ನೋಡಿ ಬನ್ನಿ ಕೊಡಗಿನ ಚೇಲಾವರ ಜಲಪಾತ: ಹುಚ್ಚಾಟವಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಮಡಿಕೇರಿ, ಜುಲೈ 30: ಮಳೆಗಾಲದಲ್ಲಿ ಕೊಡಗಿನಲ್ಲಿ ಭೋರ್ಗರೆಯುವ ಜಲಪಾತಗಳ ಪೈಕಿ ಚೇಲಾವರ ಜಲಪಾತವೂ ಒಂದಾಗಿದೆ. ಇದು ಜಲನರ್ತನದಲ್ಲಿ ಇತರೆ ಜಲಪಾತಗಳಿಗಿಂತ ಕಡಿಮೆಯಿಲ್ಲ. ತನ್ನದೇ ಆದ ರುದ್ರರಮಣೀಯತೆಯಿಂದ ಕಂಗೊಳಿಸುವ ಮತ್ತು ಧುಮ್ಮಿಕ್ಕುವ ಜಲಪಾತವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಏಕೆಂದರೆ ಮಳೆಯಲ್ಲೇ ಜಲಪಾತವನ್ನು ವೀಕ್ಷಿಸುವುದು ಮರೆಯಲಾರದ ಅನುಭವವಾಗಿ ಉಳಿದುಬಿಡುತ್ತದೆ.

ಚೇಲಾವರ ಜಲಪಾತ ಕೊಡಗಿನ ಮಡಿಕೇರಿಯಿಂದ ಸುಮಾರು ಮೂವತ್ತೆರಡು ಕಿ.ಮೀ. ದೂರದ ಚೆಯ್ಯಂಡಾಣೆ ಬಳಿಯಿದೆ. ಚೆಯ್ಯಂಡಾಣೆಯಿಂದ ಜಲಪಾತದ ತಲುಪಲು ಎರಡು ಕಿ.ಮೀ. ದೂರವಾಗುತ್ತದೆ. ಅಂಕುಡೊಂಕಾದ ರಸ್ತೆಯಲ್ಲಿ ಕಾಫಿತೋಟಗಳ ನಡುವೆ ನಿಸರ್ಗ ರಮಣೀಯ ದೃಶ್ಯಗಳನ್ನು ನೋಡುತ್ತಾ ಸಾಗುವುದು ಒಂಥರಾ ಮಜಾ ಎನಿಸುತ್ತದೆ. (ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಜಿಗಣೆಗಳು ದಾಳಿ ಮಾಡಲು ಸಿದ್ಧವಾಗಿರುತ್ತವೆ.)

Chelavara Waterfalls Is The One Of The Spectacular Waterfalls In Kodagu

ಮುಂದೆ ಸಾಗಿದಾಗ ಸುತ್ತಲೂ ಪರ್ವತ ಶ್ರೇಣಿಗನ್ನೊಳಗೊಂಡ ದಟ್ಟಕಾನನದ ತೂಂಗ್‌ಕೊಲ್ಲಿ ಸಿಗುತ್ತದೆ. ಅಲ್ಲಿಂದ ಎಡ ಬದಿಯ ಕಣಿವೆಯಲ್ಲಿ ಹೆಜ್ಜೆಹಾಕಿದಾಗ ಜಲಪಾತದ ಭೋರ್ಗರೆತ ಕಿವಿಗೆ ಬಡಿಯತೊಡಗುತ್ತದೆ. ಮುಂದೆ ನಡೆದಂತೆ ಕಪ್ಪಗಿನ ಹೆಬ್ಬಂಡೆಯೊಂದರ ಮೇಲಿನಿಂದ ಭೋರ್ಗರೆದು ಧುಮುಕುವ ಜಲಪಾತ ಕಂಡಾಗ ಅದುವರೆಗಿನ ದಣಿವು ತಣಿದು ಹೋಗಿ ಬಿಡುತ್ತದೆ.

ಇನ್ನು ತಡಿಯಂಡಮೋಳ್ ಪರ್ವತ ಶ್ರೇಣಿಯ ಚೋಮನ ಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ನಿರ್ಮಿತವಾಗಿರುವ ಜಲಧಾರೆಯನ್ನು ಏಮೆಪಾರೆ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ. ಬಹುಶಃ ಇಲ್ಲಿನ ಹೆಬ್ಬಂಡೆ ಮೇಲ್ನೋಟಕ್ಕೆ ಆಮೆಯಂತೆ ಕಂಡು ಬರುವುದರಿಂದ ಒಟ್ಟಾಗಿ ಕೊಡವಭಾಷೆಯಲ್ಲಿ ಏಮೆಪಾರೆ ಎಂದು ಕರೆದಿರಬಹುದೇನೋ? ಹೆಬ್ಬಂಡೆಯ ಮೇಲೆ ಸುಮಾರು ನೂರು ಅಡಿಯಷ್ಟು ಎತ್ತರದಿಂದ ವಿವಿಧ ಹಂತಗಳಲ್ಲಿ ಧುಮುಕುವ ದೃಶ್ಯ ನೋಡಲು ಹಾಲುಸುರಿದಂತೆ ಕಾಣುತ್ತದೆ. ಹೀಗಾಗಿ ಆ ಸುಂದರ ದೃಶ‍್ಯವನ್ನು ನೋಡುವುದೇ ಒಂಥರಾ ಸಂಭ್ರಮ.

ಹುಚ್ಚಾಟವಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಇನ್ನು ಚೇಲಾವರ ಜಲಪಾತ ರಮಣೀಯವಾಗಿದೆ. ಆದರೆ ಇದು ಎಷ್ಟು ಭಯಂಕರವಾಗಿದೆ ಎಂಬುದು ಇದರ ಆಳಕ್ಕೆ ಸಿಕ್ಕಿ ಹಾಕಿ ಕೊಂಡ ಶವವನ್ನು ತೆಗೆದವರಿಗೆ ಮಾತ್ರ ಗೊತ್ತು. ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಸ್ಥಳವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿಕೊಂಡರೆ ಮುಗೀತು. ಆತ ಈಜು ಗೊತ್ತಿದ್ದರೂ ಈಚೆಗೆ ಬರುವುದು ಮಾತ್ರ ಹೆಣವಾಗಿಯೇ.

Chelavara Waterfalls Is The One Of The Spectacular Waterfalls In Kodagu

ಮೊದಲೆಲ್ಲ ಈ ಜಲಪಾತದತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರಲಿಲ್ಲ. ಈಗ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಟ್ಟಣದ ಗೌಜು ಗದ್ದಲದಲ್ಲಿ ಬದುಕು ಕಟ್ಟಿಕೊಂಡವರು ರಜಾದ ಮಜಾ ಕಳೆಯಲು ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಬರುವ ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ಸವಿದು ಹಿಂತಿರುಗಿದರೆ ತೊಂದರೆಯಿಲ್ಲ. ಆದರೆ ಹಾಗೆ ಮಾಡುವುದಿಲ್ಲ. ಬದಲಿಗೆ ಪಾನಗೋಷ್ಠಿ ಏರ್ಪಡಿಸಿ ಪ್ಲಾಸ್ಟಿಕ್ ವಸ್ತು, ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಅದಾದ ಬಳಿಕ ಧುಮುಕುವ ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ದುಸ್ಸಾಹಸಕ್ಕೆ ಇಳಿಯುತ್ತಾರೆ. ಹೀಗೆ ಇಳಿದವರು ಪ್ರಾಣಕಳೆದುಕೊಳ್ಳುತ್ತಿದ್ದಾರೆ.

ಇಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ

ಒಂದು ಮೂಲದ ಪ್ರಕಾರ ಈ ಜಲಪಾತದಲ್ಲಿ ಬಲಿಯಾದವರ ಸಂಖ್ಯೆ ಸುಮಾರು ಹನ್ನೆರಡು ದಾಟಿದೆ. ಇವರ ಪೈಕಿ ಬಹಳಷ್ಟು ಜನ ಮೋಜು ಮಸ್ತಿ ಮಾಡಿಯೇ ಪ್ರಾಣ ಕಳೆದುಕೊಂಡವರಾಗಿದ್ದಾರೆ. ಜಲಧಾರೆಯ ಸುಂದರ ನೋಟವೇ ಹಾಗಿದೆ. ಕರ್ರಗಿನ ಹೆಬ್ಬಂಡೆಯ ಮೇಲೆ ಬೆಳ್ಳಿ ಕರಗಿ ಹರಿಯುತ್ತದೆಯೇನೋ ಎಂಬಂತೆ ಭಾಸವಾಗುತ್ತದೆ. ಇದನ್ನು ನೋಡುತ್ತಿದ್ದರೆ ನೀರಿನಲ್ಲಿ ಆಟವಾಡಬೇಕೆಂಬ ಬಯಕೆ ಹುಟ್ಟುವುದು ಸಹಜ. ಹಾಗೆಂದು ನೀರಿಗೆ ಇಳಿಯುವ ಮುನ್ನ ಒಂದು ಕ್ಷಣ ಯೋಚಿಸಿದರೆ ಯಾವುದೇ ಪ್ರಾಣಾಪಾಯವಿಲ್ಲದೆ ಹಿಂತಿರುಗಬಹುದು.

ಜಲಪಾತದಲ್ಲಿ ಮುಳುಗಿ ಸಾಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೆಲವು ವರ್ಷಗಳ ಹಿಂದೆ ಬೇಸಿಗೆ ದಿನಗಳಲ್ಲಿ ಜಲಪಾತದ ಆಳವನ್ನು ಅರಿಯುವ ಸಲುವಾಗಿ ಹದಿನೈದು ಮಂದಿ ಮೋಟಾರ್ ಮೂಲಕ ನೀರನ್ನು ಹೊರತೆಗೆದು ಆಳ ನೋಡುವ ಪ್ರಯತ್ನ ಮಾಡಿದರಾದರೂ ಸುಮಾರು ಇಪ್ಪತ್ತು ಅಡಿ ನೀರನ್ನಷ್ಟೆ ಖಾಲಿ ಮಾಡಲು ಸಾಧ್ಯವಾಯಿತು. ಆದರೆ ಕೆಳಭಾಗದ ಆಳ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಹಾಗಾದರೆ ಇದರ ಆಳ ಅಗಲದ ರಹಸ್ಯ ಹೇಗಿರಬಹುದು? ಅದು ಏನೇ ಇರಲಿ ಜಲಪಾತವನ್ನು ನೋಡಲು ಹೋಗುವವರು ಜಲಪಾತವನ್ನಷ್ಟೆ ದೂರದಿಂದ ನೋಡಿಬಂದರೆ ಒಳಿತು.

Chelavara Waterfalls Is The One Of The Spectacular Waterfalls In Kodagu

ಆಸುಪಾಸಿನಲ್ಲಿ ಪುಟ್ಟ ಜಲಪಾತಗಳಿವೆ

ಜಲನರ್ತನ ಮಾಡುವ ಚೇಲಾವರ ಜಲಪಾತದ ಆಸುಪಾಸಿನಲ್ಲಿ ಪುಟ್ಟದಾದ ಇನ್ನೆರಡು ಜಲಪಾತಗಳಿವೆ. ಇವು ತೋಟಗಳ ನಡುವೆ ನಿರ್ಮಿತವಾಗಿವೆ. ಇಗ್ಗುತಪ್ಪ ಬೆಟ್ಟದಿಂದ ಹರಿದು ಬರುವ ಬಲಿಯಟ್ರನದಿಯಿಂದ ನಿರ್ಮಿತವಾಗಿರುವ ಈ ಮಿನಿಜಲಪಾತಗಳು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿವೆ. ಸುಮಾರು ಐವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಮೂರು ಹಂತಗಳಲ್ಲಿ ತನ್ನ ಬೆಡಗನ್ನು ಪ್ರದರ್ಶಿಸುತ್ತವೆ.

ಇವುಗಳ ಅಬ್ಬರವೇನಿದ್ದರೂ ಮಳೆಗಾಲದಲ್ಲಿ ಮಾತ್ರ. ಖಾಸಗಿ ಸ‍್ಥಳಗಳಲ್ಲಿರುವ ಕಾರಣ ಇವುಗಳತ್ತ ಹೋಗುವುದಾದರೆ ತೋಟದ ಮಾಲೀಕರ ಅಪ್ಪಣೆ ಪಡೆದುಕೊಳ್ಳಬೇಕಾಗುತ್ತದೆ. ಅದು ಏನೇ ಇರಲಿ ಚೇಲಾವರ ಜಲಪಾತ ಒಂದು ಸುಂದರ ಜಲಪಾತವಾಗಿದ್ದು, ಇದರತ್ತ ತೆರಳಿದವರಿಗೆ ನಿರಾಸೆಯಂತು ಆಗುವುದಿಲ್ಲ.

Here is the more information about one of the spectacular waterfalls in Kodagu Chelavara Falls. Know more.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+