ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಕುಮಾರಸ್ವಾಮಿಗೊಂದು ಬಹಿರಂಗ ಪತ್ರ

By Staff
|
Google Oneindia Kannada News


ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಹಸಿರುಕ್ರಾಂತಿ ಮಾಡಬಹುದು. ಈ ನಿಟ್ಟಿನಲ್ಲಿ ರಾಜ್ಯದ ದೊರೆ ಗಮನಕ್ಕೆ ಕೆಲವು ಸಂಗತಿಗಳು, ‘ಕುಮಾರಣ್ಣ ಒಂದು ರವಷ್ಟು ಯೋಚನೆ ಮಾಡಣ್ಣ...’ ಎಂಬ ಕೋರಿಕೆಯೂ ಜೊತೆಯಲ್ಲಿದೆ.

  • ಎಸ್‌.ಎಲ್‌. ಸುರೇಂದ್ರಕುಮಾರ್‌, ತುಮಕೂರು ಜಿಲ್ಲೆ
ಮಾನ್ಯ ಮುಖ್ಯಮಂತ್ರಿಗಳೇ,

ಈ ನಾಡಿನ ಪ್ರಜೆಯಾದ ನಾನು ಒಂದು ವಿಚಾರವನ್ನು ನಿಮ್ಮ ಗಮನಕ್ಕೆ ತರುವುದು ಕರ್ತವ್ಯವೆಂದು ಭಾವಿಸಿ, ಈ ಪತ್ರವನ್ನು ಬರೆಯುತ್ತಿದ್ದೇನೆ. ಇನ್ನು ಹೆಚ್ಚಿನದು ನಿಮಗೆ ಬಿಟ್ಟಿದ್ದು. ಓದಿಕೊಂಡು ವಿಮರ್ಶಿಸಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.

ಕೆರೆಯ ಹೂಳೆತ್ತಲು ನೂರಾರು ಕೋಟಿ ರೂಪಾಯಿ ಹಣ ಬಿಡುಗಡೆಯಾಗುತ್ತಿದೆ. ಹೇಗೆ ಸದುಪಯೋಗ ಆಗುತ್ತಿದೆಯಾ ಗೊತ್ತಾಗುತ್ತಿಲ್ಲ. ಯಾವ ಕೆರೆ ನೋಡಿದರು ಗಿಡ ಗಂಟಿ, ರಾಡಿ, ಕಸದಿಂದ ತುಂಬಿ ಮಾಲಿನ್ಯದ ಕೂಪಗಳಾಗಿವೆ. ಸಾಲದ್ದಕ್ಕೆ ನಗರದ ಹತ್ತ್ತಿರ ಇರುವ ಕೆರೆ ಕಟ್ಟೆಗಳ ಸುತ್ತಮುತ್ತೆಲ್ಲ ಕಾರ್ಖಾನೆಗಳು ತ್ಯಾಜ್ಯ ವಸ್ತುಗಳನ್ನು ತಂದು ಸುರಿದಿರುತ್ತವೆ. ಇದರ ಬಗ್ಗೆ ಯಾರ ನಿಗವು ಇರುವಂತಿಲ್ಲ,

ಹೇಳೋರು ಕೇಳೋರು ಯಾರು ಎಂದು ಯಾರಿಗು ಗೊತ್ತಿಲ್ಲ ಅಂತ ಕಾಣುತ್ತೆ, ಹಾಗಾದರೆ ಗಮನಹರಿಸುವವರಾದರು ಯಾರು ? ಹೀಗೆ ತುಂಬಿದ್ದನ್ನು ಎತ್ತಲು ಕೋಟ್ಯಂತರ ರೂಪಾಯಿ ಹಣ ಪೋಲಾಗುವುದನ್ನು ತಪ್ಪಿಸಬಹುದಲ್ಲವೆ? ಆಲೋಚಿಸಿ. ಮಳೆಗಾಲದಲ್ಲಿ ನೋಡಿದರೆ ಅತಿವೃಷ್ಟಿಯ ಅನುಭವ. ಮಳೆಯಿಂದ ಅಲ್ಲಿ ಅದು ಹಾನಿ, ಇಲ್ಲಿ ಇದು ಹಾನಿ. ಹೀಗೆ ಮಳೆಗಾಲದ ವ್ಯಥೆ. ಹಾಗಾದರೆ ಬೇಸಿಗೆ ಕಾಲದಲ್ಲಾದರು ನೆಮ್ಮದಿಯೆ ?

ಬೇಸಿಗೆ ಕಾಲದಲ್ಲಿ ಅದಕ್ಕೆ ವಿರುದ್ಧವಾಗಿ ಅನಾವೃಷ್ಟಿ, ಕುಡೀಲಿಕ್ಕೆ ನೀರಿಲ್ಲ ಕಡು ಬರಗಾಲ, ಕೊನೆಪಕ್ಷ ನೋಡಲಿಕ್ಕು ಕೆಲವು ಕಡೆ ನೀರು ಇರುವುದಿಲ್ಲ. ಕೊನೆಗೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವುದು, ಯಾವ ಘೋಷಣೆಯಿಂದ ಏನು ಲಾಭ, ಮತ್ತಷ್ಟು ಹಣ ಸರ್ಕಾರದ ಖಜಾನೆಯಿಂದ ಖಾಲಿಯಾಗಿ ಯೋಗ್ಯವಲ್ಲದ ಯೋಜನೆಗಳಿಗೆ ಹರಿಯುತ್ತದೆ. ಅದು ಕೂಡ ಯಾವ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿರುತ್ತದೆ. ಹಾಗಾದರೆ ಬಿದ್ದ ಭಾರಿ ಮಳೆ ನೀರೆಲ್ಲ ಏನಾಯಿತು ಪ್ರಶ್ನೆ ಏಳುವುದು ಸಹಜ. ಉತ್ತರವು ಸುಲಭ. ಮಳೆಯ ನೀರು ಸದುಪಯೋಗವಾಗದೆ ಸಾಗರ ತಲುಪಿರುತ್ತದೆ.

ಮಳೆ ನೀರಿನಿಂದ ಏತಕ್ಕೆ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬಾರದು ಎಂಬ ಪ್ರಶ್ನೆ ಅತಿಮುಖ್ಯ. ಹೆಚ್ಚಾದ ನೀರು ಮಾತ್ರ ಸಮುದ್ರ ಸೇರುವಂತೆ ನೋಡಿಕೊಳ್ಳ ಬೇಕು. ಇದು ನಾಡಿನೆಲ್ಲ ಪ್ರಜೆಗಳ ಆದ್ಯ ಕರ್ತವ್ಯವಾಗಿರಬಹುದು. ಆದರೆ ಈ ಹಾದಿಯಲ್ಲಿ ಸಾಗುವಂತೆ, ಇದರ ಬಗ್ಗೆ ಆಲೋಚಿಸುವಂತೆ ಮಾಡುವುದು ಘನ ಸರ್ಕಾರದ ಕರ್ತವ್ಯವಲ್ಲವೆ? ಮಳೆಯ ನೀರು, ಕೆರೆ ಕಟ್ಟೆಗಳನ್ನು ಹುಡುಕಿಕೊಂಡು ಬರುತ್ತದೆಯೆ? ಹೌದು, ಇತ್ತು ಅಂತಹುದೊಂದು ಕಾಲ! ಆದರೆ ಈಗ ಹಾಗಿಲ್ಲ. ಕಾರಣಗಳು ಹಲವಾರು, ಆದರೆ ಮತ್ತೆ ಹಾಗೆ ಮಾಡಬಹುದೆಂಬ ವಿಶ್ವಾಸವಿದೆ.

ಮಳೆಯ ನೀರು ಹರಿದು ಕೆರೆಕಟ್ಟೆ ಸೇರಲು ಸಹಾಯವಾಗುವಂತ ಹಾದಿಯಾಗಬೇಕಾಗುತ್ತದೆ. ಬಿದ್ದೊಷ್ಟು ಮಳೆಯ ನೀರೆಲ್ಲ ಧಮಧಮನೆ ಹರಿದು ಸಾಗರ ಸೇರುವುದನ್ನು ತಪ್ಪಿಸಬೇಕು, ಇದೇನು ಹುಚ್ಚು ಸಾಹಸ ಅಲ್ಲ . ಯೋಜನೆಯನುಸಾರ ಮಾಡಿ ಕಾರ್ಯಗತಗೊಳಿಸಲು ಮುಂದಾದರೆ ಅಸಾಧ್ಯವಾದುದಲ್ಲ. ಹೌದು, ಇದು ರಾತ್ರಿ ಬೆಳಗಾಗುವುದರೊಳಗೆ ಆಗುವ ಕೆಲಸ ಅಲ್ಲ, ಇದಕ್ಕೆ ಹಗಲಿರುಳು ಯೋಜನಬದ್ಧವಾಗಿ ಕಾರ್ಯನಿರ್ವಹಿಸುವ ದಕ್ಷ ಅಧಿಕಾರಿಗಳು ಕೈಜೋಡಿಸಬೇಕಾಗುತ್ತದೆ.

ಜಿಲ್ಲಾಡಳಿತ ಯಾವುದಾದರು ಒಂದು ಇಲಾಖೆಗೆ ಮಳೆ ನೀರನ್ನು ಸಂಗ್ರಹಿಸುವ ಬಗ್ಗೆ ತಾಕೀತು ಮಾಡಬೇಕು. ಆಗಾಗ್ಗೆ ಮಾಹಿತಿ ಪಡೆದು ಎಚ್ಚರಿಸುತ್ತಿರಬೇಕು, ಇಲಾಖಾ ಸಿಬ್ಬಂದಿಗೆ ಕಳಕಳಿ ಮೂಡುವಂತೆ ಮಾಡಬೇಕು. ಈಗಾಗಲೇ ಈ ಕಾರ್ಯವನ್ನು ಯಾವುದಾದರೂ ಇಲಾಖೆ ನೋಡಿಕೊಳ್ಳುತ್ತಿದ್ದಲ್ಲಿ ಒಳ್ಳೆಯದೆ. ಆದರೆ ಅದು ಇಷ್ಟು ದಿನ ಏನು ಮಾಡಿದೆ, ಎಷ್ಟರ ಮಟ್ಟಿಗೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ ಎಂಬುದು ಈಗ ಅಳಿದುಳಿದಿರುವ ಕೆರೆ ಕಟ್ಟೆಗಳ ದು:ಸ್ಥಿತಿಯನ್ನು ನೋಡಿದರೆ ಅರ್ಥವಾಗುತ್ತಿದೆ. ವಿಷಯ ಸ್ಪಷ್ಟವಾಗಿದೆ. ಇದರ ಬಗ್ಗೆ ಯಾರು ಜವಾಬ್ದಾರಿಯುತವಾಗಿ ವಿಚಾರಿಸಿಲ್ಲವೆಂದು ತೋರುತ್ತದೆ.

ಮಳೆ ನೀರು ಸಂಗ್ರಹದ ಬಗ್ಗೆ ಅಗತ್ಯ ಮಾಹಿತಿ ಪಡೆದು, ಮಾರ್ಗದರ್ಶನ ನೀಡುವವರಾಗಿಲ್ಲವೆಂದೆನಿಸುತ್ತದೆ. ಇದರ ಬಗ್ಗೆ ಅಂಕಿಅಂಶಗಳನ್ನು ಪಡೆದು ಸಮಾಲೋಚಿಸಿ ಈ ವಿಚಾರದ ಬಗ್ಗೆ ಆಸ್ಥೆ ವಹಿಸಿದರೆ, ರಾಜ್ಯದ ಎಲ್ಲಾ ಸಂಪತ್ತುಗಳು ವೃದ್ಧಿಯಾಗಲು ಸಂಶಯವಿಲ್ಲ. ಒಂದು ನಿರ್ದಿಷ್ಟ ಜನ ಸಂದಣಿಗೆ ಅಥವಾ ಒಂದು ನಿರ್ದಿಷ್ಟ ಅಳತೆಯುಳ್ಳ ಅಗಲದ ಭೂಮಿಗೆ ಒಂದು ನಿರ್ದಿಷ್ಟ ಅಗಲದ ಕೆರೆ ಕಟ್ಟಿ ಇದ್ದಿರಲೆಬೇಕೆಂದು ಯೋಚಿಸಬೇಕು, ಕಾರ್ಯಗತಗೊಳಿಸಲು ಆಸಕ್ತಿ ವಹಿಸಿದರೆ ಬೇಸಿಗೆಯನ್ನು ಇಷ್ಟು ಭೀಕರತೆಯಿಂದ ಎದುರಿಸುವ ಅಶಕ್ತತೆಯುಳ್ಳವರಾಗಿರುತ್ತಿರಲಿಲ್ಲ.

ಸಾರ್ವಜನಿಕ ಜಾಗದಲ್ಲಿ ಕನಿಷ್ಠ ಇಷ್ಟು ಮರಗಳು ಬೆಳೆಯುತ್ತಿರಬೇಕೆಂದು ಇಲಾಖೆಗಳಿಗೆ ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಅಕಸ್ಮಾತ್‌ ಮರಗಳನ್ನು ಕಡಿಯಬೇಕಾಗಿ ಬಂದರೆ ಅದಕ್ಕೆ ಪ್ರತಿಯಾಗಿ ಜೋಡಿ ಗಿಡಗಳನ್ನು ನೆಟ್ಟು ಪೋಷಿಸತಕ್ಕದು. ಇದರಿಂದ ಮಣ್ಣಿನ ಸವಕಳಿ ತಪ್ಪುತ್ತದೆ ಮತ್ತು ಕಾರ್ಖಾನೆಗಳ ಆವರಣದಲ್ಲಿ ಕನಿಷ್ಟ ಸಂಖ್ಯೆಯ ಮರಗಳನ್ನು ಪೋಷಿಸಿ ಬೆಳೆಸತಕ್ಕದೆಂದು ಷರತ್ತು ವಿಧಿಸಬೇಕು. ಆಗ ವಾಯು ಮಾಲಿನ್ಯ ತನ್ನಷ್ಟಕ್ಕೆ ತಾನೆ ಹತೋಟಿಯಲ್ಲಿರುತ್ತದೆ. ಹೀಗಾದಾಗ ನಾಡೆಲ್ಲ ಹಸಿರು ರಾಶಿಯಿಂದ ತುಂಬಿರುತ್ತದೆ. ಸಮಶೀತೋಷ್ಣ ಹವಾಮಾನದಿಂದ ಕೂಡಿರುತ್ತದೆ. ಇದರಿಂದ ಆಗುವ ಲಾಭಗಳು ನಾವೀಗ ಊಹಿಸಲು ಅಸಾಧ್ಯ ಹಾಗೂ ಅನನ್ಯ.

ಈಗ ಕಳೆಯುತ್ತಿರುವ ಬೇಸಿಗೆ ಎಷ್ಟು ಯಾತನಮಯವಾಗಿದೆ ಎಂದು ನಿಮ್ಮ ಅನಿಸಿಕೆಗೆ ಬಂದಿರುವುದೆಂದು ಭಾವಿಸಿರುತ್ತೇನೆ. ಮಳೆಗಾಲದಲ್ಲಿ ಭಾರಿ ಮಳೆಯಾಗುತ್ತಿದೆ. ಚಳಿಗಾಲದಲ್ಲಿ ಅಷ್ಟೆ ಚಳಿ ಹೆಚ್ಚಾಗುತ್ತಿದೆ ಹಾಗೆ ಬೇಸಿಗೆಯಲ್ಲಿ ಅಷ್ಟೆ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾರಣ ಪ್ರಕೃತಿದತ್ತ ಸಂಪತ್ತಾದ ಮಳೆನೀರನ್ನು ಬಳಸಿಕೊಳ್ಳುತ್ತಿಲ್ಲ. ಮಳೆನೀರನ್ನು ಆದಷ್ಟು ಬಿದ್ದ ಜಾಗದ ಭೂಮಿಗೆ ಕುಡಿಸುತ್ತಿಲ್ಲ (ಭೂಮಿಯಲ್ಲಿ ಹಿಂಗಿಸುತ್ತಿಲ್ಲ). ಮಳೆಯ ನೀರು ಹರಿದರಿದು ಕಡಲ ಸೇರಿ ಕಡಲ ಆಳ, ಅಗಲ ಹೆಚ್ಚಾಗುತ್ತಿದೆ. ಯಾರಿಗೆ ಲಾಭ?

ಇದರ ಮಧ್ಯೆ ಇರುವ ಕೆರೆ ಕಟ್ಟೆಗಳನ್ನು ಅಳಿಸಿ ಹಾಕಲಾಗುತ್ತಿದೆ. ಮನೆಯ ನಿವೇಶನಗಳು, ಕಾರ್ಖಾನೆಯ ವಸಾಹತುಗಳು... ಹೀಗೆ ಹಲವಾರು ಉದ್ದೇಶಗಳಿಗೆ ಬಳಕೆಯಾಗುತ್ತ ಅಳಿದುಳಿದಿರುವ ಕೆರೆ ಕಟ್ಟೆಗಳು ಸಹ ತಾಜ್ಯ ತುಂಬಿ ಮೂಲ ಕಂಟಕವಾಗಿವೆ. ಏಕೆಂದರೆ ಒಂದು ಕೆರೆಯಿಂದ ಕಟ್ಟೆಯಿಂದ ಮತ್ತೊಂದು ಕೆರೆ ಕಟ್ಟೆಗೆ ಸಂಪರ್ಕದ ರಹದಾರಿ ಇರುತ್ತದೆ. ನಮಗರಿವಿಲ್ಲದೆಯೆ ಅಥವ ಇದ್ದೊ ನಮ್ಮ ಸದ್ಯದ ಸಮಸ್ಯೆಗೆ ಉಪಾಯ ಕಂಡುಕೊಳ್ಳುವ ಆತುರದಲ್ಲಿ ಹರಿವ ಹಾದಿಯನ್ನೆಲ್ಲ ಮುಚ್ಚಿರುತ್ತೇವೆ. ಹೀಗೆ ಕೆರೆ/ಕಟ್ಟೆಗಳು ಮಳೆಯ ನೀರ ಸದುಪಯೋಗದ ಬಗ್ಗೆ ಆಲೋಚಿಸದಿದ್ದಲ್ಲಿ ಎಂದೊ ಒಂದು ದಿನ, ಅಲ್ಲ ಇನ್ನು ಸ್ವಲ್ಪ ದಿನಗಳಲ್ಲೆ ರಾಜ್ಯವೆಲ್ಲ ಕಾಂಕ್ರೀಟ್‌ ಕಾಡಾಗಿ ಕೆರೆ, ಕಟ್ಟೆ ಹಾಗೆ ಹಂಸ, ಕೊಕ್ಕರೆ, ತಾವರೆ ಇವನ್ನೆಲ್ಲ ಬಣ್ಣದ ಚಿತ್ರಗಳಲ್ಲಿ ನೋಡಿ ನಿಟ್ಟುಸಿರು ಬಿಡಬೇಕಾಗುತ್ತದೇನೊ.

ಇದರ ಬಗ್ಗೆ ಈಗಾಗಲೇ ಯೋಚನೆ ಮಾಡಿದ್ದರೆ, ಏಕೆ ಹೀಗೆ ಬರಗಾಲ ಎಂಬುದು ರಾಜ್ಯವನ್ನು ಅಪ್ಪಿ ಕುಳಿತಿರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಈಗಿಂದೀಗಲೆ ಇದರ ಬಗ್ಗೆ ಯೋಜನೆಗಳನ್ನು ಹಾಕಿ ಕಾರ್ಯಗತಗೊಳಿಸಿದರೆ ಕೊನೆ ಪಕ್ಷ, ಮುಂದಿನ ಬರುವ ಮಳೆಗಾಲದಲ್ಲಿ ಆಗುವ ಅತಿವೃಷ್ಟಿ ಹಾನಿಗಳನ್ನು ತಪ್ಪಿಸಬಹುದು. ಮುಂದಿನ ಬೇಸಿಗೆಯ ಹವಾಮಾನದಲ್ಲಿನ ವಿಪರೀತ ಉಷ್ಣಾಂಶ ಏರಿಕೆಯನ್ನು ವಿಮುಖವಾಗಿಸಬಹುದು, ಆಲೋಚಿಸಿ...

ಇತ್ತೀಚೆಗೆ ಎಲ್ಲಾ ಕಡೆ ರಸ್ತೆ ಅಗಲೀಕರಣವಾಗುತ್ತಿದೆ. ಇದ್ದ ಅಲ್ಪಸ್ವಲ್ಪ ರಸ್ತೆ ಬದಿಯ ಮರಗಳು ನೆಲ ಕಚ್ಚುತ್ತವೆ. ಇದಕ್ಕೆ ಮೊದಲೇ ವ್ಯವಸ್ಥಿತವಾಗಿ ಮರಗಿಡಗಳನ್ನು ನೆಡಬಹುದಿತ್ತಲ್ಲ ಎಂದು ಎನಿಸುವುದಲ್ಲವೆ. ಅಂಕಿಅಂಶಗಳಲ್ಲಿ ಅಷ್ಟು ಮರಗಿಡಗಳನ್ನು ಆ ವರ್ಷ ಇಷ್ಟು ಮರ, ಈ ವರ್ಷ ಇಷ್ಟು ಮರ ನೆಟ್ಟು ಬೆಳಸುತ್ತಿದ್ದೇವೆಂಬ ವರದಿ ಲಭ್ಯವಿದೆ. ಆ ವರದಿ ಎಷ್ಟರಮಟ್ಟಿಗೆ ನೈಜತೆಯಿಂದ ಕೂಡಿರುತ್ತಿವೆ ಎಂದು ಪರೀಕ್ಷಿಸ ಬೇಕು. ಆ ಮರ ಗಿಡಗಳು ಅದೆಲ್ಲಿ ಬೆಳೆಯುತ್ತಿವೆಯೋ ದೇವರಿಗೆ ಗೊತ್ತು.

ಈ ಎಲ್ಲಾ ವಿಚಾರಗಳ ಬಗ್ಗೆ ಆದಾರು ಯೋಚಿಸುತ್ತಾರೆ? ಯಾರು ಯೋಜನೆಗಳನ್ನು ಹಾಕುತ್ತಾರೆ? ಹೇಗೆ ಕಾರ್ಯಗತಗೊಳಿಸುತ್ತಾರೆ ? ಯಾರು ವಿಚಾರಿಸುತ್ತಾರೆ? ಎಚ್ಚರಿಸುವವರಾರು? ಸಲಹೆ ಕೊಡುವವರಾರು?

‘ಮಳೆ ನೀರ ಉಳಿಸಿ, ಹಸಿರ ರಾಶಿ ಬೆಳೆಸಿ’ ಎಂಬುದು ಸರ್ಕಾರದ ಪಾಲಿಗೆ ರಾಮಮಂತ್ರವಾಗಲಿ. ನಮ್ಮಗಳ ಕನಸು ನನಸಾಗಲಿ. ಕುಮಾರಣ್ಣ ಸ್ವಲ್ಪ ಯೋಚನೆ ಮಾಡಣ್ಣ...

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X