Waterfalls: ಕೊಡಗಿನ ರುದ್ರರಮಣೀಯ ಸುಂದರ ಮಲ್ಲಳ್ಳಿ ಜಲಧಾರೆ...ಹೋಗುವುದೇಗೆ?

ಮಡಿಕೇರಿ, ಜುಲೈ 24: ಹಚ್ಚಹಸಿರನ್ನು ಹೊದ್ದು ಮುಗಿಲೆತ್ತರಕ್ಕೆ ಎದ್ದು ನಿಂತ ಪರ್ವತ ಶ್ರೇಣಿಗಳು.. ಅವುಗಳ ನಡುವಿನ ಕಂದಕದಲ್ಲಿ ಒತ್ತೋತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು. ಇದರ ನಡುವಿನ ಏಲಕ್ಕಿ, ಕಾಫಿ ತೋಟಗಳು... ನಡೆಯುತ್ತಾ ಹೋದಂತೆಲ್ಲ ಕಣ್ಣಿಗೆ ರಾಚುವ ಹಸಿರ ರಾಶಿ... ಹೀಗೆ ಒಂದೇ ಎರಡೇ ಹತ್ತಾರು ನಿಸರ್ಗ ನೋಟದ ನಡುವೆ ರಸ್ತೆಯನ್ನು ಬಿಟ್ಟು ಕಂದಕದೆಡೆಗೆ ಇರುವ ಮೆಟ್ಟಿಲನ್ನು ಇಳಿಯುತ್ತಾ ಹೋದರೆ ಜಲಧಾರೆಯ ಭೋರ್ಗರೆತದ ಸದ್ದು ಕಿವಿಗೆ ಅಪ್ಪಳಿಸುತ್ತದೆ.. ಹಾಗೆಯೇ ಮುಂದಕ್ಕೆ ಹೋದಂತೆಯೇ ಶ್ವೇ ತಧಾರೆಯಾಗಿ ಧುಮ್ಮಿಕ್ಕುವ ಜಲಧಾರೆಯ ರುದ್ರರಮಣೀಯ ದೃಶ್ಯಗಳು ಕಣ್ಣಿಗೆ ಹಬ್ಬದೂಟ ನೀಡುತ್ತವೆ.

ಯಾವುದಪ್ಪ ಈ ಜಲಧಾರೆ? ಎಂಬ ಪ್ರಶ್ನೆ ಕಾಡಬಹುದು... ಇದು ಕೊಡಗಿನಲ್ಲಿರುವ ಅತ್ಯಂತ ಸುಂದರ ಜಲಧಾರೆ ಮಲ್ಲಳ್ಳಿ ಫಾಲ್ಸ್... ಕೊಡಗಿನ ಸೋಮವಾರಪೇಟೆ ತಾಲೂಕಿಗೆ ಸೇರಿದ ಈ ಜಲಧಾರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಭೂಪಟದಲ್ಲಿ ಗುರುತಿಸಿಕೊಂಡಿದೆ. ಒಂದು ಕಾಲದಲ್ಲಿ ಇದರತ್ತ ಹೋಗಲು ಭಯಪಡುವಂತಾಗಿತ್ತು. ಆದರೀಗ ಈ ಜಲಧಾರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಒಮ್ಮೆ ಬಂದವರು ಮತ್ತೊಮ್ಮೆ ಬರುವ ಪ್ರಯತ್ನ ಮಾಡುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ ಇತ್ತ ಬಂದು ಜಲಧಾರೆಯ ಸೊಬಗನ್ನು ಇನ್ನಿಲ್ಲದಂತೆ ಆನಂದಿಸುತ್ತಿದ್ದಾರೆ.

Kodagu tourist Places It Is The Time To Visit Madikeri Mallalli Waterfalls

ಇನ್ನು ಮಲ್ಲಳ್ಳಿ ಜಲಧಾರೆಯನ್ನು ನೋಡಲು ಮೊದಲ ಬಾರಿಗೆ ಹೋಗುವವರು ಕೊಡಗಿನ ತಾಲ್ಲೂಕು ಕೇಂದ್ರಗಳಲ್ಲೊಂದಾದ ಸೋಮವಾರಪೇಟೆಗೆ ತೆರಳಿ, ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು ಇಪ್ಪತ್ತು ಕಿ.ಮೀ. ತೆರಳಿದರೆ ಹಂಚಿನಳ್ಳಿ ಗ್ರಾಮ ಸಿಗುತ್ತದೆ. ಇಲ್ಲಿಂದ ಬಲಕ್ಕೆ ತೆರಳುವ ರಸ್ತೆಯಲ್ಲಿ ನಾಲ್ಕು ಕಿ.ಮೀ. ಏರು-ತಗ್ಗುಗಳನ್ನು ದಾಟಿ ಮುಂದೆ ಸಾಗಬೇಕು. ಹೀಗೆ ಸಾಗುವಾಗ ಸುತ್ತಲಿನ ನಿಸರ್ಗ ಸೌಂದರ್ಯ ಮನಕ್ಕೆ ಉಲ್ಲಾಸವನ್ನು ತುಂಬುತ್ತಿರುತ್ತದೆ. ರಸ್ತೆಯಿಂದ ಜಲಪಾತದ ಕಡೆಗೆ ತೆರಳಿ ಮೆಟ್ಟಿಲುಗಳ ಮೂಲಕ ಇಳಿಯುತ್ತಾ ಹೋದರೆ ಜಲಪಾತದ ಕಡೆಗೆ ಸಾಗಬಹುದಾಗಿದೆ.

ಕುಮಾರಧಾರಾ ನದಿ ಸೃಷ್ಟಿಯ ಜಲಧಾರೆ

ಮಲ್ಲಳ್ಳಿ ಜಲಧಾರೆಯು ಕೊಡಗಿನ ಬೆಟ್ಟಗಳಲ್ಲೊಂದಾದ ಪುಷ್ಪಗಿರಿ ಬೆಟ್ಟಶ್ರೇಣಿಯ ಕುಮಾರಪರ್ವತದ ನಡುವೆ ಕುಮಾರಧಾರಾ ನದಿಯಿಂದ ಸೃಷ್ಟಿಯಾಗಿದೆ. ಇದನ್ನು ಸ್ಥಳೀಯರು ಇವತ್ತಿಗೂ ಮಲ್ಲಳ್ಳಿ ಅಬ್ಬಿ, ಪುಷ್ಪಹಾರಿ ಜಲಧಾರೆ, ಕುಮಾರಧಾರಾ ಜಲಧಾರೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈ ನದಿಯನ್ನು ಇಲ್ಲಿನವರು ಮಲ್ಲಳ್ಳಿ ಹೊಳೆ, ಹೆಗ್ಗಡೆಮನೆ ಹೊಳೆ ಎಂಬುವುದಾಗಿಯೂ ಕರೆಯುವುದಿದೆ. ಇದರ ವೈಶಿಷ್ಟ್ಯತೆ ಎಂದರೆ ಜಿಲ್ಲೆಯಲ್ಲಿರುವ ಬೇರೆಲ್ಲಾ ನದಿಗಳು ಪೂರ್ವದಿಕ್ಕಿಗೆ ಹರಿದು ಕಾವೇರಿಯೊಂದಿಗೆ ಹರಿದು ಬಳಿಕ ಬಂಗಾಳಕೊಲ್ಲಿ ಸೇರಿದರೆ, ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

Kodagu tourist Places It Is The Time To Visit Madikeri Mallalli Waterfalls

ಈ ಜಲಧಾರೆಯ ಬಗ್ಗೆ ಹೇಳಬೇಕೆಂದರೆ ಇದು ಬೆಟ್ಟಗಳ ನಡುವಿನ ಬೃಹತ್ ಹೆಬ್ಬಂಡೆಗಳ ಮೇಲಿನಿಂದ ಭಾರೀ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಈ ಸಂದರ್ಭ ಕಂಡು ಬರುವ ದೃಶ್ಯ ರೋಮಾಂಚನಕಾರಿಯಾಗಿರುತ್ತದೆ. ಇದಾದ ಬಳಿಕ ಬೃಹತ್ ಜಲರಾಶಿ ಎಲ್ಲವೂ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ತಳಸೇರುತ್ತದೆ. ಈ ವೇಳೆ ಬೀಸಿ ಬರುವ ಶ್ವೇತಧಾರೆಯ ಸಿಂಚನ ದೂರದಲ್ಲಿ ನಿಂತು ವೀಕ್ಷಿಸುವವರನ್ನು ಸ್ಪರ್ಶಿಸುವ ಅನುಭವ ಮರೆಯಲಾರದ್ದಾಗಿರುತ್ತದೆ.

ಸುತ್ತಮುತ್ತ ಇನ್ನಷ್ಟು ಜಲಧಾರೆಗಳು.

ದಶಕಗಳ ಹಿಂದೆ ಈ ಜಲಧಾರೆಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಸರ್ಕಾರದ ಮುಂದಿತ್ತಾದರೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟಿಸಿದ ಕಾರಣ ಅದನ್ನು ಕೈಬಿಡಲಾಯಿತು. ಜಲಧಾರೆಯತ್ತ ತೆರಳುವವರಿಗೆ ಕೇವಲ ಜಲಧಾರೆಯ ಸೊಬಗು ಮಾತ್ರವಲ್ಲದೆ, ಇಲ್ಲಿ ದಾರಿಯುದ್ದಕ್ಕೂ ಕಂಡುಬರುವ ನಿಸರ್ಗ ಸೌಂದರ್ಯ ಮೈ ಪುಳಕಗೊಳಿಸುತ್ತದೆ. ಮಲ್ಲಳ್ಳಿ ಜಲಧಾರೆಗೆ ಹಾದಿಯಲ್ಲೇ ಅಂಬೂರ ಅಬ್ಬಿ ಹಾಗೂ ಹಾಸರ ಅಬ್ಬಿ ಎಂಬ ಪುಟ್ಟ ಜಲಧಾರೆಗಳಿವೆ. ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ.

Kodagu tourist Places It Is The Time To Visit Madikeri Mallalli Waterfalls

ಪೇಟೆ, ಪಟ್ಟಣದಿಂದ ದೂರವಾಗಿ, ಬಸ್, ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ, ದಿನವೊಂದನ್ನು ಮೀಸಲಿಡಬೇಕು. ರಕ್ತಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮಪಡಬೇಕಾಗುತ್ತದೆ. ಜಲಧಾರೆಯನ್ನು ವೀಕ್ಷಿಸಲು ಮಳೆಗಾಲದ ನಂತರದ ದಿನಗಳು ಉತ್ತಮವಾಗಿದ್ದು, ಆಹಾರ ಪದಾರ್ಥಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಬೇಕಾಗುತ್ತದೆ. ಏಕೆಂದರೆ ಕುಗ್ರಾಮವಾಗಿರುವುದರಿಂದ ಇಲ್ಲಿ ಯಾವುದೇ ಪದಾರ್ಥಗಳು ಸಿಗಲಾರದು.

ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ

ಹಾಗೆಯೇ ಜನಜಂಗುಳಿಯಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತಿರುವ ಈ ತಾಣಕ್ಕೆ ತೆರಳುವರು ಅಲ್ಲಿ ಪ್ಲಾಸ್ಟಿಕ್, ಗಾಜು ಮುಂತಾದ ವಸ್ತುಗಳನ್ನು ಎಸೆಯದೆ ಬಂದರೆ ಅದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ. ಜಲಧಾರೆಯ ಸೊಬಗನ್ನು ದೂರದಿಂದಲೇ ನೋಡಿ ಹಿಂತಿರುಗುವುದು ಒಳ್ಳೆಯದು. ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ ಸನಿಹಕ್ಕೆ ಹೋಗುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ.. ಮೊದಲೆಲ್ಲ ಮಳೆಗಾಲದಲ್ಲಿ ಇತ್ತ ಯಾರೂ ಸುಳಿಯುತ್ತಿರಲಿಲ್ಲ.

ಬದಲಾದ ಕಾಲದಲ್ಲಿ ಮಳೆಗಾಲದಲ್ಲಿಯೇ ಪ್ರವಾಸಿಗರು ಇತ್ತ ಸುಳಿಯುತ್ತಿದ್ದು ಮಳೆಗಾಲದಲ್ಲಿ ಜಲಧಾರೆಯ ರುದ್ರರಮಣೀಯ ದೃಶ್ಯುವನ್ನು ಕಣ್ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮಳೆಗಾಲದಲ್ಲಿ ಜಲಧಾರೆಯ ರುದ್ರರಮಣೀಯ ದೃಶ್ಯ ರೋಮಾಂಚನಕಾರಿಯಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಪ್ರವಾಸಿಗರು ಅತ್ತ ಕಡೆ ತೆರಳುವ ಪ್ರಯತ್ನ ಮಾಡುವುದು ಕಂಡು ಬರುತ್ತಿದ್ದು, ಅದರಂತೆಯೇ ಪ್ರವಾಸಿಗರು ಮಲ್ಲಳ್ಳಿ ಜಲಧಾರೆಯತ್ತ ಹೆಚ್ಚಾಗಿ ಬರುತ್ತಿರುವುದು ಎದ್ದು ಕಾಣಿಸುತ್ತಿದೆ. ಆದರೆ ಹೀಗೆ ಬರುವ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಒಳ್ಳೆಯದು. ಮಲ್ಲಳ್ಳಿ ಜಲಧಾರೆ ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+