ಹಿಮಾಲಯದಿಂದ ಕನ್ಯಾಕುಮಾರಿವರೆಗೆ: ಭಾರತದ ಟಾಪ್ 10 ರೈಲು ನಿಲ್ದಾಣಗಳು
ಭಾರತೀಯ ರೈಲ್ವೆ ಸಂಪರ್ಕವು ಕೇವಲ ಸಾರಿಗೆ ವ್ಯವಸ್ಥೆಯಷ್ಟೇ ಅಲ್ಲ, ಇದು ನಮ್ಮ ದೇಶದ ಸಂಸ್ಕೃತಿ, ಇತಿಹಾಸ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಅತ್ಯಂತ ಮಹತ್ವದ ಪರಂಪರೆಯಾಗಿದೆ. ಈ ಪರಂಪರೆಯನ್ನು ನೋಡುತ್ತಾ ಹೋದರೆ ನಮ್ಮ ದೇಶದ ವಿವಿಧ ಭಾಗಗಳಲ್ಲಿರುವ ಕೆಲವು ರೈಲು ನಿಲ್ದಾಣಗಳು ತಮ್ಮದೆ ವಿಶಿಷ್ಟ ವಾಸ್ತುಶಿಲ್ಪ, ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಪ್ರವಾಸಿಗರನ್ನು ಸೆಳೆಯುತ್ತವೆ. ಅಂತಹ ಭಾರತದ 10 ಅತ್ಯಂತ ಸುಂದರವಾದ ಮತ್ತು ಐತಿಹಾಸಿಕ ಪರಂಪರೆ ಹೊಂದಿರುವ ರೈಲು ನಿಲ್ದಾಣಗಳ ವಿವರ ಇಲ್ಲಿದೆ.
1. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿಸ್
ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಈ ಐತಿಹಾಸಿಕ ರೈಲು ನಿಲ್ದಾಣವು ವಿಶ್ವ ಪರಂಪರೆ ತಾಣವಾಗಿ ಗುರುತಿಸಿಕೊಂಡಿದೆ. ಹಿಂದೆ ವಿಕ್ಟೋರಿಯ ಟರ್ಮಿನಸ್ ಎಂದು ಕರೆಯಲಾಗುತಿತ್ತು. ಇದು ಭಾರತದ ಅತ್ಯಂತ ಐತಿಹಾಸಿಕ ಮತ್ತು ಕಾರ್ಯನಿರತ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ವಿಕ್ಟೋರಿಯನ್ ಹಾಗೂ ಭಾರತೀಯ ವಾಸ್ತುಶಿಲ್ಪದ ಸಂಯೋಜನೆಯಿಂದ ನಿರ್ಮಿತವಾದ ಈ ಕಟ್ಟಡವು ಭವ್ಯ ಗುಂಬಜಗಳು ಮತ್ತು ಶಿಲ್ಪಕಲೆಯಿಂದ ಗಮನ ಸೆಳೆಯುತ್ತದೆ.

2. ದೂಧ್‌ಸಾಗರ್ ರೈಲು ನಿಲ್ದಾಣ
ಗೋವಾ ಮತ್ತು ಕರ್ನಾಟಕ ಗಡಿಯಲ್ಲಿ, ಪಶ್ಚಿಮ ಘಟ್ಟಗಳ ಬ್ರಗಾಂಜಾ ಘಾಟ್ ವಿಭಾಗದಲ್ಲಿದೆ. ದೂಧ್‌ಸಾಗರ್ ಜಲಪಾತದ ಸಮೀಪದಲ್ಲಿರುವ ಈ ರೈಲು ನಿಲ್ದಾಣವು ನೈಸರ್ಗಿಕ ಸೌಂದರ್ಯದಿಂದ ಪ್ರಸಿದ್ಧಿ ಪಡೆದಿದೆ. ದಟ್ಟ ಹಸಿರು ಕಾಡಿನ ಮಧ್ಯೆ ಹರಿಯುವ ಜಲಪಾತದ ಪಕ್ಕದಲ್ಲೇ ಸಾಗುವ ರೈಲು ಮಾರ್ಗ ಪ್ರವಾಸಿಗರಿಗೆ ಮನಮೋಹಕ ಅನುಭವ ನೀಡುತ್ತದೆ.
3. ವಿಜಯವಾಡ ರೈಲು ನಿಲ್ದಾಣ
1888ರಲ್ಲಿ ನಿರ್ಮಾಣವಾದ ವಿಜಯವಾಡ ಜಂಕ್ಷನ್ ದಕ್ಷಿಣ ಭಾರತದ ಪ್ರಮುಖ ರೈಲು ಕೇಂದ್ರಗಳಲ್ಲಿ ಒಂದಾಗಿದೆ. ವಿಜಯವಾಡ ಜಂಕ್ಷನ್ ಆಂಧ್ರಪ್ರದೇಶದ ಪ್ರಮುಖವಾದ ಮತ್ತು ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದೆ, ಇದು ದಕ್ಷಿಣ ಮಧ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಈ ರೈಲು ನಿಲ್ದಾಣವನ್ನು 400ಕ್ಕೂ ಹೆಚ್ಚು ರೈಲುಗಳನ್ನು ಮತ್ತು 1.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ 10 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ NSG-1 ಶ್ರೇಣಿಯ ವ್ಯವಸ್ಥೆ ಒಳಗೊಂಡಿದೆ. ಹೆಚ್ಚಿನ ಆದಾಯದ ಹಿನ್ನೆಲೆಯಲ್ಲಿ ಇದಕ್ಕೆ ಎ-1 ದರ್ಜೆ ಲಭಿಸಿದ್ದು, ಭಾರತೀಯ ರೈಲ್ವೆಯ ಪ್ರಮುಖ ಭಾಗವಾಗಿ ಬೆಳೆದಿದೆ.
4. ಕನ್ಯಾಕುಮಾರಿ ರೈಲು ನಿಲ್ದಾಣ
ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿ ರೈಲು ನಿಲ್ದಾಣವು ಭಾರತೀಯ ರೈಲ್ವೆ ಸಂಪರ್ಕದ ಕೊನೆಯ ತಾಣವಾಗಿದೆ. ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ ಸೇರುವ ಸ್ಥಳಕ್ಕೆ ಇದು ಪ್ರವೇಶ ದ್ವಾರವಾಗಿದೆ. ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗಕ್ಕೆ ಸೇರಿರುವ ಇದು, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ.
5. ವೆಲಂಕಣಿ ರೈಲು ನಿಲ್ದಾಣ
ಕ್ಯಾಥೆಡ್ರಲ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿತವಾಗಿರುವ ವೆಲಂಕಣಿ ರೈಲು ನಿಲ್ದಾಣವು ತನ್ನ ಬಿಳಿ ಬಣ್ಣದ ವಿನ್ಯಾಸ ಮತ್ತು ಭವ್ಯ ಗೋಪುರಗಳಿಂದ ಪ್ರಸಿದ್ಧಿ ಪಡೆದಿದೆ. ಇದು ಪ್ರಸಿದ್ಧ ವೆಲಂಕಣಿ ಬೆಸಿಲಿಕಾ ಚರ್ಚ್‌ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
6. ಘೂಮ್ ರೈಲು ನಿಲ್ದಾಣ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸಮೀಪದಲ್ಲಿರುವ ಘೂಮ್ ರೈಲು ನಿಲ್ದಾಣವು ಭಾರತದ ಅತಿ ಎತ್ತರದ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಮಾಲಯ ಪರ್ವತಗಳ ಮಧ್ಯೆ ಹರಡಿರುವ ಈ ಮಾರ್ಗದಲ್ಲಿ ಸಂಚರಿಸುವ ರೈಲು ಪ್ರಯಾಣಿಕರಿಗೆ ಮಂಜಿನಿಂದ ಆವೃತವಾದ ಪರ್ವತಗಳು ಮತ್ತು ಹಸಿರು ಚಹಾ ತೋಟಗಳ ಅದ್ಭುತ ದೃಶ್ಯ ಸಿಗುತ್ತದೆ.
7. ಚಾರ್ ಬಾಗ್ ರೈಲು ನಿಲ್ದಾಣ
ಲಖನೌದ ಚಾರ್ ಬಾಗ್ ರೈಲು ನಿಲ್ದಾಣವು ನಗರದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ರೈಲು ನಿಲ್ದಾಣವಾಗಿದೆ. ಭಾರತದ ಅತ್ಯಂತ ಹಳೆಯ, ಸುಂದರ ಮತ್ತು ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಅರಮನೆ ಮಾದರಿಯ ವಿನ್ಯಾಸದಿಂದ ಈ ರೈಲು ನಿಲ್ದಾಣವು ಜನರ ಗಮನ ಸೆಳೆಯುತ್ತದೆ. ಗುಂಬಜಗಳು ಮತ್ತು ಗೋಪುರಗಳಿಂದ ಕೂಡಿದ ಈ ಕಟ್ಟಡವು ಅವಧಿ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ.
8. ಹೌರಾ ರೈಲು ನಿಲ್ದಾಣ
ಹೌರಾ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಹೌರಾದಲ್ಲಿದ್ದು, ಭಾರತದ ಅತಿ ಹಳೆಯ ಮತ್ತು ಅತಿ ದೊಡ್ಡ ರೈಲು ನಿಲ್ದಾಣಗಳಲ್ಲಿ ಒಂದಾದ ಹೌರಾ ಸ್ಟೇಷನ್ ಪೂರ್ವ ಭಾರತದ ಪ್ರಮುಖ ಪ್ರವೇಶ ದ್ವಾರವಾಗಿದೆ. ಹೂಗ್ಲಿ ನದಿಯ ದಂಡೆಯ ಮೇಲಿರುವ ಈ ನಿಲ್ದಾಣವು 23 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ ಮತ್ತು ದಿನಕ್ಕೆ 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.
9. ಕಟಕ್ ರೈಲು ನಿಲ್ದಾಣ
ಒಡಿಶಾದ ಕಟಕ್ ರೈಲು ನಿಲ್ದಾಣವನ್ನು ಐತಿಹಾಸಿಕ ಬರಬತಿ ಕೋಟೆಯ ಮಾದರಿಯಲ್ಲಿ ಮರು ವಿನ್ಯಾಸಗೊಳಿಸಲಾಗಿದೆ. ಕೋಟೆಯಂತೆ ಕಾಣುವ ಇದರ ವಿನ್ಯಾಸವು ಇತಿಹಾಸ ಮತ್ತು ಆಧುನಿಕತೆಯ ಸುಂದರ ಸಂಯೋಜನೆಯಾಗಿದೆ. ಒಡಿಶಾದ ಅತ್ಯಂತ ಜನನಿಬಿಡ ಮತ್ತು ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ಪೂರ್ವ ಕರಾವಳಿ ರೈಲ್ವೆ ವಲಯದ ಖುರ್ದಾ ರಸ್ತೆ ವಿಭಾಗದ ಅಡಿಯಲ್ಲಿ ಬರುತ್ತದೆ. ಈ ರೈಲು ನಿಲ್ದಾಣವು ಹೌರಾ ಮತ್ತು ಚೆನ್ನೈ ಮುಖ್ಯ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ.
10. ದ್ವಾರಕಾ ರೈಲು ನಿಲ್ದಾಣ
ಗುಜರಾತ್‌ನ ಪವಿತ್ರ ನಗರ ದ್ವಾರಕಾದಲ್ಲಿರುವ ದ್ವಾರಕಾ ನಗರದ ದೇವಾಲಯಗಳ ಮಾದರಿಯಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣವು ಧಾರ್ಮಿಕ ಮತ್ತು ಆಧುನಿಕ ವಾಸ್ತುಶಿಲ್ಪದ ಸುಂದರ ಸಂಯೋಜನೆಯಾಗಿದೆ. ದೇವಸ್ಥಾನದಂತೆ ಕಾಣುವ ಇದರ ವಿನ್ಯಾಸ ಪ್ರವಾಸಿಗರ ಗಮನ ಸೆಳೆಯುತ್ತದೆ.
ಭಾರತದ ಈ ರೈಲು ನಿಲ್ದಾಣಗಳು ಕೇವಲ ಪ್ರಯಾಣದ ಕೇಂದ್ರಗಳಲ್ಲ ಇವುಗಳು ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ನೈಸರ್ಗಿಕ ವೈಭವದ ಪ್ರತಿರೂಪಗಳಾಗಿವೆ. ಹೀಗಾಗಿ ಭಾರತೀಯ ರೈಲ್ವೆಯಲ್ಲಿ ಮಾಡುವ ಪ್ರತಿಯೊಂದು ಪ್ರಯಾಣವೂ ನೆನಪಿನಲ್ಲಿ ಉಳಿಯುವ ಅನುಭವವಾಗುತ್ತದೆ.














Click it and Unblock the Notifications