• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಎಳೆ ಮನಸ್ಸಿನ ಮೇಲೆ ಹಿಜಾಬ್-ಕೇಸರಿ ವಿವಾದಗಳ ಪರಿಣಾಮ

By ಮನೋವಿಜ್ಞಾನಿ ಡಾ. ಶ್ರೀಧರ
|
Google Oneindia Kannada News

ಇಂದು ಶಾಲಾ ವಯಸ್ಸಿನ ಮಕ್ಕಳ ಸ್ವಭಾವಗಳು ಮೂಡಿ ಗಟ್ಟಿಯಾಗುವುದಕ್ಕೆ ಎರಡು ಮುಖ್ಯ ಪ್ರೇರಣೆಗಳಿವೆ, ಅವುಗಳೆಂದರೆ: ಮಾಧ್ಯಮಗಳು ಮತ್ತು ಕಲಿಕೆಯ ವಾತಾವರಣ. ಕಲಿಕೆಯು ಮನೆ ಮತ್ತು ಶಾಲೆಯ ಆವರಣದಲ್ಲಿ ಗಟ್ಟಿಯಾಗುವ ಲಕ್ಷಣಗಳನ್ನು ಹೊಂದಿರುವುದು. ಮಾಧ್ಯಮಗಳ ವ್ಯಾಪ್ತಿಗೆ ಎಲ್ಲೆಗಳು ಇರದ ಕಾರಣದಿಂದ ಸಮಯ, ಸಂದರ್ಭದ ಮಿತಿಗಳು ಇರದು. ಊಟದ ಸಮಯದಲ್ಲಿ, ಹಾಸಿಗೆಯಲ್ಲಿ, ಅಷ್ಟೇಕೆ, ಎಲ್ಲಂದರಲ್ಲಿ ಮೊಬೈಲು ಬಳಸುವುದು ಇಂತಹ ಸದಾ ಪ್ರಭಾವಶಾಲಿ ವಾತಾವರಣದ ಒಂದು ಉದಾಹರಣೆ.

ಇನ್ನು ಮನೆ ಮತ್ತು ಶಾಲೆಯ ಕಲಿಕೆಯ ವಾತಾವರಣವು ಔಪಚಾರಿಕ ಮತ್ತು ಅನೌಪಚಾರಿಕ ರೀತಿಯಲ್ಲಿ ಕಲಿಕೆಯನ್ನು ಪ್ರೇರೇಪಿಸುವುದು ಸಾಮಾನ್ಯ. ಮಾಧ್ಯಮಗಳು ಹೊರತರುವ ವಿಷಯಗಳು ಮನಸಿಗೆ ಅಂಟುವಷ್ಟು ವೇಗ ಮತ್ತು ಗಾಢತೆ ಮನೆ, ಶಾಲೆಯಾಲ್ಲಾಗುವುದು ತೀರಾ ಅಪರೂಪ. ಹೀಗಾಗಿ ಇಂದು ಕಾಣಿಸಿಕೊಂಡಿರುವ ವಸ್ತ್ರ ಧರಿಸುವ ಅಭ್ಯಾಸ, ಸ್ವಭಾವಗಳು, ಹೆಚ್ಚಾಗಿ ಮಾಧ್ಯಮ ಪ್ರೇರಿತವಾಗಿದ್ದು, ಮಕ್ಕಳ ಮನಸಿನಲ್ಲಿ ಹೊಸದಾದ ಅಭಿಪ್ರಾಯವನ್ನು ಮೂಡಿಸಬಲ್ಲದ್ದಾಗಿವೆ.

ಈ ಸ್ವಭಾವವು ಪರವ್ಯಕ್ತಿಯ ಲೈಂಗಿಕ ನಡೆನುಡಿಗಳ ಬಗ್ಗೆ ಪೂರ್ವಗ್ರಹ (ಪ್ರಿಜುಡಿಸ್) ಮತ್ತು ರೂಢಿಗತ(ಸ್ಟೀರಿಯೋಟೈಪ್), ಅಂದರೆ ಸರಿಯೋ-ತಪ್ಪೋ ಹತ್ತಿರದವರ ವರ್ತನೆಗಳನ್ನು ತನ್ನದೆಂದುಕೊಂಡು ಬಿಂಬಿಸುವುದು. ಇದು ಮನೋವಿಕಾಸದ ಹಂತದಲ್ಲಿ ನಿಜವಾಗಿಯೂ ಅಪಾಯಕಾರಿ ಬೆಳವಣಿಗೆ ಎನ್ನುತ್ತವೆ ಮನೋವೈಜ್ಞಾನಿಕ ಅಧ್ಯಯನಗಳು.

ಹಿಜಾಬ್ ವಿಷಯದ ಬಗ್ಗೆ ಹದಿಹರೆಯದವರ ಮನಸಿನಲ್ಲಿ ಮೂಡುವ ಪ್ರಶ್ನೆಗಳು, ಸ್ವಧರ್ಮ-ಪರಧರ್ಮ, ದ್ವಂದ್ವಗಳಾಚೆಯ ವಿಷಯಗಳತ್ತ ಹರಿದು ಬಲಗೊಳ್ಳುತ್ತಿವೆ. ಉದಾಹರಣೆಗೆ ಹಿಜಾಬ್ ಒಂದು ಧಾರ್ಮಿಕ ಸಮುದಾಯದವರ ಹೆಣ್ಣುಮಕ್ಕಳು ಧರಿಸುವುದರ ವಿರುದ್ಧ ಇನ್ನೊಂದು ಕೋಮಿನ ಹೆಣ್ಣುಮಕ್ಕಳು ಧರಿಸದಿದ್ದು ಲಿಂಗ ಅಪ್ರಾಧಾನ್ಯತೆ ಸ್ಥಿತಿಯ ಸೂಚನೆಯಾಗಿರುತ್ತದೆ.

ಪತ್ರಿಭಟನೆಯ ಸಮಯದಲ್ಲಿ ಕಂಡು ಬಂದ ಮತ್ತೊಂದು ವಿಶೇಷ ವಿಷಯವೆಂದರೆ, ಶಾಲಾ ವಯಸಿನ ಕೆಲ ಹೆಣ್ಣು ಮಕ್ಕಳ ತಲೆಯ ಮೇಲೆ ಎದ್ದು ಕಾಣಿಸುತ್ತಿದ್ದ ಕೇಸರಿಯ ಪೇಟ. ಹಿಂದು ಸ್ತ್ರೀಯರು ಕೇಸರಿ ವಸ್ತ್ರ ಧರಿಸಲು ಕೆಲವು ಆಚಾರಗಳಿವೆ ಎನ್ನುವುದನ್ನಿಲ್ಲಿ ನೆನಪಿಸಿಕೊಳ್ಳಬಹುದು.

Psychology: Effect of Hijab- Kesari Shawl Dress Code Row on Children and Young Minds

ಮುಖ್ಯವಾಗಿ, ಹೆಣ್ಣು ಮಕ್ಕಳು ಅನಿವಾರ್ಯವಾಗಿ ಎದುರಿಸುವ ನಾನಾ ಸಂಕಟಗಳನ್ನು ತಿಳಿದೂ ಸಹ ತಮ್ಮ ಸಮಲಿಂಗದವರ ಅಪಾಯಕಾರಿಯಲ್ಲದ ಅಭ್ಯಾಸಗಳನ್ನು ವಿರೋಧಿಸುವುದು ದುರದೃಷ್ಟಕರ. ಪೂರ್ವಗ್ರಹ ಪ್ರೇರಣೆಗಳಿಗೆ ಒಳಗಾದಾಗ ಇಂತಹ ಅವಲಂಬನೆಯ ಪ್ರವೃತ್ತಿ ಸಹಜ. ಆದರಿದು ಸ್ತ್ರೀ ಮಾನಸಿಕತೆಯ ವಿಕಾಸದ ವಿರೋಧವಿದೆ ಎನ್ನುವುದರ ಮನವರಿಕೆ ಆದಷ್ಟು ಉತ್ತಮ.

ಹೆಣ್ಣು ಮಕ್ಕಳು ಹೀಗೆಯೇ ಇರಬೇಕು ಎನ್ನುವಂತಹ ನಕಾರಾತ್ಮಕ ರೂಢಿಗತ, ಮನೋವಿಜ್ಞಾನದಲ್ಲಿದ್ದನ್ನು ಸೆಕ್ಸ್ ಸ್ಟೀರಿಯೊ ಟೈಪ್ ವರ್ತನೆ ಎನ್ನುತ್ತಾರೆ. ಪುರುಷ ಪ್ರತಿಷ್ಠೆಯನ್ನು ಅತ್ಯಂತ ಬಲವಾಗಿ ಪೋಷಿಸುವಂತಹ ಭಾವನೆಯೂ ಇದೇ ಆಗಿರುವುದು.

ಈ ಮಾದರಿಯ ನಡೆನುಡಿಗಳಿಂದಾಗಬಹುದಾದ ಪರಿಣಾಮಗಳೆಂದರೇ: ಹೆಣ್ಣು ಮಕ್ಕಳು ಮತ್ತು ಮಹಿಳೆಯರು, ಗಂಡು ಮಕ್ಕಳು ಮತ್ತು ಗಂಡಸರಿಗಿಂತಲೂ ಲೈಂಗಿಕ (ಭೋಗ) ವಸ್ತು ಎನ್ನುವುದಾಗಿ ಬಿಂಬಿಸಲ್ಪಡುತ್ತಾರೆ. ಇದು ಗಂಡು ಮಕ್ಕಳ ಮನಸಿನಲ್ಲಿ ತಮ್ಮತನದ ಹಿರಿಮೆ ಎನ್ನುವುದಾಗಿ ಜೀವನದುದ್ದಕ್ಕೂ ಮುಂದುವರೆಯುತ್ತದೆ.

ನಕಾರಾತ್ಮಕ ಭಾವನೆಗಳ ಸುಳಿ
ಹೀಗಾಗಿ ಮಾಧ್ಯಮಗಳು ಮಹಿಳೆ-ಹೆಣ್ಣು ಮಕ್ಕಳನ್ನು ಬಿಂಬಿಸುವಾಗ ಇಂತಹ ದೃಷ್ಟಿಕೋನದಿಂದ ಮುಕ್ತರಾಗಿರುವದು ಅಪರೂಪ. ಇನ್ನು ಮುಖ್ಯವಾಗಿ, ಈ ಮೇಲಿನ ಸಂಗತಿಗಳು ಅದೆಷ್ಟೋ ಹೆಣ್ಣು ಮಕ್ಕಳ ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಿರುತ್ತದೆ. ತಮ್ಮ ದೇಹಾಕೃತಿ ಮತ್ತು ಅಂದಚೆಂದವನ್ನು ಬಿಂಬಿಸುವ ಸಲುವಾಗಿ ಊಟೋಪಚಾರ, ನಡೆನುಡಿಗಳ ಸಹಜಶೈಲಿಯತ್ತ ಗಮನ ಹರಿಸದಂತಾಗಿ, ಸದಾ ತನ್ನತನದ ಬಗ್ಗೆ ನಕಾರಾತ್ಮಕ ಭಾವನೆಗಳ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ಅಪರೂಪವಲ್ಲ. ಇದಲ್ಲದೆಯೇ, ಬೆಳೆಯುವ ಹೆಣ್ಣು ಮಕ್ಕಳು ಕೂಡ, ಅವರವರ ಸಂಕುಚಿತ ಸಾಂಸ್ಕೃತಿಕ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ, ತಮ್ಮ ವಸ್ತ್ರಾಭರಣದ ಬಯಕೆ, ಕೇಶವಿನ್ಯಾಸ, ಅಂದಚೆಂದಗಳ ಬಯಕೆ ಮಾದರಿಗಳಲ್ಲಿ ಸ್ವಹಿತದತ್ತ ಗಮನಹರಿಸುವುದಿಲ್ಲ.

ಇಂದಿನ ಈ ಪರಿಸ್ಥಿತಿಯಲ್ಲಿ ಪೋಷಕರು ಗಮನ ಹರಿಸಬೇಕಾಗಿರುವ ಬಹು ಮುಖ್ಯ ಸಂಗತಿ ಎಂದರೇ, ಹೆಣ್ಣು ಮಕ್ಕಳ ಮನಸಿನಲ್ಲಿ ತಮ್ಮತನದ ಸರಾಗ ಬೆಳವಣಿಗೆಗೆ ಅಡ್ಡಿ ಪಡಿಸುವಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು.

ಹಾಗೆಯೇ ತಮ್ಮಲ್ಲಿಯೇ ಇರಬಹುದಾದ, ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತಹ ಪೂರ್ವಗ್ರಹ ಮತ್ತು ರೂಢಿಗತ ವರ್ತನೆಗಳ ಹಿಡಿತಕ್ಕೆ ಸಿಕ್ಕಿಕೊಳ್ಳದಂತಹ ವಿಚಾರದತ್ತ ಗಮನ ಹರಿಸುವುದು. ಪೋಷಕರು ತಮ್ಮ ಗಂಡು ಮಕ್ಕಳಲ್ಲಿಯೂ ಸಹ ಲಿಂಗ ಸಮಾನತೆ ಮತ್ತು ಪುರುಷ ಪ್ರತಿಷ್ಠೆಯು ಒಂದು ಮಾನಸಿಕ ದೌರ್ಬಲ್ಯ ಎನ್ನುವುದರ ಬಗ್ಗೆ ವಿಚಾರ ಮಾಡುವುದರತ್ತ ಗಮನ ಹರಿಯುವಂತೆ ಮಾಡಲೇ ಬೇಕು.

ಅವರಿವರ ದೌರ್ಬಲ್ಯದ ಮಾತಿಗೆ ತಲೆಬಾಗಿದಾಗ ವ್ಯಕ್ತಿತ್ವದ ಸಮಸ್ಯೆಗಳು, ತಮ್ಮಲ್ಲಿಯೇ ಸಹಜವಾಗಿಯೇ ಇರುವ ಉತ್ತಮ ಮಾನಸಿಕ ಶಕ್ತಿಗಳೆಲ್ಲವನ್ನು ನಾಶಪಡಿಸಬಿಡುತ್ತವೆ ಎನ್ನುವುದನ್ನು ಮರೆಯಬಾರದು. ಮಾಧ್ಯಮಗಳ ಮೂಲಕ ಹೊರಬರುವ ವಸ್ತ್ರ ಸಂಹಿತೆ, ಸಾಂಪ್ರದಾಯಕತೆ, ಕಟ್ಟುಪಾಡುಗಳಲ್ಲಿ ಬಹುತೇಕ ಲೈಂಗಿಕ ಅಸಮಾನತೆಯನ್ನು ಪ್ರೋತ್ಸಾಹಿಸುವಂತಹ ದೃಶ್ಯ, ಮಾತುಗಳು ತುಂಬಿರುತ್ತವೆ ಎನ್ನುವುದರತ್ತ ನಿಗಾ ಇದ್ದಷ್ಟೂ ಒಳ್ಳೆಯದು.

English summary
Psychology: With the row over dresscode escalating in Karnataka. Psychiatrist Dr A Sridhar writes about Effect of Hijab- Kesari Shawl dress code row on Children and Young minds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X