ಚಾಮರಾಜನಗರ ಜಿಲ್ಲೆಯಲ್ಲಿವೆ ಡಿಸೆಂಬರ್‌ನಲ್ಲಿ ನೀವು ಭೇಟಿ ನೀಡಬಹುದಾದ ಸೂಕ್ತ ಪ್ರವಾಸಿ ತಾಣಗಳು

ಚಾಮರಾಜನಗರ, ಡಿಸೆಂಬರ್‌, 02: ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳು ಬಂತೆಂದರೆ ಸಾಕು ತುಂಬಾ ಜನ ಟ್ರಿಪ್‌ ಪ್ಲಾನ್‌ ಮಾಡಿರುತ್ತಾರೆ. ಹಾಗಾದರೆ ಈ ವೇಳೆ ಪ್ರವಾಸಿಗರಿಗೆ ವೀಕ್ಷಣೆ ಮಾಡಲು ಹಾಗೂ ತಮ್ಮ ಕುಟುಂಬಗಳ ಜೊತೆ ಕಾಲ ಕಳೆಯಲು ಚಾಮರಾಜನಗರ ಜಿಲ್ಲೆಯ ಈ ಪ್ರವಾಸಿ ತಾಣಗಳೇ ಸೂಕ್ತವಾಗಿವೆ.

ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಚಾಮರಾಜನಗರದತ್ತ ಮುಖ ಮಾಡುತ್ತಾರೆ. ಕಾರಣ ಇಲ್ಲಿನ ದೇಗುಲ, ಬೆಟ್ಟಗುಡ್ಡಗಳು, ಅಭಯಾರಣ್ಯಗಳೆಲ್ಲವೂ ಕಣ್ಮನ ಸೆಳೆಯುತ್ತಿದ್ದು, ನಿಸರ್ಗದ ನಡುವೆ ಪ್ರಾಣಿಪಕ್ಷಿಗಳನ್ನು ನೋಡಿಕೊಂಡು, ಮಾದಪ್ಪ, ಬಿಳಿಗಿರಿರಂಗ, ಗೋಪಾಲಸ್ವಾ,ಮಿ, ಚಾಮರಾಜೇಶ್ವರ ಮೊದಲಾದ ದೇವರ ದರ್ಶನ ಮಾಡಿಕೊಂಡು ಮಾರ್ಗ ಮಧ್ಯೆ ಚೆಂಡುಹೂ, ಸೂರ್ಯಕಾಂತಿ ಜೊತೆ ಸೆಲ್ಫಿ ತೆಗೆದುಕೊಂಡು ಬರುವುದೇ ಒಂಥರಾ ಮಜಾ.

ಚಾಮರಾಜನಗರ ಜಿಲ್ಲೆ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಜೊತೆಗೆ ಗಡಿ ಹಂಚಿಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಭಕ್ತರ ರೂಪದಲ್ಲಿ ಬರುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಅದರಲ್ಲೂ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಿಗರಾಗಿ ತೆರಳುವವರಿಗಿಂತ ದೇವರ ದರ್ಶನ ಮಾಡಲು, ಹರಕೆ ತೀರಿಸಲು ಹೋಗುವವರೇ ಜಾಸ್ತಿ ಎಂದರೆ ತಪ್ಪಾಗಲಾರದು.

Bandipur to Gopalswami Hills: 10 Famous Places to Visit in Chamarajanagar During December

ಇನ್ನೊಂದೆಡೆ ದೇವರ ದರ್ಶನ ಮಾಡಿಕೊಂಡು ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರುವವರೂ ಇಲ್ಲದಿಲ್ಲ. ಇವರೆಲ್ಲರೂ ಒಮ್ಮೆಗೆ ಹಲವಾರು ದೇಗುಲ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲೆಂದೇ ಇತ್ತ ಬರುತ್ತಾರೆ. ಜಿಲ್ಲೆಗೆ ಪ್ರವಾಸಿಗರು ಹೆಚ್ಚೆಚ್ಚು ಆಗಮಿಸಿದಷ್ಟು ಆದಾಯವೂ ಹೆಚ್ಚಾಗಲಿದ್ದು, ಪ್ರವಾಸಿಗರನ್ನು ನಂಬಿರುವ ಉದ್ಯಮಗಳಿಗೂ ಅನುಕೂಲವಾಗಲಿದೆ.

2020ರಿಂದ 21ರ ತನಕವೂ ಕೊರೋನಾ ಕಾಡಿತ್ತು. ಹೀಗಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಆದರೆ ಕಳೆದ ವರ್ಷದಿಂದ ಜನಜೀವನ ಯಥಾಸ್ಥಿತಿಗೆ ಮರಳಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು ಖುಷಿಯ ವಿಚಾರವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಅಂದುಕೊಂಡಂತೆ ಮಳೆಯಾಗಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಸುರಿದ ಮಳೆ ನಿಸರ್ಗವನ್ನು ಹಸಿರಾಗಿಟ್ಟಿದೆ. ಹೀಗಾಗಿ ದೂರದಿಂದ ಪ್ರವಾಸಿಗರ ಕಣ್ಣಿಗೆ ಹಚ್ಚಹಸಿರಿನ ಸುಂದರ ಪರಿಸರ ಕಾಣಿಸಿಕೊಳ್ಳುತ್ತಿದ್ದು, ಹುರುಪು ನೀಡುತ್ತಿದೆ. ಆದ್ದರಿಂದ ಪ್ರವಾಸಿಗರು ಇಲ್ಲಿನ ಅರಣ್ಯಗಳ ನಡುವೆ ಅಲೆಯಲು ಇಷ್ಟಪಡುತ್ತಿದ್ದಾರೆ.

ಸದ್ಯ ರೈತರ ಹೊಲಗದ್ದೆಗಳಿಂದ ಆರಂಭವಾಗಿ ಅಭಯಾರಣ್ಯಗಳ ತನಕ ಕಣ್ಣು ಹಾಯಿಸಿದೆಡೆ ಹಸಿರಿನ ನೋಟ ಲಭ್ಯವಾಗುತ್ತಿದೆ. ಜೋಳ, ಅರಶಿಣ, ಸೂರ್ಯ ಕಾಂತಿ, ಅಲಸಂದೆ, ತೊಗರಿ ಸೇರಿದಂತೆ ಹಲವು ಬೆಳೆಗಳು ಮಳೆಯ ಕೊರತೆಯಿಂದ ರೈತರ ಕೈಹಿಡಿಯಲಿಲ್ಲ. ಆದರೂ ಇಲ್ಲಿನ ರೈತರು ತಮ್ಮ ಪಾಡಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕಾಣಿಸುತ್ತಿದೆ.

ಏನೇನು ವಿಶೇಷತೆಗಳಿವೆ ಗೊತ್ತಾ?

ಇನ್ನು ದೈವ ಕ್ಷೇತ್ರಗಳಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಉಳಿದಂತೆ ಬಂಡೀಪುರ, ಹೊಗೆನಕಲ್, ಶಿವನಸಮುದ್ರ ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗ ದಂಡು ದೌಡಾಯಿಸುತ್ತಿದೆ. ತಮಿಳುನಾಡು ಮತ್ತು, ಕೇರಳಕ್ಕೆ ತೆರಳುವ ಪ್ರವಾಸಿಗರು ಮಾರ್ಗ ಮಧ್ಯೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ಬಳಿಕ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದಾರೆ.

ಇದೆಲ್ಲದರ ನಡುವೆ ರಸ್ತೆಯಲ್ಲಿ ಸಮೀಪದ ಹೊಲಗದ್ದೆಗಳಲ್ಲಿ ಬೆಳೆದು ನಿಂತ ಬೆಳೆಗಳು ಪ್ರವಾಸಿಗರ ಗಮನಸೆಳೆಯುತ್ತಿದ್ದು, ಕೆಲವರು ಸೂರ್ಯಕಾಂತಿ, ಸೇವಂತಿಗೆ, ಚೆಂಡು ಹೂ ಬೆಳೆಗಳ ನಡುವೆ ನಿಂತು ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಮುಂದೆ ಹೋಗುತ್ತಿದ್ದಾರೆ. ಮೈಸೂರು ಕಡೆಯಿಂದ ಊಟಿ, ತಮಿಳುನಾಡು, ಕೇರಳ ಕಡೆಗೆ ತೆರಳುವ ಮತ್ತು ತಮಿಳು ನಾಡು ಕೇರಳ ಊಟಿ ಭಾಗದಿಂದ ಆಗಮಿಸುವ ಪ್ರವಾಸಿಗರು ಜಿಲ್ಲೆಯಲ್ಲಿರುವ ಪ್ರವಾಸಿತಾಣಗಳಿಗೆ ಭೇಟಿ ನೀಡುವುದು ಮಾತ್ರವಲ್ಲದೆ, ರೈತರ ಕೃಷಿ ಭೂಮಿಯತ್ತಲೂ ಆಕರ್ಷಿತರಾಗುತ್ತಿದ್ದಾರೆ.

Bandipur to Gopalswami Hills: 10 Famous Places to Visit in Chamarajanagar During December

ಕಣ್ಮುಂದೆ ಬರುವ ನಿಸರ್ಗದ ಸ್ವರ್ಗ

ತಮ್ಮ ಪ್ರಯಾಣದ ವೇಳೆ ಮಾರ್ಗದ ನಡುವೆ ಇರುವ ನಮ್ಮ ಜಮೀನುಗಳಲ್ಲಿ ಬೆಳೆದು ಹೂ ಬಿಟ್ಟು ನಿಂತ ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳನ್ನು ನೋಡಿ ಆನಂದಿಸುವುದರೊಂದಿಗೆ, ಕೆಲವರು ಜೋಡಿಯಾಗಿ, ಮತ್ತೆ ಕೆಲವರು ಕುಟುಂಬ ಸಮೇತ ಫೋಟೋಗಳನ್ನು ತೆಗೆಸಿಕೊಂಡರೆ, ಫ್ರೀ ವೆಡ್ಡಿಂಗ್ ಶೂಟ್‌ಗೂ ಇಲ್ಲಿನ ಚೆಂಡು ಹೂ, ಸೂರ್ಯಕಾಂತಿ ಬೆಳೆಗಳು ಸಾಕ್ಷಿಯಾಗುತ್ತಿವೆ.

ಭಕ್ತರಾಗಿ ಬರುವವರಿಗೆ ಚಾಮರಾಜನಗರದ ಚಾಮರಾಜೇಶ್ವರ, ಮಲೆಮಹದೇಶ್ವರ ಬೆಟ್ಟದ ಮಲೆಮಹದೇಶ್ವರ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೋಪಾಲಸ್ವಾಮಿ, ಬಿಳಿರಂಗನಬೆಟ್ಟದ ಬಿಳಿಗಿರಿರಂಗ ಪವಿತ್ರ ಮತ್ತು ಇಷ್ಟಾರ್ಥ ನೆರವೇರಿಸುವ ದೈವತಾಣವಾಗಿ ಗಮನಸೆಳೆದರೆ, ಪ್ರವಾಸಕ್ಕೆಂದು ಹೊರಡುವವರಿಗೆ ಇಲ್ಲಿನ ಬೆಟ್ಟಗುಡ್ಡಗಳು ಅವುಗಳ ನಡುವಿನ ಹಸಿರು ಪ್ರಪಂಚ ನಿಸರ್ಗದ ಸ್ವರ್ಗವನ್ನೇ ಕಣ್ಮುಂದೆ ತಂದುಕೊಡುತ್ತಿದೆ.

ಕಾವೇರಿಯ ರುದ್ರರಮಣೀಯ ದೃಶ್ಯ

ಇನ್ನು ಬಂಡೀಪುರ ಪ್ರಕೃತಿ ಪ್ರಿಯರಿಗೆ ಮುದನೀಡುವ ತಾಣಗಾಗಿ ಗಮನಸೆಳೆಯುವುದರೊಂದಿಗೆ ಪ್ರಾಣಿ ಪಕ್ಷಿಗಳನ್ನು ಹತ್ತಿರದಿಂದ ನೋಡುವ ಸೌಭಾಗ್ಯವನ್ನು ಕರುಣಿಸುತ್ತದೆ. ಕೊಡಗಿನಿಂದ ಹರಿದು ಬರುವ ಕಾವೇರಿಯ ರುದ್ರರಮಣೀಯತೆ ನೋಡಲು ಬಯಸುವವರನ್ನು ಹೊಗೇನಕಲ್ ಮತ್ತು ಶಿವನಸಮುದ್ರ ಕೈಬೀಸಿ ಕರೆಯುತ್ತಿದೆ. ಇದರ ನಡುವೆ ಹತ್ತಾರು ಸಣ್ಣಪುಟ್ಟ ದೇಗುಲ, ಪ್ರವಾಸಿ ತಾಣಗಳು ಮಾರ್ಗದ ನಡುವೆ ಅಲ್ಲಲ್ಲಿ ಕಾಣಸಿಗುತ್ತಿದ್ದು, ಅವುಗಳನ್ನು ನೋಡಿಕೊಂಡು ಪ್ರವಾಸಿಗರು ಮುಂದೆ ಸಾಗುವುದು ಕಂಡು ಬರುತ್ತಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ನಗರದ ಗೌಜು ಗದ್ದಲ, ಕೆಲಸದ ಒತ್ತಡದಲ್ಲಿ ಕಳೆದು ಹೋದವರು ಮನಶಾಂತಿ ಪಡೆಯಲೆಂದು ಪ್ರವಾಸ ಹೊರಡುವ ಮನಸ್ಸು ಮಾಡಿ ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಿದ್ದರೆ ಅಂಥಹವರು ಚಾಮರಾಜನಗರದತ್ತ ಮುಖ ಮಾಡಿದ್ದೇ ಆದರೆ ಇಲ್ಲಿನ ಭೂರಮೆಯ ನೋಟ ನಿಮ್ಮ ಕಣ್ಮನ ತಣಿಸಿ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+