಬಾಳು ಕೂಡ ಪ್ರವಾಸಿಗರು ಹೆಚ್ಚಾದಂತೆ ಅವರ ಆರ್ಥಿಕ ಗುಣಮಟ್ಟವನ್ನು ಕೂಡ ಹೆಚ್ಚುತ್ತಿದೆ. ಸರ್ಕಾರ ಕೂಡಲೇ ಇತ್ತಗಮನ ಹರಿಸಿ ಪ್ರವಾಸಿಗರಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿದೆ. ಹೀಗೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ತಾನಾಗೇ ಪ್ರವಾಸಿ ಜಿಲ್ಲೆಯಾಗುವುದಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ ಇಲ್ಲಿನ ಸ್ಥಳೀಯರು.












Click it and Unblock the Notifications