Haleri Waterfalls: ಮುಂಗಾರು ಮಳೆಗೆ ಮೈದುಂಬಿದ 'ಹಾಲೇರಿ ಜಲಧಾರೆ’

ಮಡಿಕೇರಿ, ಜುಲೈ 26: ಈ ಬಾರಿ ಮುಂಗಾರು ಮಳೆಯ ಅಬ್ಬರಕ್ಕೆ ನಿಸರ್ಗದ ನಡುವೆ ಹುದುಗಿ ಹೋಗಿದ್ದ ಜಲಧಾರೆಗಳೆಲ್ಲವೂ ಮೇಲೆದ್ದು, ಮೈಕೈ ತುಂಬಿಕೊಂಡ ಷೋಡಷಿಯಂತೆ ಬಳುಕಿದರೆ, ಮತ್ತೆ ಕೆಲವು ಜಲಧಾರೆಗಳು ರೌದ್ರತೆ ಮೆರೆದು ನೋಡುಗರನ್ನೇ ಬೆಚ್ಚಿ ಬೀಳಿಸಿವೆ. ಅಷ್ಟೇ ಅಲ್ಲದೆ, ಜಲಧಾರೆಗಳು ಹೀಗೂ ಧುಮ್ಮಿಕ್ಕುತ್ತವೆಯಾ ಎಂಬ ಅಚ್ಚರಿಯನ್ನು ಹುಟ್ಟಿಸಿವೆ.

ಕಳೆದ ವರ್ಷ ಮಳೆ ಸರಿಯಾಗಿ ಸುರಿಯದೆ ಮುಂಗಾರು ದುರ್ಬಲವಾಗಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಉತ್ತಮ ಆರಂಭವನ್ನು ನೀಡಿತ್ತು. ಹೀಗಾಗಿ ಜೂನ್ ನಿಂದ ಆರಂಭವಾದ ಮುಂಗಾರು ಮಳೆ ಬಿಡುವು ನೀಡದ ಸುರಿದ ಪರಿಣಾಮ ಹಳ್ಳ, ಕೊಳ್ಳ, ತೊರೆ, ಹೊಳೆ, ನದಿಗಳೆಲ್ಲವೂ ಉಕ್ಕಿ ಹರಿಯಲಾರಂಭಿಸಿವೆ.

Kodagu tourist Places It Is The Time To Visit Madikeri Haleri Waterfalls

ಹೀಗೆ ಉಕ್ಕಿ ಹರಿದ ಸಣ್ಣಪುಟ್ಟ, ಹೊಳೆ, ನದಿಗಳು ಸೃಷ್ಟಿಸಿರುವ ಜಲಧಾರೆಗಳು ಇದೀಗ ಹೆಬ್ಬಂಡೆಗಳ ಮೇಲೆ ಧುಮ್ಮಿಕ್ಕಿ ಜಿಗಿಯುವಾಗಿನ ಸುಂದರ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಸಾಮಾನ್ಯ ದಿನಗಳಲ್ಲಿ ಧುಮ್ಮಿಕ್ಕುತ್ತಿದ್ದ ಜಲಧಾರೆಗಳಿಗೂ ಈಗಿನ ಜಲಧಾರೆಗಳೂ ಅಜಗಜಾಂತರ ವ್ಯತ್ಯಾಸವಾಗಿದ್ದು, ಶ್ವೇತ ಸುಂದರಿಯರೆಲ್ಲ ಭಯಂಕರಿಯರಾಗಿ ರುದ್ರನರ್ತನಗೈಯ್ಯುತ್ತಿದ್ದಾರೆ.

ಮಳೆಗಾಲದಲ್ಲಿ ನೋಡುವುದೇ ಮಜಾ

ಮಳೆಗಾಲದ ಈ ದಿನಗಳಲ್ಲಿ ನಿಸರ್ಗ ಸೌಂದರ್ಯದ ನೆಲೆವೀಡಾದ ಕೊಡಗಿನಲ್ಲಿ ಬೆಟ್ಟಗುಡ್ಡಗಳ ಮೇಲೆ, ಕಾಫಿ ತೋಟಗಳ ನಡುವೆ ಹುಟ್ಟಿ ಹರಿಯುವ ಹೊಳೆ, ತೊರೆಗಳು ಧುಮ್ಮಿಕ್ಕಿ ಹರಿಯುವಾಗ ಸೃಷ್ಟಿಯಾಗುವ ಜಲಧಾರೆಗಳನ್ನು ನೋಡುವುದೇ ಒಂಥರಾ ಮಜಾ.

Kodagu tourist Places It Is The Time To Visit Madikeri Haleri Waterfalls

ಇದುವರೆಗೆ ತಮ್ಮ ಪಾಡಿಗೆ ಧುಮ್ಮಿಕ್ಕುತ್ತಿದ್ದ ಜಲಧಾರೆಗಳೆಲ್ಲವೂ ಈಗ ಹಠಕ್ಕೆ ಬಿದ್ದಂತೆ ಧುಮ್ಮಿಕ್ಕುತ್ತಿವೆ. ಇತರೆ ದಿನಗಳಲ್ಲಿ ಕಾಫಿ ತೋಟದಲ್ಲಿ, ಕಾಡಿನಲ್ಲಿ ಯಾರ ಗಮನಕ್ಕೂ ಬಾರದೆ ತನ್ನ ಪಾಡಿಗೆ ತಾನು ಎಂಬಂತೆ ಧುಮುಕುವ ಜಲಧಾರೆಗಳೀಗೆ ತಮ್ಮ ಆರ್ಭಟದಿಂದ ತಮ್ಮ ಇರುವಿಕೆಯನ್ನು ಖಚಿತಪಡಿಸುತ್ತಿವೆ.

ಕೆದಕಲ್ ಬಳಿಯಲ್ಲಿರುವ ಜಲಧಾರೆ

ಇಂತಹ ಜಲಧಾರೆಗಳ ನಡುವೆ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಫಾಲ್ಸ್ ಕೂಡ ಇದೀಗ ತನ್ನ ಚೆಲುವನ್ನು ಪ್ರದರ್ಶಿಸುತ್ತಿದೆ. ಇದನ್ನು ನೋಡಬೇಕಾದರೆ ಮಡಿಕೇರಿ- ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂಬತ್ತು ಕಿ.ಮೀ. ದೂರದ ಕೆದಕಲ್ ಗೆ ಹೋಗಬೇಕಾಗುತ್ತದೆ.

ಕೆದಕಲ್ ನಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ ಒಂದು ಕಿ.ಮೀ.ನಷ್ಟು ಹೋಗಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಜಲಧಾರೆ ಎದುರಾಗುತ್ತದೆ. ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುವ ಈ ಜಲಪಾತ ಪುಟ್ಟದಾದರೂ ಅದ್ಭುತವಾಗಿದೆ.

ಚಿಕ್ಕಾತಿ ಚಿಕ್ಕ ಜಲಧಾರೆ

ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ ಐವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ ಹತ್ತು ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ.

ಸಾಮಾನ್ಯವಾಗಿ ಸಮೀಪದ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೊರತುಪಡಿಸಿದರೆ ಹೆಚ್ಚಿನವರು ಯಾರೂ ಇದರತ್ತ ಸುಳಿಯುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮಳೆ ಸುರಿದಾಗ ತನ್ನ ಚೆಲುವನ್ನು ಪ್ರದರ್ಶಿಸಿ ಬೇಸಿಗೆ ಬರುತ್ತಿದ್ದಂತೆ ಹೆಬ್ಬಂಡೆಯಲ್ಲೇ ಲೀನವಾಗಿ ಬಿಡುತ್ತದೆ.

ಶ್ವೇತಧಾರೆಯಾಗಿ ಧುಮ್ಮಿಕ್ಕುವ ಜಲಧಾರೆ

ಕಾನನದ ಬೆಡಗಿಯಂತೆ ಕಂಗೊಳಿಸುವ ಹಾಲೇರಿ ಫಾಲ್ಸ್ನ್ನು ವೀಕ್ಷಿಸಬೇಕಾದರೆ ಮಳೆಗಾಲದ ದಿನಗಳು ಉತ್ತಮ. ಮಳೆ ಕಡಿಮೆಯಾದಾಗ ಇದರ ಚೆಲುವು ಕೂಡ ಇಳಿದು ಬಿಡುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಜಲಧಾರೆಯನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಖುಷಿಯ ಸಂಗತಿಯಾಗಿದೆ.

ಈ ಜಲಧಾರೆಯತ್ತ ಗಮನಹರಿಸಿ ಸಂಬಂಧಿಸಿದವರು ಅಭಿವೃದ್ಧಿ ಪಡಿಸಿದ್ದೇ ಆದರೆ ಈ ಜಲಧಾರೆ ಪ್ರವಾಸಿಗರ ಸೆಳೆಯಲು ಸಾಧ್ಯವಾಗಲಿದೆ. ಈಗ ಮಳೆಗಾಲವಾಗಿರುವುದರಿಂದ ಇದರ ರೌದ್ರತೆ ಹೆಚ್ಚಾಗಿರುತ್ತದೆಯಾದರೂ ನಂತರದ ದಿನಗಳಲ್ಲಿ ಶ್ವೇತಧಾರೆಯಾಗಿ ಧುಮ್ಮಿಕ್ಕುತ್ತಾ ಗಮನಸೆಳೆಯುತ್ತದೆ. ಹೆದ್ದಾರಿಗೆ ಹತ್ತಿರದಲ್ಲಿರುವ ಕಾರಣದಿಂದ ಈ ಜಲಧಾರೆಯತ್ತ ಯಾರು ಬೇಕಾದರೂ ತೆರಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+