ಚಿನ್ನಪ್ಪಿ ಮೇಲ್ಯಾಕೆ ಬಂದೆಮ್ಮಾ ಮಾರಮ್ಮಾ? ಓದುಗರ ವ್ಯಂಗ್ಯಭರಿತ ಪತ್ರ
ಅಯ್ಯೋ ತಾಯಿ ಮಾರಮ್ಮ, ಚಿನ್ನಪ್ಪಿ ಮೈಮೇಲೆ ಬಂದು, ಆರೋಪಿಗಳು ಎಷ್ಟು ಜನ ಎಂದು ಕೈ ಬೆರಳುಗಳ ಮೂಲಕ ತೋರಿಸಿದ್ದೀಯಲ್ಲಾ? ಹಾಗೆ ಮಾಡುವ ಬದಲು ನಿನ್ನ ಪ್ರಸಾದದಲ್ಲಿ ವಿಷ ಬೆರೆಸುವಾಗಲೇ ಯಾರದಾದರೂ ಮೈಮೇಲೆ ಬರಬಾರದಿತ್ತೇ? ಹಾಗೆ ಬಂದು ಈ ಅನಾಹುತವನ್ನು ತಡೆಯಬಹುದಿತ್ತಲ್ಲವೇ?
ಚಿನ್ನಪ್ಪಿ ಮೈಮೇಲೆ ಬರುವ ಬದಲು, ಪ್ರಸಾದ ತಿಂದು ಸತ್ತವರ ಮೈಮೇಲೆ ಹೋಗಿ ಅವರಿಗೆ ಜೀವಕಳೆ ತುಂಬಬಾರದೇ? ಹಾಳಾಗಿ ಹೋಗಲಿ, ಪೋಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ, ಪತ್ರಕರ್ತರು ಕ್ಯಾಮರಾ, ಪೆನ್ ಹಿಡಿದುಕೊಂಡು ಇದ್ದಬದ್ದವರನ್ನೆಲ್ಲಾ ಪ್ರಶ್ನೆ ಕೇಳುತ್ತಿದ್ದಾರೆ, ಹೋಗಿ ಅವರಿಗಾದರೂ ಸಹಾಯ ಮಾಡಬಾರದೇ?
ವಿಷವಿಕ್ಕಿದವರೂ, ತಿಂದು ಸತ್ತವರೂ, ತನಿಖೆ ನಡೆಸುತ್ತಿರುವವರೂ, ಸಂದರ್ಶನ ನಡೆಸುತ್ತಿರುವವರೂ ಎಲ್ಲರೂ ನಿನ್ನ ಮಕ್ಕಳೆಂದು, ಇಲ್ಲೀವರೆಗೂ ಸುಮ್ಮನಿದ್ದೆಯಾ? ಯಾರಾದರೂ ಕುರಿ ಕೋಳಿ ಬಲಿ ಕೊಡ್ತೀನಿ, ಚಿನ್ನಪ್ಪೀನೋ ಇಲ್ಲಾ ಇನ್ಯಾರಮೇಲಾದ್ರೂ ಬಂದು ನಿಜ ಹೇಳವ್ವಾ ಅಂತೇನಾದರೂ ಹರಕೆ ಮಾಡಿಕೊಂಡಿದಾರೇನು?

ಅಯ್ಯೋ ಏನು ಮಾರವ್ವನವ್ವಾ ನೀನು, ಇಷ್ಟೆಲ್ಲಾ ಕಣ್ಣ ಮುಂದೇನೇ ನಡೀತಿದ್ರೂ ಸುಮ್ನಿದ್ದು, ಈಗ ಚಿನ್ನಪ್ಪಿ ಮೇಲೆ ಬಂದಿದ್ದೀಯಲ್ಲಾ? ಹೋಗಲಿ ಕೋರ್ಟಿಗೆ ಹೋಗಿ ಜಡ್ಜ್ ಮುಂದಾದರೂ ತಪ್ಪಿತಸ್ಥರು ಯಾರು ಅಂತ ತೋರಬಾರದೇ? ಹೇಗೂ ಬೆಂಗಳೂರು ತನಕ ಹೋಗಲಿಕ್ಕೆ ನಿನಗ್ಯಾವ ಬಸ್ಸು, ಕಾರು, ರೈಲುಗಳ ಅವಶ್ಯಕತೇನೆ ಇಲ್ಲಾ, ಠಣ್ ಅಂತಾ ಅಲ್ಲೇ ಯಾರಾದ್ರೂ ವಕೀಲರ ಮೇಲೆ ಬಂದು ಬಿಡು, ಬಹಳ ಸುಲಭ, ಅದು ಬಿಟ್ಟು ಚಿನ್ನಪ್ಪೀನ ಹಿಡಿದು ರುಬ್ಬುತಿದ್ದೀಯಲ್ಲಾ, ಪಾಪ!












Click it and Unblock the Notifications