Tirupati Laddu: ತಿರುಪತಿಯಲ್ಲಿ ರಾಮಲಲ್ಲನಿಗಾಗಿ ಲಡ್ಡು ತಯಾರಿಕೆ ಆರಂಭ
ತಿರುಪತಿ ಜನವರಿ 19: ವಿಶ್ವವಿಖ್ಯಾತ ತಿರುಪತಿ ಟ್ರಸ್ಟ್ ಜನವರಿ 22ರಂದು ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಿತರಿಸಲು ಉದ್ದೇಶಿಸಿರುವ ಒಂದು ಲಕ್ಷ ಲಡ್ಡುಗಳ ತಯಾರಿಕೆಯಲ್ಲಿ ಮುಳುಗಿದೆ.
ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಶ್ರೀಮಂತ ಹಿಂದೂ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ತಾನಂ ಟ್ರಸ್ಟ್ ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜಗತ್ತಿನಾದ್ಯಂತದ ಭಕ್ತರಿಗೆ ಒಂದು ಲಕ್ಷ ವಿಶ್ವ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ವಿತರಿಸುವ ಯೋಜನೆಯನ್ನು ಪ್ರಕಟಿಸಿತ್ತು. ಅದರ ನಿರ್ಧಾರಕ್ಕೆ ಅನುಗುಣವಾಗಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ವಿ ವೀರಬ್ರಹ್ಮಮ್ ನೇತೃತ್ವದ ತಿರುಪತಿ ಟ್ರಸ್ಟ್ ಒಂದು ಲಕ್ಷ ಲಡ್ಡುಗಳ ತಯಾರಿ ಆರಂಭಿಸಿದೆ.

ವೀರಬ್ರಹ್ಮ ಅವರ ಪ್ರಕಾರ, ಟಿಟಿಡಿಯ ದೇವಾಲಯದ ಅಡುಗೆ ಕೆಲಸಗಾರರು ಮತ್ತು ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುಮಾರು 350 ಶ್ರೀವಾರಿ ಸೇವಕರು ಒಂದು ಲಕ್ಷ ಲಡ್ಡುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೀರಬ್ರಹ್ಮಮ್ ಅವರು, "ಶ್ರೀರಾಮ ಮತ್ತು ವೆಂಕಟೇಶ್ವರ ಇಬ್ಬರೂ ಶ್ರೀ ಮಹಾವಿಷ್ಣುವಿನ ಅವತಾರಗಳಾಗಿದ್ದು, ನಮ್ಮ ಟ್ರಸ್ಟ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಇಒ ಎವಿ ಧರ್ಮಾ ರೆಡ್ಡಿ ನೇತೃತ್ವದಲ್ಲಿ ಅಯೋಧ್ಯೆ ದೇವಸ್ಥಾನದಲ್ಲಿ ಐತಿಹಾಸಿಕ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಒಂದು ಲಕ್ಷ ತಿರುಪತಿ ಲಡ್ಡುಗಳನ್ನು ವಿತರಿಸಲು ನಿರ್ಧರಿಸಿದೆ. ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಈ ಲಡ್ಡುಗಳು ಅಯೋಧ್ಯೆ ತಲುಪಲಿವೆ" ಎಂದು ಹೇಳಿದರು.
ಪ್ರತಿ ಲಡ್ಡು ಸುಮಾರು 25 ಗ್ರಾಂ ತೂಗುತ್ತದೆ. ರಾಮಭಕ್ತರಿಗೆ ವಿತರಿಸಲು ಅವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಪ್ಯಾಕ್ ಮಾಡಲಾಗುವುದು ಎಂದು ಟಿಟಿಡಿ ಮೂಲಗಳು ತಿಳಿಸಿವೆ. ತಿರುಪತಿ ಟ್ರಸ್ಟ್ ಜನವರಿ 20 ರಂದು ತಿರುಮಲದಿಂದ ಒಂದು ಲಕ್ಷ ಲಡ್ಡುಗಳನ್ನು ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಎರಡು ದಿನಗಳ ಮೊದಲು ರವಾನಿಸಲು ಯೋಜಿಸಿದೆ.
ತಿರುಪತಿ ಲಡ್ಡು
ತಿರುಪತಿ ಲಡ್ಡು ಅಥವಾ ಶ್ರೀವಾರಿ ಲಡ್ಡು ಭಾರತದ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ನೈವೇದ್ಯವಾಗಿ ನೀಡುವ ಸಿಹಿ. ಇದನ್ನು ಹಿಟ್ಟು, ಸಕ್ಕರೆ ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಏಳು ಬೆಟ್ಟದೊಡೆಯ, ಭಾರತದ ಶ್ರೀಮಂತ ದೇಗುಲಗಳಲ್ಲೊಂದಾದ ತಿರುಪತಿಯ ದರ್ಶನಕ್ಕೆ ದೇಶ-ವಿದೇಶದಿಂದ ಭಕ್ತರು ಬರ್ತಾರೆ. ತಿಮ್ಮಪ್ಪನ ಸನ್ನಿಧಿ ಎಷ್ಟು ವೈಶಿಷ್ಯ ಹೊಂದಿದ್ಯೋ ಅಷ್ಟೇ ಏಳುಕೊಂಡಲವಾಡನ ದರ್ಶನ ಪಡೆದ ಬಳಿಕ ಕೊಡೋ ಲಡ್ಡು ಕೂಡ ವಿಶ್ವದಾದ್ಯಂತ ಪ್ರಸಿದ್ಧ. ತಿಮ್ಮಪ್ಪನ ದರ್ಶನದ ಬಳಿಕ ಭಕ್ತರಿಗೆ ಈ ಲಡ್ಡಿ ವಿತರಿಸಲಾಗುತ್ತದೆ.

ಸುಮಾರು 308 ವರ್ಷದಿಂದ ವೆಂಕಟರಮಣನಿಗೆ ಲಡ್ಡು ನೈವೇದ್ಯವಾಗಿ ತಯಾರಿಸಲಾಗುತ್ತದೆ. ಈ ಲಡ್ಡು ಪಡೆದರೆ ಮಾತ್ರ ತಿಮ್ಮಪ್ಪನ ದರ್ಶನ ಪೂರ್ಣವಾದಂತೆ ಎಂದು ನಂಬಲಾಗಿದೆ. ದಿನವೊಂದಕ್ಕೆ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಲಡ್ಡುಗಳು ತಯಾರಾಗಿ ವಿತರಿಸಲ್ಪಡುತ್ತದೆ. ಓರ್ವ ಭಕ್ತ ಸರಾಸರಿ ನಾಲ್ಕು ಲಡ್ಡು ಕೊಂಡೊಯುತ್ತಾನೆ ಎಂದು ಅಂದಾಜಿಸಲಾಗಿದೆ.












Click it and Unblock the Notifications