Ladakh Tour By Auto: ಬೆಂಗಳೂರು ಆಟೋ ಚಾಲಕನ ಅಚ್ಚರಿಯ ಸಾಧನೆ: ರಿಕ್ಷಾದಲ್ಲೇ 7,500 ಕಿ.ಮೀ ಸಾಗಿ ಲಡಾಖ್‌ಗೆ!
Ladakh Tour By Auto:ಆಟೋ ಚಾಲಕರು ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅಂದರೆ ಸ್ವಲ್ಪ ದೂರ ಹೋಗಬೇಕು ಅಂದ್ರೂ ಸಾವಿರ ಕಾರಣ ಕೊಡ್ತಾರೆ. ಹೇಳಿದ ಜಾಗಕ್ಕೆ ಬರೋದಕ್ಕೆ ಒಪ್ಪಲ್ಲ. ದುಡ್ಡು ಜಾಸ್ತಿ ಕೊಡುತ್ತೇವೆ ಅಂದರೂ ಕೆಲವರಂತೂ ಒಪ್ಪುವುದೇ ಇಲ್ಲ. ಅಂಥದ್ದರಲ್ಲಿ 35 ವರ್ಷದ ಬಾಲಕೃಷ್ಣ ಮೋಹನ್ ತಮ್ಮ ಆಟೋದಲ್ಲಿ ಲಡಾಖ್ ವರೆಗೆ ಹೋಗೋಕ್ಕೆ ನಿರ್ಧಾರ ಮಾಡಿದ್ದಾರೆ.
ಹೀಗೆ ನಿರ್ಧಾರ ಮಾಡಿದ್ದೇ ತಡ ತನ್ನ ಬಂಡಿ ಏರಿಕೊಂಡು ಲಡಾಕ್‌ನತ್ತ ಹೊರಟಿದ್ದಾರೆ. 24 ದಿನಗಳಲ್ಲಿ, ಸುಮಾರು 7,500 ಕಿ.ಮೀ. ದೂರವನ್ನು ಆಟೋದಲ್ಲೇ ಕ್ರಮಿಸಿದ್ದಾರೆ. 19,024 ಅಡಿ ಎತ್ತರವಿರುವ ವಿಶ್ವದ ಅತಿ ಎತ್ತರದ ಪ್ರದೇಶಗಳಲಿ ಒಂದಾದ ಉಮ್ಲಿಂಗ್ ಲಾವನ್ನು ಆಟೋದಲ್ಲಿ ಸಂಚರಿಸುವ ಮೂಲಕವೇ ತಲುಪಿದ್ದಾರೆ.

ಉಮ್ಲಿಂಗ್ ಲಾದಲ್ಲಿ ಬೇರೆ ರಾಜ್ಯಗಳ ಆಟೋಗಳು ಸೇರಿದಂತೆ ವಿವಿಧ ರೀತಿಯ ವಾಹನಗಳ ವೀಡಿಯೊಗಳನ್ನು ಬಾಲಕೃಷ್ಣ ಮೋಹನ್ ನೋಡುತ್ತಿದ್ದರಂತೆ. ಆಗ ತಾನೂ ಕೂಡಾ ಕರ್ನಾಟಕವನ್ನು ಪ್ರತಿನಿಧಿಸುತ್ತಾ ಆಟೋದಲ್ಲಿ ಅಲ್ಲಿಗೆ ಹೋಗಬೇಕು ಅಂದುಕೊಂಡಿದ್ದರಂತೆ. ಈ ಮೂಲಕ ಬೆಂಗಳೂರಿನಿಂದ ಉಮ್ಲಿಂಗ್ ಲಾ ತಲುಪಿ ಮನೆಗೆ ವಾಪಾಸ್ ಆದ ಮೊದಲ ಆಟೋರಿಕ್ಷಾ ತಮ್ಮದು ಎನ್ನುವ ಹೆಗ್ಗಳಿಕೆ ಬಾಲಕೃಷ್ಣ ಮೋಹನ್ ಅವರದ್ದು.
Ladakh Tour By Auto: ವಿಧಾನಸೌಧದಿಂದ ಆಟೋ ಲಡಾಖ್‌ನತ್ತ
ಬಾಲಕೃಷ್ಣ ಲಡಾಖ್‌ಗೆ ಪ್ರಯಾಣ ಬೆಳೆಸುವ ಮುನ್ನ ಕೆಲವು ವಾರಗಳ ತಯಾರಿ ನಡೆಸಿದ್ದಾರೆ. ತಮ್ಮ ಆಟೋವನ್ನು ಮಾರಿ ಸೆಕೆಂಡ್ ಹ್ಯಾಂಡ್ ಆಟೋವನ್ನು ಖರೀದಿಸಿದ್ದಾರೆ. ಅದರ ನೋಂದಣಿ ಫಲಕವನ್ನು ಹಳದಿ ಬಣ್ಣದಿಂದ ಬಿಳಿ ಬಣ್ಣಕ್ಕೆ ಬದಲಾಯಿಸಿಕೊಂಡಿದ್ದಾರೆ. ಯಾಕೆಂದರೆ ಈ ಹೊಸ ಆಟೋವನ್ನು ಅವರು ಖಾಸಗಿ ಬಳಕೆಗೆ ತೆಗೆದುಕೊಂಡಿದ್ದರು. ಇದಕ್ಕಾಗಿ ಸಾಲ ಕೂಡಾ ಮಾಡಿದ್ದಾರೆ. ಅನಗತ್ಯ ಖರ್ಚುಗಳನ್ನು ಮಾಡಬಾರದು ಎನ್ನುವ ಉದ್ದೇಶವೂ ಅವರದ್ದಾಗಿತ್ತು. ಟೆಂಟ್, ಸ್ಲೀಪಿಂಗ್ ಬ್ಯಾಗ್ ಮತ್ತು ಇತರ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ, ಆಗಸ್ಟ್ 1 ರಂದು ವಿಧಾನಸೌಧದಿಂದ ಅವರ ಆಟೋ ಲಡಾಖ್‌ನತ್ತ ಪ್ರಯಾಣ ಬೆಳೆಸಿದೆ. ಸ್ನೇಹಿತರು ಮತ್ತು ಹಿತೈಷಿಗಳು ಸೇರಿ ಬಾಲಕೃಷ್ಣ ಮೋಹನ್ ಅವರನ್ನು ಪ್ರೀತಿಯಿಂದ ಹಾರೈಸಿ ಕಳುಹಿಸಿ ಕೊಟ್ಟಿದ್ದಾರೆ.
ಇವರು ಹೈದರಾಬಾದ್ ಮಾರ್ಗದ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಆಗ್ರಾ, ಜಮ್ಮು ಮತ್ತು ಕಾಶ್ಮೀರ ಮತ್ತು ನಂತರ ಲೇಹ್ ತಲುಪಿದ್ದಾರೆ. ಲೇಹ್‌ನಿಂದ ಅವರು ಖರ್ದುಂಗ್ ಲಾಗೆ ತೆರಳಿದರು. ನಂತರ ನುಬ್ರಾಗೆ ಹೋಗುವ ಪ್ಲಾನ್ ಅವಾರದ್ದಾಗಿತ್ತು. ಆದರೆ ಭೂಕುಸಿತದಿಂದಾಗಿ ಅಲ್ಲಿಂದ ವಾಪಾಸಬೇಕಾಯಿತು. ನಂತರ ಅವರು ಹ್ಯಾನ್ಲೆಗೆ ಹೋಗಿ ಅಂತಿಮವಾಗಿ ಉಮ್ಲಿಂಗ್ ಲಾ ತಲುಪಿದ್ದಾರೆ. ಇದಕ್ಕೂ ಮುನ್ನ ಅವರು ಪ್ಯಾಂಗೊಂಗ್ ಸರೋವರ ಮತ್ತು ಚಾಂಗ್ ಲಾಗೂ ಹೋಗಿದ್ದಾರೆ.
ತಾನು ಇಲ್ಲಿಗೆ ಬಂದ ಕ್ಷಣ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ಆಟೋರಿಕ್ಷಾದಲ್ಲಿ ನಾನು ಇಲ್ಲಿಗೆ ಬರುವ ಸಾಧನೆ ಮಾಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಬರುತ್ತಿರುವ ದಾರಿಯಲ್ಲಿ ಹಳ್ಳಗಳಲ್ಲಿ ಬಿದ್ದಿದ್ದ ಹಲವಾರು ವಾಹನಗಳನ್ನು ನೋಡಿದ್ದಾರೆ. ಇದರಿಂದ ಸ್ವಲ್ಪ ಹೆದರಿಕೆ ಆದರೂ ಮತ್ತೆ ಧೈರ್ಯ ಮಾಡಿಕೊಂಡು ತನ್ನ ಗುರಿ ತಲುಪಿದ್ದಾರೆ.
ಲಡಾಖ್‌ನಲ್ಲಿ ಕರ್ನಾಟಕದ ಪತಾಕೆ
ಲಡಾಖ್‌ನಲ್ಲಿ ಕರ್ನಾಟಕದ ಪತಾಕೆಯನ್ನು ಹಾರಿಸುವುದು ಕೂಡಾ ಬಾಲಕೃಷ್ಣ ಅವರ ಬಯಕೆಯಾಗಿತ್ತು. ಅಲ್ಲಿನ ಅನೇಕರಿಗೆ ನಮ್ಮ ರಾಜ್ಯದ ಬಗ್ಗೆ ತಿಳಿದಿರಲಿಲ್ಲ. ನಮ್ಮ ಅದ್ಭುತ ರಾಜ್ಯದ ಬಗ್ಗೆ ಅಲ್ಲಿಯವರಿಗೆ ತಿಳಿಸುವುದು ಅವರ ಉದ್ದೇಶವಾಗಿತ್ತು. ಈ ಉದ್ದೇಶವನ್ನು ಇಟ್ಟುಕೊಂಡೇ ಅವರು ಚಾಂಗ್ ಲಾ ಮತ್ತು ಫೋಟು ಲಾವನ್ನು ಹತ್ತಿದ್ದಾರೆ.
ಈ ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಉಮ್ಲಿಂಗ್ ಲಾ ಬಳಿ, ಮಳೆಯ ಕಾರಣದಿಂದ ದಾರಿ ತಪ್ಪಿ 13 ಕಿ.ಮೀ.ವರೆಗೆ ತಪ್ಪು ದಿಕ್ಕಿನಲ್ಲಿ ಹೋಗಿದ್ದಾರೆ.ಒಂದು ಹಂತದಲ್ಲಿ ಬಹುತೇಕ ನಿರ್ಬಂಧಿತ ಗಡಿ ಪ್ರದೇಶವನ್ನು ತಲುಪಿದ್ದಾರೆ. ಆದರೆ, ಸ್ಥಳೀಯರು ಅವರಿಗೆ ಸಹಾಯ ಮಾಡಿದ್ದಾರೆ. ಆರಂಭದಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ತನ್ನ ಟೆಂಟ್ ಹಾಕಿ ಮಲಗುವ ಯೋಚನೆ ಅವರದ್ದಾಗಿತ್ತು ಆದರೆ, ಅಲ್ಲೂ ಕಳ್ಳರ ಕಾಟ ತಪ್ಪಿಲ್ಲ. ಹಾಗಾಗಿ ಮಲಗುವುದಕ್ಕೆ ಹಾಸ್ಟೆಲ್‌ಗಳಿಗೆ ಹೋಗಬೇಕಾಯಿತು.
ಲಡಾಖ್‌ನಲ್ಲಿರುವ ಕನ್ನಡಿಗರಿಗೆ ಕೃತಜ್ಞತೆ
ಅವರದ್ದು ಸಿಎನ್‌ಜಿ ಆಟೋ. ಆದರೆ ಜಮ್ಮುವಿನಿಂದ ಸಿಎನ್‌ಜಿ ಸ್ಟೇಷನ್‌ಗಳು ಇಲ್ಲದ ಕಾರಣ ಪೆಟ್ರೋಲ್ ಅನ್ನು ಅವಲಂಬಿಸಬೇಕಾಯಿತು. ಕಷ್ಟಕರ ಪ್ರದೇಶಗಳಲ್ಲಿ ಸಹಾಯ ಮಾಡಿದ್ದಕ್ಕಾಗಿ ಅವರು ಸೇನಾ ಸಿಬ್ಬಂದಿ ಮತ್ತು ಲಡಾಖ್‌ನಲ್ಲಿರುವ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇವರ ಪ್ರಯಾಣದ ಉದ್ದಕ್ಕೂ ಸೇನಾ ಸಿಬ್ಬಂದಿ ಸರಿಯಾದ ಮಾರ್ಗದರ್ಶನ ನೀಡಿದ್ದಾರೆ. ಸಂಚಾರದಿಂದ ಹಿಡಿದು ಕಠಿಣ ತಿರುವುಗಳಲ್ಲಿ ಕೂಡಾ ಸಹಾಯ ಮಾಡಿದ್ದಾರೆ. ಅಲ್ಲಿ ಭೇಟಿಯಾದ ಪ್ರತಿಯೊಬ್ಬ ಕನ್ನಡಿಗನೂ ಅವರ ಪೋನ್ ನಂಬರ್ ಕೊಟ್ಟು ಸಹಾಯ ಬೇಕಾದರೆ ಕಾಂಟೆಕ್ಟ್ ಮಾಡುವಂತೆ ಹೇಳಿದ್ದಾರೆ ಎಂದು ಬಾಲಕೃಷ್ಣ ನೆನೆಸಿಕೊಂಡಿದ್ದಾರೆ.
ವಾಪಸ್ ಬರುವಾಗ ಬಾಲಕೃಷ್ಣ ಹಿಮಾಚಲ ಪ್ರದೇಶದ ಮೂಲಕ ಪ್ರಯಾಣಿಸಿ, ಅಟಲ್ ಸುರಂಗದ ಮೂಲಕ ಹೋಗಿ ಆಗಸ್ಟ್ 24 ರಂದು ಬೆಂಗಳೂರು ತಲುಪಿದ್ದಾರೆ. ಈ ಮೂಲಕ ಆಟೋದಲ್ಲಿ ಸುಮಾರು 7,500 ಕಿ.ಮೀ.ಗಳನ್ನು ಪೂರ್ಣಗೊಳಿಸಿದರು.
ಮೂಲತಃ ಮೈಸೂರಿನವರಾದ ಬಾಲಕೃಷ್ಣ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸರ್ಜಾಪುರದಲ್ಲಿ ವಾಸಿಸುತ್ತಿದ್ದಾರೆ. ಅವರು 2011 ರಿಂದ ಆಟೋ ಓಡಿಸುತ್ತಿದ್ದಾರೆ.ಲಡಾಖ್ ಪ್ರಯಾಣದ ನಂತರ ಮತ್ತೊಂದು ಸಾಹಸದ ಬಗ್ಗೆ ಬಾಲಕೃಷ್ಣ ಯೋಜನೆ ಹಾಕುತ್ತಿದ್ದಾರೆ.


Click it and Unblock the Notifications
