ಕೊಡಗಿನಲ್ಲಿ ಭತ್ತದರಾಶಿಯಂತೆ ಕಂಗೊಳಿಸುವ ಈ ಬೆಟ್ಟ ಯಾವುದು ಗೊತ್ತಾ..? ಚಾರಣಪ್ರಿಯರು ಮಿಸ್‌ ಮಾಡಬೇಡಿ

ಮಡಿಕೇರಿ, ಫೆಬ್ರವರಿ 17: ಈಗ ಬೇಸಿಗೆಯ ಸಮಯ ಕೊಡಗಿನ ನಿಸರ್ಗ ಸಿರಿ ಬಿಸಿಲಿನ ಬೇಗೆಗೆ ಮಂಕಾದಂತೆ ಭಾಸವಾಗುತ್ತಿದೆ. ಡಿಸೆಂಬರ್ ತನಕವೂ ಹಸಿರಿನಿಂದ ನುಣ್ಣಗೆ ಕಾಣುತ್ತಿದ್ದ ಬೆಟ್ಟಗಳು ಹೊಂಬಣ್ಣಕ್ಕೆ ತಿರುಗುತ್ತಿವೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಬದಲಾಗುವ ನಿಸರ್ಗದ ನೋಟವನ್ನು ಸವಿಯಲು ಪ್ರಕೃತಿ ಪ್ರೇಮಿಗಳು ಇತ್ತ ಚಿತ್ತ ಹರಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಹಸಿರು ಹಚ್ಚಡವನ್ನು ಕಳಚಿ ಬೋರಲಾಗುವ ಬೆಟ್ಟಗುಡ್ಡಗಳು ನೀರಸ ಭಾವ ಮೂಡಿಸುತ್ತವೆ. ಆದರೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಬೆಟ್ಟವೊಂದು ಬೇಸಿಗೆಯಲ್ಲಿ ಭತ್ತವನ್ನು ರಾಶಿಯಂತೆ ಹೊಂಬಣ್ಣದಿಂದ ಕಂಡು ಬರುವ ಕಾರಣದಿಂದಲೇ ಭತ್ತದ ರಾಶಿಬೆಟ್ಟವಾಗಿ ಖ್ಯಾತಿಯಾಗಿರುವುದು ವಿಶೇಷವಾಗಿದೆ.

Battada Rashi Betta Is Perfect Place For Trekking In Kodagu District

ಸಾಮಾನ್ಯವಾಗಿ ಕೊಡಗಿನಲ್ಲಿರುವ ಹೆಚ್ಚಿನ ಬೆಟ್ಟಗಳು ಸ್ಥಳೀಯರಿಗಷ್ಟೆ ಸೀಮಿತವಾಗಿದ್ದವು. ಈ ಬೆಟ್ಟಕ್ಕೆ ದನಕರುಗಳನ್ನು ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ರೈತರು ಬರುತ್ತಿದ್ದರು. ಆದರೆ ಕಾಲಾಂತರದಲ್ಲಿ ಕೆಲವರು ಬೆಟ್ಟಗಳನ್ನು ಹುಡುಕಿಕೊಂಡು ಬರಲಾರಂಭಿಸಿದರು. ಬೆಟ್ಟದ ಸೌಂದರ್ಯವನ್ನು ಸೆರೆ ಹಿಡಿದು ಅವುಗಳ ವಿಶೇಷತೆಯನ್ನು ಸ್ಥಳೀಯರಿಂದ ತಿಳಿದು ಅದರ ಬಗ್ಗೆ ಲೇಖನಗಳನ್ನು ಬರೆಯಲಾರಂಭಿಸಿದರು.

ಹಲವು ವಿಶೇಷತೆಯ ಭತ್ತದರಾಶಿ ಬೆಟ್ಟ

ಬೆಟ್ಟಗುಡ್ಡಗಳ ಬಗ್ಗೆ ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿದ ಜನ ಟ್ರಕ್ಕಿಂಗ್ ಗೆ ಇತ್ತ ಬರಲಾರಂಭಿಸಿದರು. ಹೀಗೆ ಕೊಡಗಿನ ಬಹುತೇಕ ಬೆಟ್ಟಗಳು ಹೆಸರುವಾಸಿಯಾಗುತ್ತಾ ಹೋದವು. ಇವತ್ತು ಬಹಳಷ್ಟು ಬೆಟ್ಟಗಳಿಗೆ ಪ್ರವಾಸಿಗರು ಲಗ್ಗೆಯಿಡುತ್ತಲೇ ಇರುತ್ತಾರೆ. ಇದೀಗ ಭತ್ತದರಾಶಿ ಬೆಟ್ಟವೂ ಪ್ರವಾಸಿಗರನ್ನು ಸೆಳೆಯಲಾರಂಭಿಸಿದೆ. ಬೇಸಿಗೆಯಲ್ಲಿ ಇಡೀ ಬೆಟ್ಟ ಹೊಂಬಣ್ಣಕ್ಕೆ ತಿರುಗುವುದರಿಂದ ಆಕರ್ಷಿಸುತ್ತದೆ.

Battada Rashi Betta Is Perfect Place For Trekking In Kodagu District

ಭತ್ತದ ರಾಶಿಬೆಟ್ಟ ಬೇಸಿಗೆಯಲ್ಲಿ ಭತ್ತದ ರಾಶಿಯಂತೆ ಕಾಣುವುದರಿಂದಲೇ ಆ ಹೆಸರು ಬಂದಿದೆ. ಈ ಬೆಟ್ಟವನ್ನು ಗಿಡಗಂಟಿಗಳಿಂದ ಕೂಡಿದ ವಿಶಾಲವಾದ ಮೈದಾನ ಪ್ರದೇಶ ಆವರಿಸಿದೆ. ಈ ಪ್ರದೇಶದಲ್ಲಿ ಹುಲ್ಲು ಬೆಳೆಯುತ್ತದೆ. ಮಳೆಗಾಲದಲ್ಲಿ ಹುಲ್ಲು ಹುಲುಸಾಗಿ ಬೆಳೆಯುವುದರಿಂದ ಡಿಸೆಂಬರ್ ತನಕವೂ ಬೆಟ್ಟ ಹಸಿರಿನಿಂದ ತಳತಳಿಸುತ್ತಿರುತ್ತದೆ.

ಬೆಟ್ಟ ಸೃಷ್ಟಿಯಾಗಿದ್ದು ಹೇಗೆ ಗೊತ್ತಾ?

ಬೇಸಿಗೆ ಬರುತ್ತಿದ್ದಂತೆಯೇ ಸೂರ್ಯನ ಪ್ರಖರತೆ ಹೆಚ್ಚಾಗುವುದರಿಂದ ಬೆಟ್ಟದಲ್ಲಿ ಬೆಳೆದ ಹುಲ್ಲು ಒಣಗುತ್ತದೆ. ಆಗ ಅದು ಹೊಂಬಣ್ಣಕ್ಕೆ ತಿರುಗಿ ದೂರದಿಂದ ನೋಡಿದರೆ ಭತ್ತದರಾಶಿ ಮಾಡಿಟ್ಟಿದ್ದಾರೆ ಏನೋ ಎಂಬಂತೆ ಗೋಚರವಾಗುತ್ತದೆ. ಇದನ್ನು ನೋಡಿದ ಹಿಂದಿನವರು ಭತ್ತದರಾಶಿ ಬೆಟ್ಟ ಎಂದೇ ಕರೆದರು. ಅದು ಈಗಲೂ ಮುಂದುವರೆದಿದೆ.

Battada Rashi Betta Is Perfect Place For Trekking In Kodagu District

ಇನ್ನು ಪ್ರತಿಯೊಂದು ಬೆಟ್ಟದ ಬಗ್ಗೆಯೂ ಸ್ಥಳೀಯವಾಗಿ ದಂತಕತೆಗಳು ಇದ್ದೇ ಇರುತ್ತವೆ. ಇದಕ್ಕೆ ಭತ್ತದರಾಶಿ ಬೆಟ್ಟವೂ ಹೊರತಾಗಿಲ್ಲ. ಜನವಲಯದಲ್ಲಿರುವ ಕಥೆಗಳನ್ನು ಆದರಿಸಿ ಹೇಳುವುದಾದರೆ ಈಗ ಬೆಟ್ಟವಿರುವ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದ ರೈತನೊಬ್ಬ ಮುಗಿಲು ಮುಟ್ಟುವತನಕ ಭತ್ತದ ರಾಶಿ ಮಾಡಬೇಕೆಂದು ಹಂಬಲಿಸಿ ಸುತ್ತ ಮುತ್ತಲ ಗ್ರಾಮದವರಿಂದ, ಬಂಧು-ಬಳಗದಿಂದ ಭತ್ತ ಸಂಗ್ರಹಿಸಿ ರಾಶಿ ಹಾಕಲು ಆರಂಭಿಸಿದ್ದನಂತೆ.

ಅಣ್ಣನ ಭತ್ತದ ರಾಶಿಗೆ ತಂಗಿ ಶಾಪ

ಇದು ಆತನ ಸಹೋದರಿಯ ಆಕ್ರೋಶಕ್ಕೆ ಕಾರಣವಾಯಿತು. ಅಣ್ಣನ ಹುಚ್ಚಾಟವನ್ನು ನೋಡಿದ ಸಹೋದರಿ ಕೋಪಗೊಂಡಿದ್ದಳಂತೆ. ಆದರೂ ಪ್ರತಿವರ್ಷವೂ ಭತ್ತ ತಂದು ಕೊಡುತ್ತಿದ್ದಳಂತೆ. ವರ್ಷ ಕಳೆದಂತೆ ಆಕೆಗೆ ಅಣ್ಣನ ಈ ವಿಚಿತ್ರ ವರ್ತನೆ ಆಕ್ರೋಶ ತಂದಿತ್ತು ಹೀಗಾಗಿ ಹತಾಶಗೊಂಡ ಆಕೆ ನಿನ್ನ ಭತ್ತದ ರಾಶಿಗೆ ಬೆಂಕಿ ಬಿದ್ದು ನಾಶವಾಗಿ, ಅಲ್ಲಿ ಗಿಡಗಂಟಿಗಳು ಬೆಳೆಯಲಿ ಎಂದು ಶಾಪ ನೀಡಿದಳಂತೆ.

ಸಹೋದರಿಯ ಶಾಪದಂತೆ ಭತ್ತದ ರಾಶಿ ನಾಶವಾಗಿ ಗಿಡಗಂಟಿ, ಹುಲ್ಲುಗಳೊಂದಿಗೆ ಭತ್ತದ ರಾಶಿ ಬೆಟ್ಟವಾಗಿ ಮಾರ್ಪಾಡಾಯಿತು ಎನ್ನುವುದು ಈ ವ್ಯಾಪ್ತಿಯಲ್ಲಿರುವ ಕಥೆಯಾಗಿದೆ. ಈ ಕಾರಣದಿಂದಲೇ ಏನೋ ಇವತ್ತಿಗೂ ಭತ್ತದ ರಾಶಿ ಬೆಟ್ಟದಲ್ಲಿ ಹುಲ್ಲು, ಗಿಡ-ಗಂಟಿಗಳು ಹೆಚ್ಚಾಗಿ ಕಾಣುತ್ತಿದ್ದು, ಅವು ಬೆಟ್ಟವನ್ನು ಆವರಿಸಿಕೊಂಡಿವೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಇಲ್ಲಿನ ನಿಸರ್ಗ ಸೌಂದರ್ಯ ಹೇಗಿದೆ?

ಅದು ಏನೇ ಇರಲಿ.. ಆದರೆ ಭತ್ತದರಾಶಿ ಬೆಟ್ಟದ ನಿಸರ್ಗ ಸೌಂದರ್ಯದ ಬಗ್ಗೆ ಹೇಳಲೇ ಬೇಕಾಗುತ್ತದೆ. ಇಲ್ಲಿನ ಬೆಟ್ಟದ ಮೇಲ್ಭಾಗಕ್ಕೆ ಕಾಲು ದಾರಿಯಲ್ಲಿ ಏರುತ್ತಾ ಹೋಗಬೇಕು. ಬೆಟ್ಟವೇರುವುದು ಅಷ್ಟೇನು ಆಯಾಸ ಎನಿಸುವುದಿಲ್ಲ. ಗಿಡಮರಗಳ ನಡುವಿನ ಹಾದಿ ಮೈಮನವನ್ನು ತಂಪಾಗಿಸುತ್ತದೆ. ಬೆಟ್ಟವೇರುತ್ತಿದ್ದಂತೆಯೇ ಗಿಡಗಂಟಿ, ಹುಲ್ಲು ಬೆಳೆದು ನಿಂತ ಮೈದಾನದಂತಹ ಪ್ರದೇಶ ಬೆಟ್ಟದ ತುತ್ತ ತುದಿಗೆ ಬಂದಿದ್ದೇವೆ ಎಂಬ ಸಂದೇಶವನ್ನು ಸಾರುತ್ತದೆ.

ಇಲ್ಲಿಂದ ನಿಂತು ನೋಡಿದರೆ ಕಾಣುವ ದೃಶ್ಯ ಬರೀ ಸುಂದರವಲ್ಲ ಸುರಸುಂದರ ಎಂದರೆ ತಪ್ಪಾಗಲಾರದು. ಎತ್ತ ನೋಡಿದರೂ ಮುಗಿಲೆತ್ತರಕ್ಕೆ ನಿಂತ ಪರ್ವತಶ್ರೇಣಿಗಳು ಅದರ ನಡುವೆ ಗದ್ದೆ ಬಯಲು, ಕಾಫಿ ತೋಟಗಳು, ಬಿಸಿಲಲ್ಲೂ ಬೀಸುವ ತಂಗಾಳಿ ಮೈಮನಪುಳಕಗೊಳಿಸಿದರೆ, ಅದರಾಚೆಗೆ ಕಂಡು ಬರುವ ಪಶ್ಚಿಮ ಘಟ್ಟ ಸರಹದ್ದಿನ ಬೆಟ್ಟದ ಸಾಲುಗಳ ಹಸಿರ ಸಿರಿ ತಣಿಯದಷ್ಟು ಖುಷಿ ನೀಡುತ್ತದೆ.

ಯಾರು ಬೇಕಾದರೂ ಬೆಟ್ಟವೇರಬಹುದು?

ಹಾಗೆ ಸುಮ್ಮನೆ ಕಣ್ಣು ಹಾಯಿಸುತ್ತಾ ಹೋದರೆ ಪುಷ್ಪಗಿರಿ ಬೆಟ್ಟ ಮಾದಾಪುರ ಸಮೀಪದ ಕೋಟೆ ಬೆಟ್ಟ, ಮಾಲಂಬಿ ಬೆಟ್ಟ, ಕಾಟಿಕಲ್ಲು ಬೆಟ್ಟ, ಚೌಡ್ಲು ಬೆಟ್ಟ, ಮೂಕ್ರಿ ಗುಡ್ಡ, ಮಕ್ಕಳ ಗುಡಿ ಬೆಟ್ಟ, ದೊಡ್ಡಕಲ್ಲು ಬೆಟ್ಟ, ಹಾರಂಗಿ ಅಣೆಕಟ್ಟು, ಗೊರೂರು ಅಣೆಕಟ್ಟೆಯ ಹಿನ್ನೀರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಪರ್ವತ ಶ್ರೇಣಿಗಳು ಹೀಗೆ ಒಂದೇ ಎರಡೇ ಪ್ರಾಕೃತಿಕ ಜಗತ್ತೇ ನಮ್ಮ ಮುಂದೆ ಬಂದು ನಿಂತಂತೆ ಭಾಸವಾಗುತ್ತದೆ.

ಇನ್ನು ಈ ಬೆಟ್ಟ ಅಪಾಯಕಾರಿಯಲ್ಲ ಹೀಗಾಗಿ ಮಕ್ಕಳು ಮಹಿಳೆಯರು ಎಲ್ಲರೂ ಬೆಟ್ಟವನ್ನೇರಬಹುದಾಗಿದೆ. ಇಲ್ಲಿ ಮೂಲಸೌಲಭ್ಯದ ಕೊರತೆಯಿಂದಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ತಾಲೂಕು ಕೇಂದ್ರ ಸೋಮವಾರಪೇಟೆಯಿಂದ ಕೇವಲ 15 ಕಿ.ಮೀ. ದೂರದಲ್ಲಿದ್ದರೂ ಭತ್ತದರಾಶಿ ಬೆಟ್ಟ ನೆಲೆನಿಂತಿರುವ ಸಿಂಗನಹಳ್ಳಿ ಪ್ರದೇಶ ಅಭಿವೃದ್ಧಿ ವಂಚಿತ ಗ್ರಾಮವಾಗಿ ಉಳಿದು ಬಿಟ್ಟಿದೆ.

ಭತ್ತದ ರಾಶಿ ಬೆಟ್ಟಕ್ಕೆ ಹೋಗುವುದು ಹೇಗೆ?

ಅಂದಹಾಗೆ ಭತ್ತದರಾಶಿ ಬೆಟ್ಟ ಎಲ್ಲಿದೆ ಮತ್ತು ಹೋಗುವುದು ಹೇಗೆ ಎಂಬ ಪ್ರಶ್ನೆಬ ಕಾಡದಿರದು. ಇಲ್ಲಿಗೆ ಹೋಬೇಕಾದರೆ ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಕೂತಿ ಮೂಲಕ ಹೋಗಬೇಕಾಗುತ್ತದೆ. ಕೂತಿಗೆ ಸಮೀಪದಲ್ಲಿಯೇ ಸಿಂಗನಹಳ್ಳಿಯಿದೆ. ಬೆಟ್ಟವೇರಲು ಕಾಲುದಾರಿಯಿದೆ. ಸ್ವಂತವಾಹನ ಹೊರತು ಪಡಿಸಿ ಬಸ್ ನಲ್ಲಿಯೂ ಹೋಗಬಹುದಾದರೂ ಕಾಲ್ನಡಿಗೆಯಲ್ಲಿ ತೆರಳಲು ತಯಾರಾಗಿರ ಬೇಕಷ್ಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+