Mangaluru to Lakshadweep Ship: ಲಕ್ಷದೀಪದಿಂದ ಮಂಗಳೂರಿಗೆ ಅತೀ ವೇಗದ ಹಡಗು: ನೀವು ಹೋಗಬೇಕಾ ಹೀಗೆ ಮಾಡಿ..
ಬೇಸಿಗೆ ರಜೆ ಮುಗಿತಾ ಬಂತು. ಅಷ್ಟರಲ್ಲಿ ಪ್ರವಾಸ ಹೋಗಬೇಕು ಅಂದುಕೊಂಡಿದ್ದರೆ ಬೇಗ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ. ಬಸ್, ರೈಲು ಹಾಗೂ ವಿಮಾನಗಳಿಗಿಂತ ಅದ್ಭುತ ಅನುಭವವನ್ನು ನೀಡುವ ಹಡಗಿನಲ್ಲಿ ಒಮ್ಮೆ ಪ್ರವಾಸಕ್ಕೆ ಹೋಗಿ.
ಅಷ್ಟಕ್ಕೂ ಹಡಗಿನಲ್ಲಿ ಎಲ್ಲಿಗೆ ಹೋಗುವುದು ಅಂತ ಯೋಚನೆ ಮಾಡ್ತಾಯಿದ್ದೀರಾ? ಲಕ್ಷದೀಪಕ್ಕೆ. ಹೌದು.. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವವರಿಗೆ ಕೊನೆಗೂ ಶುಭ ಸುದ್ದಿ ಬಂದಿದೆ. ಕೊರೊನಾ ಸಂದರ್ಭದಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣಿಕ ಹಡಗು ಸ್ಥಗಿತಗೊಂಡಿತ್ತು. ಆದರೀಗ ಮತ್ತೆ ಪ್ರಯಾಣಿಕ ಹೈಸ್ಪೀಡ್ ಹಡಗು ಪುನರಾರಂಭಗೊಂಡಿದೆ.

ಈ ಮೊದಲು ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನಲ್ಲಿ ಬರಲು ಸುಮಾರು 13 ಗಂಟೆ ಸಮಯ ಬೇಕಾಗುತ್ತಿತ್ತು. ಆದರೀಗ ಹೈಸ್ಪೀಡ್ ಹಡಗು ಕೇವಲ 7 ಗಂಟೆಯಲ್ಲಿ ಮಂಗಳೂರು ತಲುಪಲಿದೆ. ಪ್ರಯಾಣಿಕ ಹಡಗು ಸ್ಥಗಿತಗೊಂಡ ನಂತರ, ಇಲ್ಲಿನ ಹಡಗು ಕೇರಳದ ಕೊಚ್ಚಿ, ಕಲ್ಲಿಕೋಟೆಯತ್ತ ಸಂಚರಿಸುತ್ತಿತ್ತು. ಅಲ್ಲಿಂದ ಮಂಗಳೂರಿಗೆ ರೈಲಿನಲ್ಲಿ ಬರಬೇಕಿತ್ತು.
ಆದರೀಗ ಹೈಸ್ಪೀಡ್ ಹಡಗು ಪುನರಾರಂಭಗೊಂಡಿದ್ದರಿಂದ ಪ್ರಯಾಣಿಕರಿಗೆ ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ. ಈ ಹೈಸ್ಪೀಡ್ ಹಡಗು ಪ್ರಾರಂಭದ ನಂತರ ಲಕ್ಷದ್ವೀಪಕ್ಕೆ ತೆರಳಬೇಕು ಅಂದರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕೂಡ ಪಡೆಯಬೇಕು. ಲಕ್ಷದ್ವೀಪದಿಂದ ಜನತೆ ಶಿಕ್ಷಣ, ವೈದ್ಯಕೀಯ ಸೇವೆ ಉದ್ಯೋಗ, ಸಂಬಂಧಿಕರಲ್ಲಿಗೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಂಗಳೂರಿಗೆ ಆಗಮಿಸುತ್ತಾರೆ.

ಅಂದಹಾಗೆ ಈ ಹಡಗಿನ ಹೆಸರು ಪರೇಲಿ. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್ ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಪ್ರಯಾಣಿಸಬಹುದು. ಪ್ರತಿ ಪ್ರಯಾಣಿಕರಿಗೆ 350 ರೂಪಾಯಿ ಪ್ರಯಾಣ ದರ ಇದೆ. ನೀವು ಕೂಡ ಇದರಲ್ಲಿ ಪ್ರಯಾಣ ಮಾಡಬಹುದು.
ಆರ್ಥಿಕ ಸ್ಥಿತಿ ವೃದ್ಧಿ
ಕೇರಳದ ಮಾಜಿ ಸಂಸದ ಹಮದುಲ್ಲಾ ಸಯ್ಯದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಇವರೆಲ್ಲರ ಪ್ರಯತ್ನದಿಂದ ಈ ಸೇವೆ ಪುನರಾರಂಭ ಸಾಧ್ಯವಾಗಿದೆ. ಕಲ್ಕತ್ತಾಕ್ಕೆ ಹೋಗುವ ಹಡಗನ್ನು ಮಂಗಳೂರು ಮಾರ್ಗವಾಗಿ ಬರುವಂತೆ ಮಾಡಲಾಗಿದೆ. ಈ ಜಲಮಾರ್ಗ ಸೇವೆಯಿಂದ ಸ್ಥಳೀಯ ವ್ಯಾಪಾರ, ವಹಿವಾಟು ವೃದ್ಧಿಗೊಳ್ಳಲಿದೆ.
ಮಂಗಳೂರಿನಿಂದ ಸಿಮೆಂಟ್, ಇಟ್ಟಿಗೆ, ತರಕಾರಿ ಮತ್ತಿತರ ಸರಕುಗಳನ್ನು ಹೊತ್ತೊಯ್ಯುವ ಹಡಗುಗಳು ಲಕ್ಷದ್ವೀಪಕ್ಕೆ ಹೋಗುತ್ತವೆ. ಈ ಮೊದಲು ಹಲವಾರು ಇಂತಹ ಸರಕು ಹಡಗುಗಳು ಲಕ್ಷದ್ವೀಪಕ್ಕೆ ಹೋಗುತ್ತಿದ್ದವು. ಈಗ ಈ ಪ್ರಮಾಣ ಇಳಿಕೆಯಾಗಿದ್ದು, ಕೇರಳಿಗರು ಇದರ ಲಾಭ ಪಡೆದುಕೊಂಡಿದ್ದಾರೆ. ಕೇರಳದಿಂದ ಲಕ್ಷದ್ವೀಪಕ್ಕೆ ಹೋಗುವ ಹಡುಗಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಸರಕು ಲೋಡ್ ಮಾಡುವ ಕಾರ್ಮಿಕರು.
ಲಕ್ಷದ್ವೀಪಕ್ಕೆ ತೆರಳಲು ಬೇಕು ಅನುಮತಿ ಪತ್ರ
ಲಕ್ಷದ್ವೀಪಕ್ಕೆ ತೆರಳಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು. ಯಾರಾದರೂ ಸಂಬಂಧಿಕರು ಲಕ್ಷದ್ವೀಪದಲ್ಲಿ ವಾಸಿಸುತ್ತಿದ್ದರೆ ನಮಗೆ ಅವರಿಂದ ಆಹ್ವಾನದ ಅಗತ್ಯವಿದೆ. ಅಲ್ಲಿಗೆ ಪ್ರಯಾಣಿಸಲು ವ್ಯಕ್ತಿಯು ಅರ್ಜಿ ಸಲ್ಲಿಸಬೇಕು ಮತ್ತು ಪೊಲೀಸ್ ಇಲಾಖೆಯಿಂದ ಅನುಮೋದನೆ ಪಡೆಯಬೇಕು. ಟ್ರಾವೆಲ್ ಏಜೆನ್ಸಿಗಳ ಮೂಲಕ ಪ್ರಯಾಣಕ್ಕಾಗಿ ಬುಕ್ಕಿಂಗ್ ಮಾಡಬಹುದಾಗಿದೆ.












Click it and Unblock the Notifications