ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣಮೂರ್ತಿಗೊಂದು ಪ್ರಶ್ನೆ

By Staff
|
Google Oneindia Kannada News


ನಿಮಗೆ ಗೊತ್ತೇ, ಲೋಕಮಾನ್ಯ ಬಾಲಗಂಗಾಧರ ತಿಲಕರೇ ಹೇಳಿದಂತೆ ಕೇವಲ ಸಾವಿರ ವರ್ಷಗಳ ಹಿಂದೆ ಮಹಾರಾಷ್ಟ್ರದ ಜನರಾಡುತ್ತಿದ್ದ ಭಾಷೆ ಕನ್ನಡ! ಮರಾಠಿ ಮಾತಾಡುವ ಜನರಿದ್ದದ್ದು ವಿದರ್ಭದ ಮೂಲೆಯಲ್ಲಿ ಮಾತ್ರ. ಈಗ ನೋಡಿ ಏನಾಗಿದೆ?

ಕನ್ನಡಿಗರ ಅಭಿಮಾನಶೂನ್ಯತೆಯ ಬಗ್ಗೆ ನಾನು ಓದುತ್ತಿರುವುದು ಇದೇ ಮೊದಲೇನಲ್ಲ. ನಾಡು ನುಡಿಗಳಿಗೆ ವಿವಿಧ ಮೂಲಗಳಿಂದ ಬಂದೆರಗುವ ಆಘಾತಗಳತ್ತ ಕನ್ನಡಿಗರು ಶತಮಾನಗಳಿಂದಲೂ ದಿವ್ಯನಿರ್ಲಕ್ಷ ತೋರುತ್ತಿದ್ದಾರೆ. ಹೀಗಾಗಿಯೇ ಒಂದುಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗಿದ್ದ ಕನ್ನಡನಾಡು ಇಂದು ಹುಳುತಿಂದ ಚಪಾತಿತುಂಡಿನಂತಾಗಿರುವುದು.

ನಿಮಗೆ ಗೊತ್ತೇ, ಲೋಕಮಾನ್ಯ ಬಾಲಗಂಗಾಧರ ತಿಲಕರೇ ಹೇಳಿದಂತೆ ಕೇವಲ ಸಾವಿರ ವರ್ಷಗಳ ಹಿಂದೆ ಮಹಾರಾಷ್ಟ್ರದ ಜನರಾಡುತ್ತಿದ್ದ ಭಾಷೆ ಕನ್ನಡ! ಮರಾಠಿ ಮಾತಾಡುವ ಜನರಿದ್ದದ್ದು ವಿದರ್ಭದ ಮೂಲೆಯಲ್ಲಿ ಮಾತ್ರ. ಈಗ ನೋಡಿ ಏನಾಗಿದೆ? ಕೇವಲ ನಾನೂರು ವರ್ಷಗಳ ಹಿಂದೆ ಪೋರ್ಚುಗೀಸರು ಮುಂಬೈನಲ್ಲಿ ಅಧಿಕೃತವಾಗಿ ಮಾನ್ಯತೆ ನೀಡಿದ್ದ ಭಾಷೆಗಳು ಎರಡೇ ಎರಡು- ಒಂದು ಪೋರ್ಚುಗೀಸ್‌, ಇನ್ನೊಂದು ಕನ್ನಡ! ಈಗ ನೋಡಿ, ಮುಂಬೈನಿಂದ ಕನ್ನಡನಾಡು ಭೌಗೋಳಿಕವಾಗಿ ಅದೆಷ್ಟು ದೂರ ಸರಿದುಹೋಗಿದೆ? ಗೋದಾವರಿಯ ಮಾತು ಹಳೆಯದಾಯಿತು; ಸದ್ಯಕ್ಕೆ ಈ ನಾಡನ್ನು ನಾವು ಕೃಷ್ಣಾ ನದಿಯವರೆಗಾದರೂ ಉಳಿಸಿಕೊಳ್ಳುತ್ತೇವೆಯೇ?

ಈ ಸಂದರ್ಭದಲ್ಲಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ನಾರಾಯಣಮೂರ್ತಿಯವರು ಹೇಳಿದ್ದು ನೋವಿನ ಸಂಗತಿ. ಇವರೇ ಹೀಗಂದ ಮೇಲೆ ಇನ್ನು ತಮಿಳರು ಸುಮ್ಮನಿರುತ್ತಾರೆಯೇ? ಇವರು ಐಟಿ ಕ್ಷೇತ್ರದಲ್ಲಿ ಅದೆಷ್ಟೇ ಸಾಧನೆ ಮಾಡಿದ್ದರೇನು, ಅದರಿಂದ ಕನ್ನಡಿಗರಿಗೆ, ಕನ್ನಡನಾಡಿಗೆ ಏನು ಉಪಯೋಗ? ‘ನಾಯಿ ಮೊಲೆಯಲ್ಲಿ ನಾಲ್ಕು ಖಂಡುಗ ಹಾಲಿದ್ದರೇನು?’ ಎಂಬ ಗಾದೆಯಂತಲ್ಲವೇ ಇವರ ಸಾಧನೆ?

ತಮ್ಮ ಸಂಸ್ಥೆಯ ಅನುಕೂಲಕ್ಕಾಗಿ ರಾಜ್ಯದ ರಾಜಧಾನಿಯನ್ನೇ ಕನ್ನಡಿಗರಿಂದ ಕಸಿಯುವ ಇವರ ಕುಬುದ್ಧಿಯನ್ನು ಎಲ್ಲ ಕನ್ನಡಿಗರೂ ಪ್ರತಿಭಟಿಸಬೇಕು. ಇಂಥಾ ಸ್ವಾರ್ಥಸಾಧಕರನ್ನು ಕರ್ನಾಟಕದೊಳಗೆ ಇರಲು ಬಿಡಬಾರದು. ತಕ್ಕಮಟ್ಟಿಗೆ ಜನಾಭಿಪ್ರಾಯ ಮೂಡಿಸುವ ಸಾಮರ್ಥ್ಯವಿರುವ ಇಂಥವರನ್ನು ಇನ್ನೂ ನಮ್ಮ ನಡುವೆ ಇರಿಸಿಕೊಂಡರೆ ಅದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆಯೇ.

ಕನ್ನಡಿಗರು ಎಂಥವರು, ಅವರು ಬಯಸುವುದೇನು ಎಂಬುದರ ಬಗ್ಗೆ ನಾನು ಕಾಲೇಜುವಿದ್ಯಾರ್ಥಿಯಾಗಿದ್ದಾಗ ನನ್ನ ಗೆಳತಿಯ ತಂದೆಯೊಬ್ಬರು (ಅವರೂ ಕನ್ನಡಿಗರೇ) ಹೇಳಿದ್ದ ಮಾತು ನನಗಿನ್ನೂ ನೆನಪಿದೆ. ದಕ್ಷಿಣದ ನಾಲ್ಕು ಭಾಷಾಜನರ ಸ್ವಭಾವಗಳನ್ನು ಅತ್ಯಂತ ಸೂಕ್ತವಾಗಿ ಬಿಂಬಿಸುವ ಆ ಮಾತುಗಳು ಈ ರೀತಿ ಇವೆ:

Militant Andhrites
Hard working Tamilians
Adventurous Keralites
Pleasure-seeking Kannadigas!

ಕನ್ನಡಿಗರಿಗೆ ಇಂಥಾ Pleasure-seeking ಮನೋಭಾವವಿರುವುದರಿಂದಲೇ ಅವರು ಆ ಗಳಿಗೆಯಲ್ಲಿ ತಮಗೆ ಮಾತ್ರ ಸುಖ ಸಂತೋಷ ನೀಡುವ ಸಾಧನೆಗಳತ್ತ ಮನಸೋಲುವುದು, ತಮಗೆ ಮಾತ್ರ ಅನುಕೂಲವಾಗುವ ವಿಚಾರಗಳತ್ತ ವಾಲುವುದು. ತಮ್ಮ ಸ್ವಹಿತ ಸ್ವಸುಖಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವ ಇವರಿಗೆ ತಮ್ಮ ಮಾತು ಮತ್ತು ಕೃತಿಗಳಿಂದ ಮನೆಗೆ, ಮನೆಯ ಜನಕ್ಕೆ ಎಂಥ ಅನ್ಯಾಯವಾಗುತ್ತಿದೆ ಎಂಬ ವಿವೇಚನೆಯೇ ಇರುವುದಿಲ್ಲ. ಅಷ್ಟೇಕೆ, ತಮ್ಮ ಮಾತುಕೃತಿಗಳ ಬಗ್ಗೆ ಅವರಿಗೆ ಹೆದರಿಕೆಯಾಗಲೀ, ಲಜ್ಜೆಯಾಗಲೀ ಇರುವುದೇ ಇಲ್ಲ.

‘ಕಾಮಾತುರಣಾಂ ನ ಭಯಂ ನ ಲಜ್ಜಾ’ ಎಂಬಂತೆ. ಅದಕ್ಕೇ ನಾರಾಯಣಮೂರ್ತಿಯವರು ತಮ್ಮ ಸಂಸ್ಥೆಗೆ ಅನುಕೂಲವಾಗುವಂತಹ ಮಾತುಗಳನ್ನು ಯಾವ ಹೆದರಿಕೆಯಾಗಲೀ ಲಜ್ಜೆಯಾಗಲೀ ಇಲ್ಲದೇ ಆಡುತ್ತಿರುವುದು. ಎಷ್ಟಾದರೂ ಅವರೂ ಸಹ ಅಭಿಮಾನ ಶೂನ್ಯ ಸ್ವಹಿತಸಾಧಕ ಅಪ್ಪಟಕನ್ನಡಿಗರಲ್ಲವೇ?


ಪೂರಕ ಓದಿಗೆ-
ಇನ್ಫೋಸಿಸ್‌ ಎಂಬ ಇಪ್ಪತ್ತೆೈದು ವರ್ಷ ವಯಸ್ಸಿನ ನಾಣಿ ಕಂಪೆನಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X