Gopalaswamy Hill: ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್
ಚಾಮರಾಜನಗರ, ಡಿಸೆಂಬರ್, 21: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಡಿಸೆಂಬರ್ 18ರಿಂದ 20ರವರೆಗೆ ರಸ್ತೆ ಡಾಂಬರೀಕರಣ ಉದ್ದೇಶದಿಂದ ನಿರ್ಬಂಧಿಸಲಾಗಿದ್ದ ವಾಹನ ಸಂಚಾರ ಇಂದಿನಿಂದ ಮತ್ತೆ ಆರಂಭಗೊಂಡಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆ ತೀವ್ರ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 11.20 ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಿ ದುರಸ್ತಿಪಡಿಸಲಾಗಿದೆ. ಈ ಕಾರಣದಿಂದ ಮೂರು ದಿನಗಳ ಕಾಲ ನಿರ್ಬಂಧಿಸಿದ ಬಸ್ ಸಂಚಾರ ಗುರುವಾರ ಎಂದಿನಂತೆ ಪ್ರಾರಂಭವಾಗಿದೆ.

ಕಳೆದ ಮೂರು ದಿನಗಳ ಬೆಟ್ಟಕ್ಕೆ ನಿರ್ಬಂಧ ಹೇರಿದ ಹಿನ್ನೆಲೆ ಗುರುವಾರ ಬೆಳಗ್ಗೆಯಿಂದ ಪ್ರವೇಶ ಆರಂಭವಾದರೂ ಸಹ ಭಕ್ತಾದಿಗಳು ಹಾಗೂ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯಿತ್ತು. ಕೇವಲ ಮೂರು ಕೆಎಸ್‍ಆರ್‌ಟಿಸಿ ಬಸ್‌ಗಳನ್ನು ಮಾತ್ರ ಗೋಪಾಲಸ್ವಾಮಿ ಬೆಟ್ಟಕ್ಕೆ ಬಿಡಲಾಗಿತ್ತು ಎಂದು ಡಿಪೋ ವ್ಯವಸ್ಥಾಪಕರಾದ ಪುಷ್ಪಾ ಮಾಹಿತಿ ನೀಡಿದರು. ಈ ಮಧ್ಯೆ ಅರಣ್ಯ ಇಲಾಖೆಯಿಂದಲೂ ಬೆಟ್ಟಕ್ಕೆ ಮೂರು ಜೀಪ್‍ಗಳು ಎಂದಿನಂತೆ ಸಂಚಾರ ಮಾಡಿವೆ.
ಗೋಪಾಲಸ್ವಾಮಿ ಬೆಟ್ಟದ ಹದಗೆಟ್ಟ ರಸ್ತೆ ದುರಸ್ತಿ ಪಡಿಸಲಾಗಿದ್ದು, ಬಸ್ ಸಂಚಾರ ಎಂದಿನಂತೆ ಗುರುವಾರದಿಂದ ಪ್ರಾರಂಭಗೊಂಡಿದೆ. ಭಕ್ತಾದಿಗಳು ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿ, ಪ್ರಕೃತಿ ಸೌಂದರ್ಯ ಸವಿಯುವ ಜೊತೆಗೆ ದೇವರ ದರ್ಶನ ಪಡೆಯಬಹುದು ಎಂದು ಗುಂಡ್ಲುಪೇಟೆ ಡಿಪೋ ವ್ಯವಸ್ಥಾಪಕಿ ಪುಷ್ಪಾ ತಿಳಿಸಿದ್ದಾರೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಯಾಕೆ ನಿರ್ಬಂಧ?
ಗುಂಡ್ಲುಪೇಟ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾಗುವ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಡಿಸೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆ ವಾಹನ ಸಂಚಾರಕ ತೀವ್ರ ಅಡಚಣೆ ಉಂಟಾಗುತ್ತಿತ್ತು. ಈ ಬಗ್ಗೆ ಪ್ರವಾಸಿಗರು ಹಾಗೂ ಪ್ರಯಾಣಿಕರಿಂದ ವ್ಯಾಪಕವಾಗಿ ದೂರುಗಳು ಸಹ ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಇದೀಗ ರಸ್ತೆ ದುರಸ್ತಿಗೊಳಿಸಿ 11.20 ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಮಾಡಲು ಮುಂದಾಗಿತ್ತು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಪ್ರತಿನಿತ್ಯ ಕೆಎಸ್ಆರ್‌ಟಿಸಿ ವತಿಯಿಂದ 5 ಬಸ್‌ಗಳನ್ನು ಬಿಡಲಾಗಿತ್ತು. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ 20ಕ್ಕೂ ಅಧಿಕ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಜೊತೆಗೆ ಅರಣ್ಯ ಇಲಾಖೆ ವತಿಯಿಂದ ನಾಲ್ಕೈರಿಂದ ಐದು ಜೀಪ್‌ಗಳನ್ನು ಸಹ ಬಿಡಲಾಗಿತ್ತು. ಇದೀಗ ರಸ್ತೆ ಡಾಂಬರೀಕರಣ ಮಾಡುವ ಉದ್ದೇಶದಿಂದ ಎಲ್ಲಾ ವಾಹನಗಳಿಗೆ ನಿರ್ಬಂಧಿಸಲಾಗಿತ್ತು.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತಾದಿಗಳು ಹಾಗೂ ಪ್ರವಾಸಿಗರು ಡಿಸೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಬೆಟ್ಟಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಟಿ.ರಮೇಶ್ ಬಾಬು ತಿಳಿಸಿದ್ದರು.












Click it and Unblock the Notifications