ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಹೋಗಲು ಇದು ಸರಿಯಾದ ಸಮಯ, ಆದ್ರೂ.. ಹುಷಾರ್!

ಒಂದು ಕಾಲದಲ್ಲಿ ಕಾನನದ ನಡುವೆ ಹುದುಗಿ ಹೋಗಿ ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರಿಂದ ದೂರವಾಗಿ ತನ್ನಪಾಡಿಗೆ ತಾನು ಎಂಬಂತೆ ಧುಮ್ಮಿಕ್ಕುತ್ತಿದ್ದ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಗ್ರಾಮದ ಜಲಪಾತ ಇವತ್ತು ತನ್ನ ಚೆಲುವನ್ನು ಎಲ್ಲಡೆ ಹರಡುವ ಮೂಲಕ ಕೊಡಗಿನ ಪ್ರಮುಖ ಜಲಪಾತವಾಗಿ ಗಮನಸೆಳೆಯುತ್ತಿದೆ.

ಒಂದೆರಡು ದಶಕಗಳ ಹಿಂದೆ ಈ ಜಲಪಾತದತ್ತ ತೆರಳುವುದೆಂದರೆ ಅದೊಂದು ಸಾಧನೆ ಎಂಬಂತಾಗಿತ್ತು. ಕಾರಣ ಸಮರ್ಪಕವಾದ ರಸ್ತೆಯಾಗಲೀ, ಜಲಪಾತದ ಬಗ್ಗೆ ಮಾಹಿತಿ ನೀಡುವವರಾಗಲೀ ಯಾರೂ ಇರಲಿಲ್ಲ. ಟ್ರಕ್ಕಿಂಗ್ ಬಂದವರಿಗೆ, ಸ್ಥಳೀಯರಿಗಷ್ಟೆ ಇದರ ಚೆಲುವು ಕಾಣಿಸುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮಲ್ಲಳ್ಳಿ ಜಲಪಾತ ಹೆಸರುವಾಸಿಯಾಗಿದ್ದು ನಿಸರ್ಗ ಪ್ರೇಮಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಬಹುಶಃ ಕೊಡಗಿನಲ್ಲಿರುವ ಇತರೆ ಜಲಪಾತಗಳಿಗೆ ಹೋಲಿಸಿದರೆ ಈ ಜಲಪಾತ ರುದ್ರರಮಣೀಯ ಸುಂದರ ಜಲಪಾತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲದೆ ದೂರದಿಂದ ನೋಡಿ ಹಿಂತಿರುಗುವವರಿಗೆ ಈ ಜಲಪಾತ ಅಪಾಯಕಾರಿಯಲ್ಲ. ಆದರೆ ಮೈಮರೆತು ಜಲಪಾತದ ಸನಿಹ ತೆರಳಿದವರಿಗೆ ಮಾತ್ರ ಇದು ಯಮಸ್ವರೂಪಿ ಎಂಬುದು ಈಗಾಗಲೇ ಸಾಬೀತಾಗಿದೆ. ಜಲಪಾತದ ಬಳಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡಿದ ಹೆಚ್ಚಿನವರನ್ನು ಈ ಜಲಪಾತ ಆಹುತಿ ತೆಗೆದುಕೊಂಡಿದೆ.

 150 ಅಡಿಯಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ

150 ಅಡಿಯಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ

ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿಯ ಕುಮಾರಪರ್ವತದ ನಡುವಿನ ಕುಮಾರಧಾರಾ ನದಿಯಿಂದ ಸೃಷ್ಟಿಯಾಗಿರುವ ಮಲ್ಲಳ್ಳಿ ಜಲಪಾತದ ಸೊಬಗಿಗೆ ಮನಸೋಲದವರಿಲ್ಲ. ಕರ್ರಗಿನ ಬೃಹತ್ ಬಂಡೆಗಳ ಮೇಲೆ ಬೆಳ್ಳಿಯೇ ಕರಗಿ ನೀರಾಗಿ ಹರಿಯುತ್ತದೆಯೇನೋ ಎಂಬಂತೆ ಭಾಸವಾಗುತ್ತದೆ. ಹಸಿರು ಹಚ್ಚಡವನ್ನು ಹೊದ್ದು ನಿಂತ ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ಚಿಕ್ಕ ಚಿಕ್ಕ ಜಲಪಾತಗಳನ್ನು ಸೃಷ್ಟಿ ಮಾಡಿ ಅಬ್ಬರಿಸುವ ಜಲಪಾತದ ನೋಟ ಮೈ ರೋಮಾಂಚನಗೊಳಿಸುತ್ತದೆ.

 ಕಡಿದಾದ ಹಾದಿಯಲ್ಲಿ ಜಾಗರೂಕತೆ ಮುಖ್ಯ

ಕಡಿದಾದ ಹಾದಿಯಲ್ಲಿ ಜಾಗರೂಕತೆ ಮುಖ್ಯ

ಜಲಧಾರೆ ಸೊಬಗನ್ನು ವೀಕ್ಷಿಸಲು ತೆರಳುವವರು ಜಲಧಾರೆಗೆ ಅನತಿ ದೂರದಲ್ಲಿರುವ ಮೈದಾನದಿಂದಲೇ ನಿಂತು ನೋಡಬಹುದು. ಇದಕ್ಕೆ ಅನುಕೂಲವಾಗುವಂತೆ ನಿಸರ್ಗವೇ ನಿರ್ಮಿಸಿದ ಹೆಬ್ಬಂಡೆಯ ವೀಕ್ಷಣಾ ಕಟ್ಟೆಯಿದೆ. ಅಲ್ಲಿಂದಲೇ ನಿಂತು ಜಲಧಾರೆಯ ಸೊಬಗನ್ನು ಸವಿಯಬಹುದಾಗಿದೆ. ಇನ್ನು ಇಲ್ಲಿಂದ ಕಡಿದಾದ ಹಾದಿಯಲ್ಲಿ ಜಾಗರೂಕತೆಯಿಂದ ಇಳಿದಿದ್ದೇ ಆದರೆ ಜಲಪಾತದ ತಳಭಾಗವನ್ನು ತಲುಪಬಹುದು. ಇಲ್ಲಿ ನಿಂತಿದ್ದೇ ಆದರೆ ಧುಮ್ಮಿಕ್ಕುವ ಶ್ವೇತಧಾರೆಯ ಸಿಂಚನ ಮೈಯ್ಯನ್ನು ಸ್ಪರ್ಶಿಸಿ ಪುಳಕಗೊಳಿಸುತ್ತದೆ. ಆದರೆ ಬಹಳಷ್ಟು ಮಂದಿ ಅಷ್ಟಕ್ಕೆ ತೃಪ್ತರಾಗದ ಸನಿಹಕ್ಕೆ ಹೋಗುವ ಪ್ರಯತ್ನ ಮಾಡುತ್ತಾರೆ. ಈ ವೇಳೆ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ.

 ಏಕಾಂತ ಬಯಸಿ ತೆರಳುವವರೇ ಹೆಚ್ಚು

ಏಕಾಂತ ಬಯಸಿ ತೆರಳುವವರೇ ಹೆಚ್ಚು

ಇತರೆ ಜಲಪಾತಗಳಂತೆ ಈ ಜಲಪಾತ ಪಟ್ಟಣಕ್ಕೆ ಸಮೀಪದಲ್ಲಿಲ್ಲ. ಜತೆಗೆ ಪ್ರವಾಸಿಗರು ಕೂಡ ದಂಡು ದಂಡಾಗಿ ಬರುವುದಿಲ್ಲ. ಜೊತೆಗೆ ಹತ್ತಿರದಲ್ಲಿ ಮನೆಗಳು ವಿರಳವಾಗಿರುವುದರಿಂದ ಏನಾದರೂ ಅಪಾಯ ಸಂಭವಿಸಿದರೆ ತಕ್ಷಣಕ್ಕೆ ರಕ್ಷಿಸಲು ಯಾರೂ ಇರುವುದಿಲ್ಲ. ಹೆಚ್ಚಿನವರು ಏಕಾಂತ ಬಯಸಿ ಇಲ್ಲಿಗೆ ತೆರಳುತ್ತಾರೆಯಾದರೂ ಕೆಲವೊಮ್ಮೆ ಅತಿರೇಕದ ವರ್ತನೆಯಿಂದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆದ್ದರಿಂದ ಜಲಪಾತದತ್ತ ತೆರಳುವವರು ದೂರದಿಂದಲೇ ಸೊಬಗನ್ನು ಸವಿದು ಬರುವ ಸಂಕಲ್ಪ ಮಾಡಿಕೊಂಡು ಹೊರಟರೆ ಒಳ್ಳೆಯದು.

 ಕೊಡಗಿನ ಮಟ್ಟಿಗೆ ಇದು ಅತಿದೊಡ್ಡ ಜಲಪಾತ

ಕೊಡಗಿನ ಮಟ್ಟಿಗೆ ಇದು ಅತಿದೊಡ್ಡ ಜಲಪಾತ

ಇನ್ನು ಮಲ್ಲಳ್ಳಿ ಜಲಪಾತದ ಬಗ್ಗೆ ಹೇಳಬೇಕೆಂದರೆ ಕೊಡಗಿನ ಮಟ್ಟಿಗೆ ಇದು ಅತಿದೊಡ್ಡ ಜಲಪಾತ. ಬಹುಶಃ ಪಟ್ಟಣಕ್ಕೆ ಹತ್ತಿರವಿದ್ದಿದ್ದರೆ ಇನ್ನಷ್ಟು ಖ್ಯಾತಿ ಪಡೆಯುವುದರೊಂದಿಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿತ್ತೇನೋ? ಆದರೂ ಪ್ರವಾಸಿಗರು ಇತ್ತ ಬರುತ್ತಲೇ ಇರುತ್ತಾರೆ. ಈಗ ಈ ಜಲಪಾತದತ್ತ ತೆರಳಲು ಸೂಕ್ತ ಸಮಯವಾಗಿದೆ. ಮಲ್ಲಳ್ಳಿ ಜಲಪಾತವನ್ನು ಮಲ್ಲಳ್ಳಿ ಅಬ್ಬಿ, ಪುಷ್ಪಹಾರಿ ಜಲಧಾರೆ, ಕುಮಾರಧಾರಾ ಜಲಧಾರೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಸ್ಥಳೀಯರು ಮಲ್ಲಳ್ಳಿ ಹೊಳೆ, ಹೆಗ್ಗಡೆಮನೆ ಹೊಳೆ ಎಂಬುವುದಾಗಿಯೂ ಕರೆಯುವುದಿದೆ. ಇದರ ವೈಶಿಷ್ಟ್ಯತೆ ಏನೆಂದರೆ ಜಿಲ್ಲೆಯಲ್ಲಿರುವ ಇತರೆ ನದಿಗಳು ಪೂರ್ವದಿಕ್ಕಿಗೆ ಹರಿದು ಕಾವೇರಿಯೊಂದಿಗೆ ಸಂಗಮವಾಗಿ ಬಂಗಾಳಕೊಲ್ಲಿ ಸೇರಿದರೆ, ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

 ಜಲಪಾತಕ್ಕೆ ತೆರಳುವುದೇಗೆ?

ಜಲಪಾತಕ್ಕೆ ತೆರಳುವುದೇಗೆ?

ಜಲಪಾತವನ್ನು ವೀಕ್ಷಿಸಲು ತೆರಳುವವರು ಹಗಲು ಹೊತ್ತಿನಲ್ಲಿಯೇ ಹೋಗಿ ಬರುವ ಪ್ರಯತ್ನ ಮಾಡುವುದು ಒಳ್ಳೆಯದು, ಆಹಾರ ಪದಾರ್ಥಗಳನ್ನು ಜೊತೆಯಲ್ಲಿಯೇ ಕೊಂಡೊಯ್ದರೆ ಉತ್ತಮ ಜಲಪಾತದ ಸೌಂದರ್ಯಕ್ಕೆ ಮಾರು ಹೋಗಿ ಸನಿಹಕ್ಕೆ ಹೋಗುವ ಪ್ರಯತ್ನವನ್ನಂತೂ ಮಾಡಲೇ ಬೇಡಿ. ಮಲ್ಲಳ್ಳಿ ಜಲಧಾರೆಯನ್ನು ವೀಕ್ಷಿಸಲು ತೆರಳುವವರು ಕೊಡಗಿನ ತಾಲ್ಲೂಕು ಕೇಂದ್ರಗಳಲ್ಲೊಂದಾದ ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು ಇಪ್ಪತ್ತು ಕಿ.ಮೀ. ತೆರಳಿದರೆ ಹಂಚಿನಳ್ಳಿ ಗ್ರಾಮ ಸಿಗುತ್ತದೆ. ಇಲ್ಲಿಂದ ಬಲಕ್ಕೆ ಮಣ್ಣು ರಸ್ತೆಯಲ್ಲಿ ತೆರಳಿದರೆ ಜಲಪಾತದ ಬಳಿಗೆ ತೆರಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+