LPG vs PNG: ಉಡುಪಿಯಲ್ಲಿ PNG ಪೈಪ್‌ಲೈನ್ ಗೊಂದಲ: LPG ಸೇವೆ ನಿಲ್ಲುತ್ತದೆಯೇ: ರಾಜಾರಾಂ ತಲ್ಲೂರು ಬರಹ

LPG vs PNG: ಉಡುಪಿಯ ಮೂಗು ಒತ್ತಿ ಬಾಯಿ ಕಳೆಸುತ್ತಿದೆಯೆ PNG ಪೈಪ್‌ಲೈನ್: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಗಲ್ಫ್ ಯುದ್ಧದ ಹೆಸರಿನಲ್ಲಿ, ಉಡುಪಿ ನಗರದ ಒಳಗೆ ಅಡುಗೆಗೆ ಪೈಪ್ ಮೂಲಕ ಹರಿಸುವ ನೈಸರ್ಗಿಕ ಅನಿಲ (PNG) ಸರಬರಾಜು ಇಲ್ಲಿನ ನಾಗರಿಕರು ಕಡ್ಡಾಯ ಪಡೆಯಬೇಕೆಂದು ಒತ್ತಾಯ - ಒತ್ತಡ ಶುರುವಾದಂತಿದೆ. ಒಂದು ಏರಿಯಾದಲ್ಲಿ PNG ಪೈಪ್ ಲೈನ್ ಆದ ಬಳಿಕ, ಅಲ್ಲಿಗೆ ಸಾಂಪ್ರದಾಯಿಕ ಲಿಕ್ವಿಡ್ ಪೆಟ್ರೋಲಿಯಂ ಅನಿಲ (LPG) ಸರಬರಾಜು ನಿಲ್ಲಿಸಲಾಗುತ್ತದೆ ಎಂಬ ವದಂತಿ ಕೂಡ ಹರಡುತ್ತಿದೆ.

LPG vs PNG

ಏನಿದರ ಹಿನ್ನೆಲೆ ಎಂದು ಹುಡುಕಿದಾಗ ಸಿಕ್ಕಿದ ಮಾಹಿತಿ ಇಷ್ಟು:

2018ರಲ್ಲಿ (13-10-2018) ಅದಾನಿ ಗ್ಯಾಸ್ ಲಿಮಿಟೆಡ್ ಎಂಬ ಸಂಸ್ಥೆಗೆ ಉಡುಪಿ ನಗರದ ಒಳಗೆ ಮನೆಮನೆಗಳಿಗೆ PNG ಸರಬರಾಜು ಮಾಡುವ 25 ವರ್ಷಗಳ ಎಕ್ಸ್‌ಕ್ಲೂಸಿವ್ ಗುತ್ತಿಗೆ ಸಿಕ್ಕಿದೆ. ಈ ಆಥೊರೈಸೇಷನ್ ಪತ್ರದ ಅನ್ವಯ, ಎಂಟು ವರ್ಷಗಳ ಒಳಗೆ ಉಡುಪಿ ಜಿಲ್ಲೆಯಲ್ಲಿಈ ಸಂಸ್ಥೆ 1,10,099 ಮನೆಗಳಿಗೆ PNG ಸರಬರಾಜು ಸಂಪರ್ಕ ನೀಡಬೇಕಿದೆ. ಇದಕ್ಕೆ ಅಂತಿಮ ದಿನಾಂಕ 13-10-2026. ಅಂದರೆ, ಈ ವರ್ಷದ ಅಂತ್ಯ. ಇಲ್ಲಿಯ ತನಕ ಬಹಿರಂಗವಾಗಿ ಏನೂ ಸದ್ದಿಲ್ಲದೆ ಇದ್ದ ಸಂಸ್ಥೆ ಈಗ ಏಕಾಏಕಿ ಸ್ಥಳೀಯವಾಗಿ ಡೀಲರ್ ನೇಮಿಸಿ, ನಗರದ ಕಾಲೊನಿಗಳಲ್ಲಿ ಭರದಿಂದ ಪೈಪ್ ಲೈನ್ ಸಂಪರ್ಕ ನೀಡಲಾರಂಭಿಸಿದೆ. ಅಂಬಲಪಾಡಿಯ ನಮ್ಮ ಕಾಲನಿಯಲ್ಲಿ ಒಂದು ವಾರದಿಂದ ಈ ಕೆಲಸ ನಡೆದಿದೆ.

ಆಸಕ್ತಿ ಇರುವವರು ಪೈಪ್‍ಲೈನ್ ಹಾಕಿಸಿಕೊಳ್ಳುವುದಕ್ಕೆ ಏನೂ ತೊಂದರೆ ಇಲ್ಲ. ಅವರ ಇಷ್ಟ. ಸಂಪರ್ಕಕ್ಕೆ 300 ರೂ.ಗಳ ನೋಂದಣಿ ಶುಲ್ಕವಿದೆ. ಆದರೆ, ಖಾಸಗಿ ಸಂಸ್ಥೆಯೊಂದು, ನಮ್ಮ PNG ಗ್ಯಾಸ್ ಸಂಪರ್ಕ ಒಂದು ಪ್ರದೇಶಕ್ಕೆ ಬಂದ ಬಳಿಕ, ಅಲ್ಲಿಗೆ ಮುಂದೆ LPG ಸಂಪರ್ಕ ಇಲ್ಲ ಎಂದು ಹೇಳುತ್ತಿರುವುದು ಅಧಿಕೃತ ಎಂದಾದರೆ, ಅದು ಆತಂಕಕಾರಿ. ಹಾಗೆಂದು ಅವರ ಗುತ್ತಿಗೆಯಲ್ಲಿ ಹೇಳಲಾಗಿದೆಯೆ ಅಥವಾ ಸರ್ಕಾರ ನಿಯಮ ರೂಪಿಸಿದೆಯೆ? ಈ ಬಗ್ಗೆ ಗುತ್ತಿಗೆ ಹೊಂದಿರುವವರು ಪಾರದರ್ಶಕವಾಗಿರಬೇಕಲ್ಲವೆ?

ನಾನು ಓದಿ ತಿಳಿದಿರುವ ಪ್ರಕಾರ, ಅಪಾರ್ಟ್‌ಮೆಂಟ್‌ಗಳಲ್ಲಿ ಈಗಾಗಲೇ PNG ಸಂಪರ್ಕ ಇದ್ದರೆ, ಅಂತಹ ಅಪಾರ್ಟ್‌ಮೆಂಟ್‌ಗಳಿಗೆ LPG ಸರಬರಾಜು ನಿಲ್ಲಿಸಲಾಗುವುದು ಎಂದು ಸರ್ಕಾರ ಯುದ್ಧಕಾಲದಲ್ಲಿ ತುರ್ತು ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಿ, LPG ಸರಬರಾಜು ಒತ್ತಡ ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಹೇಳಿತ್ತು. ವರ್ಟಿಕಲ್ ಅಪಾರ್ಟ್‌ಮೆಂಟ್‌ಗಳಲ್ಲಿ ಈ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಲ್ಯಾಟರಲಿ ಹಬ್ಬಿರುವ ಕಾಲನಿಗಳಲ್ಲೂ ಈ ನಿಯಮ ಅನ್ವಯವಾಗುತ್ತದೆಯೆ? ಪೈಪ್ ಲೈನಿನಲ್ಲೂ ಒಂದು ಕನಿಷ್ಠ ದೂರದ ಬಳಿಕ, ವೆಚ್ಚ ವಿಧಿಸಲಾಗುತ್ತದೆಯಂತೆ. ಇದು ದೂರದೂರ ಮನೆಗಳಿರುವ ಕಾಲನಿಗೆ ಅನಗತ್ಯ ಹೊರೆ ಅಲ್ಲವೆ?

ಉಡುಪಿಯಲ್ಲಿ ಈ ಪೈಪ್‌ಲೈನ್ ಇನ್ನಷ್ಟೇ ಆಗಬೇಕಿದ್ದು, ಅದಕ್ಕಾಗಿ ನಗರಪಾಲಿಕೆ ರಸ್ತೆಗಳನ್ನು ಅಗೆದುಹಾಕಿದರೆ, ಅದನ್ನು ಸರಿಪಡಿಸುವ ಹೊಣೆ ಯಾರದು? ನನಗೆ ಈ ಚಿಂತೆ ಯಾಕಿದೆ ಎಂದರೆ ಎರಡು ವರ್ಷಗಳ ಸತತ ಪ್ರಯತ್ನದ ಬಳಿಕ, ಕಳೆದ ವಾರವಷ್ಟೇ ನಮ್ಮ ಲೇಔಟ್ ರಸ್ತೆ ತಾರು ಕಂಡಿದೆ! ಸಂಬಂಧಿಸಿದವರಲ್ಲಿ ಕೇಳಿದರೆ, ತಾವು ನಗರಪಾಲಿಕೆಗೆ ಹಣ ತೆತ್ತು, ಒಪ್ಪಂದ ಮಾಡಿಕೊಂಡು ಲೈನ್ ಎಳೆಯಲಿದ್ದೇವೆ. ಮರು ತಾರು ಹಾಕುವುದು ತಮ್ಮ ಜವಾಬ್ದಾರಿ ಅಲ್ಲ ಎಂದು ಹೇಳುತ್ತಿದ್ದಾರಂತೆ!
ಈ ರೀತಿ ಖಾಸಗಿ ಸಂಸ್ಥೆಗಳವರು "ಎಕ್ಸ್‌ಕ್ಲೂಸಿವ್ ಹಕ್ಕು ಪಡೆದು" ಹೊಕ್ಕುವಾಗಲೇ ಹೀಗಾದರೆ, ಇನ್ನು ನಾವು ಅವರ ಮೇಲೆ ಸಂಪೂರ್ಣ ಅವಲಂಬಿತರಾದಾಗ ಹೇಗಿರಬಹುದು? ಊಹಿಸಿದರೆ ಆತಂಕ ಆಗುತ್ತದೆ. ಸಂಬಂಧಪಟ್ಟವರು ದಯವಿಟ್ಟು ಇತ್ತ ಗಮನ ಹರಿಸಬೇಕು.

ಬರಹ: ರಾಜಾರಾಂ ತಲ್ಲೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+