ಲಡಾಖ್: ಈಗ ಲೇಹ್ ಪ್ರವಾಸಕ್ಕೆ ಬೇಕು ಹೆಚ್ಚುವರಿ ಎರಡು ದಿನಗಳು
ಶ್ರೀನಗರ ಜೂನ್ 3: ಹಿಮಾಲಯದ ತಪ್ಪಲಿನಲ್ಲಿರುವ ಕೇಂದ್ರಾಳಿತ ಪ್ರದೇಶ ಲಡಾಖ್‌ಗೆ ಸೇರಿರುವ ಲೇಹ್‌ನ ಶೀತ ಪ್ರದೇಶಗಳಿಗೆ ಪ್ರಯಾಣಿಸಲು ಈಗ ಪ್ರವಾಸದಲ್ಲಿ ಹೆಚ್ಚುವರಿ ಎರಡು ದಿನಗಳ ಅಗತ್ಯವಿರುತ್ತದೆ.
ಇತ್ತೀಚಿನ ಸರಕಾರಿ ಆದೇಶಗಳ ಪ್ರಕಾರ, ಲೇಹ್‌ಗೆ ಪ್ರಯಾಣಿಸುವ ಪ್ರವಾಸಿಗರು ತಮ್ಮ ಮುಂದಿನ ಪ್ರವಾಸ ಆರಂಭಿಸುವ ಮೊದಲು 48 ಗಂಟೆಗಳ ಕಾಲ ಆರಂಭಿಕ ಘಟದಲ್ಲೇ ಉಳಿಯಬೇಕಾಗುತ್ತದೆ. ಅಲ್ಲಿನ ಶೀತಕ್ಕೆ ನಿಮ್ಮ ದೇಹ ಒಗ್ಗಿಕೊಳ್ಳುವುದೇ ಎಂಬುದನ್ನು ಅರಿತು, ಮುಂದಿನ ಪ್ರವಾಸಕ್ಕೆ ನಿಮಗೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ದೇಹ ಅಲ್ಲಿನ ಅತಿಯಾದ ಶೀತಕ್ಕೆ ಒಗ್ಗಿಕೊಳ್ಳದಿದ್ದರೆ, ಪ್ರವಾಸ ಅಲ್ಲೇ ಮೊಟಕುಗೊಳಿಸಿ ಹಿಂತಿರುಗಬೇಕಾಗುತ್ತದೆ.
ಈ ರೀತಿಯ ಕ್ರಮವು ಪ್ರವಾಸಿಗರಲ್ಲಿ ಪರ್ವತ ಕಾಯಿಲೆ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎನ್ನಲಾಗಿದೆ. ಪ್ರವಾಸಿಗರಲ್ಲಿ ಇತ್ತೀಚಿಗೆ ಪರ್ವತ ಕಾಯಿಲೆ ಹೆಚ್ಚಳದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಈ ಕ್ರಮ ಕೈಗೊಂಡಿದೆ.
ಪರ್ವತ ಕಾಯಿಲೆಯಿಂದ ಪ್ರವಾಸಿಗರು ದಿನಗಟ್ಟಲೇ ಆಸ್ಪತ್ರೆಗೆ ದಾಖಲಾದ ಅನೇಕ ಪ್ರಕರಣಗಳಿವೆ. ಲೇಹ್, ಲಡಾಖ್ ಸಮುದ್ರ ಮಟ್ಟದಿಂದ 3500 ಮೀಟರ್ ಎತ್ತರದಲ್ಲಿದೆ. ಪ್ರವಾಸಿಗರಿಗೆ ವಿಶೇಷವಾಗಿ ಹೆಲಿಕಾಪ್ಟರ್‌ಗಳಲ್ಲಿ ಪ್ರಯಾಣಿಸುವವರಿಗೆ ಪರ್ವತ ಕಾಯಿಲೆ ಸಾಮಾನ್ಯ ಸಮಸ್ಯೆಯಾಗಿದೆ.

ಅಧಿಕಾರಿಗಳು, ಏಜೆಂಟರ ಸಭೆ
ಲೇಹ್‌ನಲ್ಲಿ ಪ್ರವಾಸೋದ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇತ್ತೀಚಿಗೆ ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ತಾಶಿ ಗ್ಯಾಲ್ಸನ್, ವಿವಿಧ ಇಲಾಖೆಗಳ ಅಧಿಕಾರಿಗಳು, ಏಜೆಂಟರನ್ನು ಒಳಗೊಂಡ ಸಭೆಯನ್ನು ನಡೆಸಿದರು. ಅತಿ ಎತ್ತರದ ಜನಪ್ರಿಯ ಸ್ಥಳಗಳಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಉತ್ತಮವಾಗಿ ನಿಭಾಯಿಸಲು ಆರೋಗ್ಯ ಮೂಲಸೌಲಭ್ಯಗಳನ್ನು ಉನ್ನತೀಕರಿಸುವ ಅಗತ್ಯತೆಯ ಬಗ್ಗೆ ಅಧಿಕಾರಿಗಳು ಮತ್ತು ಏಜೆಂಟರು ಒತ್ತಿ ಹೇಳಿದರು.

ಏಜೆಂಟರು ಎಸ್ಒಪಿ ಪಾಲನೆ ಕಡ್ಡಾಯ
ಇದೇ ವೇಳೆ ಲೇಹ್‌ಗೆ ಪ್ರವಾಸಕ್ಕೆ ಬರುವ ಪ್ರವಾಸಿಗರ ಸೂಕ್ತ ನಿರ್ವಹಣೆ ನಿಟ್ಟಿನಲ್ಲಿ ಜಿಲ್ಲಾಡಳಿತ ರೂಪಿಸಿರುವ ಎಸ್ಒಪಿಗಳನ್ನು ಏಜೆಂಟರು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. ಪ್ರವಾಸೋದ್ಯಮವೇ ಲೇಹ್ ನ ಪ್ರಮುಖ ಉದ್ಯಮವಾಗಿದೆ. ಪ್ರವಾಸದ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಪ್ರವಾಸಿಗರನ್ನು ಸರಿಯಾಗಿ ನೋಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರಿಗೆ ಅರಿವು ಮೂಡಿಸಲು ಮಾಹಿತಿ, ಸಂವಹನ ಮತ್ತು ಶಿಕ್ಷಣದ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಶಿ ಗ್ಯಾಲ್ಸನ್ ಸೂಚಿಸಿದರು.

ಪರ್ವತ ಕಾಯಿಲೆ ಎಂದರೆ ಏನು ?
ಒಬ್ಬ ವ್ಯಕ್ತಿಯು ಅತಿ ಎತ್ತರದ ಸ್ಥಳಗಳನ್ನು ತಲುಪಿದಾಗ ಪರ್ವತ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆಮ್ಲಜನಕದ ಕೊರತೆ ಮತ್ತು ಕಡಿಮೆ ಗಾಳಿಯ ಒತ್ತಡವು ಆಯಾಸ, ಉಸಿರಾಟದ ತೊಂದರೆ, ತಲೆ ತಿರುಗುವಿಕೆ, ವಾಕರಿಕೆ, ಇತ್ಯಾದಿಗಳಿಗೆ ಕಾರಣವಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದು ಸಾಮಾನ್ಯವಾಗಿ ಎತ್ತರದ ಸ್ಥಳ ತಲುಪಿದ ಕೆಲವು ಗಂಟೆಗಳ ನಂತರ ಪ್ರಾರಂಭವಾಗುತ್ತದೆ.

ಪ್ರವಾಸಿಗರಿಗೆ ಸರಿಯಾದ ವಿಶ್ರಾಂತಿ ಅಗತ್ಯ
ಇಂತಹ ಅನನೂಕೂಲತೆಗಳನ್ನು ತಪ್ಪಿಸುವ ಸಲುವಾಗಿ ಸ್ಥಳೀಯ ಆಡಳಿತ, ಲೇಹ್ ಪ್ರವಾಸ ಆರಂಭಿಸುವ ಮೊದಲು 48 ಗಂಟೆಗಳ ಕಾಲ ಆರಂಭಿಕ ಘಟದಲ್ಲೇ ಉಳಿಯಬೇಕೆನ್ನುವ ನಿಯಮವನ್ನು ಜಾರಿಗೆ ತಂದಿದೆ. ಈ ಪ್ರದೇಶಕ್ಕೆ ಒಗ್ಗಿಕೊಳ್ಳಲು, ಆರಂಭಿಕ ಘಟ್ಟ ತಲುಪಿದ ನಂತರ ಸರಿಯಾದ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ದೇಹವು ಕಡಿಮೆ ಮಟ್ಟದ ಆಮ್ಲಜನಕಕ್ಕೆ ಹೊಂದಿಕೊಳ್ಳುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಲೇಹ್, ಲಡಾಖ್ ನ ಮುಂದಿನ ಪ್ರವಾಸವನ್ನು ಆನಂದಿಸಲು ಆ ವಾತಾವರಣಕ್ಕೆ ಮೊದಲು ಒಗ್ಗಿಕೊಳ್ಳುವುದು ಅಗತ್ಯವಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.












Click it and Unblock the Notifications