IRCTC: ಕೇವಲ 16,000 ರೂಪಾಯಿಯಲ್ಲಿ ಚಂಡೀಗಢ, ಶಿಮ್ಲಾಗೆ ಪ್ರವಾಸ ಕೈಗೊಳ್ಳಲು ಉತ್ತಮ ಅವಕಾಶ, ದಿನಾಂಕಗಳ ವಿವರ ತಿಳಿಯಿರಿ
ಐಆರ್‌ಸಿಟಿಸಿಯು ಶಿಮ್ಲಾ, ಚಂಡೀಗಢಕ್ಕೆ ಭೇಟಿ ನೀಡಲು ಬಯಸುವವರಿಗೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದ್ರೆ ಈ ಪ್ಯಾಕೇಜ್‌ನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ನವದೆಹಲಿ, ಮಾರ್ಚ್, 21: ಭಾರತೀಯ ರೈಲ್ವೇಯು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಅಭಿವೃದ್ಧಿಯಾಗುತ್ತಲೇ ಇದೆ. ಹಾಗೆಯೇ ಪ್ರಯಾಣಿಕರ ಅನುಕೂಲಕ್ಕಾಗಿ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಇದೆ. ಇದರಿಂದ ಹೆಚ್ಚಿನ ಆದಾಯ ಗಳಿಸುವುದಲ್ಲದೇ, ಜನಮನ್ನಣೆ ಪಡೆಯುವಲ್ಲೂ ಭಾರತೀಯ ರೈಲ್ವೆ ಮುಂಚೂಣಿಯಲ್ಲಿದೆ. ಮತ್ತೊಂದೆಡೆ ಪ್ರವಾಸೋದ್ಯಮ ವಿಭಾಗವಾದ IRCTCಯು ಇದೀಗ ಭಾರತದ ಪ್ರಸಿದ್ಧ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡುವವರಿಗೆ ಬಯಸುವವರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಭಾರತೀಯ ರೈಲ್ವೇಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಭಾರತದ ಪ್ರಸಿದ್ಧ ಗುಡ್ಡಗಾಡು ಹೊಂದಿರುವ ಪ್ರದೇಶಗಳಿಗೆ ಭೇಟಿ ನೀಡಲು ಬಯಸುವ ಪ್ರಯಾಣಿಕರಿಗೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದು, 16,000 ರೂಪಾಯಿಯಲ್ಲೂ ಈ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಹಾಗಾದರೆ ಆ ಪ್ರಸಿದ್ಧ ಪ್ರವಾಸಿ ತಾಣಗಳು ಯಾವುವು? ಮತ್ತು ಪ್ಯಾಕೇಜ್ ಗರಿಷ್ಠ ಮತ್ತು ಕನಿಷ್ಠ ದರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಏಪ್ರಿಲ್ 15ರಿಂದ ಪ್ರವಾಸ ಆರಂಭ
ನೀವು ಚಂಡೀಗಢ, ಶಿಮ್ಲಾ ಮತ್ತು ಕುಫ್ರಿಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಈ ಪ್ರವಾಸ ಪ್ಯಾಕೇಜ್ ಉತ್ತಮವಾಗಿದೆ. ಐಆರ್‌ಸಿಟಿಸಿಯ ಪ್ರಕಾರ ಈ ಪ್ರವಾಸವನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತದೆ. ಏಪ್ರಿಲ್ 15 ರಿಂದ ಪ್ರವಾಸ ಆರಂಭವಾಗಲಿದ್ದು, ಜುಲೈ 14ಕ್ಕೆ ಅಂತ್ಯವಾಗಲಿದೆ. ಈ ಪ್ರವಾಸವು ಲಕ್ನೋದಿಂದ ಪ್ರಾರಂಭವಾಗಿ ಕೊನೆಗೆ ಲಕ್ನೋದಲ್ಲಿಯೇ ಕೊನೆಗೊಳ್ಳುತ್ತದೆ. ಹಾಗೆಯೇ ಏಪ್ರಿಲ್‌ನಿಂದ ಜುಲೈವರೆಗಿನ ಗರಿಷ್ಠ ಅವಧಿಗಳಲ್ಲಿ ಮತ್ತು ಡಿಸೆಂಬರ್‌ನಿಂದ ಜನವರಿವರೆಗಿನ ಕಡಿಮೆ ಅವಧಿಗಳಲ್ಲೂ ಪ್ರವಾಸವನ್ನು ಆಯೋಜಿಸಲಾಗುತ್ತದೆ.
ಯಾವೆಲ್ಲ ಸ್ಥಳಗಳನ್ನು ನೋಡಬಹುದು?
ಚಂಡೀಗಢದ ರೋಸ್ ಗಾರ್ಡನ್, ರಾಕ್ ಗಾರ್ಡನ್ ಮತ್ತು ಮಾನಸಾ ದೇವಿ ದೇವಸ್ಥಾನ, ಶಿಮ್ಲಾದ ಪಿಂಜೋರ್ ಗಾರ್ಡನ್ ಮತ್ತು ಮಾಲ್ ರೋಡ್ ಮತ್ತು ಕುಫ್ರಿ ಮತ್ತು ಸುಖನಾ ಸರೋವರ ಸೇರಿದಂತೆ ಜನಪ್ರಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಇದು ಉತ್ತಮ ಅವಕಾಶವಾಗಿದೆ.
ಪ್ರವಾಸ ಪ್ಯಾಕೇಜ್‌ನ ದರಗಳ ವಿವರ
ಪ್ರವಾಸದ ಪ್ಯಾಕೇಜ್‌ನ ವೆಚ್ಚದ ವಿವರವನ್ನು ನೋಡುವುದಾದರೆ, ಗರಿಷ್ಠ ಅವಧಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸೆಕೆಂಡ್ ಕ್ಲಾಸ್ ಎಸಿಯಲ್ಲಿ ಒಬ್ಬರಿಗೆ 39,225 ರೂಪಾಯಿ ಆಗುತ್ತದೆ. ಇಬ್ಬರಿಗೆ 22,170 ರೂಪಾಯಿ ಮತ್ತು ಮೂವರು ಪ್ರಯಾಣ ಮಾಡಲು ಬಯಸಿದರೆ 17,620 ರೂಪಾಯಿ ಪಾವತಿಸಬೇಕಾಗುತ್ತದೆ.

ಮೂರನೇ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡಲು ಬಯಸಿದರೆ, ಒಬ್ಬರಿಗೆ 38,025 ರೂಪಾಯಿ, ಇಬ್ಬರಿಗೆ 20,970 ರೂಪಾಯಿ, ಮೂವರಿಗೆ 16,420 ರೂಪಾಯಿ ವೆಚ್ಚ ಆಗಲಿದೆ. ಇನ್ನು ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಸೆಕೆಂಡ್ ಕ್ಲಾಸ್ ಎಸಿಯಲ್ಲಿ ಒಬ್ಬರಿಗೆ 37,740 ರೂಪಾಯಿ, ಇಬ್ಬರಿಗೆ 21,055 ರೂಪಾಯಿ ಮತ್ತು ಮೂವರಿಗೆ 16,875 ರೂಪಾಯಿ ವೆಚ್ಚ ಪಾವತಿಸಬೇಕಾಗುತ್ತದೆ. ಆಸಕ್ತರು IRCTCಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಪ್ಯಾಕೇಜ್ ಅನ್ನು ಬುಕ್ ಮಾಡಬಹುದಾಗಿದೆ.
10 ದಿನಗಳ ಪ್ರವಾಸ ಪ್ಯಾಕೇಜ್ ಘೋಷಣೆ
ಇದೇ ರೀತಿಯಲ್ಲಿ ಐಆರ್‌ಸಿಟಿಸಿಯು ಕೈಗೆಟುಕುವ ದರದಲ್ಲಿ ದೇಶಿ ಮತ್ತು ವಿದೇಶಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಾಗೆಯೇ ಇದೇ ತಿಂಗಳು ಮಾರ್ಚ್ 30ರಂದು ರಾಮನವಮಿಯನ್ನು ಆಚರಿಸುತ್ತಿದ್ದು, ಈ ಪ್ರಯುಕ್ತ 10 ದಿನಗಳ ಪ್ರವಾಸ ಪ್ಯಕೇಜ್ ಅನ್ನು ಘೋಷಣೆ ಮಾಡಿದೆ.
ಪ್ರವಾಸಿ ತಾಣಗಳ ವಿವರ
ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳು ಮತ್ತು ಪಾರಂಪರಿಕ ತಾಣಗಳನ್ನು ಪ್ರದರ್ಶಿಸುವ ಭಾರತ್ ಗೌರವ್ ಟೂರಿಸ್ಟ್ ರೈಲಿನ ಅಡಿಯಲ್ಲಿ "ಭಾರತ್ ನೇಪಾಳ ಅಷ್ಟ ಯಾತ್ರಾ" ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಭಾರತ್ ಗೌರವ್ ಟೂರಿಸ್ಟ್ ರೈಲು ಪ್ರಾರಂಭವು ದೇಶೀಯ ಪ್ರವಾಸೋದ್ಯಮದಲ್ಲಿ ವಿಶೇಷ ಆಸಕ್ತಿಯ ಸರ್ಕ್ಯೂಟ್‌ಗಳನ್ನು ಉತ್ತೇಜಿಸುತ್ತಾ ಬಂದಿದೆ.
ಮಾರ್ಚ್ 31ರಿಂದ ಪ್ರವಾಸ ಆರಂಭ
ಇದು 9 ರಾತ್ರಿಗಳು 10 ದಿನಗಳ ಪ್ರವಾಸವಾಗಿದೆ. ಭಾರತದ ಅಯೋಧ್ಯೆ, ವಾರಣಾಸಿ ಮತ್ತು ಪ್ರಯಾಗ್‌ರಾಜ್ ಮತ್ತು ನೇಪಾಳದ ಪಶುಪತಿನಾಥ (ಕಠ್ಮಂಡು) ನಂತಹ ಸ್ಥಳಗಳನ್ನು ಒಳಗೊಂಡಿದೆ. ರೈಲು ಜಲಂದರ್‌ನಿಂದ ಹೊರಡಲಿದ್ದು, ನವದೆಹಲಿ ಸಫ್ದರ್‌ಜಂಗ್‌ನಿಂದ ಹತ್ತಬಹುದಾಗಿದೆ. "ಭಾರತ್ ನೇಪಾಳ ಅಷ್ಟ ಯಾತ್ರೆ"ಯು ಮಾರ್ಚ್ 31ರಿಂದ ಪ್ರಾರಂಭವಾಗಲಿದೆ.
ಈ ಪ್ರವಾಸದಲ್ಲಿ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್, ಅಯೋಧ್ಯೆಯ ನಂದಿಗ್ರಾಮ್, ಕಠ್ಮಂಡುವಿನಲ್ಲಿ ಪಶುಪತಿನಾಥ ದೇವಾಲಯ, ದರ್ಬಾರ್ ಸ್ಕ್ವೈರ್, ಸ್ವಯಂಭುನಾಥ ಸ್ತೂಪ, ತುಳಸಿ ಮಾನಸ ದೇವಸ್ಥಾನ, ಸಂಕಟಮೋಚನ ದೇವಸ್ಥಾನ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ದೇವಸ್ಥಾನ, ವಾರಣಾಸಿಯ ವಾರಣಾಸ್ ಘಾಟ್‌ನಲ್ಲಿ ಗಂಗಾ ಆರತಿ, ಗಂಗಾ - ಯಮುನಾ ಸಂಗಮ, ಪ್ರಯಾಗರಾಜ್‌ನಲ್ಲಿರುವ ಹನುಮಾನ್ ದೇವಸ್ಥಾನವನ್ನು ನೋಡಬಹುದಾಗಿದೆ.












Click it and Unblock the Notifications