ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳು ಕಲಿಸುವ ಕನ್ನಡ ಪಾಠ!

By Staff
|
Google Oneindia Kannada News


ನಾವುಗಳು ದೊಡ್ಡದೊಡ್ಡದಾಗಿ ಭಾಷೆ ಬಗ್ಗೆ ಭಾಷಣ ಮಾಡ್ತೀವಿ. ಆದರೆ ಅಲ್ಲಲ್ಲೆ ಎಡವುತ್ತೀವಿ. ಇನ್ನು ಮುಂದೆ ನಾನು ಎಡವುದಿಲ್ಲ, ಕನ್ನಡಮ್ಮನ ಆಣೆ!

ಮಾನ್ಯರೇ,

ಕನ್ನಡ ರಾಜ್ಯೋತ್ಸವ ದಿನದಂದು ತಿಪಟೂರಿನಲ್ಲಿ ನನ್ನ ಗೆಳತಿಯಾಬ್ಬಳ ಮದುವೆಯಿತ್ತು. ತುಮಕೂರಿನಲ್ಲಿ ನನ್ನ ಅಕ್ಕನ ಮನೆ ಇರುವುದರಿಂದ ಅವರನ್ನು ನೋಡಿಕೊಂಡು ಬಂದ ಹಾಗೆ ಅಗುತ್ತದೆ ಮದುವೆಗೆ ಸಹ ಹೋದ ಹಾಗೆ ಆಗುತ್ತದೆ ಎಂದೆಣಿಸಿ ತುಮಕೂರಿಗೆ ಹೊರಟೆವು.

ತಿಂಡಿ ತಿಂದು ವಧು-ವರರಿಗೆ ಏನಾದರು ಉಡುಗೊರೆ ತೆಗೆದುಕೊಳ್ಳಲು ಪೇಟೆಗೆ ಹೊರಟಾಗ ನನ್ನ ಅಕ್ಕನ 10 ವರ್ಷದ ಮಗಳು ಅಂಕಿತ ಬರುತ್ತೇನೆಂದು ಹೊರಟಳು. ಅವಳ ಜೊತೆ ಒಂದು ಉಡುಗೊರೆ ಮಾರುವ ಅಂಗಡಿಗೆ ಹೋಗಿ ಗಣೇಶನ ಸುಂದರ ಪಟವೊಂದನ್ನು ಖರೀದಿಸಿ ಇನ್ನೇನು ಹೊರಡುವಷ್ಟರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮೆರವಣಿಗೆ ಅದೇ ಮಾರ್ಗದಲ್ಲಿ ಬಂದಿತು.

ಅವರು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿ ಕೇವಲ ಇಂಗ್ಲೀಷಿನಲ್ಲಿ ಇರುವ ಫಲಕಗಳಿಗೆಳಿ ಮಸಿ ಬಳಿಯುತ್ತಿದ್ದರು. ನನಗಂತು ಒಳಗೊಳಗೆ ಬಹಳ ಸಂತೋಷವಾಗುತ್ತಿತ್ತು. ನಾವು ಖರೀದಿಸುತ್ತಿದ್ದ ಅಂಗಡಿಯವನು ಕನ್ನಡದಲ್ಲಿ ಫಲಕ ಹಾಕಿರಲಿಲ್ಲವಾದ್ದರಿಂದ ಅಲ್ಲಿಗೂ ಬಂದು ಗಲಾಟೆ ಶುರು ಮಾಡಿದರು. ನನ್ನ ಅಕ್ಕನ ಮಗಳು ನನ್ನನು ಕೇಳಿದಳು ಏನದು ಅಂತ. ಇಲ್ಲಿ ಕನ್ನಡದಲ್ಲಿ ಫಲಕ ಹಾಕಿಲ್ಲ ಅದಕ್ಕೆ ಮಸಿ ಬಳಿತಿದಾರೆ ಅಂದೆ. ಅದಕ್ಕವಳು ಓಹೋ ಎಲ್ಲ ಕನ್ನಡದಲ್ಲೆ ಇರ್ಬೇಕಾ ಅಂದಳು. ನಾನು ಹೌದಮ್ಮ ಕರ್ನಾಟಕದಲ್ಲಿದ್ದಮೇಲೆ ಕನ್ನಡದಲ್ಲೇ ಇರ್ಬೆಕಲ್ವಾ ಅಂದೆ.

ಅದಕ್ಕವಳು, ‘‘ಹಾಗಿದ್ರೆ ನೀವು ಯಾಕೆ ಈ ಉಡುಗೊರೆ ಪೊಟ್ಟಣದ ಮೇಲೆ ಇಂಗ್ಲೀಷಿನಲ್ಲಿ ಹೆಸರು ಬರೆದಿರಿ?’’ ಅಂತ ಕೇಳಿದಳು. ಅವಳಿಗೆ ನಾನು ಏನೋ ಒಂದು ಸಮಜಾಯಿಸಿ ಕೊಟ್ಟು ತಪ್ಪಿಸಿಕೊಂಡದ್ದಾದರು ನಾನು ನಿಂತಿರುವ ನೆಲವೇ ಕುಸಿದ ಹಾಗಾಯಿತು ಆ ಕ್ಷಣ. ಆ ಸಣ್ಣ ಮಗುವಿಗಿರುವಷ್ಟು ಬುದ್ದಿ ನಮಗ್ಯಾಕಿಲ್ಲ? ನಾವು ಯಾಕೆ ಇಂಗ್ಲೀಷ್‌ ಭಾಷೆಗೆ ಇಷ್ಟು ಒಗ್ಗಿಬಿಟ್ಟಿದ್ದೀವಿ? ಈ ರೀತಿಯ ಸಣ್ಣ ಪುಟ್ಟ ಶುಭಾಶಯ ಕೋರುವುದು ಮುಂತಾದ ವ್ಯವಹಾರಗಳನ್ನು ಸಹ ಯಾಕೆ ಇಂಗ್ಲೀಷಿನಲ್ಲೆ ಮಾಡುತ್ತೇವೆ ಎಂದು ವಿಚಾರ ಮಾಡಲು ಪ್ರಾರಂಭಿಸಿದೆ. ರಾಜ್ಯೋತ್ಸವವ ದಿನ ನಾನು ರಾಜ್ಯೋತ್ಸವ ಪ್ರತಿಜ್ಞೆ ತೆಗೆದುಕೊಂಡೆ. ಇನ್ನು ಮೇಲೆ ಶುಭಾಶಯಗಳನ್ನು ಕನ್ನಡದಲ್ಲೆ ಕೋರುತ್ತೇನೆ ಎಂದು.

ಮದುವೆಯ ಆರತಕ್ಷತೆ ಮುಗಿಸಿಕೊಂಡು ಬಂದಾಗ ನನ್ನ ಬೆಂಗಳೂರಿನ ಮಾಮ ಒಬ್ಬರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಹದಾರಿ ಪತ್ರ ಇದೆ ಬೇಗ ಬೆಂಗಳೂರಿಗೆ ಬರುವುದಕ್ಕೆ ದೂರವಾಣಿ ಮಾಡಿರುವುದು ತಿಳಿಯಿತು. ಆದರೆ ಅಕ್ಕನ ಮಗಳು ನಾವು ಊಟ ಮುಗಿಸಿಕೊಂಡೆ ಊರಿಗೆ ಹೋಗಬೇಕೆಂದು ಹಠ ಹಿಡಿದು ಕೂತಳಾದ್ದರಿಂದ ಅಲ್ಲೇ ಉಳಿದು ಕೊಂಡೆವು. ತುಮಕೂರಿಗೆ ಹೋದಾಗಲೆಲ್ಲ ಸಿದ್ದಗಂಗಾ ಮಠಕ್ಕೆ ಹೋಗಿ 100 ವರ್ಷದ ಇಳಿ ವಯಸ್ಸಿನಲ್ಲಿಯು 18ರ ಹರೆಯದವರಂತೆ ಇರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಂದ ಆಶೀರ್ವಾದ ಪಡೆಯುವುದು ವಾಡಿಕೆಯಲ್ಲಿದೆ. ಅದೇ ರೀತಿ ಈ ಸಲವು ಹೊರಟೆವು.

ಅಲ್ಲಿಗೆ ಹೋದಾಗ ತಿಳಿಯಿತು ಗುರುಗಳು ಮಕ್ಕಳ ಜೊತೆಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದಾರೆಂದು. ಇನ್ನೇನು ಹೊರಡುವಷ್ಟರಲ್ಲಿ ವೇದಿಕೆಯ ಮೇಲಿಂದ ಹೇಳಿದರು ‘‘ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿರುವ ಸುಧಾ ಬರಗೂರ್‌ ಅವರಿಗೆ, ಹಾಗು ಮಕ್ಕಳಿಗೆ ಯಕ್ಷಿಣಿ ವಿದ್ಯೆ ತೋರಿಸಲು ಬಂದಿರುವ ಯಕ್ಷಿಣಿಕಾರರಿಗೆ(ಹೆಸರು ನೆನಪಿಲ್ಲ) ಸ್ವಾಗತ. ಈಗ ಮಕ್ಕಳಿಗಾಗಿ ಸುಧಾ ಅವರಿಂದ ಕೆಲವು ಮಾತು ಎಂದು. ಉದಯ ಟಿ. ವಿ. ಯಲ್ಲಿ ಸುಧ ಅವರ ಕಾರ್ಯಕ್ರಮ ವೀಕ್ಷಿಸಿರುವ ನಮಗೆ ಅವರೆಂದರೆ ಬಹಳ ಇಷ್ಟ. ಅವರ ಕಾರ್ಯಕ್ರಮವನ್ನು ಎದುರಿಗೆ ನೋಡುವ ಅವಕಾಶ ಅದು ರಾಜ್ಯೊತ್ಸವದ ದಿನದಂದು! ಬಹಳ ಸಂತೊಷದಿಂದ ಕುಳಿತೆವು.

ಬೆಂಗಳೂರಿಗೆ ತಡವಾಗಿ ಹೋದರು ಚಿಂತೆಯಿಲ್ಲ ಎಂದು ಕಾರ್ಯಕ್ರಮ ಪೂರ್ತಿ ವೀಕ್ಷಿಸಿ ನಕ್ಕು ನಕ್ಕು ಹೊಟ್ಟೆ ನೋವು ಮಾಡಿಕೊಂಡೆವು. ಸುಧಾ ಅವರು ಮಕ್ಕಳ ಬಗ್ಗೆ ಕನ್ನಡ ರಾಜ್ಯ, ಕನ್ನದ ಭಾಷೆ, ಅವರ ವಿದೇಶಿ ಪ್ರವಾಸ ಇತರ ವಿಷಯಗಳ ಬಗ್ಗೆ ತಮ್ಮ ಎಂದಿನ ಹಾಸ್ಯ ಮಿಶ್ರಿತ ಮಾತುಗಳಲ್ಲಿ ಮಕ್ಕಳನ್ನು ನಮ್ಮನ್ನು ರಂಜಿಸಿದರು.

ಅಕ್ಕನ ಮಗಳಿಂದ ಅವಮಾನ ಹಾಗು ಮಠದ ಸುಧಾ ಬರಗೂರ್‌ ಅವರ ಕಾರ್ಯಕ್ರಮ ಮುಗಿಸಿಕೊಂದು ಬೆಂಗಳೂರಿಗೆ ರಾತ್ರಿ 11ಕ್ಕೆ ವಾಪಸ್ಸಾದೆವು. ಸುವರ್ಣ ಕರ್ಣಾಟಕ ರಾಜ್ಯೋತ್ಸವವನ್ನು ನಾನು ಹೇಗೆ ಕಳೆದೆ ಎಂದು ನಿಮ್ಮ ಜೊತೆ ಹೇಳಿಕೊಳ್ಳೋಣವೆನಿಸಿದ್ದರಿಂದ ಈ ಪತ್ರ. ಎಲ್ಲರಿಗು ಸುವರ್ಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X