ಚಿಕ್ಕಮಗಳೂರು ಪ್ರವಾಸ: ಪೊಲೀಸ್ ಇಲಾಖೆಯಿಂದ ಸಲಹೆಗಳು
ಚಿಕ್ಕಮಗಳೂರು, ಜುಲೈ 09: ನೈಋತ್ಯ ಮುಂಗಾರು ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ. ಜಿಲ್ಲೆಯ ಜಲಪಾತಗಳು, ಗಿರಿ ಶಿಖರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ವಾರಾಂತ್ಯದಲ್ಲಿ ಜಿಲ್ಲೆಗೆ ಪ್ರವಾಸ ಕೈಗೊಳ್ಳುವ ಜನರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.
ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುವ ಜನರಿಗೆ ಜಿಲ್ಲಾ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದೇವರಮನೆ ರಸ್ತೆಯಲ್ಲಿ ಮದ್ಯ ಕುಡಿದು, ಧಮ್ ಹೊಡೆದುಕೊಂಡು, ರಸ್ತೆ ಮಧ್ಯೆ ಮೋಜು, ಮಸ್ತಿ ಮಾಡುವ ಪ್ರವಾಸಿಗರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಈ ಹಿನ್ನಲೆಯಲ್ಲಿ ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ರೇಣುಕಾ ನೇತೃತ್ವದಲ್ಲಿ ದಾಳಿ ನಡೆಸಿ, ದೇವರಮನೆಗುಡ್ಡದ ಬಳಿಯ ರಸ್ತೆಯಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕರಿಗೆ ಚಳಿ ಬಿಡಿಸಲಾಗಿದೆ. ಸುಮಾರು 20 ಜನರ ವಿರುದ್ಧ ಎಫ್‌ಐಆರ್ ಸಹ ದಾಖಲು ಮಾಡಲಾಗಿದೆ. ಪ್ರವಾಸಕ್ಕೆ ಆಗಮಿಸುವ ಜನರಿಗೆ ಸಲಹೆಗಳನ್ನು ನೀಡಲಾಗಿದೆ.
ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುತ್ತಿದ್ದ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜುಲೈ 8ರಂದು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣವಾದ ದೇವರಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ 20 ಪ್ರಕರಣಗಳನ್ನು ಮತ್ತು ಧೂಮಪಾನ ಮಾಡುತ್ತಿದ್ದವರ ವಿರುದ್ಧ ಕೋಟ್ಪಾ ಕಾಯ್ದೆಯಡಿಯಲ್ಲಿ 9 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೇ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆಮ್ಮಣ್ಣುಗುಂಡಿ ಕ್ರಾಸ್ ಬಳಿ ಮದ್ಯಪಾನ ಮಾಡಿಕೊಂಡು ಅತಿರೇಕದಿಂದ ವಾಹನ ಚಾಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ 4 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿ, ಕಾರ್ ಅನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ರೀತಿ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರೆಸಿ ಕಾನೂನಿನ ರೀರಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಿಂದ ಪ್ರವಾಸಿಗರಿಗೆ ಸಲಹೆಗಳು
* ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ
* ಪ್ರವಾಸಿ ಸ್ಥಳಗಳಲ್ಲಿ ಮದ್ಯಪಾನ ಮಾಡಬೇಡಿ
* ನಿಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಬೇಡಿ
* ಜವಾಬ್ದಾರಿಯುತವಾಗಿ ವರ್ತಿಸಿ
* ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಚುಡಾಯಿಸಬೇಡಿ
* ಪ್ರಕೃತಿಯನ್ನು ಗೌರವಿಸಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಿ
* ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಿ
* ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬೇಡಿ
* ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ/ ಎಸೆಯಬೇಡಿ
* ದಯವಿಟ್ಟು ನಿಮ್ಮ ಸುರಕ್ಷತೆ ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಿ
ಮುಂಗಾರು ಮಳೆ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳ ಸೌಂದರ್ಯ ವೀಕ್ಷಣೆ ಮಾಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅವರು ಜವಾಬ್ದಾರಿಯಿಂದ ನಡೆದುಕೊಂಡರೆ ಸ್ಥಳೀಯ ಜನರಿಗೆ, ಉಳಿದ ಪ್ರವಾಸಿಗರಿಗೆ ತೊಂದರೆ ಉಂಟಾಗುವುದಿಲ್ಲ.
ಕಳೆದ ವಾರ ಪ್ರಸಿದ್ಧ ಪ್ರವಾಸಿತಾಣವಾದ ದೇವರಮನೆಗೆ ಹೋಗುವ ರಸ್ತೆಯಲ್ಲಿ ಮೋಜು, ಮಸ್ತಿ ಮಾಡುತ್ತಿದ್ದ ಯುವಕರು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಪೊಲೀಸ್ ಇಲಾಖೆ ಹುಚ್ಚಾಟವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು.
ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಸನ್ನಿಧಿ ಇರುವ ಕ್ಷೇತ್ರ ದೇವರಮನೆ. ಆದರೆ ಕೆಲವು ಪ್ರವಾಸಿಗರ ಹುಚ್ಚು ಕುಣಿತ, ಎಲ್ಲೆ ಮೀರಿದ ವರ್ತನೆಯಿಂದ ಮಲೆನಾಡ ಪ್ರಕೃತಿ ಮಡಿಲಿನ ಸೌಂದರ್ಯ ನೋಡಲು ಬರುವ ಪ್ರವಾಸಿಗರಿಗೆ, ದೇವಾಲಯದ ಭಕ್ತರಿಗೆ ಮುಜುಗರ ಉಂಟಾಗಿತ್ತು.
ದೇವರಮನೆಯಲ್ಲಿ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರನ ದೇವಾಲಯವಿದೆ. ಈ ಕ್ಷೇತ್ರಕ್ಕೆ ಹಲವಾರು ಭಕ್ತರು ಆಗಮಿಸುತ್ತಾರೆ. ಆದರೆ ಈ ದೇವಾಲಯಕ್ಕೆ ಬರುವ ರಸ್ತೆಯಲ್ಲಿ ಕೆಲವು ಪ್ರವಾಸಿಗರು ಮದ್ಯ ಕುಡಿದು, ಧಮ್ ಹೊಡೆದುಕೊಂಡು, ಜೋರಾಗಿ ಹಾಡು ಹಾಕಿಕೊಂಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.












Click it and Unblock the Notifications