Indian Railways: ಹೊಸ ಅಪ್ಲಿಕೇಶನ್, ವಿಶೇಷತೆ ತಿಳಿಯಿರಿ
ಬೆಂಗಳೂರು, ನವೆಂಬರ್ 04: ಭಾರತೀಯ ರೈಲ್ವೆ ಇನ್ನಷ್ಟು ಪ್ರಯಾಣಿಕ ಸ್ನೇಹಿ ಆಗಲಿದೆ. ಅದಕ್ಕಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಹೊಸದಾಗಿ ತಯಾರಾಗುತ್ತಿರುವ ಅಪ್ಲಿಕೇಶನ್ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಜನರು ಟಿಕೆಟ್ ಬುಕ್ ಮಾಡುವ ಜೊತೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಟಿಕೆಟ್ ಬುಕ್ಕಿಂಗ್ ಅನ್ನು ಇನ್ನಷ್ಟು ಸರಳೀಕರಣಗೊಳಿಸಲು ಭಾರತೀಯ ರೈಲ್ವೆ super app ಹೆಸರಿನ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಹಲವು ಪ್ರಯಾಣಿಕ ಸೇವೆಗಳನ್ನು ಒಂದೇ ಅಪ್ಲಿಕೇಶನ್ ಅಡಿ ಸೇರಿಸಲಾಗುತ್ತದೆ. ಇದರಿಂದಾಗಿ ವಿವಿಧ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಕಿರಿಕಿರಿ ಪ್ರಯಾಣಿಕರಿಗೆ ತಪ್ಪಲಿದೆ.

ಅಪ್ಲಿಕೇಶನ್ ವಿಶೇಷತೆಗಳು: ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಸೂಪರ್ ಆಪ್ ಅಪ್ಲಿಕೇಶನ್ ರೈಲ್ವೆ ಟಿಕೆಟ್ ಬುಕ್ ಮಾಡಲು, ಪ್ಲಾಟ್ ಫಾರ್ಮ್ ಟಿಕೆಟ್ ಕೊಳ್ಳಲು, ರೈಲುಗಳ ವೇಳಾಪಟ್ಟಿ ತಿಳಿಯಲು, ರೈಲಿನಲ್ಲಿ ಸಂಚಾರ ನಡೆಸುವಾಗ ಆಹಾರ ಬುಕ್ ಮಾಡಲು ಸಹ ಅನುಕೂಲ ಮಾಡಿಕೊಡಲಿದೆ.
ಈ ಹೊಸ ಅಪ್ಲಿಕೇಶನ್ ಅನ್ನು ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರ (ಸಿಆರ್‌ಐಎಸ್) ಅಭಿವೃದ್ಧಿಗೊಳಿಸಿದೆ. ಐಆರ್‌ಸಿಟಿಸಿ ಮೇಲಿರುವ ಒತ್ತಡವನ್ನು ಈ ಹೊಸ ಅಪ್ಲಿಕೇಶನ್ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಅಪ್ಲಿಕೇಶನ್ ಬಂದ ಮೇಲೆಯೂ ಐಆರ್‌ಸಿಟಿಸಿ ತನ್ನ ಕಾರ್ಯವನ್ನು ಮುಂದುವರೆಸಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, "ಐಆರ್‌ಸಿಟಿಸಿ ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರ (ಸಿಆರ್‌ಐಎಸ್) ಮತ್ತು ಪ್ರಯಾಣಿಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ಟಿಕೆಟ್‌ಗಳನ್ನು ಬುಕ್ ಮಾಡಲು ಜನರು ಬಳಕೆ ಮಾಡಬಹುದು" ಎಂದು ತಿಳಿಸಿದರು.
ಸದ್ಯ ರೈಲು ಪ್ರಯಾಣಿಕರು ವಿವಿಧ ಅಪ್ಲಿಕೇಶನ್ ಅನ್ನು ರೈಲ್ವೆ ಸೇವೆಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಹಲವು ಸೇವೆಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ. ಇದರಿಂದಾಗಿ ಜನರು ಬೇರೆ ಬೇರೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು ತಪ್ಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ರೈಲ್ವೆ ಪ್ರಯಾಣಿಕರು ಐಆರ್‌ಸಿಟಿಸಿ, ರೈಲ್ ಕನೆಕ್ಟ್, ಐಆರ್‌ಸಿಟಿಸಿ ಇ-ಕ್ಯಾಟರಿಂಗ್, ಯುಟಿಎಸ್, ಎನ್‌ಟಿಇ ಸೇರಿದಂತೆ ವಿವಿಧ ರೈಲು ಸೇವೆಗಳಿಗೆ ಬೇರೆ ಬೇರೆ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಹೊಸದಾಗಿ ಬಿಡುಗಡೆಗೊಳ್ಳುವ ಸೂಪರ್ ಅಪ್ ಹಲವು ಸೇವೆಗಳನ್ನು ಒಂದೇ ಅಪ್ಲಿಕೇಶನ್ ಅಲ್ಲಿ ನೀಡಲಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕ್ ಮಾಡಲು ಸದ್ಯ ಪ್ರಯಾಣಿಕರಿಗೆ ಇರುವ ಸುಲಭವಾದ ಅಪ್ಲಿಕೇಶನ್ ಆಗಿದೆ. ಆದರೆ ಇದರ ಮೇಲೆ ಒತ್ತಡ ಜಾಸ್ತಿ ಇದೆ. ಕೋಟ್ಯಾಂತರ ಜನರು ಟಿಕೆಟ್ ಬುಕ್ ಮಾಡಲು ಬಳಕೆ ಮಾಡುವುದರಿಂದ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಜನರು ಆರೋಪಿಸುತ್ತಾರೆ. ಅಲ್ಲದೇ ರೈಲ್ವೆ ಇಲಾಖೆ ಬದಲಾಗುತ್ತಿರುವ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಜನರು ತಮ್ಮ ಬಳಕೆದಾರರ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಐಆರ್‌ಟಿಸಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಒಂದು ತಿಂಗಳಲ್ಲಿ 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿತ್ತು. ಇಲ್ಲದಿದ್ದರೆ 12 ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು ಎಂದು ರೈಲ್ವೆ ಇಲಾಖೆ ಹೇಳಿತ್ತು. ಈಗ ಹೊಸ ಅಪ್ಲಿಕೇಶನ್‌ನಲ್ಲಿ ಇನ್ನೂ ಹಲವಾರು ಹೊಸ ಆಯ್ಕೆಯನ್ನು ನೀಡುವ ನಿರೀಕ್ಷೆ ಇದೆ.
ಸೂಪರ್ ಆಪ್ ಅಪ್ಲಿಕೇಶನ್ ಈಗಾಗಲೇ ತಯಾರಾಗಿದ್ದು, ಪ್ರಾಯೋಗಿಕವಾಗಿ ವಿವಿಧ ಸೇವೆಗಳನ್ನು ಬುಕ್ ಮಾಡಿ ಇರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಡಿಸೆಂಬರ್‌ನಲ್ಲಿ ಇದನ್ನು ಬಿಡುಗಡೆ ಮಾಡಲು ಇಲಾಖೆ ಮುಂದಾಗಿದೆ. ಆಗ ರೈಲ್ವೆ ಇಲಾಖೆಯ ವಿವಿಧ ಸೇವೆಗಳು ಒಂದೇ ಅಪ್ಲಿಕೇಶನ್ ಅಡಿಯಲ್ಲಿ ಪ್ರಯಾಣಿಕರಿಗೆ ಸಿಗಲಿವೆ.












Click it and Unblock the Notifications