Tirupati Tirumala: ತಿರುಮಲ ಭಕ್ತರಿಗೆ ಸಿಹಿಸುದ್ದಿ- ಒಂದು ತಿಂಗಳ ನಂತರ ಈ ಸೇವೆ ಆರಂಭ
ತಿರುಮಲ ಶ್ರೀಗಳ ಭಕ್ತರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಧನುರ್ಮಾಸ ಕಳೆದ ಬಳಿಕ ತಿರುಪತಿ ತಿಮ್ಮಪ್ಪನಿಗೆ ಅನೇಕ ಸೇವೆಗಳು ಆರಂಭವಾಗಲಿವೆ. ಈ ಬಗ್ಗೆ ಟಿಟಿಡಿ ವಿವರಣೆಯನ್ನು ಹಂಚಿಕೊಂಡಿದ್ದು ಇನ್ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಈ ಎಲ್ಲಾ ಸೇವೆಗಳನ್ನು ಕಣ್ತುಂಬಿಕೊಳ್ಳಬಹುದು.
ಭಾನುವಾರದಂದು ಪವಿತ್ರ ಮಾಸದ ಧನುರ್ಮಾಸ ಮುಗಿದ ನಂತರ ಸೋಮವಾರ ಬೆಳಿಗ್ಗೆಯಿಂದ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸುಪ್ರಭಾತ ಸೇವೆ ಪುನರಾರಂಭವಾಯಿತು. ಕಳೆದ ವರ್ಷ ಡಿಸೆಂಬರ್ 17 ರಂದು ಧನುರ್ಮಾಸ ಪ್ರಾರಂಭವಾದಾಗ ಸುಪ್ರಭಾತ ಸೇವೆಯನ್ನು ನಿಲ್ಲಿಸಲಾಯಿತು.

ಬಳಿಕ ಶ್ರೀವಾರಿ ದೇವಸ್ಥಾನದಲ್ಲಿ ಸುಪ್ರಭಾತದ ಬದಲಾಗಿ ದೇವರ ತಿರುಪ್ಪಾವೈ ಪಾರಾಯಣ ಮುಂದುವರೆಯಿತು. ಇದೀಗ ಧನುರ್ಮಾಸ ಮುಗಿದಿದ್ದು ಜನವರಿ 15ರಿಂದ ಎಂದಿನಂತೆ ಶ್ರೀವಾರಿ ದೇವಸ್ಥಾನದಲ್ಲಿ ಸುಪ್ರಭಾತ ಸೇವೆ ನಡೆಸಲಾಗಿದೆ ಎಂದು ಟಿಟಿಡಿ ಹೇಳಿಕೆ ಬಿಡುಗಡೆ ಮಾಡಿದೆ.
ಮಾತ್ರವಲ್ಲದೆ ಜನವರಿ 16 ರಂದು ಬೆಳಗ್ಗೆ ಶ್ರೀವಾರಿ ದೇವಸ್ಥಾನದಲ್ಲಿ ಗೋದಾಪರಿಣಯೋತ್ಸವ ಹಾಗೂ ಮಧ್ಯಾಹ್ನ ಪಾರ್ವೇತಮಂಟಪದಲ್ಲಿ ಪಾರ್ವೇತ ಉತ್ಸವ ನಡೆಯಲಿದೆ ಎಂದು ತಿರುಮಲ ತಿರುಪತಿ ದೇವಸ್ತಾನ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ತಿರುಮಲ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಜನವರಿ 14 ರಂದು ಭೋಗಿತೇರು ನಡೆಯಿತು. ಜನವರಿ 15 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

ಇಂದು ಗೋಪೂಜೆ, ನಾನಾ ಕಾರ್ಯಕ್ರಮಗಳು
ಸಂಕ್ರಾಂತಿ ಮತ್ತು ಸುಗ್ಗಿ ಹಬ್ಬದ ನಿಮಿತ್ತ ಜನವರಿ 16 ಮಂಗಳವಾರ ತಿರುಪತಿಯ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಸಭಾಂಗಣದಲ್ಲಿ ಗೋಪೂಜೆ ಅದ್ಧೂರಿಯಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಬೆಳಗ್ಗೆ 6ಕ್ಕೆ ವೇಣುಗಾನಂ, ದಾಸಸಾಹಿತ್ಯ ಯೋಜನೆಯ ಕಲಾವಿದರಿಂದ ಕೋಲಾಟ, ವೇದಪಾರಾಯಣ ಹಾಗೂ ಅನ್ನಮಾಚಾರ್ಯ ಯೋಜನೆಯ ಕಲಾವಿದರಿಂದ ಭಕ್ತಿಗೀತೆಗಳು ನಡೆಯಲಿವೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ.
ಜೊತೆಗೆ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಹರಟಿ, ಗೋಪೂಜೆ, ಅಮ್ಮನ ಸಮಾರಾಧನೆ, ತುಳಸಿಪೂಜೆ, ಗಜಪೂಜೆ, ಅಶ್ವಪೂಜೆ, ವೃಷಭ ಪೂಜೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಹಿಂದೂ ಧರ್ಮ ಪ್ರಚಾರ ಪರಿಷತ್ತಿನ ಆಶ್ರಯದಲ್ಲಿ ಸಂಕ್ರಾಂತಿ ಹರಿದಾಸ, ಬಸವಣ್ಣ ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ತಿರುಪತಿಗೆ ಭೇಟಿ ನೀಡಲು ಉತ್ತಮ ಸಮಯ
ವೈಕುಂಠ ದ್ವಾರ ದರ್ಶನದ ಬಳಿಕ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ದೇವಸ್ಥಾನದಲ್ಲಿ ನೂಕುನುಗ್ಗಲು ಇಲ್ಲದೆ ಎರಡು ದಿನಗಳಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಸರತಿ ಸಾಲಿನಲ್ಲಿ ಕಾಯದೆ ಶ್ರೀವಾರಿಯ ನೇರ ದರ್ಶನಕ್ಕೆ ಟಿಟಿಡಿ ಅನುಮತಿ ನೀಡಿದೆ.
ದಟ್ಟಣೆ ಕಡಿಮೆಯಾದ ಬೆನ್ನಲ್ಲೆ ಸರ್ವ ದರ್ಶನದ ಟಿಕೆಟ್ ಪಡೆದ ಭಕ್ತರು ಶೀಘ್ರವೇ ದರ್ಶನ ಪಡೆಯುತ್ತಿದ್ದಾರೆ. ಕಳೆದ ಮಂಗಳವಾರ 65,901 ಭಕ್ತರು ಶ್ರೀಗಳ ದರ್ಶನ ಪಡೆದರು. ಅಲ್ಲದೆ ಆ ದಿನ ಶ್ರೀವಾರಿ ಹುಂಡಿಯ ಆದಾಯ 3.77 ಕೋಟಿ ರೂಪಾಯಿ ಸಂಗ್ರಹವಾಗಿದೆ. 16,991 ಭಕ್ತರು ಸ್ವಾಮಿಗೆ ಹರಕೆ ತೀರಿಸಿದ್ದಾರೆ. ಇನ್ನೂ ಮಕರ ಸಂಕ್ರಾಂತಿ ಪ್ರಯುಕ್ತ ಕಳೆದ ದಿನ ಹೆಚ್ಚಿನ ಸಂಖ್ಯೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದು ಹರಕೆ ತೀರಿಸಿದ್ದಾರೆ.












Click it and Unblock the Notifications