• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೀಸಲಾತಿ ಎಂಬ ಶಾರ್ಟ್‌ಕಟ್‌ನ ಅಪಾಯಗಳು!

By Staff
|

ಖಾಸಗಿ ವಲಯದಲ್ಲಿ ಮೀಸಲಾತಿ ಅನುಷ್ಠಾನಗೊಳಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ಮೀಸಲಾತಿಯ ಪರ/ವಿರೋಧ ಚರ್ಚೆಗಳು ಮತ್ತು ಚಳವಳಿಗಳು ರಾಷ್ಟ್ರದಲ್ಲಿ ಆರಂಭಗೊಂಡಿವೆ.

ಸಮಾಜದಲ್ಲಿ ಬದಲಾವಣೆ ತರಲು, ಸುಸ್ಥಿತಿ ನಿರ್ಮಾಣಕ್ಕೆ ಮೀಸಲಾತಿ ಒಂದು ಹಂತದವರೆಗೆ ಅನಿವಾರ್ಯ. ಆನಂತರ ಮೀಸಲಾತಿ ಅನ್ನೋ ಕೂಗು ಕಣ್ಮರೆಯಾಗುತ್ತದೆ ಎನ್ನುವುದು ಒಂದು ವಾದ. ಮೀಸಲಾತಿ ಎಂಬುದು ಶೋಷಣೆಯ ಅಸ್ತ್ರ. ರಾಷ್ಟ್ರದ ಹಿತಕ್ಕೆ ಮಾರಕ. ಪ್ರತಿಭಾ ಫಲಾಯನಕ್ಕೆ ಪೂರಕ ಎನ್ನುವುದು ಇನ್ನೊಂದು ವಾದ. ಮೆರಿಟ್‌ ಎನ್ನುವುದು ದಲಿತರ ಮನೆಯಲ್ಲಿ ಹುಟ್ಟುವ ತನಕ ಮೀಸಲಾತಿ ಬೇಕೇಬೇಕು ಎಂಬುದು ಮತ್ತೊಂದು ವಾದ.

ಮೀಸಲಾತಿಯ ಪ್ರಸ್ತುತತೆ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಬಿಂಬಿಸುವ ಪತ್ರವೊಂದು ಇಲ್ಲಿದೆ. ಮೀಸಲಾತಿ ಕುರಿತು ಓದುಗರು ತಮ್ಮ ಅನಿಸಿಕೆಗಳನ್ನು ನಮಗೆ ಬರೆಯಬಹುದು.

  • ಡಾ. ಭರತ್‌ ಎನ್‌.ಎಸ್‌. ಶಾಸ್ತ್ರಿ, ನ್ಯೂಯಾರ್ಕ್‌

bharatsastry@yahoo.com

ಮಾನ್ಯ ಸಂಪಾದಕರಿಗೆ,

ಈಗಾಗಲೇ ಮೀಸಲಾತಿ ಎಂಬ ವ್ಯವಸ್ಥೆ ಸಾಕಷ್ಟು ಚರ್ಚೆಗೆ ಅವಕಾಶ ಒದಗಿಸಿ, ಹಲವು ಸಾವು ನೋವುಗಳಿಗೆ ಕಾರಣವಾಗಿದೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಸಮಾಜವನ್ನು ಅದರ ಬಿರುಕುಗಳಿಗೆ, ದೌರ್ಬಲ್ಯಗಳಿಗೆ ಗುರಿಯಿಟ್ಟು ಹೊಡೆದು ಛಿದ್ರಗೊಳಿಸಿದೆ. ಈ ಮೀಸಲಾತಿಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಮ್ಮ ‘ಸಜ್ಜನ’ ಪ್ರಧಾನಮಂತ್ರಿಗಳಿಗೆ (ಮತ್ತು ಇಳಿವಯಸ್ಸಿನಲ್ಲೂ ರಾಜಕೀಯವಾಗಿ ಮತ್ತಷ್ಟು ಮಿಂಚುವ ಅವಕಾಶಗಳಿಗೆ ಕಾಯುತ್ತಿರುವ ಮಾನವ ಸಂಪನ್ಮೂಲ ಖಾತೆಯ ಮಂತ್ರಿ ಅರ್ಜುನ ಸಿಂಹರಿಗೆ) ವಂದನೆ ತಿಳಿಸಲೆ ಅಥವಾ ‘ನಮೋನ್ನಮಃ’ ಎನ್ನಲೆ?

ಸಮಾಜದ ಅತಿಕೆಳಸ್ತರದಲ್ಲಿ ಇರುವ, ಶತಶತಮಾನಗಳಿಂದ ಅಪಮಾನಕ್ಕೂ ಶೋಷಣೆಗೂ ಒಳಗಾಗಿದ್ದ ದಲಿತ ಸಮುದಾಯಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಬಲಿಷ್ಟವಾದ ಮತ್ತು ಪ್ರಭಾವಿಯಾಗಿ ಇದ್ದ ವರ್ಗಗಳೆದುರು ಒಂದು ‘ಸಮಾನ ಅವಕಾಶ’ ಒದಗಿಸುವ ಉದಾತ್ತ ಧ್ಯೇಯ ಹೊಂದಿದ್ದ ಮೀಸಲಾತಿ ಕ್ರಮೇಣ, ಯಾವ ಸ್ವರೂಪ ಪಡೆದಿದೆಯೆಂದರೆ ಭಾರತದ ಅತಿ ದೊಡ್ಡ ಸಮೂಹವಾದ ಮಧ್ಯಮ ವರ್ಗ ಮೀಸಲಾತಿಯನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಕುತಂತ್ರಿ ರಾಜಕಾರಣಿಗಳಿಂದ ಉಂಟಾಗಿದೆ. ಈ ಅನುಮಾನಕ್ಕೆ ಮತ್ತಷ್ಟು ನೀರೆರೆಯುವಂತೆ ಪಕ್ಷಭೇದವಿಲ್ಲದೆ ಎಲ್ಲ ರಾಜಕಾರಣಿಗಳೂ ವರ್ತಿಸಿದ್ದಾರೆ. ಎಂದೆಂದು ಹೊಸ ಹೊಸ ಮೀಸಲಾತಿಯ ಬೇಡಿಕೆ ಬಂತೋ ಅಂದಂದು ಆಡಳಿತದಲ್ಲಿದ್ದ ಪಕ್ಷಗಳೆಲ್ಲವೂ ಕಣ್ಣುಮುಚ್ಚಿ ಒಪ್ಪಿವೆ. ಏಕೆಂದರೆ ಯಾವ ಪಕ್ಷಕ್ಕೂ ‘ದಲಿತ ವಿರೋಧಿ’ ಎಂಬ ಹಣೆ ಪಟ್ಟಿ ಹಚ್ಚಿಕೊಳ್ಳಲು ಇಷ್ಟವಿಲ್ಲವಲ್ಲ!

ಈಗ ಹೊಸದಾಗಿ ರಚಿತವಾದ ‘ಪ್ರಗತಿಪರ ಜನತಾದಳ’ ದ ಧೋರಣೆಯನ್ನೇ ಗಮನಿಸಿ. ಎಲ್ಲ ಪಕ್ಷಗಳಿಂದ ತಳ್ಳಿಸಿಕೊಂಡು ಹೊರಬಿದ್ದ, ‘ಯಾರಿಗೂ ಬೇಡ’ವಾದ ರಾಜಕಾರಣಿಗಳ ಗುಂಪು ಇದು. ರಾಜ್‌ ಬಬ್ಬರ್‌, ವಿ.ಪಿ.ಸಿಂಗ್‌, ನಮ್ಮ ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎ.ಕೆ.ಸುಬ್ಬಯ್ಯ, ಸಿ.ಎಮ್‌.ಇಬ್ರಾಹಿಮ್‌, ಮತ್ತು ಇಂತಹ ರಾಜಕಾರಣಿಗಳ ‘ರಾಜಗುರು’ವಾಗಲು ಎಲ್ಲ ಅರ್ಹತೆಗಳನ್ನೂ ಹೊಂದಿರುವ ನಮ್ಮ ಜ್ಞಾನಪೀಠಿ ಅನಂತಮೂರ್ತಿಗಳು.

ಈ ಗುಂಪಿನ ಮೊದಲ ಘೋಷಣೆಯೆಂದರೆ ‘ಎಲ್ಲ ಹಿಂದುಳಿದ ವರ್ಗಗಳಿಗೆ ಮೀಸಲಾತಿ..’ ಮತ್ತೂ ಮುಂದೆ ಹೋಗಿ ಭಾರತದಲ್ಲಿ ಇನ್ನೂ ಕುಟುಕು ಜೀವ ಉಳಿಸಿಕೊಂಡಿರುವ ‘ಅರ್ಹತೆ’ ಅಥವಾ ‘ಮೆರಿಟ್‌’ನ ಕಲ್ಪನೆಯನ್ನು ಕುತ್ತಿಗೆ ಹಿಸುಕಿ ಕೊಲ್ಲ ಹೊರಟಿದ್ದಾರೆ, ಈ ರಾಜಕಾರಣಿಗಳು. ಇವರೆಲ್ಲ ಸೇರಿ ಹಿಂದುಳಿದ ವರ್ಗಗಳಿಗೆ ಏನೂ ಒಳಿತನ್ನು ಮಾಡಲಾರರು. ಇವರ ಕಣ್ಣಿರುವುದು ಇವರ ತಂತ್ರಗಳಿಗೆ ಸುಲಭವಾಗಿ ಬಲಿಬಿದ್ದು ಈ ವರ್ಗದ ಬಡಜನರು ಕೊಡಬಹುದಾದ ಮತಗಳ ಮೇಲಷ್ಟೆ.

ವೋಟಿನ ರಾಜಕಾರಣ ಮಾಡುತ್ತಿರುವ ಈ ರಾಜಕಾರಣಿಗಳು ಬೆದರಿಕೆ ಒಡ್ಡುತ್ತಿರುವಂತೆ ಖಾಸಗಿ ಕ್ಷೇತ್ರದ ಮೀಸಲಾತಿಯನ್ನು ಕಾರ್ಯಗತಗೊಳಿಸಿದರೆಂದುಕೊಳ್ಳಿ, ಪರಿಣಾಮವೇನಾದೀತೆಂದು ಎಲ್ಲರೂ ಊಹಿಸಬಹುದು. ಈಗ ಅಗಾಧ ಪ್ರಮಾಣದಲ್ಲಿ ಹೂಡಲ್ಪಡುತ್ತಿರುವ ಬಂಡವಾಳವನ್ನು ಖಾಸಗಿ ಉದ್ಯಮವಲಯ ದೇಶದ ಹೊರಗೆ ವರ್ಗಾಯಿಸುತ್ತದೆ. ತೋರಿಕೆಗೆ ಭಾರತದಲ್ಲಿ ತಮ್ಮ ಉಪಸ್ಥಿತಿಯನ್ನು (ಕಾಗದದ ಮೇಲಷ್ಟೆ) ಉಳಿಸಿಕೊಳ್ಳುತ್ತವೆ. ಇಂತಹ ಕಾನೂನು ತಂದರೆ ನಮ್ಮ ಸನ್ಮಾನ್ಯ ಪ್ರಧಾನಮಂತ್ರಿಗಳು ಸ್ವತಃ ಕಾಣುತ್ತಿರುವ, ಶೇಕಡ 8ರಷ್ಟು.. 10ರಷ್ಟು.. ಪ್ರಗತಿಯ ಕನಸು ಕನಸಾಗಿಯೇ ಉಳಿಯುತ್ತದೆ. ಭಾರತದ ಪ್ರಗತಿ ಕುಂಠಿತವಾಗುತ್ತದೆ.

ಬದಲಿಗೆ ಸರ್ಕಾರದಿಂದ ಬಂಡವಾಳವನ್ನು ಹೂಡಲು ಈ ಸಮಯಸಾಧಕ ರಾಜಕಾರಣಿಗಳ ಸರಕಾರ ತಯಾರಿದೆಯೇ? ಅದನ್ನೇ ತಾನೇ ಇಷ್ಟು ವರ್ಷಗಳ ಕಾಲ ಮಾಡಿದ್ದು? ಉದ್ಯೋಗ ನೀತಿ-ನಿಯಮ ರಚಿಸಿ ತೆಪ್ಪಗಿರಬೇಕಿದ್ದ ಸರ್ಕಾರಗಳು ಉದ್ಯಮಗಳನ್ನೂ ವಹಿಸಿಕೊಂಡು ಕಟ್ಟಿದ ಸಂಸ್ಥೆಗಳು ಯಾವ ರೀತಿಯಲ್ಲಿ ಭಾರತದ ಪ್ರಗತಿಗೆ ಸಹಾಯ ಮಾಡಿವೆಯೆಂಬುದನ್ನು ಇದುವರೆಗೂ ಎಲ್ಲರೂ ಕಂಡಿದ್ದಾರೆ.

ದೌರ್ಭಾಗ್ಯವೆಂದರೆ ನಗರವಾಸಿ ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸವಿರುವ ಮಧ್ಯಮವರ್ಗ ಈ ಎಲ್ಲ ಆಘಾತಕಾರಿ ಬೆಳವಣಿಗೆಗಳಿಗೆ ಕಣ್ಣು ಮುಚ್ಚಿ ಕುಳಿತಿದೆ. ಇದಕ್ಕೆ ಕಾರಣವೂ ಇಲ್ಲದೇ ಇಲ್ಲ. ಮೇಲುನೋಟಕ್ಕೆ ಮಧ್ಯಮ ವರ್ಗ ಎಂದು ಕರೆಸಿಕೊಳ್ಳುವ ಈ ಗುಂಪು ವಾಸ್ತವವಾಗಿ ಹಲವಾರು ಜಾತಿ ಮತ ಪಂಗಡಗಳಿಂದ ಬಂದ, ಕೇವಲ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿಗಾಗಿ ಬಲವಂತವಾಗಿ ಜೊತೆಗಿರಿಸಲ್ಪಟ್ಟ ಗುಂಪಷ್ಟೆ. ಈ ಗುಂಪಿನ ಪ್ರತಿಯೊಬ್ಬನಿಗೂ ಇರುವ ದ್ವಂದ್ವ ತನ್ನ ಜಾತಿ ಯಾ ಮತದ ಜತೆಗೆ ಗುರುತಿಸಲ್ಪಡುವುದೋ ಅಥವಾ ಬಲವಂತವಾಗಿ, ಕೃತಕವಾಗಿ ಹೇರಲ್ಪಟ್ಟ ಈ ಹೊಸ ಗುಂಪಿನ ಜತೆಗೆ ಗುರುತಿಸಲ್ಪಡುವುದೋ ಎನ್ನುವುದು. ಈ ಎರಡರ ನಡುವೆ ಅನುಮಾನವಿದ್ದವರು ತಟಸ್ಠರಾಗಿ ಉಳಿಯುವುದರಿಂದ (ಅಂಥವರೇ ಹೆಚ್ಚು) ನಿಜವಾದ ಅರ್ಥದಲ್ಲಿ ‘ಸೆಕ್ಯುಲರ್‌’ ರಾಜಕಾರಣ ಇಂದು ಸಾಧ್ಯವಾಗದೆ ಹೋಗಿದೆ.

ಸಾಮಾಜಿಕ ನ್ಯಾಯವನ್ನು, ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ಬಹುಮುಖ್ಯವಾಗಿ ಅನುಷ್ಠಾನಕ್ಕೆ ತರಬೇಕಿರುವ ತುರ್ತು ಅಗತ್ಯವಿರುವುದು ಮೂಲಭೂತ ವಿಷಯಗಳಲ್ಲಿ. ಪ್ರಾಥಮಿಕ ಶಿಕ್ಷಣವನ್ನೇ ಉತ್ತಮ ರೀತಿಯಲ್ಲಿ ಹಿಂದುಳಿದ ವರ್ಗಗಳಿಗೆ ಕೊಡಲಾರದ ರಾಜಕಾರಣಿಗಳು ಉನ್ನತ ಶಿಕ್ಷಣಕ್ಕಾಗಲೀ, ಉದ್ಯೋಗಕ್ಕಾಗಲೀ ಎಷ್ಟು ಅವಕಾಶಗಳನ್ನು ಕೊಟ್ಟರೂ ಅದು ವಿಪರೀತ ಪರಿಣಾಮವನ್ನೇ ಉಂಟು ಮಾಡುತ್ತವೆ. ಸಾಮಾಜಿಕ ನ್ಯಾಯ ಇಂತಹ ‘ಶಾರ್ಟ್‌ ಕಟ್‌’ಗಳಿಂದ ಸಾಧ್ಯವಿಲ್ಲ.

ಪೂರಕ ಓದಿಗೆ-

ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಅಂತ ಕಾನೂನು ತಂದರೆ ಏನಂತೀರಿ?

ಮುಖಪುಟ / ಓದುಗರ ಓಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more