Get Updates
Get notified of breaking news, exclusive insights, and must-see stories!

Kodagu Waterfalls: ಈ ವೇಳೆಯಲ್ಲಿ ಕರ್ನಾಟಕದ ಕಾಶ್ಮೀರದಲ್ಲಿ ಹೆಜ್ಜೆಹೆಜ್ಜೆಗೂ ಜಲಪಾತಗಳು ಸೃಷ್ಟಿ, ತಲುಪುವ ಮಾರ್ಗಗಳು

ಮಡಿಕೇರಿ, ಆಗಸ್ಟ್‌ 01: ಕೊಡಗಿನಲ್ಲಿ ಭಾರೀ ಮಳೆ ಸುರಿದಾಗ ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರು ಹೆಬ್ಬಂಡೆಗಳ ಮೇಲೆ ಧುಮುಕಿದಾಗ ಜಲಪಾತಗಳು ಸೃಷ್ಟಿಯಾಗಿ ಅಚ್ಚರಿ ಮೂಡಿಸುತ್ತವೆ. ಇವುಗಳ ಚೆಲುವು ಆಸ್ವಾದಿಸುವ ಯೋಗ ಎಲ್ಲ ದಿನಗಳಲ್ಲಿ ಮತ್ತು ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ ಇವು ಒಂಥರಾ ಅಲ್ಪಾಯುಷಿ ಮತ್ತು ಅಜ್ಞಾತ ಜಲಪಾತಗಳಾಗಿ ಉಳಿದು ಬಿಟ್ಟಿವೆ. ಕೆಲವು ಜಲಪಾತಗಳು ರಸ್ತೆ ಬದಿಯಲ್ಲೇ ಕಾಣಿಸಿಕೊಂಡರೆ ಮತ್ತೆ ಕೆಲವನ್ನು ನೋಡಬೇಕಾದರೆ ಬೆಟ್ಟಗುಡ್ಡಗಳ ನಡುವೆ ಅಲೆಯಬೇಕಾಗುತ್ತವೆ.

ಕೊಡಗಿನ ಬೆಟ್ಟಗುಡ್ಡಗಳಲ್ಲಿ, ಕಾಫಿತೋಟಗಳಲ್ಲಿ ಮಳೆಗಾಲದ ದಿನಗಳಲ್ಲಿ ಅಸಂಖ್ಯಾತ ಜಲಧಾರೆಗಳು ಸೃಷ್ಟಿಯಾಗಿ ಯಾರ ಗಮನವನ್ನೂ ಸೆಳೆಯದೆ ತಮ್ಮ ಪಾಡಿಗೆ ತಾವು ಎಂಬಂತೆ ಧುಮುಕಿ ಮಳೆ ಕಡಿಮೆಯಾಗುತ್ತಿದ್ದಂತೆಯೇ ಹೆಬ್ಬಂಡೆಗಳ ನಡುವೆ ಲೀನವಾಗಿ ಹೋಗಿಬಿಡುತ್ತವೆ. ಇಂತಹ ಅಲ್ಪಾಯುಷಿ ಜಲಪಾತಗಳ ಜಾಡು ಹುಡುಕಿ ಸನಿಹಕ್ಕೆ ತೆರಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಇವುಗಳು ಮಳೆಗಾಲದಲ್ಲಿ ಮಾತ್ರ ಭೋರ್ಗರೆದು ಧುಮುಕಿ ತಮ್ಮ ಚೆಲುವನ್ನು ಪ್ರದರ್ಶಿಸುತ್ತವೆಯಾದರೂ ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ತನ್ನ ಚೆಲುವು ಕಳೆದುಕೊಂಡು ಅದೃಶ್ಯವಾಗಿ ಬಿಡುತ್ತವೆ.

Many Waterfalls Have Been Created In Kodagu

ಇಂತಹ ಜಲಪಾತಗಳು ಬೇಕಾದಷ್ಟು ಸಿಗುತ್ತವೆ. ಮಡಿಕೇರಿಯನ್ನು ಕೇಂದ್ರವಾಗಿಟ್ಟುಕೊಂಡು ನೋಡಿದರೆ ಮಡಿಕೇರಿಯಿಂದ ಮಂಗಳೂರು ಕಡೆಗಿನ ರಸ್ತೆಯಲ್ಲಿ ಹೊರಟಾಗ ದೂರದ ಬೆಟ್ಟಗಳ ನಡುವೆ ಮತ್ತು ರಸ್ತೆ ಬದಿಯಲ್ಲಿ ಕಾಣಸಿಗುತ್ತವೆ. ಮಂಗಳೂರು ರಸ್ತೆಯಲ್ಲಿ ಸಾಗಿದಾಗ ಸಿಗುವ ಮದೆನಾಡಿನಿಂದ ಮುಂದೆ ಜೋಡುಪಾಲ ಸಿಗುತ್ತದೆ. ಇಲ್ಲಿಗೆ ಸಮೀಪವೇ ಉಂಬುಳ್‌ಗುಂಡಿ ಜಲಧಾರೆಯಿದೆ. ಇದು ಸುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬರುವ ನದಿಯಿಂದ ಸೃಷ್ಟಿಯಾದ ಜಲಪಾತವಾಗಿದೆ. ಅಲ್ಲಿಂದ ಮುಂದಕ್ಕೆ ತೆರಳಿದರೆ ತಿರುವಿನಲ್ಲೊಂದು ಜಲಪಾತ ಕಾಣಸಿಗುತ್ತದೆ.

ಜೋಡುಪಾಲದ ಬೆಡಗಿ ಈ ಜಲಪಾತ

ಈ ಜಲಪಾತವನ್ನು ಎಲ್ಲರೂ ಜೋಡುಪಾಲ ಜಲಪಾತ ಎಂದೇ ಕರೆಯುತ್ತಾರೆ. ರಸ್ತೆ ಬದಿಯಲ್ಲಿರುವುದರಿಂದ ಈ ಜಲಪಾತದ ನೋಟ ಎಲ್ಲರಿಗೂ ಲಭ್ಯವಾಗುತ್ತದೆ. ಸುಮಾರು ಎಪ್ಪತೈದು ಅಡಿಯಷ್ಟು ಎತ್ತರದಿಂದ ಕಣಿವೆಗೆ ಧುಮುಕುವ ಜಲಪಾತದ ಸೌಂದರ್ಯವನ್ನು ವೀಕ್ಷಿಸಿದಾಗ ರೋಮಾಂಚನವಾಗುತ್ತದೆ. ಈ ಜಲಪಾತ ಮಡಿಕೇರಿಯಿಂದ ಸುಮಾರು 18ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಮುಂದಕ್ಕೆ ಸಂಪಾಜೆಯತ್ತ ತೆರಳಿದಾಗ ಕೊಯನಾಡು ಸಿಗುತ್ತದೆ.

Many Waterfalls Have Been Created In Kodagu

ಇಲ್ಲಿರುವ ಸೇತುವೆಯ ಎಡಭಾಗದ ರಸ್ತೆಯಲ್ಲಿ ಸುಮಾರು ಐದು ಕಿ.ಮೀ. ಸಾಗಿದರೆ ಕಲ್ಯಾಳ ಜಲಪಾತ ಸಿಗುತ್ತದೆ. ಈ ಜಲಪಾತ ವಿವಿಧ ಹಂತಗಳಲ್ಲಿ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಮುಂದೆ ಸಂಪಾಜೆಯತ್ತ ತೆರಳಿದರೆ ಅಲ್ಲಿಂದ ಮುಂದೆ ಲೈನ್ಕಜೆ ಎಂಬಲ್ಲಿ ಖಾಸಗಿ ತೋಟದಲ್ಲಿ ಲೈನ್ಕಜೆ ಎಂಬ ಜಲಪಾತವಿದೆ.

ಕುಪ್ಪೆಹೊಳೆ ಸೃಷ್ಟಿಸಿದ ಜಲಪಾತ

ಇನ್ನು ಮಡಿಕೇರಿಯಿಂದ ಸೋಮವಾರಪೇಟೆ ಕಡೆಗಿನ ರಸ್ತೆಯಲ್ಲಿ ಹೊರಟರೆ ನಮಗೆ ಹಟ್ಟಿಹೊಳೆ ಸಿಗುತ್ತದೆ ಅಲ್ಲಿಂದ 8ಕಿ.ಮೀ. ದೂರ ಹೋದರೆ ಮುಕ್ಕೋಡ್ಲು ಎಂಬ ಜಲಪಾತವನ್ನು ತಲುಪಬಹುದು. ಈ ಜಲಪಾತ ಎಂಬತ್ತು ಅಡಿಯಷ್ಟು ಎತ್ತರದಿಂದ ಹತ್ತು ಅಡಿಯಷ್ಟು ಅಗಲವಾಗಿ ಧುಮುಕುತ್ತಾ ತನ್ನ ಚೆಲುವನ್ನು ವೀಕ್ಷಕರಿಗೆ ತೆರೆದಿಡುತ್ತದೆ. ಇದಕ್ಕೂ ಮೊದಲು ಮಕ್ಕಂದೂರಿಗೆ ಮೂರು ಕಿ.ಮೀ. ದೂರದ ಹಾಲೇರಿಯಲ್ಲಿ ಕುಪ್ಪೆಹೊಳೆ ಎಂಬ ಪುಟ್ಟಜಲಪಾತವಿದೆ.

ಸುಮಾರು 40ಅಡಿ ಎತ್ತರದಿಂದ ಇಪ್ಪತ್ತು ಅಡಿ ಅಗಲವಾಗಿ ಧುಮ್ಮಿಕುವ ಈ ಜಲಪಾತ ಮಕ್ಕಂದೂರು ಹಾಗೂ ತಂತಿಪಾಲ ಕಡೆಯಿಂದ ಹರಿದು ಬರುವ ಕುಪ್ಪೆಹೊಳೆಯಿಂದ ಸೃಷ್ಟಿಯಾಗಿದೆ. ಇದನ್ನು ನೋಡಿದ ಬಳಿಕ ಮತ್ತೆ ಸೋಮವಾರಪೇಟೆ ಕಡೆಗೆ ಹೊರಟರೆ ಮಾದಾಪುರ ಸಿಗುತ್ತದೆ. ಅಲ್ಲಿಂದ ಗರ್ವಾಲೆಗೆ ತೆರಳಿದರೆ ಮೂರು ಕಿ.ಮೀ.ದೂರದಲ್ಲಿ ಮೇದುರ ಜಲಪಾತವಿದೆ. ದಟ್ಟ ಕಾಡಿನ ನಡುವೆ ಇರುವ ಈ ಜಲಪಾತ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ.

Many Waterfalls Have Been Created In Kodagu

ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಕಡೆಗಿನ ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿ ಅಬ್ಬಿಮಠ ಬಾಚಳ್ಳಿ ಗ್ರಾಮ ಸಿಗುತ್ತದೆ. ಅಲ್ಲಿ ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಜಲಪಾತವೊಂದು ಕಾಣಸಿಗುತ್ತದೆ. ಒಂದೆಡೆ ತೋಟಗಳು ಮತ್ತೊಂದೆಡೆ ಗದ್ದೆ ಬಯಲು ಇದರ ನಡುವೆ ನಿರ್ಮಿತವಾಗಿರುವ ಜಲಪಾತವನ್ನು ಸ್ಥಳೀಯರು ಬಾಚಳ್ಳಿ ಅಬ್ಬಿ ಎಂದು ಕರೆಯುತ್ತಾರೆ.

ಭಾಗಮಂಡಲ ಸುತ್ತಮುತ್ತಲಿನ ಜಲಪಾತಗಳು

ಮಡಿಕೇರಿಯಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿಗೆ ಸನಿಹದಲ್ಲಿ ಹಲವಾರು ಜಲಪಾತಗಳಿವೆ. ನಾಪೋಕ್ಲುವನ್ನು ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಅಲ್ಲಿಂದ ತೆರಳಿ ನಾವು ಜಲಪಾತಗಳ ವೀಕ್ಷಣೆ ಮಾಡಬಹುದಾಗಿದೆ. ಭಾಗಮಂಡಲ ರಸ್ತೆಯಲ್ಲಿ ಬಲ್ಲಮಾವಟಿಗೆ ತೆರಳಿದರೆ ಅಲ್ಲಿಂದ ಎಡಕ್ಕೆ ಪೆರೂರು ಕಡೆಗೆ ಹೆಜ್ಜೆ ಹಾಕಿದರೆ ದೇವರಗುಂಡಿ ಜಲಪಾತವನ್ನು ತಲುಪಬಹುದು.

ಅರವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ವಿಶಾಲ ಕೆರೆಯೊಳಗೆ ನೀರು ಚಿಮ್ಮುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಅದೇ ಮುಖ್ಯ ರಸ್ತೆಯಲ್ಲಿ ಭಾಗಮಂಡಲಕ್ಕೆ ತೆರಳಿದರೆ ಭಾಗಮಂಡಲ ಸುತ್ತಮುತ್ತ ಕೆಲವು ಜಲಪಾತಗಳನ್ನು ನಾವು ನೋಡಬಹುದು. ಭಾಗಮಂಡಲ ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿ 3ಕಿ.ಮೀ ತೆರಳಿದರೆ ತಣ್ಣಿಮಾನಿ ಪಾರೆಕಟ್ಟು ಜಲಪಾತ ಸಿಗುತ್ತದೆ. ಇದು ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ.

ಭಾಗಮಂಡಲದಿಂದ ಕರಿಕೆಯತ್ತ ತೆರಳಿದರೆ ಅಲ್ಲಿ ಹಲವಾರು ಮಳೆಗಾಲದ ಜಲಪಾತಗಳು ಕಾಣಸಿಗುತ್ತವೆ. ಇವು ಮಳೆಗಾಲದಲ್ಲಿ ಮಾತ್ರ ಗೋಚರಿಸುತ್ತವೆ. ಇವುಗಳ ನಡುವೆ ಬಾಚಿಮಲೆ ಜಲಪಾತವೂ ಒಂದಾಗಿದೆ. ಈ ಜಲಪಾತ ರಸ್ತೆ ಬದಿಯಲ್ಲಿದ್ದು, ಸುಮಾರು ಎಂಬತ್ತು ಅಡಿ ಎತ್ತರದಿಂದ ಧುಮುಕುತ್ತದೆ.

ನಾಲ್ಕುನಾಡು ಅರಮನೆ ಬಳಿಯೇ ಜಲಪಾತ

ಭಾಗಮಂಡಲದಿಂದ ಮಡಿಕೇರಿ ರಸ್ತೆಯಲ್ಲಿ ತೆರಳಿದರೆ ಚೆಟ್ಟಿಮಾನಿ ಸಿಗುತ್ತದೆ. ಇಲ್ಲಿರುವ ಪ್ರಾಥಮಿಕ ಶಾಲೆಯ ಬಳಿಯ ರಸ್ತೆಯಲ್ಲಿ ಎರಡು ಕಿ.ಮೀ. ತೆರಳಿದರೆ ಪೋಲಮಾನಿ ಸಿಗುತ್ತದೆ. ಪೋಲಮಾನಿ ರಸ್ತೆಯಲ್ಲಿ ಮೂರು ಕಿ.ಮೀ. ದೂರದಲ್ಲಿ ದಾಸನಕಾಡು ಜಲಪಾತವಿದೆ. ಇದು ಮೂವತ್ತು ಅಡಿ ಎತ್ತರದಿಂದ ಧುಮುಕುತ್ತದೆ. ಇಲ್ಲಿಗೆ ಒಂದೂವರೆ ಕಿ.ಮೀ. ದೂರದಲ್ಲಿ ಸುಮಾರು ಇಪ್ಪತೈದು ಅಡಿಯಷ್ಟು ಎತ್ತರದಿಂದ ಧುಮುಕುವ ಬೋಳುಗಲ್ಲು ಮೊಟ್ಟೆ ಎಂಬ ಮತ್ತೊಂದು ಜಲಪಾತವಿದೆ.

ನಾಪೋಕ್ಲುವಿನಿಂದ ಕಕ್ಕಬೆಗೆ ತೆರಳಿದರೆ ಅಲ್ಲಿಂದ ಯುವಕಪಾಡಿಯ ನಾಲ್ಕುನಾಡು ಅರಮನೆ ಸಮೀಪಕ್ಕೆ ಬಂದರೆ ಎದುರಿನಲ್ಲಿಯೇ ಜಲಪಾತ ಕಾಣಸಿಗುತ್ತದೆ. ಇದರ ಸೌಂದರ್ಯವೇನಿದ್ದರೂ ಮಳೆಗಾಲದಲ್ಲಿ ಮಾತ್ರ. ಇಪ್ಪತ್ತು ಅಡಿ ಎತ್ತರವಿರುವ ಜಲಪಾತ ಮಳೆಗಾಲದಲ್ಲಿ ಭೋರ್ಗರೆದು ಧುಮುಕಿ ಮನಕ್ಕೆ ಮುದನೀಡುತ್ತದೆ. ನಾಲ್ಕುನಾಡು ಅರಮನೆಯ ಮುಂದಿನ ರಸ್ತೆಯಲ್ಲಿ ಸುಮಾರು 4ಕಿ.ಮೀ. ರಸ್ತೆಯಲ್ಲಿ ಸಾಗಿದರೆ ಮಾದಂಡ ಅಬ್ಬಿ ಜಲಪಾತವನ್ನು ತಲುಪಬಹುದು. ಸುಮಾರು ನೂರೈವತ್ತು ಅಡಿಗಿಂತಲೂ ಎತ್ತರದಿಂದ ಕಂದಕಕ್ಕೆ ಧುಮುಕುವ ಜಲಧಾರೆಯನ್ನು ಗುಡ್ಡ ಹತ್ತಿ ನೋಡಬೇಕಾಗುತ್ತದೆ.

ಇನ್ನೆಷ್ಟು ಅಜ್ಞಾತ ಜಲಪಾತಗಳಿವೆಯೋ?

ಇನ್ನು ಮಡಿಕೇರಿಯಿಂದ ಸಿದ್ದಾಪುರ ರಸ್ತೆಯಲ್ಲಿ ತೆರಳಿದರೆ ಕಡಗದಾಳದದಿಂದ ಕಗ್ಗೋಡ್ಲು ಕಡೆಗೆ ತೆರಳುವ ರಸ್ತೆಯಲ್ಲಿ ಸಾಗಿದರೆ ಚೌಂಡಿಪಾರೆ ಜಲಪಾತ ಸಿಗುತ್ತದೆ. ಕಡಗದಾಳದಿಂದ ಮುಂದಕ್ಕೆ ಸಾಗಿದರೆ ಚೆಟ್ಟಳ್ಳಿ ಬಳಿಯ ಮುಖ್ಯ ರಸ್ತೆಯಲ್ಲಿಯೇ ಜಲಪಾತವೊಂದು ಕಾಣಸಿಗುತ್ತದೆ. ಇದನ್ನು ಚೆಟ್ಟಳ್ಳಿ ಫಾಲ್ಸ್ ಎಂದೇ ಸ್ಥಳೀಯರು ಕರೆಯುತ್ತಾರೆ. ಒಟ್ಟಾರೆ ಕೊಡಗಿನಲ್ಲಿ ಇನ್ನು ಹಲವಾರು ಜಲಪಾತಗಳು ದಟ್ಟಕಾಡಿನ ನಡುವೆ, ಇನ್ಯಾರದ್ದೋ ಕಾಫಿ, ಏಲಕ್ಕಿ ತೋಟಗಳ ನಡುವೆ ಅಡಗಿ ಕುಳಿತಿದ್ದು, ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿದಾಗ ಮೈಕೈ ತುಂಬಿಕೊಂಡು ಚೆಲುವು ಪ್ರದರ್ಶಿಸುತ್ತವೆ. ಪಟ್ಟಣದಿಂದ ದೂರವಾಗಿ ರಸ್ತೆ ಸಂಪರ್ಕವೂ ಇಲ್ಲದಿರುವುದರಿಂದ ಅವು ಅಜ್ಞಾತ ಜಲಪಾತಗಳಾಗಿ ಉಳಿದುಹೋಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+