Bengaluru Darshini; ಬಿಎಂಟಿಸಿ ಪ್ರವಾಸಿ ಪ್ಯಾಕೇಜ್ ದರ, ಆದಾಯ ವಿವರ
ಬೆಂಗಳೂರು, ಮೇ 14: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಹಲವು ಆದಾಯದ ಮೂಲಗಳಿವೆ. ಪ್ರಯಾಣ ದರ, ಜಾಹೀರಾತು ಮುಂತಾದ ಆದಾಯಗಳ ಜೊತೆಗೆ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ 'ಬೆಂಗಳೂರು ದರ್ಶಿನಿ' ಬಸ್ ಸೇವೆಯೂ ಆದಾಯವನ್ನು ತಂದುಕೊಡುತ್ತದೆ.
ಐಷಾರಾಮಿ ಬಸ್‌ಗಳಲ್ಲಿ ಬೆಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ 'ಬೆಂಗಳೂರು ದರ್ಶಿನಿ' ಅಥವ 'ಬೆಂಗಳೂರು ರೌಂಡ್ಸ್' ಸೇವೆಯನ್ನು 2015ರಲ್ಲಿ ಬಿಎಂಟಿಸಿ ಆರಂಭಿಸಿತು.

ಪ್ರತಿನಿತ್ಯ ಬೆಂಗಳೂರು ನಗರಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಹಲವಾರು ಜನರು ವಿವಿಧ ತಾಣಗಳಿಗೆ ಭೇಟಿ ನೀಡುತ್ತಾರೆ. ರಜೆಯ ಸಮಯದಲ್ಲಿ ಕುಟುಂಬದೊಂದಿಗೆ ವಿವಿಧ ತಾಣಗಳಿಗೆ ತೆರಳಲು 'ಬೆಂಗಳೂರು ರೌಂಡ್ಸ್' ಸಹಕಾರಿ. ಟ್ರಾಫಿಕ್ ಕಿರಿಕಿರಿ ನಡುವೆ ವಾಹನ ಬಿಟ್ಟು ಬಸ್‌ನಲ್ಲಿ ಸುಲಭವಾಗಿ ಸಂಚಾರ ನಡೆಸಬಹುದಾಗಿದೆ.
ಆದಾಯ, ದರದ ಮಾಹಿತಿ: ಐರಾಷಾಮಿ ಎಸಿ ಬಸ್‌ನಲ್ಲಿ ಸಂಚಾರ ನಡೆಸುವ ಮೂಲಕ ಬೆಂಗಳೂರು ನಗರದ ಪ್ರಮುಖ 12 ಪ್ರವಾಸಿ ತಾಣಗಳಿಗೆ 'ಬೆಂಗಳೂರು ರೌಂಡ್ಸ್' ಮೂಲಕ ಭೇಟಿ ನೀಡಬಹುದು. ಈ ಬಸ್‌ನಲ್ಲಿ ಪ್ರಯಾಣಿಸಲು ವಯಸ್ಕರಿಗೆ 400 ರೂ. ಮತ್ತು ಮಕ್ಕಳಿಗೆ 300 ರೂ. ದರ ನಿಗದಿ ಮಾಡಲಾಗಿದೆ. 15 ರೂ. ಸೇವಾ ಶುಲ್ಕ ಪ್ರತ್ಯೇಕ.
'ಬೆಂಗಳೂರು ರೌಂಡ್ಸ್' ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡಲಿದ್ದು, ವಿಧಾನಸೌಧ, ಟಿಪ್ಪು ಸುಲ್ತಾನ್ ಅರಮನೆ, ಬುಲ್ ಟೆಂಪಲ್, ಲಾಲ್ ಬಾಗ್, ವಿಶ್ವೇಶ್ವರಯ್ಯ ಮ್ಯುಸಿಯಂ ಸೇರಿದಂತೆ ಒಟ್ಟು 12 ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಬಿಎಂಟಿಸಿ ಮೂಲಗಳ ಮಾಹಿತಿ ಪ್ರಕಾರ 2021 ರಿಂದ 2024ರ ಏಪ್ರಿಲ್ ತನಕ 17,800 ಪ್ರಯಾಣಿಕರು 'ಬೆಂಗಳೂರು ದರ್ಶಿನಿ' ಸೇವೆಯನ್ನು ಬಳಕೆ ಮಾಡಿದ್ದಾರೆ. ಸಂಸ್ಥೆಗೆ 72.59 ಲಕ್ಷ ರೂ. ಆದಾಯ ಬಂದಿದೆ.
ಕೋವಿಡ್ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಈಗ 'ಬೆಂಗಳೂರು ರೌಂಡ್ಸ್' ಬಳಕೆ ಮಾಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕೋವಿಡ್‌ಗೂ ಮೊದಲು 300 ರಿಂದ 400 ಪ್ರಯಾಣಿಕರು ಆಗಮಿಸುತ್ತಿದ್ದರು. 2021ರಲ್ಲಿ 685 ಪ್ರಯಾಣಿಕರು ಮಾತ್ರ ಸಂಚಾರ ನಡೆಸಿದ್ದಾರೆ. ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು 2022ರಲ್ಲಿ 6,400 ಪ್ರಯಾಣಿಕರು ಸಂಚರಿಸಿದ್ದಾರೆ.
ಈ ಪ್ರವಾಸಿ ಪ್ಯಾಕೇಜ್‌ಗೆ ಜನರನ್ನು ಸೆಳೆಯಲು ಬಿಎಂಟಿಸಿ ಪ್ರಚಾರವನ್ನು ನೀಡುತ್ತಿದೆ. ದಿನಪತ್ರಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರಚಾರವನ್ನು ನೀಡಿದ್ದು, ಜನರು ಸಹ ಸೇವೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೆಂಗಳೂರಿಗೆ ಪ್ರತಿದಿನ ಲಕ್ಷಾಂತರ ಜನರು ಆಗಮಿಸುವಾಗ ಈ ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬುದು ಅಧಿಕಾರಿಗಳ ಹೇಳಿಕೆ.
ಬಿಎಂಟಿಸಿ ಈ ಪ್ರವಾಸಿ ಪ್ಯಾಕೇಜ್‌ಗೆ ಹೆಚ್ಚಿನ ಪ್ರಚಾರವನ್ನು ನೀಡುತ್ತಿದೆ. ಈ ಬಸ್‌ಗಳ ನಿರ್ವಾಹಕರು, ಚಾಲಕರಿಗೆ ಪ್ರವಾಸಿಗರ ಜೊತೆ ಸಂಯಮದಿಂದ ವರ್ತಿಸಲು ತರಬೇತಿ ನೀಡಲಾಗಿದೆ. ಚಾಲಕರು ಕನ್ನಡ, ಇಂಗ್ಲಿಶ್, ಹಿಂದಿ, ತೆಲಗು ಸೇರಿದಂತೆ ವಿವಿಧ ಭಾಷೆಗಳನ್ನು ಸಹ ಮಾತನಾಡುತ್ತಾರೆ.
ಬೆಂಗಳೂರು ನಗರದ ಪ್ರವಾಸಿ ತಾಣದ ಬಗ್ಗೆ ಇನ್ನಷ್ಟು ಪ್ರಚಾರ ನೀಡಬೇಕಿದೆ. ಬಿಎಂಟಿಸಿ ಸಹ 'ಬೆಂಗಳೂರು ರೌಂಡ್ಸ್' ಬಗ್ಗೆ ಹೆಚ್ಚು ಪ್ರಚಾರವನ್ನು ಮಾಡಬೇಕಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸರಳ ವಿಧಾನ, ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ನೀಡುವ ಮೂಲಕ ಜನರನ್ನು ಸೆಳೆಯಬೇಕಿದೆ ಎಂಬ ಅಭಿಪ್ರಾಯವೂ ಇದೆ.












Click it and Unblock the Notifications