ರುದ್ರ ರಮಣೀಯ ಶಿವನಸಮುದ್ರ ಜಲಪಾತ
ರುದ್ರ ರಮಣೀಯ ಜಲಪಾತಗಳ ಸಾಲಿನಲ್ಲಿ ಶಿವನಸಮುದ್ರ ಜಲಪಾತ ಸಹ ಒಂದು. ಮಂಡ್ಯ ನಗರದಿಂದ 60 ಕಿ.ಮೀ ದೂರದಲ್ಲಿರುವ ಮಳವಳ್ಳಿ ತಾಲೂಕಿನಲ್ಲಿ ಕಾವೇರಿಯ ಉಪನದಿ ಶಿಂಷಾ ಕವಲೊಡೆದು ಭರಚುಕ್ಕಿ, ಗಗನಚುಕ್ಕಿಯಾಗಿ 75 ಮೀಟರ್ ಎತ್ತರದಿಂದ ಧಾರೆಧಾರೆಯಾಗಿ ಧುಮುಕುವುದನ್ನು ನೋಡಲು ಎರಡು ಕಣ್ಣುಗಳು ಸಾಲದು, ವರ್ಣಿಸಲು ಪದಗಳಿಗೆ ತಡಕಾಡಬೇಕಾಗುತ್ತದೆ.
ಪೂರ್ವಾಭಿಮುಖಿ ಜಲಪಾತ-ಭರಚುಕ್ಕಿ
ಶಿವನಸಮುದ್ರದಿಂದ 2 ಕಿ.ಮೀ ದೂರದಲ್ಲಿ ವಿಸ್ತಾರವಾದ ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಭರಚುಕ್ಕಿ ನಳನಳಿಸುತ್ತಾಳೆ. ಇಲ್ಲಿ ಶಿಂಷಾ ನದಿ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ಭರಚುಕ್ಕಿ 300 ರಿಂದ 350 ಅಡಿ ಆಳಕ್ಕೆ ರಭಸವಾಗಿ ಧುಮುಕಿ ಆಗಸದಲ್ಲಿ ಮಂಜಿನ ಮೋಡಗಳ ಚಿತ್ತಾರವನ್ನು ನಿರ್ಮಿಸುವ ದೃಶ್ಯ ನಿಜಕ್ಕೂ ಮನಮೋಹಕ. ಶಿವನಸಮುದ್ರ ಜಲಪಾತ ಭಾರತದಲ್ಲೇ ಎರಡನೇ ಅತಿದೊಡ್ಡ ಜಲಪಾತ. 1901ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್ ಘಟಕ ಸ್ಥಾಪಿಸುವ ಮೂಲಕ ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಉತ್ಪಾದನೆಗೆ ನಾಂದಿ ಹಾಡಲಾಯಿತು.
ಪಶ್ಚಿಮಾಭಿಮುಖಿ ಜಲಪಾತ-ಗಗನ ಚುಕ್ಕಿ
ಶಿವನಸಮುದ್ರ ಬಳಿ ಶಿಂಷಾ ನದಿ ಕವಲೊಡೆದು ದ್ವೀಪವನ್ನೇ ನಿರ್ಮಿಸಿದೆ. ಈ ದ್ವೀಪದಲ್ಲಿ ಹಲವಾರು ಪುರಾತನ ದೇವಾಲಯಗಳು ನೆಲೆನಿಂತಿವೆ. ತುಂಬಾ ವರ್ಷಗಳ ಹಿಂದೆ ಈ ದ್ವೀಪದಲ್ಲಿ ಒಂದು ಹಳ್ಳಿ ಸಹ ಇತ್ತೆಂದು ಸ್ಥಳೀಯರು ಹೇಳುತ್ತಾರೆ.
ಮಂಡ್ಯ ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳು
ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ 17ರಲ್ಲಿ ಪ್ರಯಾಣಿಸಿದರೆ ಮಂಡ್ಯ ಜಿಲ್ಲೆ ಬೆಂಗಳೂರಿನಿಂದ 120 ಕಿ.ಮೀ ದೂರದಲ್ಲಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ, ಶ್ರೀರಂಗನಾಥ ದೇವಾಲಯ, ಮೇಲುಕೋಟೆ , ದರಿಯಾ ದೌಲತ್ ಬಾಗ್, ಗಂಜಾಂ, ಪ್ರೇಕ್ಷಣೀಯ ಸ್ಥಳಗಳಾದ ರಂಗನತಿಟ್ಟು, ಕೊಕ್ಕರೆ ಬೆಳ್ಳೂರನ್ನು ವೀಕ್ಷಿಸಬಹುದು.
ಉಳಿದುಕೊಳ್ಳಲು ಸೂಕ್ತ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ:
Georgia Sunshine Village
Hebbani Village, Shimshapura Road,
P.O. Box no.5, Malavalli Taluk-571430,
Mandya Dist, Karnataka,
Ph: 08231-247646/247783
ಹೆಚ್ಚಿನ ವಿವರಗಳಿಗೆ ಹಾಲಿಡೇ ಮೇಕರ್ಸ್ ತಾಣವನ್ನು ವೀಕ್ಷಿಸಿ
ಭರಚುಕ್ಕಿ ಛಾಯಾಂಕಣ
ಗಗನಚುಕ್ಕಿ ಛಾಯಾಂಕಣ
ಓದುಗರ ಗಮನಕ್ಕೆ:
ನಿಮ್ಮೂರಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ನೀವೂ ಬರೆಯ ಬಹುದು. ಲೇಖನದ ಜೊತೆಗೆ ಉತ್ತಮ ಛಾಯಾಚಿತ್ರಗಳನ್ನು ತಪ್ಪದೆ ಲಗತ್ತಿಸಿ ಇ-ಮೇಲ್ ವಿಳಾಸಕ್ಕೆ ಕಳುಹಿಸಿ. ಸೂಕ್ತ ಕಂಡಲ್ಲಿ ಪ್ರಕಟಿಸುತ್ತೇವೆ.











Click it and Unblock the Notifications