ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೊಂದು ಶಾಕ್

ಮಂಗಳೂರು ತಾಲೂಕಿನ ಮುಲ್ಕಿ-ಕಿನ್ನಿಗೋಳಿ- ಮೂಡುಬಿದರೆ ನಡುವೆ ಬರುವ ನಿಡ್ಡೋಡಿ ಎಂಬ ಪುಟ್ಟ ಗ್ರಾಮದಲ್ಲಿ ತಲೆ ಎತ್ತಲು ಹಾತೊರೆಯುತ್ತಿರುವ ನೇಶನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ಸಂಸ್ಥೆಯ ಬೃಹತ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕರ್ನಾಟಕ ಸರ್ಕಾರ ಓಕೆ ಎಂದಿದೆ.
ಉಡುಪಿ ಜಿಲ್ಲೆ ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಈಗಾಗಲೇ 1200 ಮೆಗಾವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ಯೋಜನೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಠಾಧೀಶರು, ಖ್ಯಾತ ಪರಿಸರವಾದಿಗಳು ಬಂದು ಹೋರಾಟ ನಡೆಸಿದರೂ ಸರ್ಕಾರ ಕಿವಿಗೊಟ್ಟಿಲ್ಲ. ಇನ್ನು ಎನ್ ಟಿಪಿಸಿ ವಿದ್ಯುತ್ ಘಟಕ ಸ್ಥಾಪನೆಯಾದರೆ ಕನ್ನಡ ಜಿಲ್ಲೆ ನಿರ್ನಾಮವಾದಂತೆ.
ಕಲ್ಲಿದ್ದಲು ಆಧಾರಿತ ಈ ಉಷ್ಣ ವಿದ್ಯುತ್ ಸ್ಥಾವರದಿಂದ ಹೊರ ಹೊಮ್ಮುವ ಮಾಲಿನ್ಯ ಅತ್ಯಂತ ಅಪಾಯಕಾರಿ ಎಂಬುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ಉಡುಪಿ ಜಿಲ್ಲೆಯನ್ನು ಹಾರು ಬೂದಿಯ ಆಗರವನ್ನಾಗಿಸಿ ರಾಜಕಾರಣಿಗಳು ಚೆಲ್ಲಾಟವಾಡುತ್ತಿದ್ದಾರೆ.
ಅಂದಹಾಗೆ ಮೊದಲಿಗೆ ಈ ಯೋಜನೆ ಉತ್ತರ ಕನ್ನಡ ಜಿಲ್ಲೆಯ ಕಡಲ ಕಿನಾರೆಯ ಗ್ರಾಮ ತದಡಿಗೆ ಮಂಜೂರಾಗಿತ್ತಂತೆ. ಆದರೆ, ಅಲ್ಲಿ ಸ್ಥಾಪನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸತತ ಎರಡು ವರ್ಷಗಳ ಪ್ರಯತ್ನದ ನಂತರ ಸುಮಾರು 4000 ಮೆಗಾವ್ಯಾಟ್ ಸಾಮರ್ಥ್ಯದ ಈ ಮೆಗಾ ಪ್ರಾಜೆಕ್ಟ್ ಕೈ ತಪ್ಪಿ ಹೋಗದಂತೆ ತಡೆಯಲು ದಕ್ಷಿಣ ಕನ್ನಡದ ಅಮಾಯಕ ಗ್ರಾಮ ಮೇಲೆ ಬರೆ ಎಳೆಯಲು ಸಿದ್ಧವಾಗುತ್ತಿದೆ.
ತದಡಿ ಯೋಜನೆಯ ವಿರುದ್ಧ ಶಿರಸಿಯ ಸ್ವರ್ಣವಲ್ಲಿ ಮಠದ ಸ್ವಾಮೀಜಿ ಹೋರಾಟದ ಮುಂದಾಳತ್ವ ವಹಿಸಿಕೊಂಡು ಯೋಜನೆ ನೆನೆಗುದಿಗೆ ಬೀಳುವಂತೆ ಮಾಡಿದ್ದರು. ಯಡಿಯೂರಪ್ಪ ಅವರ ಸರ್ಕಾರ ಬಿದ್ದ ಮೇಲೆ ಈ ಯೋಜನೆ ಬಗ್ಗೆ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಅವರ ಕಣ್ಣು ಬಿದ್ದು ಮತ್ತೊಮ್ಮೆ ಧೂಳಿನಿಂದ ಎದ್ದು ಕೂತಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಂದ್ರದ ಇಂಧನ ಖಾತೆ ರಾಜ್ಯ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಗ್ರಾಮ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಅಲ್ಟ್ರಾ ಮೆಗಾ ಪವರ್ ಯೋಜನೆ ಫಲ: ಸುಮಾರು 4000 ಮೆ.ವ್ಯಾ ಸಾಮರ್ಥ್ಯದ ಘಟಕದಲ್ಲಿ ಪ್ರತಿ ದಿನ ಸುಮಾರು 55,000 ಟನ್ ಪ್ರಮಾಣದ ಕಲಿದ್ದಲು ಭಸ್ಮವಾಗಲಿದೆ. ಪ್ರತಿದಿನದ ಹಾರುಬೂದಿಯ ಪ್ರಮಾಣ 10,000 ಟನ್ ಗಳನ್ನು ಮೀರಲಿದೆ.
ಜೊತೆಗೆ ಮಾರಕ ಪಾದರಸದ ಪ್ರಮಾಣ 30-40 ಕೆ.ಜಿ ಕೂಡಾ ಸೇರಲಿದೆ. ಇನ್ನೂ ಅನೇಕ ರಾಸಯನಿಕಗಳು ಗಾಳಿಯನ್ನು ಸೇರಲಿದೆ. ಶುದ್ಧ ಕುಡಿಯುವ ನೀರು ಇನ್ಮುಂದೆ ಮರೀಚಿಕೆಯಾಗಲಿದೆ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸಿದ ನಂದಿಕೂರು ಜನಜಾಗೃತಿ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಚಟುವಟಿಕೆ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ ಸಂಪೂರ್ಣ ನಿಲ್ಲಲಿದೆ. ಜಿಲ್ಲೆಯ ಜನ ಜೀವನ ನಾಶವಾಗಲಿದೆ.












Click it and Unblock the Notifications