BMTC; ಸೆಪ್ಟೆಂಬರ್ ಅಂತ್ಯಕ್ಕೆ ಬಿಎಂಟಿಸಿಗೆ ಬರಲಿವೆ ಹೊಸ ಡೀಸೆಲ್ ಬಸ್
ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಸೆಪ್ಟೆಂಬರ್ ಅಂತ್ಯದಲ್ಲಿ ಹೊಸ ಬಸ್‌ಗಳ ಸೇರ್ಪಡೆಯಾಗಲಿದೆ. ಇವು ಡೀಸೆಲ್ ಎಂಜಿನ್ ಬಸ್‌ಗಳಾಗಿದ್ದು, ಹೊಸ ಮಾರ್ಗ ಪರಿಚಯಿಸಲು ಮತ್ತು ಈಗಿರುವ ಮಾರ್ಗದಲ್ಲಿ ಓಡುತ್ತಿರುವ ಹಳೆಯ ಬಸ್‌ಗಳನ್ನು ಬದಲಾವಣೆ ಮಾಡಲು ಈ ಹೊಸ ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಅಶೋಕ್ ಲೈಲ್ಯಾಂಡ್ ಕಂಪನಿಯಿಂದ ಡೀಸೆಲ್ ಬಸ್‌ನ ಮಾದರಿಯನ್ನು ಈಗಾಗಲೇ ಬಿಎಂಟಿಸಿ ಪಡೆದಿದೆ. ಒಂದು ತಿಂಗಳಿಗೂ ಅಧಿಕ ಕಾಲ ಬೆಂಗಳೂರಿನ ರಸ್ತೆಯಲ್ಲಿ ಓಡಿಸಿ, ಪ್ರಾಯೋಗಿಕ ಸಂಚಾರ, ತಾಂತ್ರಿಕ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಕಂಪನಿ ಒಟ್ಟು 821 ಬಸ್‌ಗಳನ್ನು ಪೂರೈಕೆ ಮಾಡಲು ಒಪ್ಪಂದವನ್ನು ಮಾಡಿಕೊಂಡಿದೆ.

50 ಬಸ್‌ಗಳು ಸೆಪ್ಟೆಂಬರ್ ಅಂತ್ಯಕ್ಕೆ ಬರಲಿದ್ದು, ನಗರದ ವಿವಿಧ ಭಾಗಕ್ಕೆ ಅವುಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ. ಎಲ್ಲಾ ಬಸ್‌ಗಳ ಪೂರೈಕೆ 2025ಕ್ಕೆ ಆಗುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಬಿಎಂಟಿಸಿ ಸೇವೆ ವಿಸ್ತರಣೆಗೆ ಒತ್ತಡವಿದೆ. ಬಸ್‌ನ ಪ್ರಯಾಣಿಕರ ಸಂಖ್ಯೆ ಸಹ 27.4 ಲಕ್ಷದಿಂದ 40 ಲಕ್ಷಕ್ಕೆ ಏರಿಕೆಯಾಗಿದೆ.
ಹಳೆಯ ಬಸ್‌ಗಳು ಬದಲು: ಮಹಿಳೆಯರ ಉಚಿತ ಪ್ರಯಾಣದ 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಬಿಎಂಟಿಸಿ ಸೇವೆ ವಿಸ್ತರಣೆಗೆ ಬಹಳ ಬೇಡಿಕೆ ಬಂದಿದೆ. ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಅಲ್ಲದೇ ನಾವು 2 ಸಾವಿರ ಬಸ್‌ಗಳನ್ನು ಗುಜರಿಗೆ ಹಾಕಬೇಕಿದೆ. ಆದರೆ ಬದಲಾವಣೆ ಮಾಡಲು ಸದ್ಯ 800 ಬಸ್‌ಗಳು ಮಾತ್ರ ಲಭ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇವುಗಳಲ್ಲದೇ ಸಂಸ್ಥೆ ಗುತ್ತಿಗೆ ಆಧಾರದಲ್ಲಿ 2,211 ಬಸ್‌ಗಳನ್ನು ಪಡೆಯಲಿದೆ. ಇವುಗಳಲ್ಲಿ 920 ನಾನ್ ಎಸಿ ಎಲೆಕ್ಟ್ರಿಕ್ ಮತ್ತು 820 ಡೀಸೆಲ್, 320 ಎಸಿ ಎಲೆಕ್ಟ್ರಿಕ್ ಬಸ್‌ಗಳಾಗಿವೆ. ಸದ್ಯ ನಗರದಲ್ಲಿ 630 ಎಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚಾರವನ್ನು ನಡೆಸುತ್ತಿವೆ. 290 ನವೆಂಬರ್‌ನಲ್ಲಿ ಆಗಮಿಸುವ ನಿರೀಕ್ಷೆ ಇದೆ. ಟಾಟಾ ಮೋಟಾರ್ಸ್‌ನ ಅಂಗ ಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ಸ್, ಧಾರವಾಡ ಘಟಕದಲ್ಲಿ ಈ ಬಸ್ ತಯಾರಾಗುತ್ತಿದೆ.
ಒಪ್ಪಂದದ ಪ್ರಕಾರ ಕಿ. ಮೀ.ಗೆ 41 ರೂ. ದರ ಮತ್ತು ಚಾಲಕನನ್ನು ನೀಡಬೇಕು ಎಂಬ ಷರತ್ತಿನ ಜೊತೆ ಬಸ್ ಪಡೆಯಲಾಗಿದೆ. 2025ರ ಮಾರ್ಚ್‌ನೊಳಗೆ ಎಲ್ಲಾ 920 ಬಸ್ ಪೂರೈಸಬೇಕು ಎಂದು ಷರತ್ತು ಹಾಕಿ ಟೆಂಡರ್ ನೀಡಲಾಗಿದೆ. ಬಸ್‌ಗಳ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡುವ ಆಯ್ಕೆಯನ್ನು ಸಹ ಬಿಎಂಟಿಸಿ ಇಟ್ಟುಕೊಂಡಿದೆ.
ಎಲೆಕ್ಟ್ರಿಕ್ ಎಸಿ ಬಸ್‌ಗಳ ಮಾದರಿ ಬಿಎಂಟಿಸಿಗೆ ಅಕ್ಟೋಬರ್ ಅಂತ್ಯದಲ್ಲಿ ಬರುವ ನಿರೀಕ್ಷೆ ಇದೆ. ಅಶೋಕ್ ಲೈಲ್ಯಾಂಡ್‌ನ ಅಂಗ ಸಂಸ್ಥೆ ಒಹೆಚ್‌ಎಂ ಗ್ಲೋಬಲ್ ಮೊಬಿಲಿಟಿ ಲಿಮಿಟೆಡ್ 320 ಎಸಿ ಬಸ್ ಪೂರೈಕೆ ಮಾಡುವ ಟೆಂಡರ್ ಪಡೆದಿದೆ. ಈಗಿರುವ ಹಳೆಯ ವೋಲ್ವೋ ಬಸ್‌ಗಳನ್ನು ಈ ಬಸ್ ಮೂಲಕ ಬದಲಾವಣೆ ಮಾಡಲಾಗುತ್ತದೆ. ಏರ್‌ಪೋರ್ಟ್ ಮಾರ್ಗದ ಬಸ್‌ಗಳು ಇವುಗಳಲ್ಲಿ ಸೇರಿವೆ.
ಹೊಸ ಹೊಸ ಬಸ್‌ಗಳ ಸೇರ್ಪಡೆ, ಹೊಸ ಮಾರ್ಗದ ಪರಿಚಯ ಹಿನ್ನಲೆಯಲ್ಲಿ ಬಿಎಂಟಿಸಿ 2,500 ನಿರ್ವಾಹಕರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಈಗ ಬಸ್‌ಗಳಿಗೆ ಕಂಪನಿಗಳೇ ಚಾಲಕರನ್ನು ನೀಡುವುದರಿಂದ ಚಾಲಕರ ನೇಮಕಾತಿ ನಡೆವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications