ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತರಸರು ಹೀಗೆ ಬೆಂಕಿ ಕಾರಬಹುದೇ?

By Staff
|
Google Oneindia Kannada News

;?
ಪ್ರತಿ ಪುಸ್ತಕವನ್ನು ಬರೆಯುವಾಗಲೂ ಭೈರಪ್ಪನವರು ಮಾಡಿರುವಷ್ಟು ಸಂಶೋಧನೆಯನ್ನು ಮತ್ಯಾವ ಬರಹಗಾರನೂ ಮಾಡಿರಲಾರ. ಅವರು ಸಾಹಿತಿ ಅಲ್ಲದಿದ್ದರೆ, ಕನ್ನಡದಲ್ಲಿ ಸಾಹಿತಿಗಳೇ ಇಲ್ಲ!

ಅವರ ಭಾಷಣಗಳ ಮಿಕ್ಕೆಲ್ಲ ಭಾಗವನ್ನು ಓದುವ ಮೊದಲೇ, ಅವರಾಡಿದರೆನ್ನಲಾದ ಒಂದು ಮಾತು ನನ್ನನ್ನು ಚಕಿತಗೊಳಿಸಿದೆ. ಅದರ ಸಂದರ್ಭವೇನೋ ತಿಳಿಯದು, ಅದು ಏನೇ ಇದ್ದರೂ, ಶಾಂತರಸರು ‘ಭೈರಪ್ಪನವರು ಸಾಹಿತಿಯೇ ಅಲ್ಲ’ ಎಂಬ ಮಾತನ್ನು ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಆಡಬಾರದಾಗಿತ್ತು ಎಂದು ನಮ್ರವಾಗಿ ನನ್ನ ಅಭಿಪ್ರಾಯವನ್ನು ಇತರರೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಶಾಂತರಸರಿಗೂ ಭೈರಪ್ಪನವರಿಗೂ ವೈಯಕ್ತಿಕ ವೈಷಮ್ಯ ಅಥವಾ ಭಿನ್ನಾಭಿಪ್ರಾಯಗಳೇನಾದರೂ ಇದ್ದರೆ ನನಗದರ ಮಾಹಿತಿ ಇಲ್ಲ. ಆದರೆ, ಅವರು ಹೀಗೆ ಬೆಂಕಿ ಕಾರಿದ್ದನ್ನು ನೋಡಿದರೆ ಮನಸ್ಸಿಗೆ ತುಂಬಾ ಮುಜುಗರವಾಗುತ್ತದೆ. ಭೈರಪ್ಪನವರು ಬರೆದು ಅಚ್ಚುಮಾಡಿಸಿದ ಪುಸ್ತಕಗಳನ್ನೆಲ್ಲಾ ಸಾರಾಸಗಟಾಗಿ ಓದಿರುವವರು ಅನೇಕರಿದ್ದಾರೆ, ಅವರಪೈಕಿ ನಾನೂ ಒಬ್ಬ ಎಂದು ಹೇಳಬಹುದು (ಶೇಕಡಾ 90ರಷ್ಟಾದರೂ ಓದಿದ್ದೇನೆ). ಕಾದಂಬರಿ ಪ್ರಪಂಚದಲ್ಲಿ, ಕನ್ನಡ ಸಾಹಿತ್ಯಲೋಕದಲ್ಲಿ ಮಾತ್ರವಲ್ಲ, ಎಲ್ಲಾ ಭಾಷೆಗಳನ್ನೂ ಒಟ್ಟಾರೆ ತೆಗೆದುಕೊಂಡರೂ, ಭೈರಪ್ಪನವರ ಸ್ಥಾನ ಅತಿ ಎತ್ತರದಲ್ಲಿ ಬರುತ್ತದೆ ಎಂದು ಘಂಟಾಘೋಷವಾಗಿ ಹೇಳಬಹುದು. ಕನ್ನಡದಿಂದ ಇತರ ಭಾಷೆಗಳಿಗೆ ಭಾಷಾಂತರಗೊಂಡ ಪುಸ್ತಕಗಳಲ್ಲಿ ಭೈರಪ್ಪನವರದ್ದೇ ಸಿಂಹಪಾಲು.

Shantarasaಹೋಗಲಿ, ಇದು ಶಾಂತರಸರ ವೈಯಕ್ತಿಕ ಅಭಿಪ್ರಾಯ ಎಂದುಕೊಂಡು ಸುಮ್ಮನಿರೋಣವೆಂದರೆ, ಅದೂ ಸಾಧ್ಯವಾಗುತ್ತಿಲ್ಲ. ತಮ್ಮ ಅಭಿಪ್ರಾಯವನ್ನು ಒಂದು ಸಾಹಿತ್ಯ ಪುರವಣಿಯಲ್ಲೋ ಅಥವಾ ಮತ್ಯಾವುದಾದರೋ ಪತ್ರಿಕೆಯಲ್ಲೋ ಅಥವಾ ವಿಚಾರಸಂಕಿರಣದಲ್ಲೋ ಅವರು ಪ್ರಕಟಪಡಿಸಿದ್ದಿದ್ದರೆ, ನನಗೆ ಅದರಲ್ಲಿ ಯಾವ ದೋಷವೂ ಕಾಣಿಸುತ್ತಿರಲಿಲ್ಲ. ಅವರ ಅಭಿಪ್ರಾಯವನ್ನು ಒಪ್ಪುವವರು ಒಪ್ಪುತ್ತಾರೆ, ಇಲ್ಲದವರು ಅಡ್ಡಿ ಎತ್ತುತ್ತಾರೆ, ಚರ್ಚೆಯಾಗುತ್ತದೆ ವಾದಪ್ರತಿವಾದದಿಂದ ವಿಚಾರಮಂಥನವಾಗುತ್ತದೆ. ಇದೆಲ್ಲ ಸೃಜನಶೀಲಸಾಹಿತ್ಯಕ್ಕೆ ಒಳ್ಳೆಯದೇ, ಬೇಕಾದದ್ದೆ. ಆದರೆ, ಅವರು ಉಪಯೋಗಿಸಿಕೊಂಡ ವೇದಿಕೆ ಮಾತ್ರ ಸರಿ ಎನಿಸುವುದಿಲ್ಲ. ಈ ಬಗ್ಗೆ ಕರ್ನಾಟಕದ ಪತ್ರಿಕೆಗಳಲ್ಲಿ ಚರ್ಚೆಗಳಾಗಿಯೋ ಬಿಟ್ಟಿವೆಯೋ ನನಗೆ ಮಾಹಿತಿ ಇಲ್ಲ. (ಓದುಗರು ಈ ಬಗ್ಗೆ ಬರೆದು ತಿಳಿಸುವರೆಂದು ನಂಬುತ್ತೇನೆ.) ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಜೀವನದಲ್ಲಿ ಒಂದು ಬಾರಿ ದೊರಕುವ ಸಮ್ಮಾನ. ಅದನ್ನು ಹೀಗೆ ದುರುಪಯೋಗಪಡಿಸಿಕೊಳ್ಳಬಹುದೇ? ಅವರು ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಕೇಳುತ್ತಿದ್ದವರು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು ಎಂಬ ವಿಷಯದಲ್ಲಿ ನನಗೆ ಅತ್ಯಂತ ಕುತೂಹಲವಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವವರು, ಕನ್ನಡದ ಪತಾಕೆಯನ್ನು ಹೊತ್ತು ಕನ್ನಡಿಗರಿಗೆಲ್ಲ ಶುಭಕೋರುತ್ತ, ಕನ್ನಡದ ಜಯವನ್ನು ಹಾಡುತ್ತ, ಒಟ್ಟಾರೆ ನಮ್ಮಲ್ಲಿರುವ ನ್ಯೂನತೆಗಳನ್ನು ‘ಆತ್ಮಪರೀಕ್ಷಣೆ’ ಮಾಡಿಕೊಳ್ಳುತ್ತ, ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತ, ಹಿಂದೆ ದುಡಿದವರನ್ನು ನೆನೆಸಿಕೊಳ್ಳುತ್ತ, ಮುಂದಿನ ಕಿರಿಯರಿಗೆ ದಾರಿತೋರುತ್ತ, ಎಲ್ಲರಲ್ಲೂ ಸಾಮರಸ್ಯವನ್ನು ಬಯಸುತ್ತಾ, ಸೌಹಾರ್ದಮಯ ವಾತಾವರಣವನ್ನುಂಟುಮಾಡಬೇಕಲ್ಲವೆ? ಮತ್ತೊಬ್ಬ ಬರಹಗಾರನನ್ನು, ಅದೂ ಭೈರಪ್ಪನವರಂಥ ಉದ್ಧಾಮ ಸಾಹಿತಿಯನ್ನು ಬಹಿರಂಗವಾಗಿ ಹೀಗೆ ಬಯ್ಯುವುದು ಅಸಭ್ಯತೆಯ ಅಂಚನ್ನು ಮುಟ್ಟುತ್ತದೆ ಎನ್ನದೇ ವಿಧಿಯಿಲ್ಲ. ಹಾಗೊಂದು ವೇಳೆ ನನಗೆ ಹಿನ್ನೆಲೆ ಗೊತ್ತಿಲ್ಲದೇ ಅಥವಾ ಅವರ ಮಾತನ್ನು ತಪ್ಪಾಗಿ ಗ್ರಹಿಸಿದ್ದರೆ ಶಾಂತರಸರ ಕ್ಷಮೆ ಕೋರುತ್ತೇನೆ.

ಭೈರಪ್ಪನವರ ಪುಸ್ತಕಗಳನ್ನೋದಿದವರ ಮನಸ್ಸಿನ ಮೇಲೆ ಏನು ಪ್ರಭಾವ ಆಗಿದೆಯೋ, ಯಾರುಯಾರ ಮನಸ್ಸಿನಮೇಲೆ ಎಂತೆಂಥ ಪರಿಣಾಮಗಳಾಗಿವೆಯೋ ಯಾರು ಬಲ್ಲರು? ಅವರು ಸೃಷ್ಟಿಸಿರುವಷ್ಟು ಪಾತ್ರಗಳನ್ನು ಕನ್ನಡದ ಕಾದಂಬರಿಕಾರರು ಇನ್ಯಾರೂ ಸೃಷ್ಟಿಸಿರಲಿಕ್ಕಿಲ್ಲ. ಪ್ರತಿ ಪುಸ್ತಕವನ್ನು ಬರೆಯುವಾಗಲೂ ಅವರು ಮಾಡಿರುವಷ್ಟು ಸಂಶೋಧನೆಯನ್ನು ಮತ್ಯಾವ ಬರಹಗಾರನೂ ಮಾಡಿರಲಾರ. ಅವರು ಸಾಹಿತಿ ಅಲ್ಲದಿದ್ದರೆ, ಕನ್ನಡದಲ್ಲಿ ಸಾಹಿತಿಗಳೇ ಇಲ್ಲ!

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X