ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದನ ಕುತೂಹಲಿ ಬುಷ್‌ ಸ್ವಾಗತಕ್ಕೆ ನಮ್ಮ ಕಪ್ಪುಬಾವುಟ!

By Staff
|
Google Oneindia Kannada News


‘ಬುಷ್‌ ಹಿಂದಿರುಗಿ ಹೋಗು. ಇರಾನ್‌ ಮೇಲೆ ದಾಳಿ ಮಾಡೀಯ ಜೋಕೆ. ಆಫ್ಘಾನಿಸ್ತಾನದಿಂದ ಕಾಲ್ತೆಗೆ, ಇರಾಕಿನಲ್ಲಿ ರಕ್ತಪಾತ ನಿಲ್ಲಿಸು. ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಬೇಡ. ಬುಷ್‌ ಹಿಂದಕ್ಕೆ ಹೋಗು.’ -ನಾಡಿನ ಪ್ರಜ್ಞಾವಂತರ ವಿನಂತಿ.

ಮಾನ್ಯರೇ,

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಜಾರ್ಜ್‌ ಬುಷ್‌ಗೆ ನಮ್ಮ ಸರ್ಕಾರ ಆದರಾತಿಥ್ಯ ನೀಡುತ್ತಿರುವುದನ್ನು ಅಸಮಾಧಾನ ಮತ್ತು ಆತಂಕದಿಂದ ಗಮನಿಸುತ್ತಿದ್ದೇವೆ.

ಆಫ್ಘಾನಿಸ್ತಾನದ ಮೇಲೆ ಸೇನಾ ಆಕ್ರಮಣ ಮಾಡುವುದರ ಮೂಲಕ, ಪ್ಯಾಲೆಸ್ತೀನಿಯರ ಮೇಲೆ ಅಮಾನವೀಯ ಹಿಂಸೆ ಹರಿಬಿಡುತ್ತಿರುವ, ಇಸ್ರೇಲಿನ ಹಿಂದೆ ನಿಂತು ಕುಮ್ಮಕ್ಕು ನೀಡುವ ಮೂಲಕ ಇರಾನ್‌ ದೇಶದ ಮೇಲೆ ಆಕ್ರಮಣದ ಬೆದರಿಕೆ ಒಡ್ಡುವ ಮೂಲಕ ತನ್ನ ಭಯೋತ್ಪಾದಕ ಕೃತ್ಯಗಳಿಂದ ಇಡೀ ಮಾನವ ಕುಲವನ್ನೇ ಆತಂಕಕ್ಕೆಡೆ ಮಾಡಿರುವ ಅಮೆರಿಕ ಅಧ್ಯಕ್ಷ ಜಾರ್ಜ್‌ ಬುಷ್‌ರನ್ನು ಸ್ವಾಗತಿಸಲು ಭಾರತದ ನಾಗರಿಕರಾದ ನಾವು ಇಷ್ಟಪಡುವುದಿಲ್ಲ. ಅದಕ್ಕಿಂತಲೂ ಮಿಗಿಲಾಗಿ, ಇರಾಕಿನ ಮೇಲೆ ಅನೈತಿಕವಾಗಿ ದಾಳಿ ನಡೆಸಿ, ಪೈಶಾಚಿಕವಾಗಿ ವಶಪಡಿಸಿಕೊಂಡು ಅಲ್ಲಿಯ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣನಾದ ಬುಷ್‌ನನ್ನು ನಾವು ಖಂಡಿತಾ ಸ್ವಾಗತಿಸುವುದಿಲ್ಲ.

ಕೇವಲ ಮೂರು ವರ್ಷಗಳ ಹಿಂದಷ್ಟೇ ನಮ್ಮ ದೇಶದ ಸಂಸತ್ತು ಸರ್ವಾನುಮತದಿಂದ ಇರಾಕಿನ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಅತ್ಯುಗ್ರವಾಗಿ ಖಂಡಿಸಿತ್ತು. ಈಗಲೂ ಯುದ್ಧವಿರೋಧೀ ಭಾವನೆಗೆ ನಮ್ಮನ್ನಾಳುವವರು ಬೆಲೆ ಕೊಡಬೇಕೆಂದು ಬಯಸುತ್ತೇವೆ.

ಭಾರತದ ಜನರ ಮೇಲಿನ ಪ್ರೀತಿಯಿಂದಾಗಿ ಬುಷ್‌ ಭಾರತಕ್ಕೆ ಭೇಟಿ ನೀಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ಭಾರತೀಯರು ಅಮೆರಿಕದ ಜನರನ್ನು ಪ್ರೀತಿಸುತ್ತೇವೆ. ಅವರು ಶಾಂತಿ ರಕ್ಷಣೆಗಾಗಿ ನಡೆಸುತ್ತಿರುವ ಶಾಂತಿ ಸಮರವನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ಆದರೆ ಬುಷ್‌ ಭಾರತಕ್ಕೆ ಬಂದಿರುವುದು ಭಾರತ ಮಾರುಕಟ್ಟೆಯ ಮೇಲಿನ ಮೋಹದಿಂದಾಗಿ. ಬಹುರಾಷ್ಟ್ರೀಯ ಕಂಪನಿಗಳ ಲಾಭದಾಹಕ್ಕೆ ನೀರೆರೆಯುವ ದೃಷ್ಟಿಯಿಂದ ಬಂದಿದ್ದಾರೆ.

ಅಮೆರಿಕದ ಜಾಗತಿಕ ಹಿತಾಸಕ್ತಿಗಳಿಗೆ ದಾಸಾನುದಾಸರಾಗಿ ತಮ್ಮನ್ನು ಅರ್ಪಿಸಿ ಕೊಂಡಿರುವವರಿಗೆ ಮತ್ತು ನಮ್ಮನ್ನಾಳುತ್ತಿರುವವರಿಗೆ ನಾವು ಒಂದು ಸ್ಪಷ್ಟವಾದ ಸಂದೇಶವನ್ನು ಕೊಡಲು ಬಯಸುತ್ತೇವೆ.

ಮಾನವ ಜನಾಂಗದ ಮೇಲೆ ಹೇಯ ಕೃತ್ಯವೆಸಗುತ್ತಿರುವ ಅಮೆರಿಕದ ಉದ್ಧಟತನವನ್ನು ವಿರೋಧಿಸುತ್ತೇವೆ ಮತ್ತು ನಮ್ಮ ದೇಶದ ಸ್ವಾತಂತ್ರ್ಯ, ಸ್ವಾವಲಂಬನೆ ಮತ್ತು ಸಾರ್ವಭೌಮತೆಯನ್ನು ಕಾಪಾಡಲು ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತೇವೆ. ಈ ಸಂದರ್ಭದಲ್ಲಿ ನೊಬೆಲ್‌ ಪ್ರಶಸ್ತಿ ವಿಜೇತ ರಾಷ್ಟ್ರಕವಿ ರವೀಂದ್ರನಾಥ ಠಾಕೂರರ ಈ ಮಾತುಗಳನ್ನು ನೆನೆಪಿಸಿಕೊಳ್ಳುವುದು ಪ್ರಸ್ತುತವಾಗುತ್ತದೆ.

‘ಮುಂದೊಂದು ದಿನ ಮಾನವನ ಅಜೇಯ ಚೇತನವು, ತನ್ನ ವಿಜಯದ ಹಾದಿಯಲ್ಲಿ ಎಲ್ಲ ಅಡೆತಡೆಗಳನ್ನು ಪಕ್ಕಕ್ಕೆ ಸರಿಸಿ ಮಾನವ ಕುಲದ ಘನತೆ ಗಾಂಭೀರ್ಯವನ್ನು ಹಿಂದಕ್ಕೆ ಪಡೆಯುತ್ತದೆ. ಬಲಾಢ್ಯರಲ್ಲಿನ ಬಲಾಢ್ಯರಿಗೂ ಕೂಡ ಅಧಿಕಾರದ ಅಹಂಕಾರ, ಮದ, ಪ್ರತಿಷ್ಟೆಗಳು ಸದಾ ಸುರಕ್ಷಿತವಾಗಿರುವುದಿಲ್ಲ. ಜಗತ್ತಿಗೆ ಇದನ್ನು ಸಾಬೀತು ಮಾಡುವ ದಿನ ಈಗ ಬಂದಿದೆ.’

-ನಾವು ಕೂಡ ಇದನ್ನೇ ಮಾಡಲು ಬಯಸುತ್ತೇವೆ. ಆದ್ದರಿಂದ ನಾವು ಗಟ್ಟಿ ದನಿಯಲ್ಲಿ ಹೇಳೋಣ -ಬುಷ್‌ ಹಿಂದಿರುಗಿ ಹೋಗು. ಇರಾನ್‌ ಮೇಲೆ ದಾಳಿ ಮಾಡೀಯ ಜೋಕೆ. ಆಫ್ಘಾನಿಸ್ತಾನದಿಂದ ಕಾಲ್ತೆಗೆ, ಇರಾಕಿನಲ್ಲಿ ರಕ್ತಪಾತ ನಿಲ್ಲಿಸು. ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಬೇಡ. ಬುಷ್‌ ಹಿಂದಕ್ಕೆ ಹೋಗು.

ಬುಷ್‌ನ ಭೇಟಿಯನ್ನು ವಿರೋಧಿಸಬೇಕೆಂದು ಕರ್ನಾಟಕದ ನಾಗರಿಕ ಬಂಧುಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

- ಚಂದ್ರಶೇಖರ ಕಂಬಾರ, ಯು.ಆರ್‌,ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಡಾ.ಕೆ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದರಾವ್‌, ಬಿ.ಕೆ.ಚಂದ್ರಶೇಖರ್‌, ಜಿ.ರಾಮಕೃಷ್ಣ, ರವಿವರ್ಮ ಕುಮಾರ್‌, ವಿಮಲಾ ಕೆ.ಎಸ್‌, ಎ.ಎಸ್‌.ಮೂರ್ತಿ, ಎಚ್‌.ಜಿ.ಸೋಮಶೇಖರ್‌, ಬಿ.ಸುರೇಶ್‌, ಗಾಯತ್ರಿ .ಎನ್‌.,ಎಚ್‌.ಸಿ.ದತ್ತಣ್ಣ, ಡಾ.ವಿಜಯಾ, ಸಿ.ಎಚ್‌.ಹನುಮಂತರಾಯ, ಗೌರಿದತ್ತು.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X