ಮಂಗಳೂರು ಸೆಂಟ್ರಲ್-ಪುತ್ತೂರು ಪ್ಯಾಸೆಂಜರ್ ರೈಲು ಕುಕ್ಕೆ ಸುಬ್ರಹ್ಮಣ್ಯ: ವೇಳಾಪಟ್ಟಿ
ಮಂಗಳೂರು, ಏಪ್ರಿಲ್ 13: ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹು ದಿನದ ಬೇಡಿಕೆ ಈಡೇರಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡುವ ಭಕ್ತರಿಗೆ ರೈಲ್ವೆ ಇಲಾಖೆ ಬಂಪರ್ ಕೊಡುಗೆ ನೀಡಿದೆ. ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ನಡುವೆ ಸಂಚಾರ ನಡೆಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಶನಿವಾರ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಪ್ಯಾಸೆಂಜರ್ ರೈಲನ್ನು ಸುಬ್ರಮಣ್ಯ ರೋಡ್ ನಿಲ್ದಾಣದವರೆಗೆ ವಿಸ್ತರಣೆ ಮಾಡಲು ಹಸಿರು ನಿಶಾನೆ ತೋರಿಸಿದರು.

ಈ ರೈಲು ಸೇವೆ ವಿಸ್ತರಣೆಯಿಂದ ಮಂಗಳೂರು ನಗರದಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚಾರ ನಡೆಸಲು ಅನುಕೂಲವಾಗಲಿದೆ. ಅಲ್ಲದೇ ಪ್ರತಿದಿನ ಈ ಮಾರ್ಗದಲ್ಲಿ ಸಂಚಾರ ನಡೆಸುವ ನೂರಾರು ಪ್ರಯಾಣಿಕರಿಗೂ ಸಹಾಯಕವಾಗಲಿದೆ. ರೈಲಿನ ವೇಳಾಪಟ್ಟಿ ಇಲ್ಲಿದೆ.
ರೈಲು ವೇಳಾಪಟ್ಟಿ
* ರೈಲು ನಂಬರ್ 56625 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಸುಬ್ರಮಣ್ಯ ರೋಡ್ ರೈಲು. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮುಂಜಾನೆ 4 ಗಂಟೆಗೆ ಹೊರಡಲಿದೆ. 5.18ಕ್ಕೆ ಕಬಕ ಪುತ್ತೂರು (2 ನಿಮಿಷ ನಿಲುಗಡೆ). ಬೆಳಗ್ಗೆ 6.30ಕ್ಕೆ ಸುಬ್ರಮಣ್ಯ ರೋಡ್ ತಲುಪಲಿದೆ.
* ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ನಡುವೆ ರೈಲು ಸಂಖ್ಯೆ 56626 ಸಂಚಾರವನ್ನು ನಡೆಸಲಿದೆ. ಈ ರೈಲು ಬೆಳಗ್ಗೆ 7 ಗಂಟೆಗೆ ಸುಬ್ರಮಣ್ಯ ರೋಡ್‌ನಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ (2 ನಿಮಿಷ ನಿಲುಗಡೆ). ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
* ರೈಲು ಸಂಖ್ಯೆ 56627 ಮಂಗಳೂರು ಸೆಂಟ್ರಲ್‌ನಿಂದ ಸಂಜೆ 5.45ಕ್ಕೆ ಹೊರಡಲಿದ್ದು, 7.30ಕ್ಕೆ ಕಬಕ ಪುತ್ತೂರು ತಲುಪಲಿದೆ. ರಾತ್ರಿ 8.10ಕ್ಕೆ ಸುಬ್ರಮಣ್ಯ ರೋಡ್‌ಗೆ ತಲುಪಲಿದೆ. ರೈಲು ಸಂಖ್ಯೆ 56628 ಸುಬ್ರಮಣ್ಯ ರೋಡ್‌ನಿಂದ ರಾತ್ರಿ 8.40ಕ್ಕೆ ಹೊರಟು 9.28ಕ್ಕೆ ಕಬಕ ಪುತ್ತೂರು ತಲುಪಲಿದೆ. 11.10ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ರೈಲನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಜನರು ಸುಮಾರು 18 ವರ್ಷಗಳ ಬೇಡಿಕೆ. ಮೀಟರ್ ಗೇಜ್ ಕಾಲದಲ್ಲಿ ಸುಬ್ರಮಣ್ಯ ರೋಡ್-ಮಂಗಳೂರು ನಡುವೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಬರ್ ರೈಲು ಸಂಚಾರವನ್ನು ನಡೆಸುತ್ತಿತ್ತು. 06484/ 85 ಸಂಖ್ಯೆಯ ರೈಲು ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಆದರೆ, ಹಳಿ ಪರಿವರ್ತನೆ ಬಳಿಕ ಈ ಪ್ಯಾಸೆಂಜರ್ ರೈಲು ಪುತ್ತೂರು ತನಕ ಮಾತ್ರ ಸಂಚಾರ ನಡೆಸಲು ಪ್ರಾರಂಭಿಸಿತು.
ಆಗ ದಕ್ಷಿಣ ಕನ್ನಡದ ಜನರು, ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡುವ ಭಕ್ತರು ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟರು. ಈ ಕುರಿತು ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಮನವಿ ಸಹ ಸಲ್ಲಿಕೆ ಮಾಡಿದ್ದರು.
ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ರೈಲನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಲು 2024ರ ನವೆಂಬರ್‌ನಲ್ಲಿ ರೈಲ್ವೆ ಮಂಡಳಿಗೆ ಶಿಫಾರಸು ಕಳಿಸಿತ್ತು. ಅದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಈಗ ಅಂತಿಮವಾಗಿ ಎಲ್ಲಾ ಹೋರಾಟದ ಫಲವಾಗಿ ಪ್ಯಾಸೆಂಬರ್ ರೈಲು ಸುಬ್ರಮಣ್ಯ ರೋಡ್ ತನಕ ಸಂಚಾರವನ್ನು ಆರಂಭಿಸಿದೆ.











Click it and Unblock the Notifications