Karnataka waterfalls: ಪ್ರಮುಖ ಜಲಪಾತಗಳ ವೀಕ್ಷಣೆಗೆ ಮೂರು ಜಿಲ್ಲೆಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆ, ದರ, ಸಮಯದ ಮಾಹಿತಿ
ಕರ್ನಾಟಕ, ಆಗಸ್ಟ್, 02: ಭಾರೀ ಮಳೆ ಹಿನ್ನೆಲೆ ರಾಜ್ಯದ ಬಹುತೇಕ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ. ಈ ದೃಶ್ಯಗಳನ್ನು ಸವಿಯಲು ಪ್ರತಿನಿತ್ಯ ಪ್ರವಾಸಗರ ದಂಡೇ ಹರಿದುಬರುತ್ತಿದೆ. ಅದರಲ್ಲೂ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರ ಅನೂಕೂಲಕ್ಕೆ ತಕ್ಕಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು (NWKSRTC) ಮೂರು ಜಿಲ್ಲೆಗಳಿಂದ ವಿಶೇಷ ಬಸ್‌ಗಳನ್ನು ಬಿಡಲು ನಿರ್ಧಾರ ಮಾಡಿದೆ.
ಹಾಗಾದರೆ ಈ ವಿಶೇಷ ಬಸ್‌ಗಳು ಹೊರಡುವ ಸಮಯ ಹಾಗೂ ಎಲ್ಲಿಂದ ಹೊರಡುತ್ತವೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ. ಜಲಪಾತಗಳ ವೀಕ್ಷಣೆಗೆ NWKSRTCಯು ವಾರಾಂತ್ಯ ಮತ್ತು ರಜೆ ದಿನಗಳ ಸಮಯದಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ, ಪೇಡಾ ನಗರಿ ಧಾರವಾಡ ಮತ್ತು ಕುಂದಾನಗರಿ ಬೆಳಗಾವಿ ಜಿಲ್ಲೆಗಳಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.

ಹುಬ್ಬಳ್ಳಿ-ಜೋಗ ಫಾಲ್ಸ್, ಧಾರವಾಡ-ಗೋಕಾಕ್ ಫಾಲ್ಸ್, ದಾಂಡೇಲಿ ಮತ್ತು ಬೆಳಗಾವಿಯಿಂದ ಅಂಬೋಲಿ, ಗೋಕಾಕ್ ಫಾಲ್ಸ್‌ಗೆ ವಿಶೇಷ ಬಸ್ ಸಂಚಾರ ಮಾಡಲಿವೆ. ಈ ವಿಶೇಷ ಬಸ್‌ಗಳಲ್ಲಿ ಶಕ್ತಿ ಯೋಜನೆ ಅನ್ವಯಿಸುವುದಿಲ್ಲಎಂದು ಸಂಸ್ಥೆಯ ಎಂಡಿ ಭರತ್ ಎಸ್.ಸ್ಪಷ್ಟಪಡಿಸಿದ್ದಾರೆ ಎಂದು ವಿಯಯ ಕರ್ನಾಟಕ ವರದಿ ಮಾಡಿದೆ. ಇನ್ನು ಈ ವಿಶೇಷ ಬಸ್‌ಗಳ ಸೇವೆಯು ಭಾನುವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಲಭ್ಯವಿರಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಹುಬ್ಬಳ್ಳಿಯಿಂದ ಜೋಗ್ ಫಾಲ್ಸ್: ಸಮಯ, ದರಗಳ ವಿವರ
ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಬೆಳಗ್ಗೆ 7:45ಕ್ಕೆ ಸಂಚಾರ ಆರಂಭಿಸಲಿರುವ ರಾಜಹಂಸ ಬಸ್ ರಾತ್ರಿ 9:30ಕ್ಕೆ ಹಿಂದಿರುಗಲಿದೆ. ಇದರಲ್ಲಿ ಪ್ರಯಾಣ ದರ 450 ರೂಪಾಯಿ ಇರಲಿದೆ. ಇನ್ನು ವೋಲ್ವೊ ಎಸಿ ಬಸ್ ಬೆಳಗ್ಗೆ 8 ಗಂಟೆಗೆ ಹೊರಟು ರಾತ್ರಿ 9ಕ್ಕೆ ಹಿಂದಿರುಗಲಿದ್ದು, ಇದರಲ್ಲಿ ಪ್ರಯಾಣ ದರ 600 ರೂಪಾಯಿ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಮಾರ್ಗ ಮಧ್ಯೆ ಶಿರಸಿ ಮಾರಿಕಾಂಬ ದೇವಸ್ಥಾನ ದರ್ಶನಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ.
ಧಾರವಾಡದಿಂದ ದಾಂಡೇಲಿ, ಸಮಯದ ವಿವರ
ಧಾರವಾಡದ ಹೊಸ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಡಲಿರುವ ವೇಗದೂತ ಬಸ್ ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಫಾಲ್ಸ್, ಕೂಳಗಿ ನೇಚರ್ ಪಾರ್ಕ್ ಮತ್ತು ಉಳವಿ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 7ಕ್ಕೆ ಹಿಂದಿಗುಗಲಿದೆ. ಇದರಲ್ಲಿ ಪ್ರಯಾಣದ ದರ 340 ರೂಪಾಯಿ ನಿಗದಿ ಮಾಡಲಾಗಿದೆ.
ಇನ್ನು ಧಾರವಾಡದ ಹೊಸ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಡಲಿರುವ ವೇಗದೂತ ಬಸ್, ನವಿಲುತೀರ್ಥ ಜಲಾಶಯ, ಗೋಕಾಕ್ ಫಾಲ್ಸ್ ಹಾಗೂ ಹಿಡಕಲ್ ಡ್ಯಾಂ ವೀಕ್ಷಣೆ ಮುಗಿಸಿಕೊಂಡು ಧಾರವಾಡಕ್ಕೆ ಸಂಜೆ 7 ಗಂಟೆಗೆ ಹಿಂದಿರುಗಲಿದೆ. ಇದರಲ್ಲಿ ಪ್ರಯಾಣದ ದರ 340 ರೂಪಾಯಿ ನಿಗದಿ ಮಾಡಲಾಗಿದೆ.
ಬೆಳಗಾವಿಯಿಂದ ಗೋಕಾಕ್ ಫಾಲ್ಸ್: ಸಮಯ, ದರಗಳ ವಿರವ
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9ಕ್ಕೆ ಹೊರಡುವ ವೇಗದೂತ ಬಸ್ ಹಿಡಕಲ್ ಡ್ಯಾಂ, ಗೋಡಚಿನಮಕ್ಕಿ ಹಾಗೂ ಗೋಕಾಕ್ ಫಾಲ್ಸ್ ವೀಕ್ಷಣೆ ಮುಗಿಸಿಕೊಂಡು ಸಂಜೆ 6ಕ್ಕೆ ಹಿಂದಿರುಗಲಿದೆ. ಇದರಲ್ಲಿ ಪ್ರಯಾಣದ ದರ 190 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೆಯೇ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9ಕ್ಕೆ ಹೊರಡುವ ವೇಗದೂತ ಬಸ್ ನಾಗರತಾಸ್, ಅಂಬೋಲಿ ಫಾಲ್ಸ್‌ಗಳ ವೀಕ್ಷಣೆ ಮುಗಿಸಿಕೊಂಡು ಸಂಜೆ 6ಕ್ಕೆ ಹಿಂದಿರುಗಲಿದೆ. ಇದರಲ್ಲಿ ಪ್ರಯಾಣದ ದರವನ್ನು 290 ರೂಪಾಯಿ ನಿಗದಿ ಮಾಡಲಾಗಿದೆ.
ಬಸ್ ನಿಲ್ದಾಣ, ಅವತಾರ ಕೌಂಟರ್‌ಗಳು, ಕೆಎಸ್‌ಆರ್‌ಟಿಸಿ ಆ್ಯಪ್, ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗುದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ 7760991674/ 7760991682, 7760991612/ 7760991613 / 7760991625ಗೆ ಸಂಪರ್ಕಿಸಬಹುದಾಗಿದೆ. ಮಳೆ ಹೆಚ್ಚಾದ ಹಿನ್ನೆಲೆ ಪ್ರವಾಸಿ ತಾಣಗಳ ಕಡೆ ಮುಖ ಮಾಡುವವರ ಸಂಖ್ಯೆಯು ಹೆಚ್ಚಗುತ್ತಲೇ ಇದೆ. ಆದ್ದರಿಂದ ಪ್ರಯಾಣಿಕೆ ಅನೂಕೂಲಕ್ಕೆ ತಕ್ಕಂತೆ ಬಸ್‌ಗಳನ್ನು ಕಲ್ಪಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.












Click it and Unblock the Notifications