ಇನ್ಮುಂದೆ ಬಂಡೀಪುರಕ್ಕೆ ಬರುವ ಹೊರರಾಜ್ಯದ ವಾಹನಗಳಿಗೆ ಗ್ರೀನ್ ಟ್ಯಾಕ್ಸ್
ಗುಂಡ್ಲುಪೇಟೆ, ಏಪ್ರಿಲ್, 23: ಬೇಸಿಗೆ ರಜೆಯಲ್ಲಿ ಬಂಡೀಪುರ ಉದ್ಯಾನದತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಾರೆ. ಆದ್ದರಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯವನ್ನು ಹೊರ ರಾಜ್ಯಗಳಿಂದ ಪ್ರವೇಶಿಸುವ ವಾಹನಗಳಿಗೆ ಅರಣ್ಯ ಇಲಾಖೆ ಹಸಿರು ತೆರಿಗೆ (ಗ್ರೀನ್ ಟ್ಯಾಕ್ಸ್) ವಿಧಿಸಲು ಆರಂಭಿಸಿದೆ. ಆದರೆ ಈ ಗ್ರೀನ್ ಟ್ಯಾಕ್ಸ್‌ನಿಂದ ರಾಜ್ಯದ ವಾಹನಗಳಿಗೆ ವಿನಾಯಿತಿ ನೀಡಿರುವುದು ನೆಮ್ಮದಿ ತಂದಿದೆ.
ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹೊರ ರಾಜ್ಯದ ಎಲ್ಲಾ ವಾಹನಗಳಿಗೆ ಹಸಿರು ಕರ ವಿಧಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಹಸಿರು ಕರ ಸಂಗ್ರಹಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳಿಗೆ ಟ್ಯಾಕ್ಸ್ ಸಂಗ್ರಹಿಸುತ್ತಿರಲಿಲ್ಲ. ಆದರೆ ನಿಯಮಾನುಸಾರ ಹಳದಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳಿಗೆ ಮಾತ್ರ ತೆರಿಗೆಯನ್ನು ಹಾಕಲಾಗುತ್ತಿತ್ತು.

ಆದರೆ ನೆರೆ ರಾಜ್ಯಗಳಲ್ಲಿ ತಮ್ಮ ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನಗಳನ್ನು ಹೊರತುಪಡಿಸಿ ಅನ್ಯ ರಾಜ್ಯದ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ವಿಧಿಸುತ್ತಿದ್ದವು. ಇದರಿಂದ ಆ ರಾಜ್ಯಗಳ ಸರ್ಕಾರಕ್ಕೆ ಆದಾಯ ಸಂಗ್ರಹವೂ ಆಗುತ್ತಿತ್ತು. ಇದೀಗ ಬಂಡೀಪುರ ಅರಣ್ಯ ವಲಯದಲ್ಲಿ ಗ್ರೀನ್ ಟ್ಯಾಕ್ಸ್ ವಸೂಲಾತಿಯನ್ನು ಆರಂಭಿಸಲಾಗಿದೆ.
ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ಎಷ್ಟು?
ಬಂಡೀಪುರ ವ್ಯಾಪ್ತಿಯ ಮೂಲೆ ಹೊಳೆ, ಮದ್ದೂರು, ಮೆಲುಕಾಮನಹಳ್ಳಿ ಹಾಗೂ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗಳಲ್ಲಿ ತಮಿಳುನಾಡು, ಕೇರಳ ರಾಜ್ಯಗಳಿಂದ ಬರುವ ಹಾಗೂ ಹೋಗುವ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಕಳೆದ ತಿಂಗಳಷ್ಟೇ ರಾಜೀವ್ ರಂಜನ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಮುಖ್ಯ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಸಭೆಯಲ್ಲಿ ಕರ್ನಾಟಕ ನೋಂದಣಿ ವಾಹನಗಳನ್ನು ಹೊರತುಪಡಿಸಿ ಅಂತರರಾಜ್ಯ ವಾಹನಗಳ ಪ್ರವೇಶಕ್ಕೆ ಶುಲ್ಕ ವಿಧಿಸಲು ತೀರ್ಮಾನಿಸಲಾಗಿತ್ತು. ಅದರಂತೆಯೆ ಇದೀಗ ಹೊರ ರಾಜ್ಯಗಳಿಂದ ಬರುವ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಲಘು ವಾಹನಗಳಿಗೆ 20 ರೂಪಾಯಿ ಹಾಗೂ ಭಾರಿ ವಾಹನಗಳಿಗೆ 50 ರೂಪಾಯಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.

ಸದಾ ಲಗ್ಗೆಯಿಡುವ ಪ್ರವಾಸಿಗರು
ಬಂಡೀಪುರ ಉದ್ಯಾನ ಕೇರಳ ಮತ್ತು ತಮಿಳುನಾಡಿನೊಂದಿಗೆ ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಜೊತೆಗೆ ತಮಿಳುನಾಡಿಗೆ ತೆರಳುವ ಮತ್ತು ಅಲ್ಲಿಂದಲೂ ಬಂಡೀಪುರಕ್ಕೆ ಪ್ರವಾಸಿಗರು ವಾಹನಗಳಲ್ಲಿ ಆಗಮಿಸುವುದರಿಂದ ಅರಣ್ಯ ಇಲಾಖೆ ವಿಧಿಸುವ ತೆರಿಗೆಯಿಂದ ಒಂದಷ್ಟು ಆದಾಯವೂ ಬರಲಿದೆ.
ಈಗಾಗಲೇ ಬಂಡೀಪುರ ಹೆಸರುವಾಸಿಯಾಗಿದ್ದು, ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಣೆಯಾಗಿ 50 ವರ್ಷಗಳು ಕಳೆದಿದೆ. ಈ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಆಗಮಿಸಿದ್ದು ಇತಿಹಾಸವಾಗಿದೆ.
ಜಿಲ್ಲೆಯಲ್ಲಿ ಚೇತರಿಸಿದ ಪ್ರವಾಸೋದ್ಯಮ
ಸುಮಾರು 1,024 ಸಾವಿರ ಚದರ ಕಿ.ಮೀಟರ್ ವ್ಯಾಪ್ತಿಯಲ್ಲಿ ವಿಸ್ತೀರ್ಣದಲ್ಲಿರುವ ಉದ್ಯಾನವನದಲ್ಲಿ ಸಫಾರಿ ಮಾಡುವುದೇ ಒಂಥರಾ ಮಜಾ. ಹುಲಿಸಂರಕ್ಷಣಾ ಉದ್ಯಾನವಾಗಿರುವ ಇಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ಹುಲಿಗಳು ಪ್ರವಾಸಿಗರಿಗೆ ಪುಳಕ ನೀಡುತ್ತವೆ. ಆದ್ದರಿಂದ ಸಫಾರಿಗೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.
ಇನ್ನು ಬಂಡೀಪುರ ಸೇರಿದಂತೆ ಜಿಲ್ಲೆಯಲ್ಲಿ ಹಲವು ಪ್ರವಾಸಿತಾಣಗಳು ಇರುವುದರಿಂದ ಮತ್ತು ಹೊರ ರಾಜ್ಯಗಳ ಸಂಪರ್ಕವೂ ಇರುವುದರಿಂದ ರಜಾ ದಿನಗಳಲ್ಲಿ ಪ್ರವಾಸಿಗರ ದಂಡು ಇಲ್ಲಿ ಇದ್ದೇ ಇರುತ್ತದೆ. ಕೊರೊನಾ ಬಳಿಕ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ನಂಬಿಕೊಂಡು ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳು ಈಗ ತುಸು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications