ಕೊಡಗಿನಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು ಯಾವುದು? ಎಲ್ಲಿದೆ?
ಮಡಿಕೇರಿ, ಮೇ 02: ಈಗ ಮಳೆ ಸುರಿದ ಕಾರಣ ಕೊಡಗು ತಂಪಾಗಿದೆ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ತುಂಬಿದೆ. ಹೀಗಾಗಿ ಪ್ರವಾಸಿಗರು ಕೊಡಗಿನತ್ತ ಬರುತ್ತಿದ್ದು, ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರು ಕೊಡಗಿನಲ್ಲಿರುವ ಹತ್ತು ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಕೊಡಗಿಗೆ ಬೆಂಗಳೂರಿನಿಂದ ಬರುವವರು ಮೈಸೂರು ಹುಣಸೂರು ಕುಶಾಲನಗರ ಹಾಗೂ ಹುಣಸೂರು ಗೋಣಿಕೊಪ್ಪ ಮೂಲಕವೂ ಬರಬಹುದಾಗಿದೆ.
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಬಂದವರು ಇಲ್ಲಿನ ಕೋಟೆ, ಅರಮನೆ, ಗದ್ದುಗೆ, ಓಂಕಾರೇಶ್ವರ ದೇಗುಲ, ರಾಜಾಸೀಟ್, ನೆಹರು ಮಂಟಪ, ಧುಮುಕುವ ಅಬ್ಬಿ ಜಲಪಾತ, ಮಾಂದಲಪಟ್ಟಿ, ನಿಶಾನೆಬೆಟ್ಟ ಮೊದಲಾದ ತಾಣಗಳನ್ನು ನೋಡಬಹುದಾಗಿದೆ ಇಲ್ಲಿನ ಸ್ವಲ್ಪ ಎತ್ತರ ಪ್ರದೇಶದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಾಣಗೊಂಡಿದೆ ಎರಡು ಅಂತಸ್ತನ್ನು ಹೊಂದಿರುವ ಅರಮನೆಯು ಚೌರಸ್ ಸ್ಥಳ ವಿನ್ಯಾಸವನ್ನು ಹೊಂದಿದೆ. ವಿಶಾಲ ಹಜಾರಗಳನ್ನು ಸಭಾ ಭವನವನ್ನು ಹೊಂದಿರುವ ಅರಮನೆಯ ಭಿತ್ತಿಗಳಲ್ಲಿ ವಿವಿಧ ಚಿತ್ರಗಳು ಮೂಡಿವೆ. ವಾಸ್ತುಶಿಲ್ಪ ವಿನ್ಯಾಸದಲ್ಲಿ ಹೊಸತನವಿದ್ದು, ಆಕರ್ಷಣೀಯವಾಗಿದೆ.

ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ನೆಲೆ ನಿಂತಿರುವ ಗದ್ದಿಗೆ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇಂಡೋಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗದ್ದಿಗೆಗಳು ಅಪರೂಪದ ವಾಸ್ತುಶಿಲ್ಪವನ್ನು ಹೊಂದಿವೆ.
1820ರಲ್ಲಿ ಎರಡನೇ ಲಿಂಗರಾಜೇಂದ್ರನು ಕಟ್ಟಿಸಿದ ಓಂಕಾರೇಶ್ವರ ದೇಗುಲ ಇಂಡೋಸಾರ್ಸನಿಕ್ ಶೈಲಿಯಲ್ಲಿರುವುದು ವಿಶೇಷ. ಇದು ನಾಲ್ಕೂ ಮೂಲೆಗಳಲ್ಲೂ ಉದ್ದನೆಯ ಗೋಪುರಗಳನ್ನು ಹೊಂದಿದ್ದು ನಡುವೆ ಬೃಹತ್ ಗುಮ್ಮಟವಿದ್ದು ಆಕರ್ಷಣೀಯವಾಗಿದೆ. ಲಿಂಗರಾಜೇಂದ್ರನು ಪರಮ ದೈವ ಭಕ್ತನಾಗಿದ್ದ ಸುಬ್ಬನರಸಯ್ಯ ಎಂಬ ಬ್ರಾಹ್ಮಣನನ್ನು ಅನ್ಯಾಯವಾಗಿ ಶಿಕ್ಷಿಸಿದ್ದರಿಂದ ಆತ ಸಾವಿಗೀಡಾದನೆಂದೂ. ಇದರಿಂದಾಗಿ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಲು ಜ್ಯೋತಿಷಿಗಳ, ಮಂತ್ರವಾದಿಗಳ ಹಾಗೂ ನೀಲೇಶ್ವರ ತಂತ್ರಿಗಳ ಸಲಹೆಯಂತೆ ಈ ಶಿವನ ದೇವಸ್ಥಾನವನ್ನು ನಿರ್ಮಿಸಿದನೆಂಬ ಐತಿಹ್ಯ ಇಲ್ಲುಂಟು.
ರಾಜಾಸೀಟ್ ಬಳಿಯಿರುವ ಗಾಂಧಿ ಮಂಟಪ ಗಾಂಧಿ ಮಡಿಕೇರಿಗೆ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ನೆನಪುಗಳ ಸ್ಮಾರಕವಾಗಿದೆ. ಇಲ್ಲಿಗೆ ಸಮೀಪದಲ್ಲಿರುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.

ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ. ರಾಜಾಸೀಟಿನ ಮೇಲ್ಭಾಗದ ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯವನ್ನು ಆಸ್ವಾದಿಸಲೆಂದು ನಿರ್ಮಿಸಿದ ಸುಂದರ ಮಂಟಪವೇ ನೆಹರು ಮಂಟಪವಾಗಿದೆ.
ಮಡಿಕೇರಿಯಿಂದ ಹತ್ತು ಕಿ.ಮೀ. ದೂರದಲ್ಲಿರುವ ನಿಶಾನೆಮೊಟ್ಟೆಯಿದ್ದು, ರಾಜರ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರನ್ನಿರಿಸಲಾಗುತ್ತಿತ್ತಂತೆ ಈ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಘಟ್ಟವನ್ನೇರಿ ಬರುವ ಶತ್ರು ಸೈನಿಕರ ಮೇಲೆ 'ನಿಶಾನೆ' ಇಡಲು ಈ ಗುಡ್ಡ ಯೋಗ್ಯವಾಗಿದ್ದರಿಂದ 'ನಿಶಾನೆ ಮೊಟ್ಟೆ' ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತವಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇದರ ಆರ್ಭಟವೂ ಹೆಚ್ಚಾಗಲಿದೆ. ಇಲ್ಲಿಗೆ ಸಮೀಪದಲ್ಲಿಯೇ ಮಾಂದಲಪಟ್ಟಿ ನಿಸರ್ಗ ಸುಂದರ ತಾಣವಿದೆ.
ಕೊಡಗಿನ ಮೆಕ್ಕಾ ಎಂದೇ ಜನವಲಯದಲ್ಲಿ ಹೆಸರುವಾಸಿಯಾಗಿರುವ ಪ್ರಮುಖ ಪವಿತ್ರ ತಾಣ ಎಮ್ಮೆಮಾಡು ಕೊಡಗಿನಲ್ಲಿರುವ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಿದರೆ ತನ್ನದೇ ಆದ ಇತಿಹಾಸ, ನಿಸರ್ಗ ಸೌಂದರ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಕೊಡಗನ್ನು ಆಳಿದ ರಾಜರ ಅರಮನೆಗಳ ಪೈಕಿ ಮಡಿಕೇರಿಯಿಂದ ನಲವತ್ತು ಕಿ.ಮೀ.ಗಳ ದೂರದ ಕಕ್ಕಬ್ಬೆಯ ಸಮೀಪದಲ್ಲಿರುವ ನಾಲ್ಕುನಾಡು ಅರಮನೆಯು ಕೊಡಗಿನ ಸಾಂಪ್ರದಾಯಿಕ ಐನ್‌ಮನೆಗಳಂತೆ ಕಾಣುತ್ತದೆ. ಅಷ್ಟೇ ಅಲ್ಲ ಕರ್ನಾಟಕದಲ್ಲಿರುವ ಇತರೆ ಅರಮನೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.

ಕೊಡಗಿನ ನಾಪೋಕ್ಲು ಬಳಿಯಲ್ಲಿರುವ ನಿಸರ್ಗ ನಿರ್ಮಿತ ಮಕ್ಕಿ ಶಾಸ್ತಾವು ಮಾತ್ರ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ.ಮಕ್ಕಿ ಶಾಸ್ತಾವು ದೇವಾಲಯ ನೆಲೆ ನಿಂತ ತಾಣಕ್ಕೆ ಭೇಟಿ ನೀಡಿದವರಿಗೆ ವಿಶಿಷ್ಟ ಅನುಭವವಾಗುತ್ತದೆ. ಅಲ್ಲದೆ, ಇಲ್ಲಿ ನಿಸರ್ಗವೇ ಒಂದು ಸುಂದರ ದೇವಾಲಯದಂತೆ ಗೋಚರಿಸಿಬಿಡುತ್ತದೆ.
ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ದ್ವಾರ ಕಾಣಸಿಗುತ್ತದೆ. ನಿಸರ್ಗಧಾಮದ ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಕೌತುಕಮಯ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ. ಕುಶಾಲನಗರದಿಂದ ಸುಮಾರು 18ಕಿ.ಮೀ. ದೂರದಲ್ಲಿ ದುಬಾರೆ ಆನೆಶಿಬಿರವಿದೆ. ದುಬಾರೆಯಿಂದ ಸುಂಟಿಕೊಪ್ಪದ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಚಿಕ್ಲಿಹೊಳೆ ಜಲಾಶಯವನ್ನು ತಲುಪಬಹುದು.
ಹಾರಂಗಿ ಜಲಾಶಯವು ಕುಶಾಲನಗರದಿಂದ ಸುಮಾರು 8ಕಿ.ಮೀ. ದೂರದಲ್ಲಿದೆ. ಕುಶಾಲನಗರಕ್ಕೆ ಸಮೀಪದಲ್ಲಿ ಮೈಸೂರು ಜಿಲ್ಲೆಗೆ ಸೇರಿರುವ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಪ್ರಸಿದ್ಧ ತಾಣವಾಗಿದೆ. ಇಲ್ಲಿ ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರಗಳಿವೆ.
ಕೊಡಗಿನ ವೀರಾಜಪೇಟೆ ಪಟ್ಟಣದಲ್ಲಿ ಐತಿಹಾಸಿಕ ಸ್ಮಾರಕ ಗಡಿಯಾರ ಕಂಬವಿದೆ. ಸಮೀಪದಲ್ಲಿಯೇ ಎರಡು ಶತಮಾನ ಸವೆಸಿದ ಸಂತ ಅನ್ನಮ್ಮ ಚರ್ಚ್ ಇದೆ. ಇನ್ನು ವಿರಾಜಪೇಟೆ ತಾಲೂಕಿನಲ್ಲಿ ಇರ್ಪು ಜಲಪಾತವಿದೆ. ಸೋಮವಾರಪೇಟೆ ಬಳಿಯಿರುವ "ಹೊನ್ನಮ್ಮನ ಕೆರೆ" ಪ್ರಾಚೀನ ಇತಿಹಾಸದೊಂದಿಗೆ ಹೆಣ್ಣುಮಗಳೊಬ್ಬಳ ಭಕ್ತಿಭಾವ, ತ್ಯಾಗ ಬಲಿದಾನದ ಕಥೆಯನ್ನು ಜಗತ್ತಿಗೆ ಸಾರಿ ಹೇಳುವ ಪವಿತ್ರ ಕ್ಷೇತ್ರವಾಗಿ ಗಮನಸೆಳೆಯುತ್ತಿದೆ.
ಭಾಗಮಂಡಲವು ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಭಗಂಡೇಶ್ವರ, ಶಿವ, ಸುಬ್ರಹ್ಮಣ್ಯ, ವಿಷ್ಣು, ಗಣಪತಿ ದೇವಾಲಯಗಳಿವೆ. ಭಗಂಡ ಮಹರ್ಷಿ ತಪಸ್ಸು ಮಾಡಿದ ಸ್ಥಳವಾದುದರಿಂದ ಭಾಗಮಂಡಲ ಎಂಬ ಹೆಸರು ಬಂತು ಎನ್ನಲಾಗಿದೆ. ತಲಕಾವೇರಿ ಭಾಗಮಂಡಲದಿಂದ 8 ಕಿ.ಮೀ ದೂರವಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications