ಬೆಳಗಾವಿಯಿಂದ ವಿಮಾನ ಸೇವೆ ಆರಂಭಿಸಿ, ರಾಜ್ಯಪಾಲರಿಗೆ ಪತ್ರ
ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸುವರ್ಣ ವಿಧಾನಸೌಧವಿದೆ, ಪ್ರತಿವರ್ಷ ಚಳಿಗಾಲದ ವಿಧಾನಮಂಡಲ ಅಧಿವೇಶ ನಡೆಯುತ್ತದೆ. ಬೆಳಗಾವಿಗೆ ವಿಮಾನ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಾವಿ, ಮಾರ್ಚ್ 12; ಗಡಿನಾಡು ಬೆಳಗಾವಿಯಿಂದ ನವದೆಹಲಿ, ಪುಣೆ, ಮುಂಬೈ ಮುಂತಾದ ನಗರಗಳಿಗೆ ವಿಮಾನ ಸೇವೆ ರದ್ದುಗೊಳಿಸಲಾಗಿದೆ. ಇದರಿಂದಾಗಿ ಜನರಿಗೆ ತೊಂದರೆಯಾಗಿದೆ. ಮತ್ತೆ ವಿಮಾನ ಸಂಚಾರ ಆರಂಭಿಸಬೇಕು ಎಂದು ಡಾ. ಪ್ರಭಾಕರ್ ಕೋರೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಪತ್ರವನ್ನು ಬರೆದಿದ್ದಾರೆ. ಡಿಸೆಂಬರ್ 10ರಿಂದಲೇ ಸ್ಪೈಸ್‌ಜೆಟ್ ಬೆಳಗಾವಿಯಿಂದ ಎಲ್ಲಾ ವಿಮಾನ ಸೇವೆ ಸ್ಥಗಿತಗೊಳಿಸಿದೆ.
ಬಿಜೆಪಿ ನಾಯಕ, ಕೆಎಲ್‌ಇ ಸೊಸೈಟಿ ಚೇರ್‌ಮೆನ್ ಆಗಿರುವ ಡಾ. ಪ್ರಭಾಕರ್ ಕೋರೆ ತಮ್ಮ ಪತ್ರದಲ್ಲಿ ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸುವರ್ಣ ವಿಧಾನಸೌಧವಿದೆ, ಪ್ರತಿವರ್ಷ ಚಳಿಗಾಲದ ವಿಧಾನಮಂಡಲ ಅಧಿವೇಶ ನಡೆಯುತ್ತದೆ. ಬೆಳಗಾವಿಯಿಂದ ವಿಮಾನ ಸಂಚಾರ ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ ವಾಣಿಜ್ಯ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹೆಸರುವಾಸಿಯಾಗಿದೆ. ವಿಟಿಯು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಕೆಎಲ್‌ಇ ಸೊಸೈಟಿಗಳಿವೆ. ನಗರ ವಿದ್ಯಾರ್ಜನೆ ಹಬ್ ಆಗಿ ಬದಲಾಗುತ್ತಿದೆ. ಪ್ರವಾಸೋದ್ಯಮವೂ ಸಹ ಉತ್ತಮವಾಗಿದ್ದು, ಲಾಭದಲ್ಲಿ ನಡೆಯುತ್ತಿರುವ ವಿಮಾನಯಾನ ಸಂಸ್ಥೆಗಳು ಸಹ ನಷ್ಟದ ನೆಪ ಹೇಳಿ ವಿಮಾನ ಸಂಚಾರವನ್ನು ಬೆಳಗಾವಿಗೆ ಅಂತ್ಯಗೊಳಿಸಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿದ್ಯಾಭ್ಯಾಸ, ವಾಣಿಜ್ಯ ವ್ಯವಹಾರ, ಉದ್ಯೋಗ, ಆರೋಗ್ಯ ಸೇವೆ ಪಡೆಯಲು ಸಾವಿರಾರು ಜನರು ಬೆಳಗಾವಿಗೆ ಭೇಟಿ ನೀಡುತ್ತಾರೆ. ವಿಮಾನಯಾನ ಸೇವೆ ರದ್ದಾಗಿರುವುದರಿಂದ ಜನರಿಗೆ ತೊಂದರೆಯಾಗಿದೆ. ಬೆಳಗಾವಿ ವಿಮಾನ ನಿಲ್ದಾಣ ರಾಜ್ಯದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಉಡಾನ್ ಯೋಜನೆಗೆ ನಿಲ್ದಾಣ ಸೇರಿದ ಬಳಿಕ ಪ್ರತಿದಿನ 13 ಮಾರ್ಗದಲ್ಲಿ ವಿಮಾನ ಸಂಚಾರ ನಡೆಸುತ್ತಿತ್ತು ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಕನಿಷ್ಠ 32 ಗರಿಷ್ಠ 40 ವಿಮಾನಗಳು ಬೆಳಗಾವಿಯಿಂದ ಹಾರಾಟ ನಡೆಸುತ್ತಿದ್ದವು. ಸ್ಪೈಸ್‌ಜೆಟ್, ಅಲಯನ್ಸ್ ಏರ್, ಟ್ರೂ ಜೆಟ್, ಇಂಡಿಗೋ, ಸ್ಟಾರ್ ಏರ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಈಗ ಬೆಳಗಾವಿಯಿಂದ ಹಾರಾಟ ಸ್ಥಗಿತಗೊಳಿಸಿವೆ. ಸದ್ಯ ಇಂಡಿಗೋ ಮತ್ತು ಸ್ಟಾರ್ ಏರ್ ಸಂಸ್ಥೆಗಳು ಮಾತ್ರ ಬೆಂಗಳೂರು ಮತ್ತು ಇತರ ನಗರಗಳಿಗೆ ವಿಮಾನ ಸೇವೆ ನೀಡುತ್ತಿವೆ. ಈ ಕುರಿತು ಕೇಂದ್ರ ವಿಮಾನಯಾನ ಸಚಿವರ ಗಮನಕ್ಕೆ ತಂದು ವಿಮಾನ ಸೇವೆಯನ್ನು ಪುನಃ ಆರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿಗೆ ನೇರ ವಿಮಾನ; 2021ರ ಆಗಸ್ಟ್‌ನಲ್ಲಿ ಬೆಳಗಾವಿ-ನವದೆಹಲಿ ನಡುವೆ ಸ್ಪೈಸ್‌ಜೆಟ್ ನೇರ ವಿಮಾನ ಸೇವೆ ಆರಂಭಿಸಿತ್ತು. 149 ಸೀಟುಗಳ ವಿಮಾನ ಮೊದಲು ವಾರದಲ್ಲಿ 2 ದಿನ ಅಂದರೆ ಸೋಮವಾರ ಮತ್ತು ಶುಕ್ರವಾರ ಹಾರಾಟ ಆರಂಭಿಸಿತ್ತು. ಆದರೆ 2022ರ ಡಿಸೆಂಬರ್ 10ರಿಂದಲೇ ಬೆಳಗಾವಿ-ದೆಹಲಿ ಸೇರಿ ಎಲ್ಲಾ ವಿಮಾನಗಳನ್ನು ಸ್ಫೈಸ್‌ಜೆಟ್ ರದ್ದುಗೊಳಿಸಿತ್ತು.
ಬೆಳಗಾವಿ-ನವದೆಹಲಿ ನಡುವಿನ ನೇರ ವಿಮಾನ ಸೇವೆ ರದ್ದುಗೊಂಡಿರುವುದರಿಂದ ಬೆಳಗಾವಿ-ದೆಹಲಿಗೆ ಹೋಗುವವರು 5 ಗಂಟೆ ಪ್ರಯಾಣ ಮಾಡಿ, ಸಂಪರ್ಕ ವಿಮಾನ ಹತ್ತಿ ದೆಹಲಿಗೆ ಹೋಗಬೇಕಿದೆ. ಸ್ಪೈಸ್‌ಜೆಟ್ ಈಗಾಗಲೇ ಬೆಳಗಾವಿ-ಮುಂಬೈ, ಬೆಳಗಾವಿ-ಹೈದರಾಬಾದ್ ನಡುವಿನ ವಿಮಾನ ಸೇವೆಯನ್ನು ಸಹ ರದ್ದುಗೊಳಿಸಿದೆ. 2022ರ ಅಕ್ಟೋಬರ್ ತಿಂಗಳಿನಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಿತ್ತು. ಆದ್ದರಿಂದ ಅತಿ ಹೆಚ್ಚು ದಟ್ಟಣೆಯ ರಾಜ್ಯದ 3ನೇ ವಿಮಾನ ನಿಲ್ದಾಣ ಎಂದು ಬೆಳಗಾವಿ ಗುರುತಿಸಿಕೊಂಡಿತ್ತು.
ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಪತ್ರವನ್ನು ಬರೆದು, ಬೆಳಗಾವಿ-ನವದೆಹಲಿ ನಡುವಿನ ವಿಮಾನ ಸೇವೆ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಿತ್ತು. ಬೆಳಗಾವಿ ಸಂಸದೆ ಮಂಗಲ ಸುರೇಶ್ ಅಂಗಡಿ ಅವರು ಸಹ ಸಚಿವರನ್ನು ಭೇಟಿಯಾಗಿ ಬೆಳಗಾವಿಗೆ ವಿಮಾನ ಸೇವೆ ಮತ್ತೆ ಆರಂಭಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದರು.












Click it and Unblock the Notifications