ಮಡೆಸ್ನಾನ ಆರೋಗ್ಯಕರ ಸಮಾಜಕ್ಕೆ ಕಳಂಕ

ಹಾಗಾಗಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಬ್ರಾಹ್ಮಣ ಸಮುದಾಯ ಉಂಡು ಬಿಟ್ಟ ಎಂಜಲು ಎಲೆಗಳ ಮೇಲೆ ಉರುಳಾಡಿ ಹರಕೆ ತೀರಿಸುವುದು ಯಾವ ನಿಟ್ಟಿನಲ್ಲಿ ಸೇವೆಯೂ ಅಲ್ಲ, ಯೋಗ್ಯವೂ ಅಲ್ಲ.
ಸ್ನಾನವೆಂದರೆ ಶುಚಿಯಾಗುವುದು ಅಂದರೆ ಎಂಜಲೆಯ ಮೇಲೆ ಉರುಳಾಡಿ ಎಂಜಲು ಮೆತ್ತಿ ಕೊಂಡರೇ ಅದು ಸ್ನಾನ ಹೇಗಾಗುತ್ತದೆ ? ಹಾಗಾಗಿ ಅದು ಮಡೆಯೇ ವಿನಾಃ ಸ್ನಾನ/ವಿಮೋಚನೆ ಆಗಲಾರದು. ಆದರೂ ಸಾಕಷ್ಟು ತಿಳುವಳಿಕೆಯುಳ್ಳ ಭಕ್ತರಿಗೆ ಮಡೆಸ್ನಾನ ಅಸಹ್ಯ ಅವಮಾನಕರವಲ್ಲದೆ, ಅನಾಗರಿಕ ಆಚರಣೆಯಂದು ತಿಳಿಯದಿರುವುದು ವಿಷಾದನೀಯ.
ಅದು ಕೂಡ ಬುದ್ಧಿವಂತರ ನಾಡೆಂದೂ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ನಂಬಿಕೆ ಹೆಸರಿನಲ್ಲಿ ನಡೆಯುತ್ತಿರುವುದು ಆಶ್ಚರ್ಯಕರ.
ಅಲ್ಲದೆ ಇದರಿಂದ ಉಂಡವರು ಶ್ರೇಷ್ಠರು ಅವರ ಎಂಜಲೆಯ ಮೇಲೆ ಸೇವೆಯೆಂದು ಉರುಳಾಡು ವವರು ಕನಿಷ್ಟರು ಎಂಬ ಭಾವನೆ ಮಾಡುವುದಿಲ್ಲವೇ? ಅಂದ್ರೆ ಇದು ತಮ್ಮನ್ನು ಶ್ರೇಷ್ಠರು (ಮೇಲುವರ್ಗ) ಎಂದು ಪುಷ್ಠಿಕರಿಸಲು ಮಾಡಿದ ಹುನ್ನಾರ ಹೊರತು ಬೇರೇನೂ ಅಲ್ಲ ಎಂಬ ಪ್ರಶ್ನೆ ಮೂಡುವುದಿಲ್ಲವೇ?
ಅಲ್ಲದೆ ಹಿಂದೂ ಧರ್ಮದ ಯಾವ ಧಾರ್ಮಿಕ ಗ್ರಂಥಗಳಲ್ಲಿ ಈ ಸೇವೆಯ ಬಗ್ಗೆ ಮಾಹಿತಿಯಿಲ್ಲ. ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ಅಂಶವೂ ಇಲ್ಲ. ಹಾಗಿದ್ದ ಮೇಲೆ ಇದು ಧಾರ್ಮಿಕ ಆಚರಣೆ / ನಂಬಿಕೆ ಹೇಗಾಗುತ್ತದೆ? ಇಂತಹ ಅಂಧಾಚಾರಣೆಗಳು 'ಧಾರ್ಮಿಕ ನಂಬಿಕೆ' ಹೆಸರಿನಲ್ಲಿ ಇಷ್ಟು ಕಾಲ ಆಚರಣೆಯಲ್ಲಿರುವುದೇ ಖೇದಕರ.
ಅಲ್ಲದೆ, ಮೇಲುವರ್ಗ ಉಂಡ ಎಂಜಲು ಎಲೆಗಳ ಮೇಲೆ ಉರುಳು ಸೇವೆ ಮಾಡುವುದರಿಂದ ಕೆಳಜಾತಿಯವರ ಸಂಕಷ್ಟ ನಿವಾರಣೆ ಆಗುತ್ತದೆ ಎಂಬ ಪ್ರತೀತಿ ಇನ್ನೂ ಜೀವಂತವಾಗಿರುವುದು. ಧಾರ್ಮಿಕ ವ್ಯವಸ್ಥೆಯ ಅನಾಗರಿಕ ಧೋರಣೆಯ ಪ್ರತೀಕ, ನಾಗರಿಕ ಸಮಾಜಕ್ಕೊಂದು ಕಳಂಕ.
ಇನ್ನೂ ಆಶ್ಚರ್ಯಕರ ಎಂದರೆ ಮಠಾಧೀಶರು, ಮುಜರಾಯಿ ಸಚಿವರು ಇದನ್ನು ಭಕ್ತರ ನಂಬಿಕೆ ಎಂದು ಸಮರ್ಥಿಸಿಕೊಂಡಿರುವುದು. ಇದು ನಿಜಕ್ಕೂ ಆತಂಕ ಹುಟ್ಟಿಸುವಂತಹದ್ದು. ಸ್ವತಃ ವೈದ್ಯರಾಗಿರುವ ಸಚಿವ ಆಚಾರ್ಯರು ಧ್ವನಿ ಎತ್ತದಿರುವುದು ಅವರ ಮೌಢ್ಯತೆಯನ್ನು ಬಿಂಬಿಸುತ್ತದೆ.
ಅಲ್ಲದೆ ಈ ಅನಿಷ್ಟ ಪದ್ಧತಿ ಬಗ್ಗೆ ಸತ್ಯವನ್ನು ಶೋಧಿಸಲು ಕ್ಷೇತ್ರಕ್ಕೆ ಬಂದಿದ್ದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಖಂಡನೀಯ ಮಾತ್ರ ಅಲ್ಲ ಇದು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಈ ಕೃತ್ಯಕ್ಕೆ ಜಿಲ್ಲಾಡಳಿತವೇ ನೇರ ಹೊಣೆ, ಇಲ್ಲದಿದ್ದರೆ, ಈ ಅನಿಷ್ಟ ಪದ್ಧತಿ ಬಗ್ಗೆ ಜಾಗ್ರತೆ ಮೂಡಿಸಲು ಬಂದಿದ್ದ ಅವರ ರಕ್ಷಣೆಗೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಬೇಕಾಗಿತ್ತು ಅಲ್ಲವೇ?
ಇನ್ನಾದರೂ ಸರಕಾರ ಈ ಬಗ್ಗೆ ಕಾನೂನಿನ ಮೂಲಕ ಸೂಕ್ತ ನಿರ್ಧಾರ ಕೈಗೊಂಡು ಮಡೆಸ್ನಾನ ನಿಷೇಧಕ್ಕೆ ಮುಂದಾಗಲಿ, ಅನಾಗರಿಕತೆಯಿಂದ ಹೊರಬರಲಿ.











Click it and Unblock the Notifications